ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಮೇಳದಲ್ಲಿ ತಳಿ-ತಂತ್ರಜ್ಞಾನದ ಅನಾವರಣ

Last Updated 1 ಡಿಸೆಂಬರ್ 2012, 20:44 IST
ಅಕ್ಷರ ಗಾತ್ರ

ರಾಯಚೂರು: ರಾಯಚೂರು ಕೃಷಿ ವಿಶ್ವವಿದ್ಯಾಲಯ ಆಯೋಜಿಸಿದ `ಕೃಷಿ ಮೇಳ~ ಶನಿವಾರ ಇಲ್ಲಿನ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಆರಂಭಗೊಂಡಿತು. `ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಮೇಲು~ ಗಾದೆ ಮಾತಿನಂತೆ ಕೃಷಿ ಕ್ಷೇತ್ರ, ಕೃಷಿ ಸಾಧಕರ ಸಾಧನೆ, ಕೃಷಿ ಸಂಶೋಧನೆ, ಕೃಷಿ ಕ್ಷೇತ್ರದ ನೂತನ ತಂತ್ರಜ್ಞಾನದ ಬಗ್ಗೆ `ಜ್ಞಾನ~ ಮೂಡಿಸಿ ಕೃಷಿ ಸಂಶೋಧನೆ, ತಂತ್ರಜ್ಞಾನ ಫಲ ಅಳವಡಿಸಲು ರೈತ ಸಮುದಾಯವನ್ನು ಪ್ರೇರೇಪಿಸುವ ಆಶಯವನ್ನು ಇದು ಹೊಂದಿದೆ.

ಮಾಜಿ ಪ್ರಧಾನಮಂತ್ರಿ ಐ.ಕೆ ಗುಜ್ರಾಲ್ ನಿಧನದಿಂದ ಶೋಕಾಚರಣೆ ಘೋಷಿಸಿದ ಹಿನ್ನೆಲೆಯಲ್ಲಿ ಕೃಷಿ ಮೇಳ ಉದ್ಘಾಟನೆ ಸಮಾರಂಭ ಇರಲಿಲ್ಲ. ಆದರೆ, ವಿವಿಧ ಬೆಳೆ ತಾಕುಗಳ ಪ್ರದರ್ಶನ, ಕೃಷಿ ವಸ್ತು, ಮಾದರಿ, ಮಾರಾಟ ಮಳಿಗೆ ಪ್ರದರ್ಶನಕ್ಕೆ ರೈತರ ಭೇಟಿ ನಡೆಯಿತು. ಪ್ರಗತಿಪರ ರೈತರು ಕೃಷಿ ವಿವಿ ರೂಪಿಸಿದ ವೇದಿಕೆಯಲ್ಲಿ ತಾವು ಅನುಸರಿಸಿದ ಲಾಭದಾಯಕ ಕೃಷಿ ಪದ್ಧತಿಯ ಅನುಭವ ಹಂಚಿಕೊಂಡರು.

200ಕ್ಕೂ ಹೆಚ್ಚು ಪ್ರದರ್ಶನ ಮಳಿಗೆಗಳನ್ನು ಹಾಕಲಾಗಿದೆ. ಮೊದಲ ದಿನವಾದ್ದರಿಂದ ಕೃಷಿ ಮೇಳಕ್ಕೆ ರೈತರ ಸಂಖ್ಯೆ ಸ್ವಲ್ಪ ಕಡಿಮೆ ಇದ್ದುದು ಕಂಡು ಬಂದಿತು.

ತೋಟಗಾರಿಕೆ ಇಲಾಖೆಯು ಹಣ್ಣು, ತರಕಾರಿ, ವಿಶಿಷ್ಟ ತಳಿಗಳು, ಈ ತಳಿ ಬೆಳೆದು ಲಾಭ ಹೊಂದಿದ ರೈತರ ಬಗ್ಗೆ, ಸಹಾಯಧನ ಯೋಜನೆಯಡಿ ಹಣ್ಣು ಬೆಳೆಯುವ ಕುರಿತು ಮಾಹಿತಿ ನೀಡುವ ಮಳಿಗೆ ಹಾಕಿತ್ತು. ಜಲಾನಯನ ಅಭಿವೃದ್ಧಿ ಇಲಾಖೆಯು ನೀರು ಸದ್ಬಳಕೆ, ಮಣ್ಣು ಮತ್ತು ಪರಿಸರ ಸಂರಕ್ಷಣೆ ಜಾಗೃತಿ ಮೂಡಿಸುವ ಮಾದರಿ ರೂಪಿಸಿದ್ದು ಗಮನ ಸೆಳೆಯುತ್ತಿದೆ.

ಕೃಷಿ ವಿವಿಯು ಜೌಗು ಹಗೂ ಸವಳು ಭೂಮಿ ಸುಧಾರಣೆಗಾಗಿ ಬಸಿಗಾಲುವೆ ವ್ಯವಸ್ಥೆ ಸುಧಾರಣೆ ಕುರಿತ ಮಾದರಿಯು ಪ್ರದರ್ಶನಕ್ಕೆ ಭೇಟಿ ನೀಡಿದ್ದ ರೈತರ ಗಮನ ಸೆಳೆಯಿತು.

ಕೃಷಿ ಇಲಾಖೆ ಜಂಟಿ ನಿರ್ದೇಶಕರ ಕಚೇರಿಯ ಮಳಿಗೆಯಲ್ಲಿ ಪ್ರದರ್ಶನಕ್ಕಿಟ್ಟಿದ್ದ ಬತ್ತ ಬೆಳೆ ಕಟಾವು ಮಾಡಿದ ಬಳಿಕ ಉಳಿಯುವ ಹುಲ್ಲು ನಿರ್ವಹಣೆಗೆ ಬಳಸುವ ರೋಟೋ ಸ್ಲ್ಯಾಶರ್ ಯಂತ್ರ ಬಳಕೆ ವಿಧಾನ ಪ್ರಾತ್ಯಕ್ಷಿಕೆ ಗಮನ ಸೆಳೆಯಿತು.

ಸಬ್ಸಿಡಿ ದರದಲ್ಲಿ ರೈತರಿಗೆ ದೊರಕುವ ಸೌಲಭ್ಯದ ಬಗ್ಗೆ ಮಾಹಿತಿ ನೀಡುವುದು, ಸಬ್ಸಿಡಿ ದರದಲ್ಲಿ ಬಿತ್ತನೆ, ಮಣ್ಣು ಸಂರಕ್ಷಣೆ ಕುರಿತು ಸಮಗ್ರ ಮಾಹಿತಿ ನೀಡುವ ವ್ಯವಸ್ಥೆಯನ್ನೂ ಇಲ್ಲಿ ಮಾಡಲಾಗಿದೆ.

ರೈತನ ಬೆನ್ನೆಲುಬು ಎಂದು ಕರೆಸಿಕೊಂಡ `ಎತ್ತುಗಳ~ ಪ್ರದರ್ಶನದಲ್ಲಿ ಖಿಲಾರಿ ತಳಿ ಎತ್ತು, ಆಂಧ್ರಪ್ರದೇಶದಲ್ಲಿ  ಹೆಚ್ಚು ಬಳಸುವ ಗಜಗಾತ್ರದ ಎತ್ತುಗಳು ರೈತರನ್ನು ಆಕರ್ಷಿಸಿದವು. ಆಸ್ಕಿಹಾಳ ಗ್ರಾಮದ ರೈತ ಬಸವರಾಜ ಅವರ ಮುದ್ದಿನ 60 ಸಾವಿರ ಮೊತ್ತದ `ಖಿಲಾರಿ~ ಎತ್ತುಗಳು, ದೇವದುರ್ಗ ತಾಲ್ಲೂಕಿನ ಕೊತ್ತದೊಡ್ಡಿ ಗ್ರಾಮದ ಭೀಮಶೆಪ್ಪ ಅವರ ಲಕ್ಷಾಂತರ ಮೊತ್ತದ `ಗಜಗಾತ್ರದ ಎತ್ತುಗಳು~  ಪ್ರದರ್ಶನದಲ್ಲಿ ಡರ್ಕಿ ಹೊಡೆದು ಪೋಸ್ ಕೊಡುತ್ತಿದ್ದುದು ಕಂಡುಬಂತು. ಮೂರು ದಿನದ ಕೃಷಿ ಮೇಳದ ಮೊದಲ ದಿನವಾದ್ದರಿಂದ ಇನ್ನೂ ಕೃಷಿ ಪ್ರದರ್ಶನ ಮಳಿಗೆ, ಸಿದ್ಧತೆ ಕಾರ್ಯ ಮುಂದುವರಿದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT