ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಉತ್ಪಾದನೆ: ದಾಖಲೆ ಪ್ರಗತಿ

Last Updated 4 ಜೂನ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):ಕಳೆದ ವರ್ಷಕ್ಕೆ ಹೋಲಿಸಿದರೆ 2010-11ನೇ ಸಾಲಿನಲ್ಲಿ ಕೃಷಿ ಮತ್ತು ಕೃಷಿ ಆಧಾರಿತ ಕ್ಷೇತ್ರ ಶೇ 6.6ರಷ್ಟು ಪ್ರಗತಿ ದಾಖಲಿಸಿದ್ದು, ದಾಖಲೆ ಮಟ್ಟದ 235.88 ದಶಲಕ್ಷ ಟನ್ ಆಹಾರ ಧಾನ್ಯಗಳ ಉತ್ಪಾದನೆಯಾಗಿದೆ.

ಈ ಮೊದಲು ಸರ್ಕಾರ 2010-11ನೇ ಸಾಲಿನಲ್ಲಿ ಶೇ 5.4ರಷ್ಟು ಕೃಷಿ ವೃದ್ಧಿ ದರ ಅಂದಾಜಿಸಿತ್ತು. ಆದರೆ, ಗೋಧಿ, ಬೇಳೆಕಾಳು, ಕಬ್ಬು ಮತ್ತು ಎಣ್ಣೆಬೀಜಗಳ ಉತ್ಪಾದನೆ ಈ ಅವಧಿಯಲ್ಲಿ ಗಣನೀಯವಾಗಿ ಹೆಚ್ಚಿದ ಹಿನ್ನೆಲೆಯಲ್ಲಿ  ಉತ್ತಮ ಪ್ರಗತಿ ಕಂಡುಬಂದಿದೆ ಎಂದು ಕೃಷಿ ಸಚಿವಾಲಯ ಹೇಳಿದೆ. ಕೃಷಿ ಉತ್ಪಾದನೆಯಲ್ಲಿ ಹೆಚ್ಚಳವಾಗಿರುವುದರಿಂದ ಕೃಷಿ ಅರಣ್ಯ ಮತ್ತು ಮೀನುಗಾರಿಕೆ ಕ್ಷೇತ್ರಗಳು ಶೇ 6.6ರಷ್ಟು ಪ್ರಗತಿ ದಾಖಲಿಸಿವೆ.
 
ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಕೃಷಿ ಉತ್ಪಾದನೆ ಕುಸಿಯಲಿದೆ ಎಂದು  ಪ್ರಧಾನಿ ಆರ್ಥಿಕ ಸಲಹಾ ಸಮಿತಿ (ಪಿಎಂಇಎಸಿ)  ಅಧ್ಯಕ್ಷ ಸಿ. ರಂಗರಾಜನ್ ಅಭಿಪ್ರಾಯಪಟ್ಟಿದ್ದಾರೆ.

ಸರ್ಕಾರ ಬಿಡುಗಡೆ ಮಾಡಿರುವ `ಜಿಡಿಪಿ~ ಅಂಕಿ ಅಂಶದ ಪ್ರಕಾರ, ಕಳೆದ ಹಣಕಾಸು ವರ್ಷದ ನಾಲ್ಕನೆಯ ತ್ರೈಮಾಸಿಕ ಅವಧಿಯಲ್ಲಿ ಕೃಷಿ ಕ್ಷೇತ್ರ ಶೇ 7.5ರಷ್ಟು ಪ್ರಗತಿ ದಾಖಲಿಸಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಶೇ 1.1ರಷ್ಟಿತ್ತು. ಕಳೆದ ವರ್ಷದ 218 ದಶಲಕ್ಷ ಟನ್‌ಗಳಿಗೆ ಹೋಲಿಸಿದರೆ ಈ ಅವಧಿಯಲ್ಲಿ ಆಹಾರ ಧಾನ್ಯಗಳ ಒಟ್ಟು ಉತ್ಪಾದನೆ 235 ದಶಲಕ್ಷ ಟನ್‌ಗಳಿಗೆ ಏರಿಕೆಯಾಗಿದೆ. ಈ ಅವಧಿಯಲ್ಲಿ 84.27 ದಶಲಕ್ಷ ಟನ್ ಗೋಧಿ, 17.29 ದಶಲಕ್ಷ ಟನ್ ಬೇಳೆಕಾಳು, 30.25 ದಶಲಕ್ಷ ಟನ್ ಎಣ್ಣೆಬೀಜ ಹಾಗೂ 34 ದಶಲಕ್ಷ ಟನ್‌ಗಳಷ್ಟು ಹತ್ತಿ ಉತ್ಪಾದನೆ ದಾಖಲಾಗಿದೆ.

`ಉತ್ತಮ ಮುಂಗಾರು ಮತ್ತು ಸರ್ಕಾರ ಜಾರಿಗೊಳಿಸಿದ ಹಲವು ಯೋಜನೆಗಳು ಕೃಷಿ ಉತ್ಪಾದನೆ ಹೆಚ್ಚುವಂತೆ ಮಾಡಿದೆ ಎಂದು ರಂಗರಾಜನ್ ಹೇಳಿದ್ದಾರೆ. ಕೃಷಿ ಕ್ಷೇತ್ರ ದೇಶದ ಆರ್ಥಿಕ ವೃದ್ಧಿ ದರಕ್ಕೆ (ಜಿಡಿಪಿ) ಶೇ 15ರಷ್ಟು ಮಾತ್ರ ಕೊಡುಗೆ ನೀಡುತ್ತದೆ. ಆದರೆ, ದೇಶದ ಜನಸಂಖ್ಯೆಯಲ್ಲಿ ಶೇ 60ರಷ್ಟು ಜನರು ಕೃಷಿಯನ್ನೇ ಅವಲಂಬಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT