ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂದಲಿನ ಜಾತಕಫಲ

Last Updated 8 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನಿಮ್ಮ ವಂಶವಾಹಿನಿಯ ಸರಣಿಯಲ್ಲಿ ಒಂದೆಡೆ ‘ಟಿ’ ಇರುವಲ್ಲಿ ‘ಜಿ’ ಬಂದರೆ ಏನಾಗುತ್ತದೆ? ‘ಜಿ’ ಫ್ಯಾಕ್ಟರ್ ಚಟುವಟಿಕೆ ಆರಂಭಿಸುತ್ತದೆ. ಅದು ಕ್ರಿಯಾಶೀಲವಾದಷ್ಟೂ ನೀವು ಚಿಂತಾಕ್ರಾಂತರಾಗುತ್ತೀರಿ. ಅದಿನ್ನಷ್ಟು ಕ್ರಿಯಾಶೀಲವಾದಷ್ಟೂ ನಿಮ್ಮ ತಲೆ ಹೊಳೆಯತೊಡಗುತ್ತದೆ. ಕೂದಲು ಉದುರ ತೊಡಗುತ್ತದೆ.

ಈ ‘ಜಿ’ ಅಂಶ ಕ್ರಿಯಾಶೀಲವಾದಷ್ಟೂ ಕೂದಲು ಉದುರುವುದು ಹೆಚ್ಚಾಗುತ್ತದೆ. ಇದು ಯಾವ ವರ್ಷದಲ್ಲಿ ಹೆಚ್ಚಾಗಬಹುದು? ತನ್ನ ಗರಿಷ್ಠ ಮಟ್ಟವನ್ನು ತಲುಪಬಹುದು ಎಂಬ ಭವಿಷ್ಯ ಹೇಳಲು ಇದೀಗ ಸಾಧ್ಯ. ಡಿಎನ್‌ಎಯಲ್ಲಿ ಬರುವ ಕ್ರೋಮೋಸೋಮುಗಳನ್ನು ಪತ್ತೆ ಮಾಡಿದರೆ ಸಾಕು. ಈ ಪರೀಕ್ಷೆ ಇದೀಗ ಬೆಂಗಳೂರಿನಲ್ಲಿ ಲಭ್ಯ.

ಆನುವಂಶಿಕ ರೋಗ ಕಾರಣಗಳ ಕುರಿತು ಅಧ್ಯಯನ ಮಾಡುತ್ತಿರುವ ಮೆರಿಸಿಸ್‌ ಥೆರಪ್ಯುಟಿಕ್ಸ್‌ ಸಂಸ್ಥೆಯು ಬೆಂಗಳೂರಿನ ಹೇರ್‌ಲೈನ್‌ ಸ್ಟುಡಿಯೋದೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಡಾ.ಸತೀಶ್‌ ಗೌಡ ಅವರ ಪ್ರಕಾರ ಬೋಳು ತಲೆ ಸಮಸ್ಯೆಗೆ ಶೀಘ್ರ ಪರಿಹಾರ ಹುಡುಕಲು ಇದರಿಂದ ಸಹಾಯವಾಗುತ್ತದೆ. ಆನುವಂಶಿಕ ಕಾರಣದಿಂದ ತಲೆಬೋಳು ಆಗುತ್ತಿದ್ದರೆ ಅದಕ್ಕೆ ಯಾವುದೇ ಶಾಶ್ವತ ಚಿಕಿತ್ಸೆ ಇರುವುದಿಲ್ಲ. ಆದರೆ ಕೂದಲು ಟ್ರಾನ್ಸ್‌ಪ್ಲಾಂಟ್‌ ಮಾಡುವುದಾದರೆ, ಹಿನ್ನೆಲೆಯ ಕೂದಲನ್ನು ಸ್ಥಳಾಂತರಿಸುವುದಾದರೆ ಇಂಥ ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ಸಹಾಯಕವಾಗಲಿದೆ.

ಕೆಲವೊಮ್ಮೆ ಆನುವಂಶಿಕ ಕಾರಣವಲ್ಲದಿದ್ದಲ್ಲಿ, ಜೀವನಶೈಲಿಯಲ್ಲಿ ಅಗತ್ಯವಿರುವ ಬದಲಾವಣೆ, ಅಗತ್ಯದ ಪೋಷಕಾಂಶಗಳ ಒದಗಿಸುವಿಕೆ ಮುಂತಾದ ಪರಿಹಾರಗಳ ಬಗ್ಗೆಯೂ ಯೋಚಿಸಲು ಸಾಧ್ಯವಾಗುತ್ತದೆ. ಇದು ಕೇವಲ ಕೂದಲಿಗೆ ಸಂಬಂಧಿಸಿದ್ದಲ್ಲ. ಚರ್ಮಕ್ಕೆ ಸಂಬಂಧಿಸಿದ ರೋಗಗಳಿಗೂ ಉತ್ತಮ ಪರಿಹಾರವಾಗಬಲ್ಲದು.

ಕೂದಲುದುರುವುದು 25ರಿಂದ 30 ವರ್ಷದ ಅವಧಿಯಲ್ಲಿ ಆರಂಭವಾದರೆ ಅದಕ್ಕೆ ಆನುವಂಶಿಕತೆಯೇ ಕಾರಣವಾಗಿರುವುದು ಸಾಮಾನ್ಯವಾಗಿರುತ್ತದೆ. ಆದರೆ ಮಧುಮೇಹದಿಂದ ಬಳಲುತ್ತಿರುವವರು ಅಥವಾ ಇನ್ನಾವುದೇ ರೋಗಗಳಿಗೆ ಚಿಕಿತ್ಸೆ ಪಡೆಯುತ್ತಿರುವವರಿಗೂ ಕೂದಲು ಉದುರುವುದು ಒಂದು ಸಮಸ್ಯೆಯಾಗಿರುತ್ತದೆ. ಥೈರಾಯ್ಡ್‌ ಸಮಸ್ಯೆ ಇದ್ದವರಲ್ಲಿಯೂ ಕೂದಲು ಉದುರುವುದು ಸಾಮಾನ್ಯ. ಜೀವನ ಶೈಲಿಯಿಂದಲೂ ಈ ಸಮಸ್ಯೆ ತಲೆದೋರಬಹುದು.

ನಿರಂತರವಾಗಿ ಗಡಸು ನೀರಿನಿಂದ ತಲೆಸ್ನಾನ ಮಾಡುವುದು, ಅಧಿಕ ಒತ್ತಡ, ನಿದ್ರಾಹೀನತೆ, ರಕ್ತಹೀನತೆ ಮುಂತಾದವು ಸಹ ಕೂದಲುದುರಲು ಕಾರಣವಾಗುತ್ತವೆ.

ಇವೆಲ್ಲವೂ ಪ್ರಾಥಮಿಕ ಪರಿಹಾರ ಹುಡುಕುವ ಪ್ರಕ್ರಿಯೆಯಲ್ಲಿ ಕಂಡುಕೊಳ್ಳಬಹುದಾದ ಕಾರಣಗಳಾಗಿರುತ್ತವೆ. ಆದರೆ ಬೋಳುತನದ ಪ್ರಕ್ರಿಯೆ ತೀವ್ರಗೊಳ್ಳಬಹುದು? ಅದಕ್ಕೆ ಚಿಕಿತ್ಸೆ ಏನು? ತಡೆಗಟ್ಟಬಹುದಾದ ಪರಿಹಾರ ಯಾವುದು... ಮುಂತಾದ ಪ್ರಶ್ನೆಗಳಿಗೆ ಪರಿಹಾರ ಕಂಡುಕೊಳ್ಳಲು ಈ ಪರೀಕ್ಷೆ ಸಹಾಯಕವಾಗಲಿದೆ ಎನ್ನುತ್ತಾರೆ ಡಾ.ದಿನೇಶ್‌ ಗೌಡ.

ವಂಶವಾಹಿನಿಯ ಸರಣಿ ಅಧ್ಯಯನ ಮಾಡಿ, ಚಿಕಿತ್ಸೆಗೆ ಪರಿಹಾರ ಹುಡುಕುವ ಪ್ರಯತ್ನವನ್ನು ಬೆಂಗಳೂರಿನ ಹೇರ್‌ಲೈನ್‌ ಸ್ಟುಡಿಯೊ ಮಾಡಿದೆ. ಇದು ಭಾರತದಲ್ಲಿಯೇ ಮೊದಲ ಪ್ರಯತ್ನವಾಗಿರುವುದು ಹೆಗ್ಗಳಿಕೆ ಎನ್ನುವುದು ಹೇರ್‌ಲೈನ್‌ ಸ್ಟುಡಿಯೊದ ಸಂಸ್ಥಾಪಕಿ ಬಾನಿ ಆನಂದ್‌ ಮಾತು.

ಮೆರಿಸಿಸ್‌ ಥೆರಪ್ಯುಟಿಕ್ಸ್‌ನ ತಜ್ಞ ಡಾ. ಕೌಶಿಕ್‌ ದೇವ ಪರೀಕ್ಷೆಯ ವಿವರಣೆಯನ್ನು ನೀಡಿದರು. 4ರಿಂದ 5 ಎಂಎಲ್‌ ರಕ್ತ ಹಾಗೂ ಎಂಜಲಿನ ಸ್ಯಾಂಪಲ್‌ ತೆಗೆದುಕೊಳ್ಳಲಾಗುತ್ತದೆ. ಬೆಂಗಳೂರು, ನವದೆಹಲಿ ಮುಂತಾದೆಡೆ ರಕ್ತದ ಮಾದರಿಯನ್ನು ವಿವಿಧ ಪರೀಕ್ಷೆಗಳಿಗೆ ಒಳಪಡಿಸಲಾಗುತ್ತದೆ. ಈ ಪ್ರಕ್ರಿಯೆ ಮುಗಿಯುವುದೇ ಮೂರ್‍್ನಾಲ್ಕು ವಾರಗಳಾಗುವುದರಿಂದ ಫಲಿತಾಂಶ ನೀಡಲು ಒಂದೂವರೆ ತಿಂಗಳು ಬೇಕೇಬೇಕು ಎನ್ನುತ್ತಾರೆ ಅವರು.

ಆರಂಭಿಕ ದಿನಗಳಲ್ಲಿ ಪರೀಕ್ಷೆಯ ಶುಲ್ಕ ತುಸು ಹೆಚ್ಚೆನಿಸಬಹುದು. ಆದರೆ ಮಾದರಿಗಳ ಸಂಖ್ಯೆ ಹೆಚ್ಚಿದಂತೆ ಈ ಶುಲ್ಕದಲ್ಲಿ ಕಡಿತ ಉಂಟಾಗುತ್ತದೆ ಎಂದೂ ಹೇಳುತ್ತಾರೆ ಡಾ.ಕೌಶಿಕ್‌.

ಚರ್ಮದ ಮೇಲೆ ಬಿಳಿ ಮಚ್ಚೆ, ಚರ್ಮ ಕಪ್ಪಾಗುವಿಕೆ, ಕೂದಲು ಉದುರುವುದು ಮುಂತಾದ ಸಮಸ್ಯೆಗಳಿಗೆಲ್ಲ ಪರಿಹಾರ ಹುಡುಕುವುದು ಸರಳವಾಗುತ್ತದೆ ಎನ್ನುತ್ತಾರೆ ಅವರು. ದಿನಕ್ಕೆ 80ರಿಂದ ನೂರು ಕೂದಲು ಉದುರಿದರೆ ಚಿಂತಿಸಬೇಕಾಗಿಲ್ಲ.

‘ಝೊಂಪೆಝೊಂಪೆಯಾಗಿ ಉದುರುತ್ತಿದ್ದರೆ, ತಲೆ ಬಾಚಿದಾಗಲೆಲ್ಲ ಕೂದಲು ಉದುರುತ್ತಿದ್ದರೆ, ಕೈಗಂಟಿಕೊಂಡು ಬಿಚ್ಚಿ ಬರುತ್ತಿದ್ದರೆ, ತಲೆಕೂದಲಿನ ದಟ್ಟತನ ಕಡಿಮೆಯಾಗುತ್ತಿದ್ದರೆ, ಮುಂದಲೆ ಅಥವಾ ತಲೆಯ ಮಧ್ಯಭಾಗದಲ್ಲಿ ಬೋಳುತನ ಕಾಣಿಸಿಕೊಂಡರೆ ನಿರ್ಲಕ್ಷಿಸದಿರಿ. ತಜ್ಞವೈದ್ಯರನ್ನು ಭೇಟಿ ಮಾಡಿ’ ಎನ್ನುತ್ತಾರೆ ಡಾ. ದಿನೇಶ್‌.

ಕೂದಲ ಆರೋಗ್ಯಕ್ಕೆ

ವಿಟಾಮಿನ್‌ ಬಿ12 ಹೇರಳವಾಗಿರುವ ಆಹಾರ ಸೇವನೆ ಮಾಡಿ.

ನಿಮ್ಮ ಆಹಾರದಲ್ಲಿ ನಾರಿನಂಶ ಹೆಚ್ಚಾಗಿರಲಿ.

ಕೂದಲಿನ ಬಗೆ ಅರಿತುಕೊಂಡು, ಸಾಮಾನ್ಯ, ಒಣ ಅಥವಾ ಎಣ್ಣೆಕೂದಲು ಎಂಬುದನ್ನು ನಿರ್ಧರಿಸಿಕೊಂಡು, ನಂತರ ಅದಕ್ಕೆ ಹೊಂದು ಶಾಂಪುಗಳನ್ನೇ ಬಳಸಿ.

ಯೋಗ, ಧ್ಯಾನ ಮುಂತಾದವುಗಳಿಂದ ಒತ್ತಡವನ್ನು ನಿರ್ವಹಿಸಬಹುದು. ಜೊತೆಗೆ ಕೂದಲುದುರುವುದನ್ನೂ ತಡೆಯಬಹುದು ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT