ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಕ್ಷೇತ್ರದ ನಿರ್ಲಕ್ಷ್ಯ ಸಲ್ಲ

Last Updated 10 ಜನವರಿ 2014, 9:10 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ‘ಸರ್ಕಾರ ನೀಡುವ ಅನುದಾನಗಳಲ್ಲಿ ನಗರ ಪ್ರದೇಶಗಳಿಗೆ ಹೆಚ್ಚಿನ ಪಾಲು ನೀಡಿ, ಗ್ರಾಮೀಣ ಪ್ರದೇಶ ಹಾಗೂ ಕೃಷಿ ಕ್ಷೇತ್ರವನ್ನು ನಿರ್ಲಕ್ಷಿಸಲಾಗುತ್ತಿದೆ’ ಎಂದು ಭಾರತೀಯ ಕಿಸಾನ್ ಸಂಘದ ದಕ್ಷಿಣ ಪ್ರಾಂತ ಸಂಘಟನೆ ಕಾರ್ಯದರ್ಶಿ ಪುಟ್ಟಸ್ವಾಮಿ  ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಶ್ರೀರಾಮಾಂಜನೇಯ ಕಲ್ಯಾಣ ಮಂದಿರದಲ್ಲಿ ಭಾರತೀಯ ಕಿಸಾನ್ ಸಂಘದ ವತಿಯಿಂದ ಗುರು ವಾರ ನಡೆದ ಜಿಲ್ಲಅ ಕಿಸಾನ್ ಸಂಘದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

’ರೈತರಿಗಾಗಿ ನೀಡುವ ಅನುದಾನದ ದುರ್ಬಳಕೆಯಾಗುತ್ತಿದೆ. ರೈತ ವಿರೋಧಿ ಕ್ರಮಗಳ ವಿರುದ್ಧ ದನಿ ಎತ್ತಲು ರೈತರಲ್ಲಿ ಸಂಘಟನೆಯ ಕೊರತೆಯಿದೆ’ ಎಂದು ಅವರು ತಿಳಿಸಿದರು.

‘ದೇಶದಲ್ಲಿ ಶೇ.೭೦ರಷ್ಟು ಇರುವ ಕೃಷಿ ಕ್ಷೇತ್ರಕ್ಕೆ ಶೇ.೩೦ ರಷ್ಟು ಅನುದಾನಗಳನ್ನು ನೀಡಲಾಗುತ್ತಿದೆ. ಪ್ರತಿಯೊಂದು ಮಾರಾಟ ವಸ್ತುವಿನ ತಯಾರಕರು, ತಮ್ಮ ಉತ್ಪನ್ನಗಳಿಗೆ ಬೆಲೆ ನಿಗದಿಪಡಿಸುತ್ತಾರೆ. ಆದರೆ ರೈತರ ಉತ್ಪನ್ನಗಳಿಗೆ ಬೆಲೆಗಳನ್ನು ಅವೈಜ್ಞಾನಿಕವಾಗಿ ಅಧಿಕಾರಿಗಳು ತೀರ್ಮಾನಿಸುತ್ತಿದ್ದಾರೆ. ಇಂದು ರೈತರು ಸರಿಯಾಗಿ ಲೆಕ್ಕ ಹಾಕುವುದಿಲ್ಲ.  ರೈತರು ತಮ್ಮ ಉತ್ಪನ್ನಗಳಿಗೆ ಬೆಲೆ ನಿಗದಿ ಮಾಡುವಂತಾಗಬೇಕು’ ಎಂದರು.

‘ಇಂದು ಕೃಷಿ ಕ್ಷೇತ್ರದ ಸಂಕಷ್ಟದಲ್ಲಿದ್ದು, ಕೃಷಿ ಭೂಮಿ ಮಾರಾಟ ಮಾಡಿ ರೈತರು  ಬೇರೆ ವೃತ್ತಿ  ನಡೆಸುವಂತಾಗಿದೆ. ಇಷ್ಟೆಲ್ಲಾ ಸಮಸ್ಯೆ ಗಳ ನಡುವೆ ರೈತರು ಸಂಘಟಿತರಾಗದೇ ಇರುವುದು ದುರಂತವೇ ಸರಿ’ ಎಂದು ವಿಷಾದಿಸಿದರು.

“ಪ್ರತಿಯೊಬ್ಬ ರೈತನೂ ನಾಯಕ ನಾಗಿಸುವ ದಿಸೆಯಲ್ಲಿ ಭಾರತೀಯ ಕಿಸಾನ್ ಸಂಘ ದೇಶದಾದ್ಯಂತ ಸಂಘಟನೆ ಮಾಡುತ್ತಿದ್ದು, ರೈತ ಪರ ಹೋರಾಟಗಳಲ್ಲಿ ಕೆಳಮಟ್ಟದ ಯಶಸ್ಸು ಕಂಡಿದೆ. ರೈತರು ಸಂಘಟನೆ ಮೂಲಕ ತಮ್ಮ ಅಸ್ತಿತ್ವ ಪ್ರತಿಪಾದಿಸುವಲ್ಲಿ ಮುಂದಾಗಬೇಕು’ ಎಂದು ಅವರು ಕರೆ ನೀಡಿದರು.

ಸಮಾವೇಶದ  ಸಾನ್ನಿಧ್ಯ ವಹಿಸಿದ್ದ ಖಾನಿಮಠದ ಬಸವರಾಜಸ್ವಾಮೀಜಿ ಮಾತನಾಡಿ, ‘ಭಾರತದಲ್ಲಿ ರೈತರ ಸ್ಥಿತಿ ಶೋಚನೀಯವಾಗಿದೆ.  ರೈತರಿಗೆ ಅಗತ್ಯವಾಗಿ ಬೇಕಾಗಿರುವ ನೀರು, ವಿದ್ಯುತ್, ರಸ್ತೆ ಹಾಗೂ ಮಾರುಕಟ್ಟೆ ವ್ಯವಸ್ಥೆಯನ್ನು ನೀಡುವಲ್ಲಿ ಸರ್ಕಾರ ವಿಫಲವಾಗಿವೆ. ವ್ಯರ್ಥವಾಗಿ ಸಮುದ್ರದ ಪಾಲಾಗುತ್ತಿರುವ ನೀರನ್ನು ಬಯಲು ಸೀಮೆಗೆ ಹರಿಸುವ ಪರಮಶಿವಯ್ಯ ವರದಿ ಯೋಜನೆ ಅನುಷ್ಠಾನಗೊಂಡಿಲ್ಲ.

ನೀರಾವರಿಗಾಗಿ ಸರ್ಕಾರ ಶಾಶ್ವತ ಯೋಜನೆಗಳನ್ನು ರೂಪಿಸುತ್ತಿಲ್ಲ. ಇಂದು ಕೈಗಾರೀಕರಣದ ಫಲವಾಗಿ ಕೃಷಿ ಭೂಮಿ ಕಡಿಮೆಯಾಗುತ್ತಿದೆ. ಈ ನಿಟ್ಟಿನಲ್ಲಿ ರೈತರ ಬದುಕು ಹಸನಾಗಿದ್ದರೆ ಮುಂದೆ ಆಹಾರಕ್ಕೆ ತೀವ್ರ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಮಾರಂಭದಲ್ಲಿ ಸಾಧಕ ರೈತರನ್ನು ಸನ್ಮಾನಿಸಲಾಯಿತು. ಜಿಲ್ಲಾ ಕಿಸಾನ್ ಸಂಘದ ಅಧ್ಯಕ್ಷ ಅರುಣ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಭಾರತೀಯ ಕಿಸಾನ್ ಸಂಘದ ರಾಜ್ಯ ಕಾರ್ಯದರ್ಶಿ ಕೆ.ಸಿಗಂಗಾಧರ್, ಜಿಲ್ಲಾ ಕಾರ್ಯದರ್ಶಿ ಸುರೇಶ್, ಉಪಾಧ್ಯಕ್ಷ ಅಪ್ಪಯ್ಯಣ್ಣ, ಸದಸ್ಯ ರಮೇಶ್, ತಾಲ್ಲೂಕು ಅಧ್ಯಕ್ಷ ಮರಿಯಣ್ಣ, ಕಾರ್ಯದರ್ಶಿ ಡಿ.ಎ. ಸತೀಶ್, ಕೋಶಾಧ್ಯಕ್ಷ ಎಂ.ಜಿ.ರವಿ ಕುಮಾರ್, ಮಹಿಳಾ ಪ್ರಮುಖರಾದ ನಂದಿನಿ ಕುಮಾರಿ   ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT