ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂರುಳಿ: ಉರಿಯದ ದೀಪ, ಬಾರದ ಬಸ್!

Last Updated 8 ಫೆಬ್ರುವರಿ 2012, 7:30 IST
ಅಕ್ಷರ ಗಾತ್ರ

ನಾಪೋಕ್ಲು: ಸಮೀಪದ ಕೂರುಳಿ ಸುಭಾಷ್ ನಗರದ ರಸ್ತೆಯಲ್ಲಿ ವಿದ್ಯುತ್ ದೀಪ ಹಾಗೂ ಕಂಬಗಳು ಗೋಚರಿಸುತ್ತವೆ. ಆದರೆ ಅದರಿಂದ ಬೆಳಕು ಮಾತ್ರ ಕಾಣದು!

ಇಲ್ಲಿ ಒತ್ತೊತ್ತಾಗಿ 37 ಮನೆಗಳಿವೆ. ವಿದ್ಯುತ್ ಕಂಬ ಹಾಗೂ ಬಲ್ಬ್‌ಗಳನ್ನು ಜೋಡಿಸಲಾಗಿದ್ದರೂ ಉರಿಯುವುದು ಒಂದೇ ಒಂದು ದೀಪ. ಕೂರುಳಿಯಿಂದ ಎಮ್ಮೆಮಾಡಿಗೆ ತೆರಳುವ ಮುಖ್ಯ ರಸ್ತೆ ಬದಿಯಲ್ಲಿರುವ ವಿದ್ಯುದ್ದೀಪ ಮರದ ಕೊಂಬೆ ಬಿದ್ದು ಹಾಳಾಗಿದೆ. ಗ್ರಾಮದ ಬಹುತೇಕ ವಿದ್ಯುದ್ದೀಪಗಳು ಉರಿಯುತ್ತಿಲ್ಲ.

ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ಮಳೆಗಾಲದ ಸಮಯದಲ್ಲಿ ರಸ್ತೆಯುದ್ದಕ್ಕೂ ಹರಿದು ಬರುವ ನೀರು ಮನೆಯೊಳಗೂ ನುಗ್ಗುತ್ತದೆ. ಸುತ್ತ ಚರಂಡಿ ವ್ಯವಸ್ಥೆಯೂ ಇಲ್ಲ. ಇಲ್ಲಿಯ ಅಂಗನವಾಡಿಯ ಎದುರು ಗ್ರಾಮಪಂಚಾಯಿತಿ ವತಿಯಿಂದ ತಡೆಗೋಡೆ ನಿರ್ಮಿಸಲಾಗಿದೆ. ಆದರೆ ಇದರಿಂದ ಪ್ರಯೋಜನವಾಗುತ್ತಿಲ್ಲ.

ಗ್ರಾಮದ ಹೆಚ್ಚಿನವರು ಕೂಲಿ ಕಾರ್ಮಿಕರು. ಅಂದಾಜು 150 ಜನ ಈ ವ್ಯಾಪ್ತಿಯಲ್ಲಿ ವಾಸವಾಗಿದ್ದಾರೆ. ನಾಪೋಕ್ಲಿನಿಂದ ಕೂರುಳಿ ಮುಖಾಂತರ ಎಮ್ಮೆಮಾಡು ಗ್ರಾಮಕ್ಕೆ ಕೇವಲ ಒಂದು ಖಾಸಗಿ ಬಸ್ ಸಂಚರಿಸುತ್ತಿದೆ.

ಶಾಲಾ ವೇಳೆಗೆ ಹೊಂದಿಕೊಂಡಂತೆ ಯಾವುದೇ ಬಸ್ ಸಂಚರಿಸುತ್ತಿಲ್ಲ. ನಾಪೋಕ್ಲು ಭಾಗಮಂಡಲ ಮುಖ್ಯರಸ್ತೆಗೆ ಬರಲು ಮಕ್ಕಳು ಕನಿಷ್ಠ ಮೂರು ಕಿ.ಮೀ. ನಡೆಯಬೇಕಾಗಿದೆ. ಆದ್ದರಿಂದ ಬಸ್ ವ್ಯವಸ್ಥೆಯೂ ಅಗತ್ಯವಾಗಿದೆ.

ಪಂಚಾಯಿತಿ ವತಿಯಿಂದ ನೀರಿನ ಟ್ಯಾಂಕ್‌ಗಳನ್ನು ನಿರ್ಮಿಸಿ ನೀರು ಪೂರೈಸಲಾಗುತ್ತಿದೆ. ಸಾಕಷ್ಟು ನೀರು ಪೂರೈಕೆಯಾಗುತ್ತಿರುವುದರಿಂದ ನೀರಿನ ಸಮಸ್ಯೆ ಇಲ್ಲ.

ಸಮೀಪದ ಕಾಫಿ ತೋಟಗಳಲ್ಲಿ ಕೆಲಸ ಮಾಡುವ ಇಲ್ಲಿಯ ಮಂದಿ  ಸಂಜೆಯ ವೇಳೆಗೆ ಕಾಲು ರಸ್ತೆಯಲ್ಲಿ ಸಾಗಿ ಬರಲು ಬೆಳಕಿಲ್ಲದೇ ಪರದಾಡುವಂತಾಗಿದೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಎಂದು ಚಿತ್ತ ಹರಿಸುವುದೋ, ವಿದ್ಯುತ್ ಬಲ್ಬ್‌ಗಳಿಂದ ಉಪಯೋಗವಾಗುವುದೆಂದೋ ಎಂಬುದು ಜನರ ಚಿಂತೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT