ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಉತ್ಪನ್ನಕ್ಕೆ ವೈಜ್ಞಾನಿಕ ಬೆಲೆ ನೀಡಿ

Last Updated 22 ಡಿಸೆಂಬರ್ 2012, 9:42 IST
ಅಕ್ಷರ ಗಾತ್ರ

ಗೋಕಾಕ: ಕೃಷಿಕರ ಆಶೋತ್ತರಗಳ ಈಡೇರಿಕೆಗಾಗಿ ಸದಾ ಟೊಂಕ ಕಟ್ಟಿ ನಿಲ್ಲುತ್ತಿದ್ದ ಧೀಮಂತ ರೈತ ಮುಖಂಡ ದಿವಂಗತ ಎನ್.ಡಿ. ಸುಂದರೇಶ ಅವರ 21ನೇ ಸಂಸ್ಮರಣಾ ದಿನಾಚರಣೆ ಅಂಗವಾಗಿ ಇಲ್ಲಿಯ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಶುಕ್ರವಾರ ನಗರದ ಬಸವೇಶ್ವರ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಹಾಲಿನ ಬೆಲೆ ಹೆಚ್ಚಿಸುವುದು, ಕಬ್ಬು, ಭತ್ತ, ರಾಗಿ, ಮೆಕ್ಕೆಜೋಳ, ಅಡಿಕೆ, ತೆಂಗು ಮೊದಲಾದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸುವಂತೆ ಒತ್ತಾಯಿಸಿದರು.

ಬರಗಾಲದಿಂದ ಆಗಿರುವ ಬೆಳೆ ನಷ್ಟಕ್ಕೆ ಸಮರ್ಪಕ ಪರಿಹಾರ ಮತ್ತು ಸಾಲ ಮನ್ನಾ ಮಾಡಲು ಬಗರ್ ಹುಕುಂ ಸಾಗುವಳಿ ಹಕ್ಕು ಪತ್ರಗಳನ್ನು ವಿತರಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಘೋಷಣೆಗಳನ್ನು ಕೂಗುತ್ತ ತಹಶೀಲ್ದಾರ ಕಚೇರಿ ಆವರಣ ತಲುಪಿದ ಮೆರವಣಿಗೆ, ಅಲ್ಲಿ ಸಭೆಯಾಗಿ ಪರಿವರ್ತನೆಗೊಂಡಿತು.

ನೆರೆದಿದ್ದ ರೈತ ಬಾಂಧವರನ್ನು ಉದ್ದೇಶಿಸಿ ಹಸಿರು ಸೇನೆ ತಾಲ್ಲೂಕು ಘಟಕ ಅಧ್ಯಕ್ಷ ಭೀಮಶಿ ಗದಾಡಿ ಮತ್ತಿತರರು ಮಾತನಾಡಿದರು.
ರೈತರ ಸಮಸ್ಯೆಗಳನ್ನು ಇತ್ಯರ್ಥ ಪಡಿಸುವಂತೆ ಒತ್ತಾಯಿಸಿದ ರೈತ ಮುಖಂಡರು, ಸರ್ಕಾರಗಳು ತಳೆಯುತ್ತಿರುವ ನಿರ್ಲಿಪ್ತ ಧೋರಣೆಯನ್ನು  ಬಲವಾಗಿ ಖಂಡಿಸಿದರು.

ಬಸವೇಶ್ವರ ವೃತ್ತದಲ್ಲಿ ಸೇರಿದ ನೂರಾರು ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ತುಸು ಹೊತ್ತಿನವರೆಗೆ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿದರು. ನಂತರ ರಸ್ತೆ ತಡೆ ನಡೆಸಿ ಸಾರ್ವಜನಿಕರ ಗಮನ ಸೆಳೆದರು. ನಂತರ, ಕಂದಾಯ ಅಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮನವಿ ಪತ್ರ ಸಲ್ಲಿಸಲಾಯಿತು.

ಪ್ರತಿಭಟನೆ ಮತ್ತು ಧರಣಿಯ ನೇತೃತ್ವವನ್ನು  ಉಭಯ ಸಂಘಟನೆಗಳ ಪದಾಧಿಕಾರಿಗಳಾದ ಚೂನಪ್ಪ ಪೂಜೇರಿ, ಗಣಪತಿ ಈಳಿಗೇರ, ಭೀಮಶೆಪ್ಪ ಕಮತ, ಬೀರಪ್ಪ ಪೂಜೇರಿ, ಚರಂತಯ್ಯ  ಮಳಿಮಠ, ಈರಪ್ಪ ಗುಡಿತೋಟ, ಲಕ್ಕಪ್ಪ ಪೂಜೇರಿ, ಸತ್ತೆಪ್ಪ ಮಲ್ಲಾಪುರೆ, ಶಂಕರ ಹುಗ್ಗಿ, ರಾಚಯ್ಯ ಗೊಡಚಿ ಸೇರಿದಂತೆ ನೂರಾರು ಕಾರ್ಯಕರ್ತರು ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT