ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ರಫ್ತು ವಲಯಕ್ಕೆ ಆಗ್ರಹ

Last Updated 6 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ


ಬಜಗೋಳಿ (ಕಾರ್ಕಳ):  ಕೃಷಿ ಉತ್ಪನ್ನಗಳ ಮೌಲ್ಯವರ್ಧಿಸುವ ಕಾರ್ಖಾನೆಗಳಿಗೆ ಪ್ರೋತ್ಸಾಹ ನೀಡಲು ವಿಶೇಷ ಕೃಷಿ ರಫ್ತು ವಲಯ ಸ್ಥಾಪನೆ, ರೈತರ ಉತ್ಪನ್ನ ಖರೀದಿಸುವ ಕಾರ್ಖಾನೆಗಳ ಜತೆ ಸಂಪರ್ಕ ಸಾಧಿಸುವ ಇಂಟರ್‌ನೆಟ್ ಕೇಂದ್ರ ಸ್ಥಾಪನೆ, ಜಿಲ್ಲೆಗೊಂದು ಶೀತಲೀಕರಣ ಗೋದಾಮು ಸ್ಥಾಪನೆಗೆ ಸರ್ಕಾರವನ್ನು ಒತ್ತಾಯಿಸುವುದೂ ಸೇರಿ 17 ನಿರ್ಣಯಗಳನ್ನು ಭಾನುವಾರ ಇಲ್ಲಿ ಸಮಾಪನಗೊಂಡ ರಾಜ್ಯಮಟ್ಟದ 31ನೇ ಕೃಷಿ ಮೇಳದಲ್ಲಿ ಕೈಗೊಳ್ಳಲಾಯಿತು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಶ್ರಯದಲ್ಲಿ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಮೂರು ದಿನ ನಡೆದ ಕೃಷಿ ಮೇಳದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್.ಮಂಜುನಾಥ್ ನಿರ್ಣಯ ಮಂಡಿಸಿದರು.ಸಣ್ಣ ಮತ್ತು ಅತಿಸಣ್ಣ ರೈತರ ಮಾರುಕಟ್ಟೆ ಬವಣೆ ನೀಗಿಸುವ ನಿಟ್ಟಿನಲ್ಲಿ ತಾಲ್ಲೂಕು ಮಟ್ಟದಲ್ಲಿ ಕೃಷಿ ರಫ್ತು ವಲಯ ಸ್ಥಾಪಿಸಬೇಕು. ಕೃಷಿಕರ ಜಮೀನು ಕಬಳಿಸಬಾರದು. ಪ್ರತಿ ಜಿಲ್ಲೆಯಲ್ಲೂ ಶೀತಲೀಕರಣ ಗೋದಾಮು ಸ್ಥಾಪಿಸಬೇಕು ಎಂದು ಸಮ್ಮೇಳನದಲ್ಲಿ ನಿರ್ಣಯಿಸಲಾಯಿತು.

ಉದ್ಯೋಗ ಖಾತರಿ-ಕೃಷಿಗೆ ಕತ್ತರಿ: ಉದ್ಯೋಗ ಖಾತರಿ ಯೋಜನೆಯಿಂದಾಗಿ ಕೃಷಿಕರನ್ನು ಕೃಷಿಯೇತರ ಕೆಲಸಗಳತ್ತ ಸೆಳೆಯುತ್ತಿದೆ. ಇದು ಪರೋಕ್ಷವಾಗಿ ಕಾರ್ಮಿಕರ ಕೊರತೆಗೆ ಕಾರಣವಾಗಿದ್ದು, ರೈತ ಧಾನ್ಯ ಉತ್ಪಾದನೆ ಸ್ಥಗಿತಗೊಳಿಸಬೇಕಾದ ಗಂಡಾಂತರ ಎದುರಾಗಿದೆ. ರಾಷ್ಟ್ರೀಯ ಆಹಾರ ಭದ್ರತೆ ದೃಷ್ಟಿಯಿಂದ ಧಾನ್ಯ ಕೃಷಿಯನ್ನು ಈ ಯೋಜನೆ ಪರಿಮಿತಿಯೊಳಗೆ ಸೇರಿಸಬೇಕು. ಸಣ್ಣ ಹಾಗೂ ಅತಿಸಣ್ಣ ರೈತರ ಸಂಘಟನೆಗಳು ಬಂಜರು ಭೂಮಿಯಲ್ಲಿ ಕೃಷಿ ಕೈಗೊಳ್ಳಲು ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಲಾಯಿತು.
ಪರಿಹಾರ ಹೆಚ್ಚಿಸಿ: ಪ್ರಕೃತಿ ವಿಕೋಪದಿಂದ ಬೆಳೆ ನಾಶಕ್ಕೆ 40 ವರ್ಷದ ಹಿಂದೆ ರೂಪಿಸಲಾದ ಪರಿಹಾರ ಧನವನ್ನೇ ಈಗಲೂ ನೀಡಲಾಗುತ್ತಿದೆ. ಭತ್ತದ ಬೆಳೆ ನಾಶವಾದರೆ ಪ್ರತಿ ಎಕರೆಗೆ  10 ಸಾವಿರ ಪರಿಹಾರ ನಿಗದಿಪಡಿಸಬೇಕು. ತೆಂಗು-ಅಡಿಕೆಯಂತಹ ತೋಟಗಾರಿಕಾ ಬೆಳೆಗೂ ಪರಿಹಾರ ಧನ ವಿಸ್ತರಿಸಬೇಕು.

ದೇಶಿ ತಳಿ ರಕ್ಷಣೆ: ಧಾನ್ಯಗಳ ಸಹಸ್ರಾರು ದೇಶಿ ತಳಿಗಳು ಕಣ್ಮರೆ ಆಗುವ ಮುನ್ನವೇ ತಳಿಗಳ ಬೀಜ ಸಂರಕ್ಷಣೆ ಮತ್ತು ಪೂರೈಕೆಗೆ ಸರ್ಕಾರ ಕಾರ್ಯಕ್ರಮ ರೂಪಿಸಬೇಕು. ಅಧ್ಯಯನಕ್ಕೆ ಮಂಡಳಿ ಸ್ಥಾಪಿಸಿ ಅಡಿಕೆಯ ರೋಗಬಾಧೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ನಿರ್ಣಯದಲ್ಲಿ ಆಗ್ರಹಿಸಲಾಗಿದೆ.  ಕೃಷಿ ಕೂಲಿ ಕಾರ್ಮಿಕರ ಭದ್ರತೆಗೆ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಗ್ರಾಮಗಳಲ್ಲೂ ನಗರ ಮೂಲಸೌಕರ್ಯ ಒದಗಿಸಲು ಕಾಲಮಿತಿ ಯೋಜನೆ ಹಾಕಿಕೊಳ್ಳಬೇಕು ಎಂಬ ಬೇಡಿಕೆಗಳು ನಿರ್ಣಯದಲ್ಲಿವೆ.ಬಡ ಕುಟುಂಬಗಳಿಗೆ ರಿಯಾಯಿತಿ ದರದಲ್ಲಿ ವಿತರಿಸುವ ಅಕ್ಕಿಯನ್ನು ನೇರವಾಗಿ ರೈತರಿಂದಲೇ ಖರೀದಿಸಬೇಕು. ರೈತರ ಖಾತೆ ಬದಲಾವಣೆಯಲ್ಲಿ ಆಗುತ್ತಿರುವ ಅನಗತ್ಯ ವಿಳಂಬ ನಿವಾರಿಸಬೇಕು. ರೈತರ ಸೌಲಭ್ಯ ಪಾಸ್ ಪುಸ್ತಕ ವ್ಯವಸ್ಥೆ ಮರುಜಾರಿಗೆ ತರಬೇಕು. ಮಟ್ಟುಗುಳ್ಳ ಬದನೆ ತಳಿ ಸಂರಕ್ಷಣೆಗೆ ಪ್ಯಾಕೇಜ್ ರೂಪಿಸಬೇಕು. ಕರಾವಳಿಯಲ್ಲಿ ತೆಂಗು ಅಭಿವೃದ್ಧಿ ಮಂಡಳಿಯ ಪ್ರಾದೇಶಿಕ ಕಚೇರಿ ತೆರೆಯಬೇಕು ಎಂದು ಒತ್ತಾಯಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT