ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಭೂಮಿ ಸ್ವಾಧೀನಕ್ಕೆ ವಿರೋಧ

Last Updated 10 ಫೆಬ್ರುವರಿ 2011, 6:45 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೃಷಿ ಯೋಗ್ಯ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧ ವ್ಯಕ್ತಪಡಿಸಿರುವ ಕರ್ನಾಟಕ ರಾಜ್ಯ ರೈತ ಮತ್ತು ಹಸಿರು ಸೇನೆ, ಇದುವರೆಗೆ ಸ್ವಾಧೀನ ಪಡಿಸಿಕೊಂಡಿರುವ ಜಮೀನಿನ ಬಳಕೆ ಕುರಿತು ಶ್ವೇತಪತ್ರ ಹೊರಡಿಸಬೇಕು ಎಂದು ಒತ್ತಾಯಿಸಿದೆ.

ಕೃಷಿ ಯೋಗ್ಯ ಭೂಮಿಯನ್ನು ಬೇರೆ ಉದ್ದೇಶಕ್ಕೆ ಬಳಸುತ್ತಿರುವುದು ಅವೈಜ್ಞಾನಿಕ. ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ಮುಂದುವರಿಸಿದರೆ ಸರ್ಕಾರ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಸಂಘ ರಾಜ್ಯ ಕಾರ್ಯಾಧ್ಯಕ್ಷ ಕೆ.ಟಿ. ಗಂಗಾಧರ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

ಆಹಾರ ಖಾತ್ರಿ ಮತ್ತು ಉದ್ಯೋಗ ಖಾತ್ರಿ ನೀಡುತ್ತಿರುವ ಏಕೈಕ ಉದ್ಯಮ ಕೃಷಿ. ಆದರೆ, ಕೃಷಿ ಖಾಸಗಿ ಬಂಡವಾಳ ಹೂಡಿಕೆ ಹೆಸರಿನಲ್ಲಿ ಭೂಮಾಫಿಯಾ ತಲೆ ಎತ್ತಲು ಸರ್ಕಾರ ಅವಕಾಶ ನೀಡುತ್ತಿದೆ. ಪ್ರಜ್ಞಾವಂತ ಸಮಾಜ ಸರ್ಕಾರದ ಈ ಧೋರಣೆಯನ್ನು ವಿರೋಧಿಸಬೇಕು ಎಂದು ಒತ್ತಾಯಿಸಿದರು.

ಆಹಾರ ಧಾನ್ಯಗಳ ಬೆಲೆಗಳು ಗಗನಕ್ಕೇರಿವೆ. ಶೇ. 30ರಷ್ಟು ಜನರಿಗೆ ಸರಿಯಾದ ಗುಣಮಟ್ಟದ ಆಹಾರ ದೊರೆಯುತ್ತಿಲ್ಲ. ಇಂತಹ ಸನ್ನಿವೇಶದಲ್ಲಿ ಕೃಷಿ ಭೂಮಿ ಸ್ವಾಧೀನ ಪಡೆದುಕೊಂಡು ಬಂಡವಾಳ ಹೂಡಿಕೆದಾರರನ್ನು ಕರೆತರುತ್ತೇವೆ ಎಂದು ಹೇಳುವುದು ಖಂಡನೀಯ. ಸರ್ಕಾರ ಈ ವಿಷಯವನ್ನು ಅರ್ಥ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ನಾವು ಅರ್ಥ ಮಾಡಿಸುತ್ತೇವೆ ಎಂದು ನುಡಿದರು.

ಈ ಹಿಂದಿನ ಸರ್ಕಾರಗಳು ಮತ್ತು ಈಗಿನ ಸರ್ಕಾರ ಸ್ವಾಧೀನಪಡಿಸಿಕೊಂಡಿರುವ ಕೃಷಿ ಭೂಮಿ ಯಾವ ರೀತಿ ಮತ್ತು ಎಷ್ಟರಮಟ್ಟಿಗೆ ಬಳಕೆಯಾಗಿದೆ ಎನ್ನುವ ಕುರಿತು ಶ್ವೇತಪತ್ರ ಹೊರಡಿಸಬೇಕು ಎಂದು ಒತ್ತಾಯಿಸಿದರು.

ರೈತರಿಗೆ ಸಬ್ಸಿಡಿ ಬೇಕಾಗಿಲ್ಲ. ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನೀಡಬೇಕು. ಒಮ್ಮೆ ನಿಗದಿಯಾದ ಕೃಷಿ ಉತ್ಪನ್ನಮಧ್ಯವರ್ತಿಗಳು, ದಲ್ಲಾಲಿಗಳು ಸುಗ್ಗಿ ಕಾಲದಲ್ಲಿ ಆಹಾರ ಧಾನ್ಯಗಳನ್ನು ಸಂಗ್ರಹ ಮಾಡಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಸರ್ಕಾರದ ವಿತರಣೆ ವ್ಯವಸ್ಥೆಯಲ್ಲಿನ ಲೋಪವೇ ಇದಕ್ಕೆ ಕಾರಣ ಎಂದು ದೂರಿದರು.

ಕೃಷಿ ವಿಶ್ವವಿದ್ಯಾಲಯಗಳು ರೈತರ ಜ್ಞಾನಕ್ಕೆ ವೈಜ್ಞಾನಿಕ ನೆಲೆಗಟ್ಟು ನೀಡುವ ಮೂಲಕ ಕೃಷಿ ಅಭಿವೃದ್ಧಿ ಅಧ್ಯಯನ ನಡೆಸಬೇಕು. ಹಳ್ಳಿಗಳು ಸ್ವಾಯತ್ತತೆಯನ್ನು ಪಡೆಯುವಂತಾಗಬೇಕು. ಹಳ್ಳಿಗಳಲ್ಲಿ ಕೃಷಿ ಉತ್ಪನ್ನಗಳನ್ನು ಬಳಸಿಕೊಂಡು ಸಿದ್ಧ ವಸ್ತುಗಳನ್ನು ತಯಾರಿಸಿ ಮಾರುಕಟ್ಟೆ ಬ್ರ್ಯಾಂಡ್ ರೂಪಿಸಬೇಕು. ಅಲ್ಲಿಯವರೆಗೆ ಬಡ್ಡಿರಹಿತ ಸಾಲ ನೀಡಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯಲ್ಲಿ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಶೇಂಗಾ, ಈರುಳ್ಳಿ ಮತ್ತು ಹತ್ತಿ ಬೆಳೆಗಳು ನಾಶವಾಗಿ ಅಪಾರ ನಷ್ಟವಾಗಿದೆ. ಸರ್ಕಾರ ಯಾವುದೇ ರೀತಿ ಸ್ಪಂದಿಸಿಲ್ಲ. ತಕ್ಷಣ ರೈತರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.ರಾಜ್ಯ ಪ್ರಧಾನ ಕಾರ್ಯದರ್ಶಿ ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಜಿಲ್ಲಾ ಘಟಕದ ಅಧ್ಯಕ್ಷ ತಿಮ್ಮಪ್ಪಯ್ಯನಹಳ್ಳಿ ರಾಜಣ್ಣ, ಎಸ್. ರವಿಕುಮಾರ್ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT