ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಲಿಗಳಿಂದ ಪ್ರತಿಭಟನೆ

Last Updated 22 ಜನವರಿ 2011, 9:05 IST
ಅಕ್ಷರ ಗಾತ್ರ

ಮುಂಡಗೋಡ: ಕಳೆದ ಹತ್ತು ತಿಂಗಳಿಂದ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ದುಡಿದ ಕೂಲಿಕಾರ್ಮಿಕರಿಗೆ ಹಣ ನೀಡದಿರುವುದನ್ನು ಖಂಡಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದವರು ಪ್ರತಿಭಟಿಸಲು ತಾಲ್ಲೂಕು ಪಂಚಾಯಿತಿ ಎದುರು ಆಗಮಿಸುತ್ತಿದ್ದಂತೆ ಪೊಲೀಸರು ಗೇಟ್ ಎದುರೇ ಪ್ರತಿಭಟನಾಕಾರರನ್ನು ತಡೆದ ಘಟನೆ  ಶುಕ್ರವಾರ ನಡೆಯಿತು.

ತಾಲ್ಲೂಕಿನ ಪಾಳಾ ಗ್ರಾ.ಪಂ. ಸೇರಿದಂತೆ ಹಲವು ಪಂಚಾಯಿತಿಗಳ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ದುಡಿದ ಕೂಲಿಕಾರರಿಗೆ ಕಳೆದ ಹತ್ತು ತಿಂಗಳಿಂದ ಹಣ ನೀಡದೇ ವಂಚಿಸಲಾಗುತ್ತಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಗ್ರಾ.ಪಂ. ಕಾರ್ಯದರ್ಶಿಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.
 
ಉದ್ಯೋಗ ಖಾತ್ರಿ ಯೋಜನೆಯಲ್ಲಿ ದುಡಿದರೂ ನಮ್ಮ ಕೂಲಿ ವೇತನ ಬಿಡುಗಡೆ ಮಾಡಿಲ್ಲ. ಆದರೆ ಕೆಲಸ ಮಾಡಿಸಿಕೊಂಡ ಹೊಲದ ಮಾಲಿಕರಿಗೆ ಹಣ ಬಟವಡೆ ಮಾಡಲಾಗಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಕೂಲಿ ಹಣ ನೀಡದೇ ಇಲ್ಲಿಂದ ಕದಲುವುದಿಲ್ಲ ಎಂದು ತಾ.ಪಂ. ಗೇಟ್ ಎದುರೇ ಪ್ರತಿಭಟನೆ ನಡೆಸಿದರು.

ನಂತರ ತಹಸೀಲ್ದಾರ ಹಾಗೂ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಪ್ರತಿಭಟನಾಕಾರರ ಮನವೊಲಿಸಲು ಎರಡು ಮೂರು ಸಲ ಪ್ರಯತ್ನಿಸಿದರೂ ಪ್ರತಿಭಟನಾಕಾರರು ಮಾತ್ರ ತಮ್ಮ ಪಟ್ಟು ಸಡಿಲಿಸದೇ ಪ್ರತಿಭಟನೆ ಮುಂದುವರೆಸಿದರು.  

ಅಲ್ಲದೆ ಚವಡಳ್ಳಿ ಹಾಗೂ ಬಾಚಣಕಿ ಗ್ರಾ.ಪಂ. ಗಳಲ್ಲಿ ಹೊಸದಾಗಿ ಕೂಲಿ ಕೇಳಲು ಹೋದರೆ ಅಲ್ಲಿನ ಕಾರ್ಯದರ್ಶಿಗಳು ನಿರಾಕರಿಸುತ್ತಾರೆ. ಸ್ಥಳಕ್ಕೆ ಕಾರ್ಯದರ್ಶಿಗಳನ್ನು ಕರೆಯಿಸಿ ಎಂದಾಗ ತಹಸೀಲ್ದಾರ ಮಾತನಾಡಿ, ನಿಮ್ಮಲ್ಲಿರುವ ಜಾಬ್ ಕಾರ್ಡ್ ತೋರಿಸಿ ಕೆಲಸ ಕೇಳಿ, ಯಾರಾದರೂ ನಿರಾಕರಿಸಿದರೆ ನನಗೆ ತಿಳಿಸಿ ಅಗತ್ಯ ಕ್ರಮ ಕೈಗೊಳ್ಳುತ್ತೇನೆ ಎನ್ನುತ್ತಿದ್ದಂತೆ ಕೂಲಿಕಾರರ ಜಾಬ್ ಕಾರ್ಡ್‌ಗಳು ಕಾರ್ಯದರ್ಶಿಗಳ ಮನೆಯಲ್ಲಿಯೇ ಇಟ್ಟುಕೊಂಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ದುಡಿದವರಿಗೆ ಕೂಲಿ ಹಣ ಬಟವಡೆ ಮಾಡುವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಪ್ರತಿಭಟನೆಯನ್ನು ಮುಂದುವರೆಸಲಾಗಿದೆ ಕ.ಪ್ರಾ. ಕೃ.ಕೂ. ಸಂಘದ ರಾಜ್ಯ ಸಮಿತಿ ಸದಸ್ಯ ಭೀಮಣ್ಣ ಭೋವಿ, ಜಿಲ್ಲಾ ಕಾರ್ಯದರ್ಶಿ ಶಾಂತಾರಾಮ ನಾಯ್ಕ, ಹನಮಂತಪ್ಪ ನ್ಯಾಸರ್ಗಿ, ಬಸವಂತಪ್ಪ ಕಲಕೇರಿ, ಬಸವಂತಪ್ಪ ಪೂಜಾರಿ, ಶೇಖಪ್ಪ ಹರಿಜನ, ದ್ಯಾಮವ್ವ ಭೋವಿವಡ್ಡರ, ನೀಲವ್ವ ಪೂಜಾರ, ಉಮೇಶ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT