ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಇಲಾಖೆ: ಸಮರ್ಪಕ ಮಾಹಿತಿ ನೀಡಲು ಸೂಚನೆ

Last Updated 19 ಡಿಸೆಂಬರ್ 2013, 6:33 IST
ಅಕ್ಷರ ಗಾತ್ರ

ಯಳಂದೂರು: ‘ಕೃಷಿ ಇಲಾಖೆಯಲ್ಲಿನ ಅನುದಾನಗಳ ಬಳಕೆ ಹಾಗೂ ಮಾಹಿತಿಗಳನ್ನು ಸಮರ್ಪಕವಾಗಿ ತಾಲ್ಲೂಕು ಪಂಚಾಯಿತಿಗೆ ನೀಡುತ್ತಿಲ್ಲ. ಈಚೆಗೆ ನಡೆದ ಗ್ರಾಮೀಣ ದಸರಾ ಕಾರ್ಯಕ್ರಮದಲ್ಲಿ ಖರ್ಚಾಗಿರುವ ಹಣದ ಬಗ್ಗೆ ಸರಿಯಾದ ಮಾಹಿತಿ ನೀಡಬೇಕು’ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಗಂಗಾಮಣಿ ರೇವಣ್ಣ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗೆ ಸೂಚಿಸಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣ­ದಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ಇಲಾಖೆಯವರು ಸ್ತಬ್ಧ ಚಿತ್ರವನ್ನು ಮಾಡಲು ₨ 20 ಸಾವಿರ ಖರ್ಚು ಮಾಡ­­ಲಾ­ಗಿದೆ ಎಂದು ಹೇಳಿದ್ದಾರೆ. ಆದರೆ, ಇದರ ಬಗ್ಗೆ ದಾಖಲೆಗಳನ್ನೇ ಇಟ್ಟಿಲ್ಲ.

ಮಂಗಳವಾರ ನಡೆದ ಸ್ಥಾಯಿ ಸಮಿತಿ ಸಭೆಯಲ್ಲಿ ಸಹಾಯಕ ನಿರ್ದೇಶ­ಕರು ಭಾಗವಹಿಸಿದ್ದು, ಇಲಾಖೆಯ ಎಲ್ಲ ಮಾಹಿತಿಯನ್ನು ಸಾಮಾನ್ಯ ಸಭೆಯಲ್ಲಿ ನೀಡುತ್ತೇನೆ ಎಂದು ಹೇಳಿದ್ದರು. ಆದರೆ, ಸಭೆಗೆ ನಿರ್ದಿಷ್ಟ ಮಾಹಿತಿ ನೀಡುವಲ್ಲಿ ಅವರು ವಿಫಲವಾಗಿದ್ದಾರೆ ಎಂದು ದೂರಿದರು.

ಮಂಗಳವಾರ ನಡೆದ ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿ ಅವ್ಯವಸ್ಥೆ ಕುರಿತು ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಬಂದಿರುವ ವರದಿ ಬಗ್ಗೆ ಮಾಹಿತಿ ನೀಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸದಸ್ಯ ಕೆ.ಪಿ. ಶಿವಣ್ಣ ಸೂಚನೆ ನೀಡಿ ದರು. ಇದಕ್ಕೆ ಉತ್ತರಿಸಿದ ಬಿಇಒ ಪಿ. ಮಂಜುನಾಥ್‌, ‘ಈ ಬಗ್ಗೆ ಈಗಾಗಲೇ ಮಾಹಿತಿ ಕಲೆ ಹಾಕಲಾಗುತ್ತಿದೆ. ಕೆಲ ವಿದ್ಯಾರ್ಥಿಗಳಿಗೆ ಇದರಿಂದ ಅನ್ಯಾಯ­ವಾಗಿದ್ದು, ಇದನ್ನು ಸರಿದೂಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಕೊಮಾರನಪುರ ಗ್ರಾಮದಲ್ಲಿನ ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಗೆ ಬರುವ ಕೆರೆಯ ಕಾಮಗಾರಿ ಮುಗಿದಿದೆ. ಆದರೆ, ಇನ್ನೂ ಏರಿಗೆ ಮಣ್ಣನ್ನು ಸುರಿ­ಯದೆ ಟರ್ಫ್‌ ಹಾಕಲಾಗಿದ್ದು, ಇದು ಅವೈಜ್ಞಾನಿಕವಾಗಿದೆ. ಶೀಘ್ರ ಕಾಮಗಾರಿ ಮುಗಿಸುವಂತೆ ಜೆಇ ಅಜರುದ್ದೀನ್‌ ಅವರಿಗೆ ತಾಕೀತು ಮಾಡಲಾಯಿತು.

ತಾಲ್ಲೂಕಿನಲ್ಲಿ ಭತ್ತ ಖರೀದಿ ಕೇಂದ್ರ ತೆರೆಯಲಾಗಿದೆ. ಆದರೆ, ಇಲ್ಲಿ ಎಲ್ಲ ರೀತಿಯ ಭತ್ತ ಖರೀದಿಗೆ ಅವಕಾಶವಿಲ್ಲ. ಹೀಗಾಗಿ, ರೈತರಿಗೆ ಇದರಿಂದ ಅನನು­ಕೂಲವಾಗಿದೆ. ಎಲ್ಲ ತಳಿಯ ಭತ್ತವನ್ನೂ ಖರೀದಿ ಮಾಡಬೇಕು. ಜತೆಗೆ ಚೀಲ ಗಳನ್ನು ಸಂಬಂಧಪಟ್ಟ ಇಲಾಖೆಯೇ ನೀಡಬೇಕು. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಪತ್ರ ರವಾನಿಸಬೇಕು ಎಂದು ಸದಸ್ಯ ಡಿ. ವೆಂಕಟಾಚಲ ದೂರಿದರು.

ಸಮಾಜ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ಯನ್ನು ತಾತ್ಕಾಲಿಕವಾಗಿ ಬಿ.ಆರ್‌. ಹಿಲ್ಸ್‌ ನಲ್ಲಿರುವ ರೇಷ್ಮೆ ಇಲಾಖೆಯ ಕಟ್ಟಡಕ್ಕೆ ವರ್ಗಾಯಿಸುವಂತೆ ಮನವಿ ಮಾಡಲಾಯಿತು. ಆರೋಗ್ಯ ಇಲಾಖೆ ಯಿಂದ ಸಭೆಗಳಿಗೆ ತಾಲ್ಲೂಕು ಆರೋಗ್ಯಾಧಿಕಾರಿಗಳು ಭಾಗವಹಿಸ ಬೇಕು ಎಂಬುದೂ ಸೇರಿದಂತೆ ವಿವಿಧ ಇಲಾಖೆಗಳ ವಿಷಯಗಳನ್ನು ಚರ್ಚಿಸಲಾಯಿತು.

ಅಧ್ಯಕ್ಷೆ ಗಂಗಾಮಣಿ ರೇವಣ್ಣ, ಉಪಾಧ್ಯಕ್ಷ ಎನ್‌. ಮಹೇಶ್‌ ಕುಮಾರ್‌, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್‌. ರಾಮಚಂದ್ರು, ಸದಸ್ಯ ರಾದ ಉಮಾವತಿ ಸಿದ್ದರಾಜು, ವಿಜಯಲಕ್ಷ್ಮಿ ನಂಜುಂಡ, ಲಕ್ಷ್ಮಿದೇವಿ ಈರಣ್ಣ, ಗೌರಮ್ಮ ಮಹದೇವಸ್ವಾಮಿ, ಮಹೇಶ್ವರಿ ರಾಜೇಂದ್ರ, ಕೆ.ಪಿ. ಶಿವಣ್ಣ, ನಾಗೇಶ್‌, ಡಿ. ವೆಂಕಟಾಚಲ ಕಾರ್ಯ ನಿರ್ವಹಣಾಧಿಕಾರಿ ರಂಗನಾಥ್‌, ಎಇಇ ದೇವರಾಜು, ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT