ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂರುವ ಭಂಗಿಯೂ ಆರೋಗ್ಯ ಸಮಸ್ಯೆಯೂ

Last Updated 25 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಮೇ ಜಿಗೆ ಅಂಟಿಕೊಂಡು ಗಂಟೆಗಟ್ಟಲೆ ಕುರ್ಚಿಯಲ್ಲಿ ಕುಳಿತು ಕೆಲಸಮಾಡುವ ಅಭ್ಯಾಸವನ್ನು ಬೆಳೆಸಿಕೊಂಡಿದ್ದೀರಾ? ಆರೋಗ್ಯದ ದೃಷ್ಟಿಯಿಂದ ಆ ಪರಿಪಾಠವನ್ನು ಕೈಬಿಡುವುದು ಒಳಿತು.

ನಿಮಗೆ ಗೊತ್ತಾ? ನಾವು ಕುಳಿತುಕೊಳ್ಳುವ ಭಂಗಿ ಕೂಡ ನಮ್ಮ ದೇಹದ ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸಬಹುದು!
ಹೌದು. ಈ ಸಂಗತಿಯನ್ನು ತಜ್ಞರೇ ದೃಢಪಡಿಸಿದ್ದಾರೆ.

‘ಕಚೇರಿಯಲ್ಲಿ ಸುದೀರ್ಘ ಕಾಲ  ಕುರ್ಚಿಯಲ್ಲೇ ಕುಳಿತು ಕೆಲಸಮಾಡುವ ಅನಿವಾರ್ಯತೆ ನಿಮಗೆ ಇರಬಹುದು. ಆದರೆ ಹಾಗೆ ಮಾಡದೆ, 20 ನಿಮಿಷಗಳಿಗೊಮ್ಮೆ ಕುರ್ಚಿಯಿಂದ ಎದ್ದು ಸ್ವಲ್ಪ ನಡೆದಾಡಿ ಮತ್ತೆ ನಿಮ್ಮ ಕೆಲಸವನ್ನು ಮುಂದುವರಿಸಿ. ಆರೋಗ್ಯದ ದೃಷ್ಟಿಯಿಂದ ಈ ರೀತಿ ಮಾಡಿದರೆ ಒಳ್ಳೆಯದು’

-ಡೆನ್ವರ್ ಮೂಲದ ವ್ಯಾಯಾಮ ತಜ್ಞ ಜ್ಯಾಮಿ ಅಟ್ಲಾಸ್ ನೀಡುವ ಸಲಹೆ ಇದು.
ಅವರ ಪ್ರಕಾರ, ಈ ರೀತಿಯ ಅಭ್ಯಾಸವನ್ನು ಮೈಗೂಡಿಸಿಕೊಳ್ಳುವುದು ವ್ಯಕ್ತಿಯೊಬ್ಬನ ಹೃದಯ ರಕ್ತನಾಳಕ್ಕೆ ಸಂಬಂಧಿಸಿದ ಆರೋಗ್ಯ ಮತ್ತು ಚಚಯಾಪಚಯ ಕ್ರಿಯೆಯ ಗುಣಲಕ್ಷಣದ ದೃಷ್ಟಿಯಿಂದ ಉತ್ತಮ.

ಇಪ್ಪತ್ತು ನಿಮಿಷಕ್ಕೊಮ್ಮೆ ಎದ್ದು ನಡೆದಾಡುವುದು; ದಿನಂಪ್ರತಿ ಜಿಮ್‌ಗೆ ತೆರಳಿ 40 ನಿಮಿಷಗಳ ಕಾಲ ದೈಹಿಕ ಕಸರತ್ತು ಮಾಡುವುದಕ್ಕೆ ಸಮ! ಅಂದರೆ ಅಷ್ಟರಮಟ್ಟಿಗೆ ಈ ಅಭ್ಯಾಸ ನಮ್ಮ ದೇಹದ ಆರೋಗ್ಯವನ್ನು ಕಾಪಾಡುತ್ತದೆ ಎಂದು ಅಟ್ಲಾಸ್ ಹೇಳುತ್ತಾರೆ.

 ‘ಪ್ರತಿ ದಿನ ಜಿಮ್‌ನಲ್ಲಿ ವ್ಯಾಯಾಮ ಮಾಡಿದ ನಂತರ ಮೇಜಿಗೆ ಅಂಟಿಕೊಂಡೇ ಕೆಲಸ ಮಾಡುವುದನ್ನು ನೀವು ಸಮರ್ಥಿಸಿಕೊಳ್ಳಬಹುದು. ಆದರೆ ಆಗಾಗ ಕುರ್ಚಿಯಿಂದ ಎದ್ದು ಅತ್ತ ಇತ್ತ ನಡೆದಾಡಿ, ಸಹೋದ್ಯೋಗಿಗಳೊಂದಿಗೆ ಅಥವಾ ಬೇರೆಯವರೊಂದಿಗೆ ಮಾತನಾಡುವುದರಿಂದ ದೇಹ ಇನ್ನಷ್ಟು ಕ್ರಿಯಾಶೀಲವಾಗುತ್ತದೆ. ಜೊತೆಗೆ ಆರೋಗ್ಯವೂ ವೃದ್ಧಿಯಾಗುತ್ತದೆ’ ಎಂದು ವಿವರಿಸುತ್ತಾರೆ ಅಟ್ಲಾಸ್.

ವ್ಯಕ್ತಿಯೊಬ್ಬರು ಕುರ್ಚಿಯಲ್ಲಿ ಕುಳಿತುಕೊಳ್ಳುವ ಭಂಗಿ ಅವರ ಆರೋಗ್ಯವನ್ನು ಕೆಡಿಸಬಹುದು. ಅದೇ ರೀತಿ ಸರಿಯಾದ ಭಂಗಿಯಲ್ಲಿ ಕುಳಿತುಕೊಳ್ಳಲು ಯತ್ನಿಸುವುದು ಕೂಡ ಕೆಲವು ಸಲ ಸಮಸ್ಯೆಯನ್ನು ಸೃಷ್ಟಿಸಬಹುದು ಎಂಬುದು ಅಟ್ಲಾಸ್ ಅವರ ಅಂಬೋಣ.

ಹೆಚ್ಚಿನ ಜನರು ಒಂದು ಅಥವಾ ಹೆಚ್ಚಿನ ಭಂಗಿಯಲ್ಲಿ ಕುಳಿತುಕೊಳ್ಳುವ ಅಭ್ಯಾಸವನ್ನು ಹೊಂದಿರುತ್ತಾರೆ. ಇದರಿಂದಾಗಿ ಅವರ ಮಣಿಕಟ್ಟಿನ ಹಾಗೂ ಬೆನ್ನಿನ ಕೆಳಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ ಎಂದು ಅಟ್ಲಾಸ್ ವಿವರಿಸುತ್ತಾರೆ.

ಜನರು ಕುರ್ಚಿಯಲ್ಲಿ ಕುಳಿತುಕೊಳ್ಳುವ ಮೂರು ಪ್ರಮುಖ ಭಂಗಿಗಳನ್ನು ಅಟ್ಲಾಸ್ ಗುರುತಿಸಿದ್ದಾರೆ. ಅದಕ್ಕೆ ಅವರು ವಿಶೇಷವಾದ ಹೆಸರನ್ನು ಇಟ್ಟಿರುವುದು ಮಾತ್ರವಲ್ಲದೆ ಅದರಿಂದಾಗುವ ಸಮಸ್ಯೆಯನ್ನು ವಿವರಿಸಿದ್ದಾರೆ.

ಮೊದಲನೆಯದ್ದು  ‘ದಿ ಸ್ಲೋಚರ್’. ಈ ಭಂಗಿಯಲ್ಲಿ ಕುಳಿತುಕೊಳ್ಳುವಾಗ ಜನರು ಸೊಂಟದ ಭಾಗವನ್ನು ಮುಂದಕ್ಕೆ ತಂದು, ಬೆನ್ನಿನ ಮಧ್ಯಭಾಗವನ್ನು ಕುರ್ಚಿಯ ಬೆನ್ನಾಸರೆಗೆ ವಿರುದ್ಧವಾಗಿ ಬಾಗಿಸುತ್ತಾರೆ.

ಈ ರೀತಿ ಕುಳಿತುಕೊಳ್ಳುವಾಗ ಸೊಂಟದ ಭಾಗದಲ್ಲಿರುವ ಮಾಂಸಖಂಡಗಳು ಬೆನ್ನಿನ ಕೆಳಭಾಗವನ್ನು ಮುಂದಕ್ಕೆ ತಳ್ಳುತ್ತವೆ. ಇದರಿಂದಾಗಿ ವ್ಯಕ್ತಿಯು ಕುರ್ಚಿಯಿಂದ ಎದ್ದು ನಿಂತ ಬಳಿಕವೂ ಬೆನ್ನಿನಲ್ಲಿ ಗುಳಿ ಬಿದ್ದಾಂತಾಗುತ್ತದೆ. ಸುದೀರ್ಘವಾಗಿ ಈ ಭಂಗಿಯಲ್ಲೇ ಕುಳಿತುಕೊಳ್ಳುವುದರಿಂದ ಬೆನ್ನಿನ ಕೆಳಭಾಗದಲ್ಲಿ ನೋವು ಕಾಣಿಸುತ್ತದೆ ಮತ್ತು ಜೀರ್ಣಕ್ರಿಯೆಯ ಮೇಲೂ ಅಡ್ಡ ಪರಿಣಾಮ ಬೀರುತ್ತದೆ ಎಂದು ಅಟ್ಲಾಸ್ ವಿವರಿಸುತ್ತಾರೆ.

ಅವರು ಗುರುತಿಸಿರುವ ಮತ್ತೊಂದು ಭಂಗಿ ‘ಫೇಸ್‌ಬುಕ್ ಲೀನ್’. ಕಂಪ್ಯೂಟರ್ ಮುಂದೆ ಕುಳಿತು ಕೆಲಸ ನಿರ್ವಹಿಸುವಾಗ ಹೆಚ್ಚಿನ ಜನರು ಈ ಶೈಲಿಯನ್ನು ಅನುಸರಿಸುತ್ತಾರೆ.

ಈ ಭಂಗಿಯಲ್ಲಿ ಜನರು ಕೈಗಳನ್ನು ನೇರವಾಗಿ ಕಂಪ್ಯೂಟರ್‌ನ ಕೀಬೋರ್ಡ್‌ನಲ್ಲಿ ಇಟ್ಟು ತಲೆಯನ್ನು ಕಂಪ್ಯೂಟರ್ ಪರದೆಯ ಕಡೆಗೆ ಬಾಗಿಸಿರುತ್ತಾರೆ. ಎರಡೂ ಭುಜಗಳು ಕಿವಿಯ ಹಾಲೆಗಳೊಂದಿಗೆ ಕೂಡುವಂತೆ ಇರುತ್ತವೆ.

ಈ ಭಂಗಿಯು ಬೆನ್ನಿನ ಮೇಲ್ಭಾಗದಲ್ಲಿರುವ ಸ್ನಾಯುಗಳ ಮತ್ತು ಕೊರಳಿನ ಮೇಲೆ ಮಿತಿಮೀರಿದ ಒತ್ತಡ ಹಾಕುತ್ತದೆ. ಅಲ್ಲದೇ ಎದೆ ಭಾಗದ ಮಾಂಸಖಂಡಗಳು ಬಿಗಿಯಾಗುವಂತೆ ಮಾಡುತ್ತವೆ. ಎರಡೂ ಭುಜಗಳು ವೃತ್ತಾಕಾರವಾಗಿ ಮುಂದಕ್ಕೆ ಬಗ್ಗಿರುತ್ತವೆ. ಮುಂದೋಳುಗಳು ಆಂತರಿಕವಾಗಿ ಸುತ್ತುತ್ತವೆ; ಮಣಿಕಟ್ಟುಗಳು ವಾಲುತ್ತಿರುತ್ತವೆ. ಪರಿಣಾಮವಾಗಿ ಮಣಿಕಟ್ಟಿಗೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಕುತ್ತಿಗೆ ನೋವು ಉಂಟಾಗುತ್ತವೆ ಎಂದು ಅಟ್ಲಾಸ್ ಹೇಳುತ್ತಾರೆ.

ಮೂರನೇ ಭಂಗಿ ‘ದಿ ಡಿಸೈನರ್ ಲೀನ್’. ಈ ಆಸನವನ್ನು ಹೆಚ್ಚಾಗಿ ಅನುಸರಿಸುವವರು ಗ್ರಾಫಿಕ್ ವಿನ್ಯಾಸಗಾರರು.
ಕುರ್ಚಿಯಲ್ಲಿ ಈ ಭಂಗಿಯಲ್ಲಿ ಕುಳಿತುಕೊಳ್ಳುವಾಗ ಜನರು ಕಂಪ್ಯೂಟರ್ ಮೌಸ್ ಹಿಡಿಯುವ ಕೈಯತ್ತ ದೇಹವನ್ನು ಸ್ವಲ್ಪ ಪ್ರಮಾಣದಲ್ಲಿ ವಾಲಿಸುತ್ತಾರೆ.
ಈ ರೀತಿ ಕುಳಿತುಕೊಳ್ಳುವಾಗ ಸೊಂಟದ ಭಾಗದ ಎಲುಬುಗಳ ಸ್ನಾಯುಗಳು ಒಂದು ಬದಿಯಲ್ಲಿ ಸಂಕುಚಿತಗೊಂಡರೆ ಇನ್ನೊಂದು ಬದಿಯಲ್ಲಿ ವಿಕಸನಗೊಳ್ಳುತ್ತವೆ. 

ಈ ಭಂಗಿಯಲ್ಲಿ ಕುಳಿತು ಸುದೀರ್ಘವಾಗಿ ಕಾರ್ಯನಿರ್ವಹಿಸಿದ ನಂತರ ಕುರ್ಚಿಯಿಂದ ಏಳುವಾಗ ಕಂಪ್ಯೂಟರ್ ಬಳಕೆದಾರರಿಗೆ ನಿಂತುಕೊಳ್ಳಲು ಕಷ್ಟವಾಗುತ್ತದೆ. ಕಾರಣ ಸ್ನಾಯುಗಳು ಸಾಮಾನ್ಯ ಸ್ಥಿತಿಗೆ ಬರಲು ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ಅಟ್ಲಾಸ್ ಅಭಿಪ್ರಾಯ ಪಡುತ್ತಾರೆ. 

 ‘ಕುರ್ಚಿಯಲ್ಲಿ ನೇರವಾಗಿ ಕುಳಿತುಕೊಳ್ಳಲು ತಜ್ಞರು ನಮಗೆ ಸಲಹೆ ನೀಡುತ್ತಾರೆ. ಆದರೆ ಹೆಚ್ಚಿನ ಜನರು ಕುರ್ಚಿಯಲ್ಲಿ ಮುಂದಕ್ಕೆ ಕುಳಿತು ಎದುರಿಗಿರುವ ಕಂಪ್ಯೂಟರ್ ಪರದೆಯತ್ತ ಬಾಗುತ್ತಾರೆ. ಪರಿಣಾಮವಾಗಿ ಭುಜ ಮತ್ತು ಬೆನ್ನಿನ ಕೆಳಭಾಗದಲ್ಲಿ  ನೋವು ಕಾಣಿಸಿಕೊಳ್ಳುತ್ತದೆ’ ಎಂದು ಹೇಳುತ್ತಾರೆ ‘ಫಿಕ್ಸಿಂಗ್ ಯು: ಶೋಲ್ಡರ್ ಆಂಡ್ ಎಲ್ಬೊ ಪೇನ್’ ಕೃತಿಯ ಲೇಖಕ ರಿಕಿ ಓಲ್ಡರ್‌ಮನ್.

ಈ ಸಮಸ್ಯೆಗೆ ಅವರು ನೀಡುವ ಸಲಹೆ : ಕುರ್ಚಿಯ ಎತ್ತರವನ್ನು ಸ್ವಲ್ಪ ಕೆಳಮಟ್ಟಕ್ಕೆ ಹೊಂದಿಸಿ, ಮೊಣಕಾಲುಗಳನ್ನು ಸೊಂಟದ ಭಾಗಕ್ಕೆ ಸಮರೇಖೆಯಲ್ಲಿರುವಂತೆ ಮುಂದಕ್ಕೆ ಚಾಚಿ, ಬೆನ್ನು ಹುರಿಯು ಕುರ್ಚಿಯ ಬೆನ್ನಾಸರೆಗೆ ತಾಗುವವರೆಗೆ ಹಿಂಬದಿಗೆ ಬಾಗಿ.

ದಿನವಿಡೀ ಕುರ್ಚಿಯಲ್ಲಿ ಕುಳಿತುಕೊಂಡು ಕೆಲಸಮಾಡುವುದು ತುಂಬಾ ಆರಾಮದಾಯಕ ಎಂದು ಆಲೋಚಿಸುವವರೆಲ್ಲಾ ಇನ್ನು ಮುಂದೆ ಕುಳಿತುಕೊಳ್ಳುವ ಮುನ್ನ ಯೋಚಿಸಬೇಕು. ನಮ್ಮ ದೇಹದ ಆರೋಗ್ಯ ನಾವು ಕುಳಿತುಕೊಳ್ಳುವ ಭಂಗಿಯಲ್ಲಿದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT