ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಭೂಮಿ ಪರಿವರ್ತನೆ: ಮೂಡಾಗೆ ಅರ್ಜಿ ಸಲ್ಲಿಕೆ

Last Updated 22 ಫೆಬ್ರುವರಿ 2011, 8:20 IST
ಅಕ್ಷರ ಗಾತ್ರ

ಮಡಿಕೇರಿ: ಪ್ರವಾಸೋದ್ಯಮ ಜಿಲ್ಲೆಯಾಗಿ ಗಮನಸೆಳೆದಿರುವ ಕೊಡಗಿನ ಜಿಲ್ಲಾ ಕೇಂದ್ರವಾದ ಮಡಿಕೇರಿ ಸುತ್ತಮುತ್ತ ದೇಶ- ವಿದೇಶಗಳ ಗಮನಸೆಳೆಯುವಂತಹ ಕೆಲವು ರೆಸಾರ್ಟ್‌ಗಳು ತಲೆಯೆತ್ತಿದ ಬೆನ್ನಲ್ಲಿಯೇ ಇನ್ನೂ ಇಂತಹ 11 ರೆಸಾರ್ಟ್‌ಗಳ ನಿರ್ಮಾಣಕ್ಕಾಗಿ ಕೃಷಿ ವಲಯದಿಂದ ವಾಣಿಜ್ಯ ಉದ್ದೇಶಕ್ಕಾಗಿ ಭೂ ಬದಲಾವಣೆ/ ಪರಿವರ್ತನೆ ಮಾಡಿಕೊಡುವಂತೆ ಕೋರಿ ಹಲವು ಆಕಾಂಕ್ಷಿಗಳು ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದು ಬೆಳಕಿಗೆ ಬಂದಿದೆ.

ಮಡಿಕೇರಿ ನಗರ ವ್ಯಾಪ್ತಿಯ ಕರ್ಣಂಗೇರಿ, ಸಮೀಪದ ಕಾಟಕೇರಿ, ಕೆ. ಬಾಡಗ, ಕೆ. ನಿಡುಗಣೆ ಹಾಗೂ ಕಡಗದಾಳು ವ್ಯಾಪ್ತಿಯಲ್ಲಿ 11 ರೆಸಾರ್ಟ್‌ಗಳ ನಿರ್ಮಾಣಕ್ಕೆ 144ಕ್ಕೂ ಹೆಚ್ಚು ಎಕರೆ ಕೃಷಿ ಭೂಮಿಯನ್ನು ವಾಣಿಜ್ಯ ಉದ್ದೇಶಕ್ಕೆ ಭೂ ಬದಲಾವಣೆ/ ಪರಿವರ್ತನೆ ಮಾಡಿಕೊಡುವಂತೆ ಅರ್ಜಿ ಸಲ್ಲಿಸಲಾಗಿದೆ. ಈ ರೀತಿ ಪ್ರಸ್ತಾವನೆ ಸಲ್ಲಿಸಿದವರಲ್ಲಿ ಕೊಡಗಿನವರಿಗಿಂತ ಹೊರಗಿನವರೇ ಹೆಚ್ಚಿದ್ದಾರೆ ಎಂಬುದು ಇಲ್ಲಿ ಗಮನಿಸಬೇಕಾದ ಅಂಶ.

ಇದಲ್ಲದೆ, ವಾಣಿಜ್ಯ ಉದ್ದೇಶಕ್ಕಾಗಿ 39.43 ಎಕರೆ ಹಾಗೂ ವಸತಿ ಉದ್ದೇಶಕ್ಕಾಗಿ 15.78 ಎಕರೆ ಕೃಷಿ ಜಾಗವನ್ನು ಭೂ ಪರಿವರ್ತನೆ ಮಾಡಿಕೊಡುವಂತೆ ಕೋರಲಾಗಿದೆ. ಶೈಕ್ಷಣಿಕ ಸಂಸ್ಥೆಗಳ ಸ್ಥಾಪನೆಗೆ 3.66 ಎಕರೆ ಹಾಗೂ ವಾಣಿಜ್ಯ ಮಳಿಗೆ ಸ್ಥಾಪನೆಗೆ 0.34 ಎಕರೆ ಕೃಷಿ ಜಾಗವನ್ನು ಮಂಜೂರು ಮಾಡಿಕೊಡುವಂತೆ ‘ಮೂಡಾ’ಗೆ ಅರ್ಜಿ ಸಲ್ಲಿಸಲಾಗಿದೆ.
ಮಡಿಕೇರಿ ಸುತ್ತಮುತ್ತಲಿನ 12 ಕಿ.ಮೀ. ವ್ಯಾಪ್ತಿಯನ್ನು ಸರ್ಕಾರ ‘ಹಸಿರು ವಲಯ’ ಎಂದು ಗುರುತಿಸಿರುವ ಹಿನ್ನೆಲೆಯಲ್ಲಿ ಈ ರೀತಿ ರೆಸಾರ್ಟ್‌ಗಳ ನಿರ್ಮಾಣಕ್ಕೆ ಕೃಷಿ ಭೂಮಿಯನ್ನು ವಾಣಿಜ್ಯ ಉದ್ದೇಶಕ್ಕೆ ಪರಿವರ್ತನೆ ಮಾಡಿಕೊಡಲು ಅವಕಾಶವಿಲ್ಲ. ಆದರೆ, ಕಣ್ಣಿಗೆ ಕಾಣುವಂತೆ ಹಲವು ರೆಸಾರ್ಟ್‌ಗಳು ಈಗಾಗಲೇ 12 ಕಿ.ಮೀ. ವ್ಯಾಪ್ತಿಯಲ್ಲಿ ತಲೆಯೆತ್ತಿರುವುದನ್ನು ಇಲ್ಲಿ ಸ್ಮರಿಸಬಹುದು.

ಮಡಿಕೇರಿ ನಗರದ ಮಹಾ ಯೋಜನೆಯನ್ನು ಪರಿಷ್ಕರಿಸಿ ಅಂತಿಮವಾಗಿ ತಯಾರಿಸುವ ಕಾರ್ಯ ಈಗಾಗಲೇ ಚಾಲ್ತಿಯಲ್ಲಿರುವುದರಿಂದ ಇದರಲ್ಲಿ ಕೃಷಿ ಪ್ರದೇಶಗಳು, ಬೆಟ್ಟಗುಡ್ಡ, ಗದ್ದೆ, ಯಥೇಚ್ಛ ನೀರಿರುವ ಪ್ರದೇಶ ಸೇರಿದಂತೆ ಮುಂತಾದ ಪ್ರದೇಶಗಳನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಂಡು ಪ್ರಕೃತಿ ಸೌಂದರ್ಯ ಕಾಪಾಡಿಕೊಳ್ಳುವ ಹಿನ್ನೆಲೆಯಲ್ಲಿ ಇನ್ನು ಮುಂದೆ ಯಾವುದೇ ಕೃಷಿ ಭೂಮಿಯನ್ನು ವಾಣಿಜ್ಯ ವಲಯಕ್ಕೆ ಪರಿವರ್ತನೆ ಮಾಡಲು ಶಿಫಾರಸು ಮಾಡಬಾರದು ಎಂದು ಈಗಾಗಲೇ ‘ಮೂಡಾ’ ತೀರ್ಮಾನಿಸಿರುವುದರಿಂದ ಈ ಪ್ರಕರಣಗಳನ್ನು ತಿರಸ್ಕರಿಸಬಹುದಾದರೂ ಮತ್ತೊಮ್ಮೆ ಸ್ಥಳ ಪರಿಶೀಲನೆ ನಡೆಸಿ ಮುಂದಿನ ಸಭೆಯಲ್ಲಿ ಚರ್ಚಿಸಬಹುದೆಂಬ ತೀರ್ಮಾನ ಕೈಗೊಳ್ಳಲಾಗಿದೆ.

ರೆಸಾರ್ಟ್ ನಿರ್ಮಾಣಕ್ಕೆ ಕರ್ಣಂಗೇರಿಯಲ್ಲಿ 31.13 ಎಕರೆ, ಕಾಟಕೇರಿಯ ಒಂದು ಜಾಗದಲ್ಲಿ 15.37 ಎಕರೆ, ಕೆ. ಬಾಡಗದಲ್ಲಿ 5.12 ಎಕರೆ, ಕೆ. ನಿಡುಗಣೆಯ ಒಂದು ಜಾಗದಲ್ಲಿ 4 ಎಕರೆ, ಮತ್ತೊಂದು ಜಾಗದಲ್ಲಿ 35.03 ಎಕರೆ, ಕಡಗದಾಳುವಿನಲ್ಲಿ 2.20 ಎಕರೆ, ಕಾಟಕೇರಿಯ ಗ್ರಾಮದಲ್ಲಿ ಹೋಂ ಸ್ಟೇ ಹಾಗೂ ರೆಸಾರ್ಟ್ ನಿರ್ಮಾಣಕ್ಕೆ ಸರ್ವೆ ನಂ. ತೋರಿಸಲಾಗಿದೆಯಾದರೂ ಎಷ್ಟು ಎಕರೆ ಎಂಬುದನ್ನು ನಮೂದಿಸಿಲ್ಲ.

ಕೆ. ನಿಡುಗಣೆ ಗ್ರಾಮದ ವಿವಿಧ ಸರ್ವೆ ನಂ.ಗಳಲ್ಲಿ ಒಟ್ಟು 24.59 ಎಕರೆ, ಕಡಗದಾಳುವಿನಲ್ಲಿ ಮತ್ತೆ 12.96 ಎಕರೆ, ಕೆ. ನಿಡುಗಣೆಯ ಒಂದು ಜಾಗದಲ್ಲಿ 2.54 ಎಕರೆ ಹಾಗೂ ಮತ್ತೊಂದು ಸರ್ವೆ ನಂಬರಿನಲ್ಲಿ 11.05 ಎಕರೆ ಕೃಷಿ ಜಾಗವನ್ನು ರೆಸಾರ್ಟ್ ನಿರ್ಮಾಣಕ್ಕಾಗಿ ಪರಿವರ್ತನೆ ಮಾಡಿಕೊಡುವಂತೆ ಕೋರಿ ‘ಮೂಡಾ’ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ವಾಣಿಜ್ಯ ಉದ್ದೇಶ: ಕರ್ಣಂಗೇರಿ ಗ್ರಾಮದಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ 2 ಎಕರೆ, ಮೇಕೇರಿಯಲ್ಲಿ 3.30 ಎಕರೆ, ಕೆ. ನಿಡುಗಣೆ ಗ್ರಾಮದಲ್ಲಿ 3.51 ಎಕರೆ, ಕಡಗದಾಳುವಿನಲ್ಲಿ 21.81 ಎಕರೆ, ವಾಣಿಜ್ಯ ಮಳಿಗೆಗಳ ನಿರ್ಮಾಣಕ್ಕಾಗಿ ಮಡಿಕೇರಿ ನಗರಸಭೆ ಬ್ಲಾಕ್ ನಂ. 24ರಲ್ಲಿ 0.34 ಎಕರೆ, ಕೆ. ನಿಡುಗಣೆಯಲ್ಲಿ ವಾಣಿಜ್ಯ ಉದ್ದೇಶಕ್ಕೆ 9.86 ಎಕರೆ ಮಂಜೂರಾತಿ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ.

ಶೈಕ್ಷಣಿಕ ಉದ್ದೇಶಕ್ಕೆ: ಕರ್ಣಂಗೇರಿಯ ಎರಡು ಪ್ರತ್ಯೇಕ ಸರ್ವೆ ನಂ. ಜಾಗಗಳಲ್ಲಿ ಕೃಷಿ ವಲಯದಲ್ಲಿ ಶೈಕ್ಷಣಿಕ ಉದ್ದೇಶದ ಉಪಯೋಗಕ್ಕೆ ಕ್ರಮವಾಗಿ 1.20 ಎಕರೆ ಹಾಗೂ 2.46 ಎಕರೆ ಮಂಜೂರು ಮಾಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೆ. ಬಾಡಗದಲ್ಲಿ ರೆಡ್ಡಿಯೊಬ್ಬರು ವಸತಿ ಉದ್ದೇಶಕ್ಕೆ 15.78 ಎಕರೆ ಕೃಷಿ ಭೂಮಿಯನ್ನು ಪರಿವರ್ತನೆ ಮಾಡಿಕೊಡುವಂತೆ ಕೋರಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಆದರೆ, ಫೆ. 10ರಂದು ‘ಮೂಡಾ’ ಅಧ್ಯಕ್ಷ ಶಜಿಲ್ ಕೃಷ್ಣನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರೆಸಾರ್ಟ್ ಉದ್ದೇಶಕ್ಕೆ ಕೃಷಿ ಭೂಮಿಯನ್ನು ಪರಿವರ್ತನೆ ಮಾಡಬೇಕೇ ಅಥವಾ ಬೇಡವೇ ಎಂಬ ಕುರಿತು ಚರ್ಚೆ ನಡೆಯಿತಾದರೂ ಅಂತಿಮ ತೀರ್ಮಾನ ಕೈಗೊಂಡಿಲ್ಲ.

ಈ ನಡುವೆ, 2010ರ ಮೇ 7ರಂದು ಹಿಂದಿನ ಅಧ್ಯಕ್ಷ ಎ.ಕೆ. ಪಾಲಾಕ್ಷ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೈಗೊಂಡ ತೀರ್ಮಾನವನ್ನೇ ಮುಂದುವರಿಸುವ ಕುರಿತು ಫೆ. 10ರಂದು ನಡೆದ ಸಭೆಯಲ್ಲಿಯೂ ಚರ್ಚೆ ನಡೆಯಿತು ಎನ್ನಲಾಗಿದೆ. ಪ್ರಾಧಿಕಾರದ ಸ್ಥಳೀಯ ಯೋಜನಾ ವ್ಯಾಪ್ತಿಗೆ ಬರುವ ಕೃಷಿ ಜಮೀನನ್ನು ಪರಿವರ್ತಿಸಲು, ಭೂ ಬದಲಾವಣೆ ಮಾಡಲು ಅವಕಾಶ ನೀಡಬಾರದು ಎಂದು ಕಳೆದ ಮೇ ತಿಂಗಳಲ್ಲಿ ವಿಧಾನಸಭಾ ಅಧ್ಯಕ್ಷ ಕೆ.ಜಿ. ಬೋಪಯ್ಯ, ಶಾಸಕರಾದ ಎಂ.ಸಿ. ನಾಣಯ್ಯ ಹಾಗೂ ಎಂ.ಪಿ. ಅಪ್ಪಚ್ಚುರಂಜನ್ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಚರ್ಚಿಸಿ ತೀರ್ಮಾನಕ್ಕೆ ಬರಲಾಗಿತ್ತು. ಈ ನಿರ್ಧಾರವನ್ನು ಅಂದಿನ ಸಭೆಯ ನಡಾವಳಿಯಲ್ಲಿ ದಾಖಲಿಸಲಾಗಿದೆ.

ಆದರೆ, ಫೆ. 10ರಂದು ನಡೆದ ಸಭೆಯಲ್ಲೂ ಇದೇ ತೀರ್ಮಾನದ ಬಗ್ಗೆ ಪ್ರಮುಖವಾಗಿ ಚರ್ಚೆಯಾಗಿದ್ದು, ಅರ್ಜಿಗಳ ಪರಿಶೀಲನೆ ನಡೆಸಿದ ನಂತರ ವಿಷಯಾಧಾರಿತ ನಿರ್ಧಾರ ಕೈಗೊಳ್ಳುವ ಬಗ್ಗೆ ಒತ್ತು ನೀಡಲಾಗಿದೆ ಎಂದು ತಿಳಿದು ಬಂದಿದೆ. ಅಭಿವೃದ್ಧಿಯ ದೃಷ್ಟಿಯಲ್ಲಿ ಭೂ ಪರಿವರ್ತನೆಗೆ ಒತ್ತು ನೀಡಬೇಕೆಂಬ ವಾದವೂ ಮಂಡನೆಯಾಗಿದೆ ಎನ್ನಲಾಗಿದೆಯಾದರೂ ಈಗಾಗಲೇ ಜಿಲ್ಲೆಯಾದ್ಯಂತ ಬೆಳೆಗಾರರ ಸಂಘಟನೆಗಳು ಹಾಗೂ ಇತರ ಸಂಘ- ಸಂಸ್ಥೆಗಳು ರೆಸಾರ್ಟ್ ಸಂಸ್ಕೃತಿಗೆ ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ಅಂತಿಮವಾಗಿ ‘ಮೂಡಾ’ ಯಾವ ನಿರ್ಧಾರಕ್ಕೆ ಬರಲಿದೆ ಎಂಬುದು ಕುತೂಹಲ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT