ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಅನ್ವೇಷಣೆ ಅನುಷ್ಟಾನವಾಗಲಿ

ಇನ್‌ಕಾಮೆಕ್‌್ಸ–2013: ಉತ್ಪನ್ನಗಳ ಸಂಸ್ಕರಣೆ, ಸಂಶೋಧನೆಗೆ ಒತ್ತು
Last Updated 17 ಸೆಪ್ಟೆಂಬರ್ 2013, 5:08 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ
ಹುಬ್ಬಳ್ಳಿ: ‘ಕೃಷಿ ಕ್ಷೇತ್ರದಲ್ಲಾಗುವ ಅನ್ವೇಷಣೆಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಮತ್ತು ರಾಜಕಾರಣಿಗಳು ಆಸಕ್ತಿ ವಹಿಸಬೇಕು. ಕೃಷಿ ಪರಿಣತರು ಮತ್ತು ರೈತರ ಸಂಶೋಧನೆಗಳನ್ನು ಗುರುತಿಸಿ ಜಾರಿಗೆ ತರಲು ಸರ್ಕಾರ ಮುಂದಾಗಬೇಕು’ ಎಂದು ಖ್ಯಾತ ಕೃಷಿ ವಿಜ್ಞಾನಿ, ಮೈಸೂರು ಜೆ.ಎಸ್‌.ಎಸ್‌. ಮಹಾವಿದ್ಯಾಲಯದ ಗ್ರಾಮೀಣಾಭಿವೃದ್ಧಿ ವಿಭಾಗದ ನಿರ್ದೇಶಕ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಎಂ ಮಹಾದೇವಪ್ಪ ಅಭಿಪ್ರಾಯಪಟ್ಟರು.

ಅಮರಗೋಳದಲ್ಲಿ ನಡೆಯುತ್ತಿರುವ ‘ಇನ್‌ಕಾಮೆಕ್‌್ಸ–2013’ ಕೈಗಾರಿಕಾ ವಸ್ತುಪ್ರದರ್ಶನ ವೇದಿಕೆಯಲ್ಲಿ ಸೋಮವಾರ ಜರುಗಿದ ‘ಕೃಷಿ ಹಾಗೂ ತೋಟಗಾರಿಕೆ ಉತ್ಪನ್ನಗಳ ಸಂಸ್ಕರಣೆ’ ಕುರಿತ ವಿಚಾರಸಂಕಿರಣದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ‘ಮಣ್ಣಿನ ಮಾದರಿ, ಸ್ಥಳೀಯ ವಾತಾವರಣ, ಗಳಿಸಿಕೊಂಡ ಜ್ಞಾನದ ಆಧಾರದಲ್ಲಿ ರೈತರು ಮಾಡಿದ ಶೋಧನೆಗಳು ನಿಷ್ಪಯೋಜಕವಾಗುತ್ತಿವೆ. ಈ ವಿಷಯವನ್ನು ಸರ್ಕಾರ ಮತ್ತು ಕೃಷಿ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು’ ಎಂದು ಒತ್ತಾಯಿಸಿದರು.

‘ಕೃಷಿ ಯೋಗ್ಯವಲ್ಲದ ಭೂಮಿಯನ್ನು ಕೈಗಾರಿಕೆಗಳ ಸ್ಥಾಪನೆಗೆ ಭೂಮಿ ಕೊಡುವುದು ತಪ್ಪಲ್ಲ. ಆದರೆ  ಯಾವ ಭೂಮಿಯನ್ನು ಕೊಡಬಹುದು, ಯಾವುದನ್ನು ಕೊಡಬಾರದು, ರೈತರ ಭೂಮಿ ಎಲ್ಲೆಲ್ಲಿಗೆ ಹೋಗಬೇಕು ಎಂಬ ನಿಟ್ಟಿನಲ್ಲಿ ಕೃಷಿ ತಜ್ಞರ ಅಭಿಪ್ರಾಯಪಡೆದು ನಿರ್ಧಾರಕ್ಕೆ ಬರಬೇಕು’ ಎಂದು ಅವರು ಸಲಹೆ ನೀಡಿದರು.

‘ಜಾಗತೀಕರಣ ಬೇಕು. ಆದರೆ ಆಹಾರಧಾನ್ಯಗಳನ್ನು ಉತ್ಪಾದಿಸುವ ಫಲವತ್ತಾದ ನೆಲದಲ್ಲಿ ಕೈಗಾರಿಕೆಗಳ ಸ್ಥಾಪನೆ ಸಲ್ಲದು. ಅದು ನಮ್ಮ ಮಕ್ಕಳಿಗೆ ಮಾಡುವ ದೊಡ್ಡ ಅಪರಾಧ. ನೋಟಿನ ಕಂತೆಗಳನ್ನು ತಿಂದು ಬದುಕಲು ಸಾಧ್ಯವಿಲ್ಲ‘ ಎಂದು ಆಕ್ರೋಶಗೊಂಡ ಅವರು, ‘ಕೃಷಿರಹಿತ ಭೂಮಿಗಳಲ್ಲಿ ಕೃಷಿ ಆಧಾರಿತ ಕೈಗಾರಿಕೆಗಳು ಬರಬೇಕು’ ಎಂದು ಆಶಿಸಿದರು.

‘ಭಾರತ, ಚೀನಾ ಮತ್ತು ಬ್ರೆಜಿಲ್‌ ಇಡೀ ವಿಶ್ವಕ್ಕೆ ಆಹಾರ ಧಾನ್ಯ ಪೂರೈಸುವ ಸಾಮರ್ಥ್ಯ ಹೊಂದಿದೆ. ಭಾರತದಲ್ಲಿ 142 ದಶಲಕ್ಷ ಹೆಕ್ಟೇರ್‌ ಕೃಷಿ ಭೂಮಿಯಲ್ಲಿ 259 ದಶಲಕ್ಷ ಟನ್‌ ಆಹಾರಧಾನ್ಯ ಉತ್ಪಾದನೆಯಾಗುತ್ತಿದೆ. ಆದರೆ ಚೀನಾದಲ್ಲಿ ಕೇವಲ 103 ದಶಲಕ್ಷ ಹೆಕ್ಟೇರ್‌ ಭೂಮಿಯಲ್ಲಿ 500 ದಶಲಕ್ಷ ಟನ್‌ ಉತ್ಪಾದನೆಯಾಗುತ್ತಿದೆ. ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡ ಪರಿಣಾಮ ಚೀನಾ ಈ ಸಾಧನೆ ತೋರಿದೆ. ಆ ದೇಶದಲ್ಲಿ ಈ ವರ್ಷ ನಡೆದ ಸಂಶೋಧನೆ ಮುಂದಿನ ವರ್ಷ ಕಾರ್ಯರೂಪಕ್ಕೆ ಬರುತ್ತದೆ. ಆದರೆ ನಮ್ಮಲ್ಲಿ ಕೆಲಸ ಆಗುತ್ತಿಲ್ಲ’ ಎಂದ ಅವರು ‘ನಮ್ಮ ರೈತರ ಸಾಂಪ್ರದಾಯಿಕ ಜ್ಞಾನಕ್ಕೂ ಮನ್ನಣೆ ನೀಡಬೇಕು. ಉನ್ನತ ಮಟ್ಟದ ಸಮಿತಿಗಳಲ್ಲಿ ರೈತರನ್ನೂ ಸೇರಿಕೊಳ್ಳಬೇಕು’ ಎಂದು ಆಗ್ರಹಿಸಿದರು.

‘ವಂಶಾಂತರಿ ತಳಿಗಳ ಬಳಕೆ ತಪ್ಪಲ್ಲ. ಯಾವುದನ್ನು ಬೆಳೆಯಬೇಕು ಎಂದು ನಿರ್ಧರಿಸಿಕೊಳ್ಳುವಷ್ಟು ರೈತರು ಮುಂದುವರಿದಿದ್ದಾರೆ.  ಸಾಕಷ್ಟು ಪ್ರಮಾಣದಲ್ಲಿ ಸಾವಯವ ಗೊಬ್ಬರ ಲಭ್ಯ ಇಲ್ಲದ ಸಂದರ್ಭದಲ್ಲಿ ಮಣ್ಣಿನ ಪರೀಕ್ಷೆ ಆಧಾರ­ದಲ್ಲಿ ರಸಗೊಬ್ಬರವನ್ನು ಔಷಧಿಯಾಗಿ ಬಳಸಿಕೊಳ್ಳಬೇಕು. ಬಿಟಿ ಹತ್ತಿ ಬಂದ ಬಳಿಕ ರಾಸಾಯನಿಕ ಗೊಬ್ಬರ ಬಳಕೆ 40 ದಶ­ಲಕ್ಷದಷ್ಟು ಕುಸಿದಿದೆ.  ಅವೈಜ್ಞಾನಿಕ ಬೆಲೆ ಮತ್ತು ನಕಲಿ ಕೃಷಿ ತಜ್ಞರಿಂದ ರೈತರರು ಸವಾಲು ಎದುರಿಸುತ್ತಿದ್ದಾರೆ’ ಎಂದರು.

‘ವಾತಾವರಣ ಆಧಾರಿತ 16 ಆಹಾರಧಾನ್ಯ ತಳಿ ಮತ್ತು  ವಿಟಾಮಿನ್‌ ಎ ಅಂಶ ಹೆಚ್ಚಿನ ಪ್ರಮಾಣದಲ್ಲಿರುವ ‘ಬಂಗಾರದ ಭತ್ತ’ ತಳಿ ಬಿಡುಗಡೆಗೆ ಅವಕಾಶ ಸಿಕ್ಕಿಲ್ಲ. ಭಾರತೀಯ ಕೃಷಿ ಸಂಶೋಧನಾ ಪರಿಷತ್ತು (ಐಸಿಎಆರ್‌) ಮತ್ತು ಕೃಷಿ ವಿವಿ­ಗಳಿಂದ ಸ್ವಲ್ಪ ಪ್ರಮಾಣದಲ್ಲಿ ಸಾಂಪ್ರದಾಯಿಕ ತಳಿಗಳು ರೈತ­ರಿಗೆ ಸಿಗುತ್ತಿದ್ದು, ಹೊಸ ತಳಿಗಳ ಬಗ್ಗೆ ಹೆಚ್ಚಿನ ಅರಿವು ಇಲ್ಲ’ ಎಂದ ಅವರು, ‘ಶಾಲಾ ಪಠ್ಯಕ್ರಮ ಪರಿಷ್ಕರಣೆಯ ಸಮಿತಿ­ಯಲ್ಲೂ ರೈತರಿಗೆ ಅವಕಾಶ ಸಿಗಬೇಕು. ರೈತರು ಬೆಳೆದ ಎಲ್ಲ ವಿಧದ ಬೀಜಗಳಿಗೂ ಸಬ್ಸಿಡಿ ಸಿಗಬೇಕು’ ಎಂದು ಒತ್ತಾಯಿಸಿದರು.

ವಿಚಾರಸಂಕಿರಣ ಉದ್ಘಾಟಿಸಿದ ನ್ಯಾಷನಲ್‌ ಮಿಶನ್‌ ಆನ್‌ ಫುಡ್‌ ಪ್ರೊಸೆಸ್ಸಿಂಗ್‌ (ಎನ್‌ಎಂಎಫ್‌ಪಿ) ಸಲಹೆಗಾರರಾದ ಬಿ.ಎಂ. ಲೀಲಾವತಿ, ಆಹಾರ ಸಂಸ್ಕರಣೆಗೆ ಸಂಬಂಧಿಸಿದಂತೆ ಮಿಶನ್ ಹಮ್ಮಿಕೊಂಡ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿದರು.

‘ದೇಶದಲ್ಲಿ ಶೇ 18ರಷ್ಟು ಹಣ್ಣು ಮತ್ತು ತರಕಾರಿ, ಶೇ 6ರಷ್ಟು ದವಸಧಾನ್ಯಗಳು ಉಪಯೋಗಶೂನ್ಯವಾಗುತ್ತಿದೆ. ಅದನ್ನು ತಡೆಯುವ ನಿಟ್ಟಿನಲ್ಲಿ ಆಹಾರ ಸಂಸ್ಕರಣಾ ಕೈಗಾರಿಕೆಗಳಾದ ಗೋದಾಮು, ಶೀತಲಾಗಾರ  ಸ್ಥಾಪನೆ, ತಾಂತ್ರಿಕತೆಯ ಉನ್ನತೀಕರಣ, ವಿಸ್ತರಣೆಗೆ ಸರ್ಕಾರ ಅನುದಾನ ನೀಡುತ್ತಿದೆ. ಸರ್ಕಾರ ನೀಡುವ ಸೌಲಭ್ಯಗಳನ್ನು ರೈತರು ಸಮರ್ಪಕವಾಗಿ ಬಳಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ‘ರೈತರ ಬೆಳೆಗಳಿಗೆ ಸೂಕ್ತ ಬೆಲೆ ಸಿಗುವ ಮೂಲಕ ಆರ್ಥಿಕವಾಗಿ ಬಲಗೊಳ್ಳಬೇಕು. ಫಲವತ್ತಾದ ಕೃಷಿಯೇತರ ಭೂಮಿಯನ್ನು ಕೈಗಾರಿಕೆಯ ಅಗತ್ಯಗಳಿಗೆ ಬಳಸಬಾರದು. ರೈತ ಸಬಲನಾದರೆ ಗ್ರಾಮಗಳು ಉಳಿಯಲಿದೆ’ ಎಂದು ಅಭಿಪ್ರಾಯಪಟ್ಟರು.

ನಬಾರ್ಡ್‌ ಎಜಿಎಂ ವೈ.ಎನ್‌. ಮಹಾದೇವಯ್ಯ, ‘ರೈತ ಸಂಘ­ಟನೆಗಳು ಬಲಗೊಳ್ಳುವ ಮೂಲಕ ಮಾರುಕಟ್ಟೆ ಬೆಲೆ-­ಯನ್ನು ರೈತರೇ ನಿರ್ಧರಿಸುವಂತಾಗಬೇಕು. ರೈತರು ಉದ್ಯಮಿ­ಶೀಲ­ರಾಗುವ ನಿಟ್ಟಿನಲ್ಲಿ ತಾಂತ್ರಿಕತೆ ಬೆಳೆಸಿಕೊಳ್ಳಬೇಕು’ ಎಂದರು.

‘ಈ ಭಾಗದ ತೋಟಗಾರಿಕಾ ಬೆಳೆ ಮತ್ತು ಕೃಷಿ ಉತ್ಪನ್ನಗಳಿಗೆ ಮೌಲ್ಯವರ್ಧನೆ ನೀಡುವ ನಿಟ್ಟಿನಲ್ಲಿ ಹುಬ್ಬಳ್ಳಿ–ಧಾರವಾಡದಲ್ಲಿ ಫುಡ್‌ ಪಾರ್ಕ್‌ ಸ್ಥಾಪನೆಯಾಗಬೇಕು’ ಎಂದೂ ಅವರು ಅಭಿಪ್ರಾಯಪಟ್ಟರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕೆ.ಎನ್‌.ಕರಿಕಟ್ಟಿ, ‘ಸಮಾನ ಮನಸ್ಕ ರೈತರು ಸೇರಿಕೊಂಡು ಆಹಾರ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಮುಂದಾಗಬೇಕು’ ಎಂದು ಸಲಹೆ ನೀಡಿದರು.

ಆರಂಭದಲ್ಲಿ ಸ್ವಾಗತಿಸಿದ ಕೆಸಿಸಿಐ ಅಧ್ಯಕ್ಷ ಎನ್‌.ಪಿ. ಜವಳಿ, ‘ವೈಜ್ಞಾನಿಕ ಬೆಲೆ ಸಿಗದ ಹೊರತು ಕೃಷಿ ಚಟುವಟಿಕೆ ಲಾಭದಾಯಕವಾಗಲಾರದು’ ಎಂದರು.

ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಧನ್‌ರಾಜ್‌, ಕೆಸಿಸಿಐ ಉಪಾಧ್ಯಕ್ಷ ವಸಂತ ಲದವಾ ಮತ್ತಿತರರು ಇದ್ದರು. ವಿಶ್ವನಾಥ ಗಿಣಿಮಾವ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT