ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಲ್! ಚಿಯರ್ಸ್‌!

Last Updated 17 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಗೋಲ್ಡನ್ ಮೂವೀಸ್ ಸಿನಿಮಾದ ಹೆಸರು ‘ಕೂಲ್’!
ಗಾಡ್ರೇಜ್ ಕಂಪನಿ ಹೇಳುತ್ತಿರುವುದು ಕೂಲ್ ಕೂಲ್!

ಇದು ಕೂಲ್ ಪ್ಲಸ್ ಕೂಲ್ ಹೊಂದಾಣಿಕೆ. ‘ಕೂಲ್’ ಸಿನಿಮಾದ ಮಂದಿ ಹಾಗೂ ‘ಗಾಡ್ರೇಜ್’ ಗೃಹೋಪಯೋಗಿ ಉತ್ಪನ್ನಗಳ ಕಂಪನಿ ಕನ್ನಡ ಪ್ರೇಕ್ಷಕರ ನೆತ್ತಿ ಹಾಗೂ ಮನಸ್ಸಿನ ಮೇಲೆ ಐಸ್ ಇಡಲು ಹೊರಟಿರುವ ಕಥೆಯಿದು.

ಈ ಕೂಲ್ ಕಥೆ ಏನೆಂದರೆ- ‘ಕೂಲ್’ ಚಿತ್ರವನ್ನು ತೆರೆಕಾಣಿಸಲು ಸಿದ್ಧವಾಗಿರುವ ಗಣೇಶ್ ‘ಗಾಡ್ರೇಜ್’ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಒಪ್ಪಂದದ ಪ್ರಕಾರ, ಈ ಬೇಸಿಗೆಯಲ್ಲಿ ಗಾಡ್ರೇಜ್ ಉತ್ಪನ್ನಗಳನ್ನು ಖರೀದಿಸುವ ಗ್ರಾಹಕರಿಗೆ ಸಾಕಷ್ಟು ಆಮಿಷಗಳಿವೆ. ಅವುಗಳಲ್ಲಿ ಮುಖ್ಯವಾದುದು ಗಣೇಶ್‌ರ ಮುಂದಿನ ನಿರ್ಮಾಣದ ಚಿತ್ರದಲ್ಲಿ ಪಾತ್ರ ಗಿಟ್ಟಿಸಿಕೊಳ್ಳುವುದು. ಐವತ್ತು ಜನರಿಗೆ ಗಣೇಶ್ ಜೊತೆ ಊಟ ಮಾಡುವ ಹಾಗೂ ಮುನ್ನೂರೈವತ್ತು ಅದೃಷ್ಟಶಾಲಿಗಳಿಗೆ ಗಣೇಶ್ ಜೊತೆ ‘ಕೂಲ್’ ಸಿನಿಮಾ ನೋಡುವ ಅವಕಾಶ ಉಳಿದ ಆಮಿಷಗಳು. ಈ ವಿವರಗಳನ್ನು ನೀಡಿದ್ದು ‘ಗಾಡ್ರೇಜ್ ಅಪ್ಲಯನ್ಸಸ್’ನ ಅಧಿಕಾರಿ ರಮೇಶ್ ಚಂಬತ್.

ಕೊಡು-ಕೊಳು ಒಪ್ಪಂದದಿಂದ ಸಿನಿಮಾ ಕಡೆ ಬರೋಣ.

ನಿರ್ದೇಶನ - ನಿರ್ಮಾಣ ಎಂದು ಈವರೆಗೆ ತಮ್ಮ ಪಾಡಿಗೆ ತಾವಿದ್ದ ಗಣೇಶ್, ‘ಕೂಲ್’ ಚಿತ್ರಕ್ಕೆ ಸಂಬಂಧಿಸಿದಂತೆ ಪತ್ರಕರ್ತರೊಂದಿಗೆ ಮಾತನಾಡಲಿಕ್ಕೆ ‘ಗಾಡ್ರೇಜ್’ ನೆಪವಾಗಿತ್ತು. ಜಗಮಗಿಸುತ್ತಿದ್ದ ಕಾರ್ಪೊರೇಟ್ ವೇದಿಕೆಯಲ್ಲಿ ನಿರೂಪಕಿಯ (ಆರ್‌ಜೆ ನೇತ್ರಾ) ಗೋಗರೆತದ ಮೇರೆಗೆ ಪ್ರತ್ಯಕ್ಷರಾದ ಗಣೇಶ್ ಹೇಳಿದ್ದು-

‘ಏಳು ತಿಂಗಳ ಹಿಂದೆ ಸೆಟ್ಟೇರಿದ ‘ಕೂಲ್’ ಚಿತ್ರೀಕರಣ ಮುಗಿದಿದೆ. ನನ್ನ ಲೈಫ್‌ನಲ್ಲಿ ಈವರೆಗೆ ಆದುದೆಲ್ಲ ವಿಚಿತ್ರ. ಎಲ್ಲವೂ ಡಬ್ ಡಬ್ ಎಂದಾಯಿತು. ‘ಮುಂಗಾರುಮಳೆ’ ಸೂಪರ್‌ಹಿಟ್ ಆಗಿ ನಾನೂ ಡಬ್ ಡಬ್ ಎಂದು ನಾಯಕನಾದೆ. ಮದುವೆಯೂ ಡಬ್ ಡಬ್ ಎಂದಾಯಿತು. ಈಗ ನಿರ್ದೇಶನದ ಅವಕಾಶ ಕೂಡ ಡಬ್ ಡಬ್ ಎಂದು ಒದಗಿಬಂದಿದೆ.

ಈವರೆಗೆ ನನ್ನನ್ನು ಬೆಂಬಲಿಸಿದ ಎಲ್ಲರ ಆಶೀರ್ವಾದವೂ ನನ್ನ ಮೇಲಿರುತ್ತದೆ ಎಂದು ನಂಬಿರುವೆ’.
ಅಂದಹಾಗೆ, ಸದ್ಯದಲ್ಲೇ ‘ಕೂಲ್’ನ ಆಡಿಯೊ ಬಿಡುಗಡೆಗೆ ಅವರು ಸಿದ್ಧತೆ ನಡೆಸುತ್ತಿದ್ದಾರೆ. ಹರಿಕೃಷ್ಣ ಸಂಗೀತ ನೀಡಿರುವ ಈ ಚಿತ್ರದಲ್ಲಿ ಐದು ಗೀತೆಗಳಿವೆಯಂತೆ. ‘ಕಾಫಿಗೆ ಹೋಗೋಣ ಬಾ’ ಎನ್ನುವ ಹಾಡನ್ನು ಸ್ವತಃ ಗಣೇಶ್ ಹಾಡಿದ್ದಾರಂತೆ. ಎಲ್ಲ ಹಾಡುಗಳನ್ನೂ ಕವಿರಾಜ್ ಬರೆದಿದ್ದಾರೆ.

‘ಈವರೆಗೆ ಗಣೇಶ್ ಅವರಲ್ಲಿ ಗೆಳೆಯನನ್ನು ಕಂಡಿದ್ದೆ, ನಟನನ್ನು ಕಂಡಿದ್ದೆ, ಈಗ ಒಳ್ಳೆಯ ನಿರ್ದೇಶಕನನ್ನು ಕಾಣುತ್ತಿದ್ದೇನೆ’ ಎಂದು ಹೊಗಳಿದ ಕವಿ, ಹಾಡುಗಳನ್ನು ಬರೆಯಲಿಕ್ಕೆಂದು ಗಣೇಶ್ ಜೊತೆ ಚೆನ್ನೈನಲ್ಲಿ ಕಳೆದ ಹದಿನೈದು ದಿನಗಳನ್ನೂ, ಆ ದಿನಗಳಲ್ಲಿ ಹಗಲೂರಾತ್ರಿ ಗಣೇಶ್ ಕಾಟ ಕೊಟ್ಟಿದ್ದನ್ನೂ ನೆನಪಿಸಿಕೊಂಡರು.

ಗಣೇಶ್ ಇದ್ದಲ್ಲಿ ಅವರ ಪತ್ನಿ ಹಾಗೂ ನಿರ್ಮಾಪಕಿ ಶಿಲ್ಪಾ ಇಲ್ಲದಿದ್ದರೆ ಹೇಗೆ? ಅವರು ಕೂಡ ‘ಕೂಲ್ ಕೂಲ್’ ಎನ್ನುತ್ತಲೇ ಪ್ರತ್ಯಕ್ಷರಾದರು.

‘ಶೂಟಿಂಗ್ ಇಷ್ಟು ಬೇಗ ಮುಗಿದೇಹೋಯ್ತಾ ಅನ್ನಿಸ್ತಿದೆ. ಏಪ್ರಿಲ್‌ನಲ್ಲಿ ಕೂಲ್ ತೆರೆಕಾಣಲಿದೆ’ ಎಂದು ಶಿಲ್ಪಾ ಹೇಳುತ್ತಿರುವಾಗಲೇ, ನಿರೂಪಕಿ ನೇತ್ರಾ ನಡುವೆ ಮೂಗು ತೂರಿಸಿದರು. ‘ಸಿನಿಮಾ ಮುಗಿಯುತ್ತಾ ಬಂದಂತೆ ನಿರ್ಮಾಪಕರಿಗೂ ನಿರ್ದೇಶಕರಿಗೂ ಜಟಾಪಟಿ ಆಗುತ್ತಿರುತ್ತೆ. ಈ ಸಿನಿಮಾದಲ್ಲೂ ಹಾಗಾಯಿತಾ?’ ಎಂದರು.
ಶಿಲ್ಪಾ ಬದಲಿಗೆ ಗಣೇಶ್ ಥಟ್ಟನೆ ಉತ್ತರಿಸಿದರು: ‘ಆ ಗಲಾಟೆ ಇಲ್ಲಿ ಮೊದಲೇ ಆಗಿಹೋಯಿತು’.

ಗಣೇಶ್‌ರ ಮಾತು ಏನೆಲ್ಲ ಹೇಳುವಂತಿತ್ತು. ನಿರ್ದೇಶಕ ಮಹೇಶ್ ಅವರೊಂದಿಗಿನ ಗಲಾಟೆಯ ನಂತರವೇ ಅಲ್ಲವೇ ಗಣೇಶ್ ನಿರ್ದೇಶಕರಾದದ್ದು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT