ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಭೂಮಿ ಸ್ವಾಧೀನಕ್ಕೆ ವಿರೋಧ

Last Updated 11 ಸೆಪ್ಟೆಂಬರ್ 2011, 8:00 IST
ಅಕ್ಷರ ಗಾತ್ರ

ಸಾಗರ: ಸಂಸತ್‌ನಲ್ಲಿ ರೈತರ ಕೃಷಿಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವ ಕಾನೂನಿಗೆ ಮಹತ್ವದ ತಿದ್ದುಪಡಿ  ತರಲು ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ ಕುಗ್ವೆ ಗ್ರಾಮದಲ್ಲಿ ಕರ್ನಾಟಕ ಗೃಹಮಂಡಳಿ ರೈತರ ಭೂಮಿಯನ್ನು ವಶಪಡಿಸಿಕೊಳ್ಳಲು ಮುಂದಾಗಿರುವುದು ಸರಿಯಲ್ಲ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹೇಳಿದರು.

ತಾಲ್ಲೂಕಿನ ಕುಗ್ವೆ ಗ್ರಾಮದಲ್ಲಿ ಕರ್ನಾಟಕ ಗೃಹಮಂಡಳಿ ಭೂಸ್ವಾಧೀನ ಪ್ರಕ್ರಿಯೆ ಮೂಲಕ ವಶಪಡಿಸಿಕೊಳ್ಳಲು ಮುಂದಾಗಿರುವ 101 ಎಕರೆ ಪ್ರದೇಶಕ್ಕೆ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ನಡೆದ ಗ್ರಾಮಸ್ಥರ ಸಭೆಯಲ್ಲಿ ಅವರು ಮಾತನಾಡಿದರು.

ರೈತರನ್ನು ಕೇಳದೆ ಯಾವುದೇ ಭೂಮಿಯನ್ನು ಸರ್ಕಾರ ವಶಪಡಿಸಿಕೊಳ್ಳಲು ಮುಂದಾಗುವುದಿಲ್ಲ ಎಂದು ಇತ್ತೀಚೆಗಷ್ಟೆ ರಾಜ್ಯ ಸರ್ಕಾರ ರೈತರಿಗೆ ವಚನ ನೀಡಿತ್ತು. ಆದರೆ, ಹೀಗೆ ಹೇಳಿ ಕೆಲವೇ ಸಮಯದ ನಂತರ ಗೃಹಮಂಡಳಿ ಮೂಲಕ ರೈತರ ಗಮನಕ್ಕೆ ಬಾರದಂತೆ ಭೂಸ್ವಾಧಿನಕ್ಕೆ ಮುಂದಾಗಿರುವುದು ಅಕ್ಷಮ್ಯ ಅಪರಾಧ ಎಂದರು.

ಕರ್ನಾಟಕ ಗೃಹಮಂಡಳಿ ವಶಪಡಿಸಿಕೊಳ್ಳಲು ಮುಂದಾಗಿರುವ ಪ್ರದೇಶದಲ್ಲಿ ಅಧಿಕ ಸಾಮರ್ಥ್ಯದ ವಿದ್ಯುತ್ ತಂತಿಗಳು ಹಾದು ಹೋಗಿವೆ. ಇದನ್ನೆಲ್ಲಾ ಗಮನಿಸದೇ ಭೂಸ್ವಾಧೀನಕ್ಕೆ ಪ್ರಕಟಣೆ ಹೊರಡಿಸಿರುವುದು ಕಾನೂನಿನ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಹೇಳಿದರು.

ಇಲ್ಲಿನ ಗ್ರಾಮಸ್ಥರ ಆತಂಕದ ಕುರಿತು ಈಗಾಗಲೇ ವಸತಿ ಸಚಿವ ವಿ. ಸೋಮಣ್ಣ ಅವರ ಜತೆ ಚರ್ಚಿಸಿದ್ದೇನೆ. ರೈತರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದ್ದಾರೆ. ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ಸೇರಿ ಸರ್ಕಾರಕ್ಕೆ ಭೂಮಿಯನ್ನು ವಶಪಡಿಸಿಕೊಳ್ಳದಂತೆ ಒತ್ತಾಯ ತರೋಣ ಎಂದರು.

ಕುಗ್ವೆ ಗ್ರಾಮದ ಲೇಖಕ ಅ.ರಾ. ಶ್ರೀನಿವಾಸ್ ಮಾತನಾಡಿ, ಗೃಹ ಮಂಡಳಿ ಯಾವುದೇ ರೀತಿಯ ಪರಿಶೀಲನೆ ನಡೆಸದೇ ಭೂಸ್ವಾಧೀನ ಪ್ರಕ್ರಿಯೆಗೆ ಮುಂದಾಗಿದೆ. ಅದರ ಏಕಪಕ್ಷೀಯ ಹಾಗೂ ಅವಸರದ ತೀರ್ಮಾನದಲ್ಲಿ ಕೆಲವು ವ್ಯಕ್ತಿಗಳಿಗೆ ಲಾಭ ತಂದುಕೊಡುವ ದೂರಗಾಮಿ ಆಲೋಚನೆ ಇದ್ದಂತಿದೆ ಎಂದು ಹೇಳಿದರು.

ಗ್ರಾಮದ ಹಿರಿಯರಾದ ಈಶ್ವರನಾಯ್ಕ ಮಾತನಾಡಿ, ಕುಗ್ವೆ ಗ್ರಾಮಕ್ಕೆ ಗೃಹ ಮಂಡಳಿ ಮೂಲಕ ಅನಿರೀಕ್ಷಿತ ಆಘಾತ ಎದುರಾಗಿದೆ. ಪಕ್ಷಾತೀತ ಹೋರಾಟದ ಮೂಲಕ ಭೂಸ್ವಾಧೀನ ಪ್ರಕ್ರಿಯೆ ಕೈಬಿಡುವಂತೆ ಒತ್ತಾಯಿಸಲು ಮುಂದಾಗುತ್ತೇವೆ  ಎಂದರು.

ಜಿಲ್ಲಾ ಪಂಚಾಯ್ತಿ ಸದಸ್ಯೆ ಲಲಿತಾ ನಾರಾಯಣ್, ತಾಲ್ಲೂಕು ಪಂಚಾಯ್ತಿ ಸದಸ್ಯ ಮಹಾಬಲೇಶ್ವರ್, ಸುಮಿತ್ರಾ, ಎಚ್.ಎನ್. ದಿವಾಕರ್, ಮಂಡಗಳಲೆ ಹುಚ್ಚಪ್ಪ, ವಿ.ಟಿ. ಸ್ವಾಮಿ, ಜಿ.ಟಿ. ಅಜ್ಜಪ್ಪ, ಸೋಮಶೇಖರ್ ಬರದವಳ್ಳಿ, ಸೊರಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜಣ್ಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT