ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಪುನಶ್ಚೇತನಕ್ಕೆ ಇಲಾಖೆ ಕಾರ್ಯೋನ್ಮುಖ

Last Updated 2 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬೆಲೆ ಕುಸಿತ, ಕೂಲಿ ಕಾರ್ಮಿಕರ ಸಮಸ್ಯೆ, ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ, ಅಂತರ್ಜಲ ಕುಸಿತ ಸೇರಿದಂತೆ ನಾನಾ ಕಾರಣಗಳಿಂದಾಗಿ ಕವಲು ದಾರಿಯಲ್ಲಿರುವ ಕೃಷಿ ವಲಯವನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಪ್ರಯತ್ನ ಆರಂಭವಾಗಿದೆ.

ಸಾವಯವ ಕೃಷಿ, ಭೂ ಚೇತನ, ಸಮಗ್ರ ಕೃಷಿ ಪದ್ಧತಿ ಅಳವಡಿಕೆ, ತುಂತುರು ಮತ್ತು ಹನಿ ನೀರಾವರಿಗೆ ಉತ್ತೇಜನ, ಕೃಷಿ ಯಂತ್ರೋಪಕರಣಗಳಿಗೆ ಸಬ್ಸಿಡಿ, ಮಣ್ಣಿನ ಫಲವತ್ತತೆಗೆ ಅನುಗುಣವಾಗಿ ಸೂಕ್ತ ಬೆಳೆ ಬೆಳೆಯುವಂತೆ ರೈತರನ್ನು ಪ್ರೋತ್ಸಾಹಿಸುವ ಕಾರ್ಯದಲ್ಲಿ ಕೃಷಿ ಇಲಾಖೆ ತೊಡಗಿದೆ.

ಆಹಾರ ಭದ್ರತೆಯನ್ನು ಕಾಪಾಡುವುದರ ಜೊತೆಗೆ 2020ರ ವೇಳೆಗೆ ಕೃಷಿಯನ್ನು ಸುಸ್ಥಿರ ಹಾಗೂ ಲಾಭದಾಯಕ ಉದ್ದಿಮೆಯಾಗಿ ಪರಿವರ್ತಿಸುವ ಉದ್ದೇಶವನ್ನು ಇಲಾಖೆ ಹೊಂದಿದೆ. ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ, ರೈತರಿಗೆ ಉತ್ತಮ ಆದಾಯ ತಂದುಕೊಡುವಂತೆ ಮಾಡುವ ಮೂಲಕ ಕೃಷಿ ಬೆಳವಣಿಗೆಯನ್ನು ಶೇ 4.5ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ.

ಸಾಂಪ್ರದಾಯಿಕ ಕೃಷಿ ಪದ್ಧತಿಗೆ ಜೋತು ಬಿದ್ದಿರುವ ರೈತರು ಒಂದೇ ಬೆಳೆಯ ಮೇಲೆ ಹೆಚ್ಚಾಗಿ ಅವಲಂಬಿತರಾಗಿದ್ದಾರೆ. ಆ ಬೆಳೆ ಹಾಳಾದರೆ, ಸೂಕ್ತ ಬೆಲೆ ಸಿಗದೆ ಇದ್ದರೆ ರೈತರು ನಷ್ಟ ಅನುಭವಿಸುತ್ತಾರೆ. ಹೂಡಿದ ಬಂಡವಾಳವೂ ವಾಪಸ್ ಬರುವುದಿಲ್ಲ. ಇಷ್ಟಾದರೂ ರೈತರು ಬದಲಾವಣೆಗೆ ಮುಂದಾಗುತ್ತಿಲ್ಲ ಎನ್ನುತ್ತಾರೆ ಕೃಷಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಭರತ್‌ಲಾಲ್ ಮೀನಾ.

ರೈತರು ನಷ್ಟಕ್ಕೆ ಒಳಗಾಗುವುದನ್ನು ತಪ್ಪಿಸಲು ಅವರು ಬೆಳೆಯುವ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗುವಂತೆ ಹಾಗೂ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಇಲಾಖೆ ಕ್ರಮ ಕೈಗೊಂಡಿದೆ. ಒಂದಕ್ಕಿಂತ ಹೆಚ್ಚು ಬೆಳೆಗಳನ್ನು ಬೆಳೆಯುವಂತೆ ಪ್ರೋತ್ಸಾಹಿಸಲಾಗುತ್ತಿದೆ. ಕೃಷಿ ವಿಶ್ವವಿದ್ಯಾಲಯಗಳೂ ಈ ಕಾರ್ಯದಲ್ಲಿ ತೊಡಗಿವೆ.

ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವುದರಿಂದ ಮಳೆ ಕಡಿಮೆಯಾದ ಸಂದರ್ಭದಲ್ಲಿ ಅನುಕೂಲವಾಗುತ್ತದೆ. ಕಳೆದ ವರ್ಷ 1.25 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಲಾಗಿದೆ. ಈ ಪದ್ಧತಿಯಡಿ ರೈತ ಕುಟುಂಬಗಳಿಗೆ ಸಣ್ಣ ಪ್ರಮಾಣದಲ್ಲಿ ಆರ್ಥಿಕ ನೆರವು ನೀಡಲಾಗುತ್ತಿದೆ. ಅಗತ್ಯವುಳ್ಳರಿಗೆ ಬ್ಯಾಂಕ್ ಮೂಲಕ ಸಾಲ ಸೌಲಭ್ಯಗಳನ್ನು ಕೊಡಿಸಲಾಗುತ್ತಿದೆ.

ಸಣ್ಣ, ಮಧ್ಯಮ ರೈತರಿಗೆ ಅಧಿಕ ಬೆಲೆಯ ರಾಸಾಯನಿಕ ಗೊಬ್ಬರಗಳನ್ನು ಖರೀದಿಸಲು ಕಷ್ಟವಾಗುತ್ತಿದೆ. ಇದನ್ನು ಅರ್ಥ ಮಾಡಿಕೊಂಡು ಸಾವಯವ ಗೊಬ್ಬರ ಬಳಕೆಗೆ ಉತ್ತೇಜನ ನೀಡಲಾಗುತ್ತಿದೆ. ರೈತರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಮಾರುಕಟ್ಟೆ ವ್ಯವಸ್ಥೆ
ಮುಖ್ಯವಾಗಿ ರೈತರ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗುತ್ತಿಲ್ಲ. ಯಾವಾಗ ಯಾವ ಉತ್ಪನ್ನಕ್ಕೆ ಬೇಡಿಕೆ ಇರುತ್ತದೆ, ಯಾವ ಭಾಗದಲ್ಲಿ ಒಳ್ಳೆಯ ಬೆಲೆ ಸಿಗುತ್ತದೆ ಎಂಬುದು ರೈತರಿಗೆ ಗೊತ್ತಿರುವುದಿಲ್ಲ.

ಇದನ್ನು ಮನಗಂಡು ಯಾವ ಭಾಗದಲ್ಲಿ ಹೆಚ್ಚಿನ ಬೆಲೆ ಇರುತ್ತದೊ, ಅಲ್ಲಿಗೆ ಉತ್ಪನ್ನಗಳನ್ನು ಸಾಗಿಸಿ, ಮಾರಾಟ ಮಾಡುವಂತೆ ಇಲಾಖೆಯಿಂದ ರೈತರಿಗೆ ಸೂಕ್ತ ಮಾರ್ಗದರ್ಶನ ಮಾಡಲು ಚಿಂತನೆ ನಡೆದಿದೆ. ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದು, ಅವುಗಳನ್ನು ಬಲಪಡಿಸುವ ಕುರಿತು ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆದಿದೆ. ಜಾಗತಿಕ ಮಟ್ಟದ ಸ್ಪರ್ಧೆ ಎದುರಿಸಲು ರೈತರನ್ನು ಸಜ್ಜುಗೊಳಿಸುವುದು ಅನಿವಾರ್ಯವಾಗಿದೆ.

ಭೂ ಚೇತನ ಕಾರ್ಯಕ್ರಮ ಜಾರಿಯಿಂದಾಗಿ ಇಳುವರಿ ಪ್ರಮಾಣ ಶೇ 20ರಿಂದ 30ರಷ್ಟು ಹೆಚ್ಚಾಗಿದೆ. ಬೆಳೆಯ ವಿಧಾನದಲ್ಲಿ ಬದಲಾವಣೆಯಾಗಿದೆ. ಗುಣಮಟ್ಟದ ಬಿತ್ತನೆ ಬೀಜ ಪೂರೈಕೆ, ಹನಿ ನೀರಾವರಿಗೆ ಒತ್ತು ನೀಡುವ ಮೂಲಕ ಉತ್ಪಾದನೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ.

ಒಟ್ಟು ವಿಸ್ತೀರ್ಣ 
 ರಾಜ್ಯದಲ್ಲಿ ಮಳೆ ಹಾಗೂ ನೀರಾವರಿ ಆಶ್ರಯದಲ್ಲಿ ಒಟ್ಟು 127 ಲಕ್ಷ ಹೆಕ್ಟೇರ್‌ನಲ್ಲಿ, 75.81 ಲಕ್ಷ ರೈತ ಕುಟುಂಬಗಳು ಕೃಷಿಯಲ್ಲಿ ತೊಡಗಿವೆ. 2010-11ರಲ್ಲಿ 140 ಲಕ್ಷ ಟನ್, 2011-12ರಲ್ಲಿ 125 ಲಕ್ಷ ಟನ್ ಆಹಾರ ಧಾನ್ಯಗಳ ಉತ್ಪಾದನೆಯಾಗಿದೆ. ಈ ವರ್ಷ 135 ಲಕ್ಷ ಟನ್ ಆಹಾರ ಧಾನ್ಯಗಳನ್ನು ಉತ್ಪಾದಿಸುವ ಗುರಿ ಹೊಂದಲಾಗಿದೆ ಎನ್ನುತ್ತಾರೆ ಕೃಷಿ ಇಲಾಖೆಯ ನಿರ್ದೇಶಕ ಡಾ.ಕೆ.ವಿ.ಸರ್ವೇಶ್.

`ರೈತರ ಆರ್ಥಿಕ ಪರಿಸ್ಥಿತಿ ಗೌರವಿಸಬೇಕು~
ಕೃಷಿಯಲ್ಲಿ ಸ್ವಾವಲಂಬನೆಯನ್ನು ಕಾಪಾಡಿಕೊಂಡು ಬರಬೇಕಾದರೆ ಹೆಚ್ಚು ಇಳುವರಿ ಕೊಡುವ ತಳಿಗಳನ್ನು ಬಳಸಬೇಕು. ಕಡಿಮೆ ನೀರಿನಲ್ಲಿ ಬೆಳೆಯುವ ತಳಿಗಳನ್ನು ಪ್ರೊತ್ಸಾಹಿಸಬೇಕು. ಕೃಷಿಯೇತರ ಭೂಮಿಯನ್ನು ಕೃಷಿಗೆ ಬಳಸಿಕೊಳ್ಳಬೇಕು.

ರೈತರ ಆರ್ಥಿಕ ಪರಿಸ್ಥಿತಿಯನ್ನು ನಾವು ಗೌರವಿಸಬೇಕಾಗುತ್ತದೆ. ವಾಣಿಜ್ಯ ಬೆಳೆಗಳನ್ನು ಬೆಳೆದರೆ ಹೆಚ್ಚು ಲಾಭ ಬರುತ್ತದೆ ಎಂಬ ಕಾರಣಕ್ಕಾಗಿ, ರೈತರು ತನ್ನ ಅವಶ್ಯಕತೆಗೆ ಬೇಕಾದಷ್ಟು ಆಹಾರಧಾನ್ಯ ಬೆಳೆದು, ಉಳಿದ ಭೂಮಿಯಲ್ಲಿ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಾರೆ. ಇದು ತಪ್ಪು ಎನ್ನಲು ಆಗುವುದಿಲ್ಲ.

ಇದು ವರ್ಷಕ್ಕೆ ಒಂದು ಬೆಳೆ ಬೆಳೆಯುವ ಕಬ್ಬಿಗೆ ಹೆಚ್ಚು ನೀರು ಬೇಕಾಗುತ್ತದೆ. ಅಲ್ಲದೆ ಈಗಾಗಲೇ ಸಕ್ಕರೆ ಉತ್ಪಾದನೆ ಜಾಸ್ತಿ ಆಗಿರುವುದರಿಂದ ಕಬ್ಬಿಗೆ ಸೂಕ್ತ ಬೆಲೆಯೂ ಸಿಗುತ್ತಿಲ್ಲ. ಇದರ ಬದಲು ಎಣ್ಣೆಕಾಳುಗಳು, ಬೇಳೆಕಾಳುಗಳನ್ನು ಬೆಳೆಯಲು ಪ್ರೋತ್ಸಾಹಿಸಬೇಕು. ಇದಕ್ಕೆ ಹೆಚ್ಚಿನ ನೀರು ಬೇಕಾಗುವುದಿಲ್ಲ. ಮಣ್ಣಿನ ಫಲವತ್ತತೆ ಹಾಳಾಗುವುದಿಲ್ಲ.

ಬೆಳೆ ಉತ್ಪಾದಕರ ಘಟಕಗಳನ್ನು ಸ್ಥಾಪಿಸುವ ಅಗತ್ಯವಿದೆ. ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಇರುವುದರಿಂದ ರೈತರು ಕೃಷಿ ಕ್ಷೇತ್ರವನ್ನು ತೊರೆಯುತ್ತಿದ್ದಾರೆ. ಸಂಘ ಅಥವಾ ಘಟಕ ಸ್ಥಾಪಿಸಿಕೊಂಡರೆ ರೈತರಿಗೆ ಅನುಕೂಲವಾಗಲಿದೆ. ಉದಾಹರಣೆಗೆ ಹೆಸರು ಕಾಳು ಉತ್ಪಾದಕರೆಲ್ಲ ಸೇರಿ ಘಟಕ ಸ್ಥಾಪಿಸಿಕೊಂಡರೆ ಮಾರಾಟ ಮತ್ತು ಸಾಗಾಣಿಕೆಗೆ ಅನುಕೂಲವಾಗುತ್ತದೆ.
ಡಾ. ಕೆ. ನಾರಾಯಣಗೌಡಕುಲಪತಿ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯ

`ಆಹಾರ ಧಾನ್ಯಗಳ ಕೊರತೆಯಾಗದು~
ಹೊಸ ತಳಿಗಳ ಸಂಶೋಧನೆಯಿಂದಾಗಿ ಉತ್ಪಾದನೆ ಪ್ರಮಾಣ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಆಹಾರ ಧಾನ್ಯಗಳ ಕೊರತೆಯಾಗಲಿದೆ ಎಂಬುದು ತಪ್ಪುಕಲ್ಪನೆ. ಸ್ವಾತಂತ್ರ ಸಂದರ್ಭದಲ್ಲಿ ಐದು ದಶಲಕ್ಷ ಟನ್ ಇದ್ದ ಗೋಧಿ ಉತ್ಪಾದನೆ ಈಗ 93.3 ದಶಲಕ್ಷ ಟನ್‌ಗೆ ಏರಿದೆ. ಉಳಿದ ಬೆಳೆಗಳಲ್ಲೂ ಇದೇ ರೀತಿ ಹೆಚ್ಚಳವಾಗಿದೆ. ತಂತ್ರಜ್ಞಾನವನ್ನು ರೈತರಿಗೆ ತಲುಪಿಸುವ ಕೆಲಸ ಆಗುತ್ತಿದೆ. ಸಂಶೋಧನೆಗಳ ಲಾಭ ರೈತರಿಗೆ ತಲುಪಿದೆ. 

 ವಾಣಿಜ್ಯ ಬೆಳೆಗಳು ಬೇಡ ಎಂದು ಹೇಳಲು ಆಗುವುದಿಲ್ಲ. ಸಮತೋಲನ ಕಾಪಾಡುವುದು ಸೂಕ್ತ.ಹವಾಮಾನಕ್ಕೆ ತಕ್ಕಂತೆ ಎಲ್ಲ ಬೆಳೆಗಳನ್ನು ಬೆಳೆಯುವುದು ಒಳ್ಳೆಯದು. ಮೌಲ್ಯವರ್ಧನೆಯತ್ತ ಹೆಚ್ಚಿನ ಒತ್ತು ನೀಡುವ ಅಗತ್ಯವಿದೆ. ಉದಾಹರಣೆಗೆ ನವಣೆಯಲ್ಲಿ ಹೆಚ್ಚು ಪೌಷ್ಟಿಕಾಂಶವಿದೆ. ಆದರೆ ಕಟಾವು ನಂತರ ಸಂಸ್ಕರಣೆ ಮಾಡುವಷ್ಟು ತಾಳ್ಮೆ ಜನರಿಗೆ ಇರುವುದಿಲ್ಲ. ಆದ್ದರಿಂದ ಕಟಾವು ನಂತರ ನೇರವಾಗಿ ತಿನ್ನುವ ಹಾಗೆ ವ್ಯವಸ್ಥೆ ಮಾಡಬೇಕು.
ಡಾ.ಆರ್.ಆರ್.ಹಂಚಿನಾಳಕುಲಪತಿ, ಧಾರವಾಡ ಕೃಷಿ ವಿಶ್ವವಿದ್ಯಾಲಯ

`ಅನಿಶ್ಚಿತತೆ~
ಕೃಷಿ ಕ್ಷೇತ್ರ ಬೇರೆ ಉದ್ಯಮದಂತೆ ಅಲ್ಲ. ಡೀಸೆಲ್ ದರ ಜಾಸ್ತಿ ಆಗುತ್ತಿದ್ದಂತೆಯೇ ಬಸ್ ಪ್ರಯಾಣ ದರ ಹೆಚ್ಚಾಗುತ್ತದೆ. ಅಂಗಡಿಯಲ್ಲೂ ದಿನಸಿಗಳ ಬೆಲೆ ಹೆಚ್ಚಾಗುತ್ತದೆ. ಆದರೆ ಕೃಷಿಯಲ್ಲಿ ಈ ರೀತಿ ಆಗುವುದಿಲ್ಲ.
 ಮುಂಗಾರು ಮಳೆ ಮೇಲೆ ಕೃಷಿ ಅವಲಂಬನೆಯಾಗಿದೆ. ಒಂದು ವರ್ಷ ಮಳೆಯಾದರೆ, ಮತ್ತೊಂದು ವರ್ಷ ಮಳೆಯಾಗುವುದಿಲ್ಲ. ಅನಿಶ್ಚಿತತೆ ಜಾಸ್ತಿ. ಉತ್ಪಾದನಾ ವೆಚ್ಚ ಜಾಸ್ತಿಯಾಗಿದೆ. ಕೃಷಿ ಯಾಂತ್ರೀಕರಣವಾಗಿಲ್ಲ. ಬಿತ್ತನೆ ಬೀಜಗಳ ಬೆಲೆ ಜಾಸ್ತಿಯಾಗಿದೆ. ಇದಕ್ಕೆ ತಕ್ಕಂತೆ ವೈಜ್ಞಾನಿಕವಾದ ಬೆಲೆ ಸಿಗುತ್ತಿಲ್ಲ.
ಕೃಷಿ ಲಾಭದಾಯಕವಲ್ಲ ಎಂಬ ಕಾರಣಕ್ಕಾಗಿ ವರ್ಷದಿಂದ ವರ್ಷಕ್ಕೆ ಕೃಷಿಯನ್ನು ತೊರೆಯುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕೆಲ ರೈತರು ಸಾಂಪ್ರದಾಯಿಕ ಬೆಳೆ ಬೆಳೆಯುವುದನ್ನು ಬಿಟ್ಟು ವಾಣಿಜ್ಯ ಬೆಳೆಗಳತ್ತ ಗಮನಹರಿಸಿದ್ದಾರೆ. ಇನ್ನೂ ಕೆಲವರು ಕೃಷಿಯಿಂದಲೇ ವಿಮುಖರಾಗುತ್ತಿದ್ದಾರೆ. ಇಂತಹದೇ ಬೆಳೆ ಬೆಳೆಯಿರಿ ಎಂದು ಹೇಳಲು ಆಗುವುದಿಲ್ಲ.
ಭರತ್‌ಲಾಲ್ ಮೀನಾಪ್ರಧಾನ ಕಾರ್ಯದರ್ಶಿ, ಕೃಷಿ ಇಲಾಖೆ

`ಆಹಾರ ಪದ್ಧತಿಯಲ್ಲಿ ಬದಲಾವಣೆ~
ಹಿಂದೆ ಒಂದೆರಡು ಆಹಾರವನ್ನೇ ಹೆಚ್ಚಾಗಿ ಬಳಸುತ್ತಿದ್ದರು. ಆದರೆ ಈಗ ಪರಿಸ್ಥಿತಿ ಆ ರೀತಿ ಇಲ್ಲ. ಜನರ ಆಹಾರ ಪದ್ಧತಿಯಲ್ಲಿ ಬದಲಾವಣೆಯಾಗಿದೆ. ಪೌಷ್ಟಿಕಾಂಶವುಳ್ಳ ಆಹಾರ ಪದಾರ್ಥಗಳು, ವಿಟಮಿನ್, ಕಾರ್ಬೋಹೈಡ್ರೇಟ್ಸ್ ಅಂಶಗಳನ್ನು ಒಳಗೊಂಡ ಆಹಾರ ಪದಾರ್ಥಗಳನ್ನು ಸೇವಿಸುತ್ತಿದ್ದಾರೆ.

ಮೊದಲಿನ ಹಾಗೆ ರಾಗಿ, ಬತ್ತವನ್ನು ಅಷ್ಟೇ ಬಳಸುತ್ತಿಲ್ಲ. ಹಣ್ಣು - ತರಕಾರಿಗಳ ಬಳಕೆ ಹೆಚ್ಚಾಗಿ ಆಗುತ್ತಿದೆ. ನಷ್ಟವಾದರೂ ಪರವಾಗಿಲ್ಲ, ಸಾಂಪ್ರದಾಯಿಕ ಬೆಳೆಗಳನ್ನು ಬೆಳೆದುಕೊಂಡು ಬಡವರಾಗಿಯೇ ಇರಿ ಎಂದು ಹೇಳುವುದರಲ್ಲಿ ಅರ್ಥವಿಲ್ಲ. ಒಂದು ವರ್ಷ ಯಾವುದಾದರೂ ಬೆಳೆಯ ಉತ್ಪಾದನೆ ಕಡಿಮೆಯಾದರೆ, ಮತ್ತೊಂದು ವರ್ಷ ಹೆಚ್ಚಾಗುತ್ತದೆ. ಇದೆಲ್ಲ ಸಹಜ.
 ಜಿ.ಕೆ.ವಸಂತಕುಮಾರ್‌ಹೆಚ್ಚುವರಿ ಕಾರ್ಯದರ್ಶಿ, ಕೃಷಿ ಇಲಾಖೆ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT