ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಭೂಮಿಯಲ್ಲಿ ವಿದ್ಯುತ್ ಘಟಕ: ಹೈಕೋರ್ಟ್ ನೋಟಿಸ್

Last Updated 14 ಸೆಪ್ಟೆಂಬರ್ 2011, 20:05 IST
ಅಕ್ಷರ ಗಾತ್ರ

ಬೆಂಗಳೂರು: ವಿಜಾಪುರದ ಕೂಡಗಿ ಬಳಿ 4 ಸಾವಿರ ಮೆಗಾವಾಟ್ ಸಾಮರ್ಥ್ಯದ ಶಾಖೋತ್ಪನ್ನ ವಿದ್ಯುತ್ ಘಟಕ ನಿರ್ಮಾಣಕ್ಕೆ ಕೃಷಿ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿರುವ ಆರೋಪದ ಕುರಿತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಹೈಕೋರ್ಟ್ ಮಾಹಿತಿ ಬಯಸಿದೆ.

ಈ ಹಿನ್ನೆಲೆಯಲ್ಲಿ ಎರಡೂ ಸರ್ಕಾರಗಳಿಗೆ ಹಾಗೂ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರನ್ನು ಒಳಗೊಂಡ ವಿಭಾಗೀಯ ಪೀಠವು ಬುಧವಾರ ನೋಟಿಸ್ ಜಾರಿಗೆ ಆದೇಶಿಸಿದೆ.

`ಪರಿಸರ ರಕ್ಷಣಾ ಸೇವಾ ವೇದಿಕೆ~ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸುತ್ತಿದೆ. ಘಟಕ ನಿರ್ಮಾಣಕ್ಕೆ ಸಂಬಂಧಿಸಿದಂತೆ 2009ರ ಜ.12ರಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ನಡುವೆ ನಡೆದಿರುವ ಒಪ್ಪಂದವನ್ನು ರದ್ದು ಮಾಡುವಂತೆ ಅರ್ಜಿದಾರರು ಕೋರಿದ್ದಾರೆ.

ಅಂತೆಯೇ, ಸ್ವಾಧೀನ ಪ್ರಕ್ರಿಯೆಯನ್ನು ಮುಂದುವರಿಸದಂತೆ ಆದೇಶಿಸಬೇಕು ಎನ್ನುವುದೂ ಅವರ ಮನವಿ.
ಈಗ ಸ್ವಾಧೀನ ಪಡಿಸಿಕೊಳ್ಳಲಾದ ಕೃಷಿ ಭೂಮಿಯು ವಿದ್ಯುತ್ ಘಟಕ ನಿರ್ಮಾಣಕ್ಕೆ ಯೋಗ್ಯವಾಗಿಲ್ಲ. ಅಷ್ಟೇ ಅಲ್ಲದೇ ಘಟಕಕ್ಕೆ ಅಗತ್ಯ ಇರುವ ಕಲ್ಲಿದ್ದಲನ್ನು ಸುಮಾರು 1700 ಕಿ.ಮೀ. ದೂರದಿಂದ ರೈಲಿನಲ್ಲಿ ತರಿಸಿಕೊಳ್ಳಬೇಕಾಗಿದೆ. ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂಪಾಯಿ ನಷ್ಟವಾಗಲಿದೆ ಎಂದು ಅರ್ಜಿದಾರರ ಪರ ವಕೀಲ ಜಯಕುಮಾರ್ ಎಸ್. ಪಾಟೀಲ್ ವಾದಿಸಿದರು. ವಿಚಾರಣೆಯನ್ನು ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT