ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ವಿವಿ ಭೂಮಿ ಜಿಲ್ಲಾಡಳಿತ ಭವನ

Last Updated 1 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ರಾಯಚೂರು: ರಾಯಚೂರು ನಗರ ಅಭಿವೃದ್ಧಿ ದೃಷ್ಟಿಯಿಂದ ಜಿಲ್ಲಾಡಳಿತ ಭವನವನ್ನು ನಗರದ ಹೊರವಲಯದಲ್ಲಿ ನಿರ್ಮಾಣ ಮಾಡಬೇಕು. ಕೃಷಿ ವಿಶ್ವವಿದ್ಯಾಲಯದ ಕ್ಯಾಂಪಸ್‌ನ ಭೂಮಿಯಲ್ಲಿ ನಿರ್ಮಾಣ ಮಾಡಲೇಬಾರದು ಎಂದು ಒತ್ತಾಯಿಸಿ ಸೋಮವಾರ ಹೈದರಾಬಾದ್ ಕರ್ನಾಟಕ ಜನಪ್ರತಿನಿಧಿಗಳು ಮತ್ತು ಸಂಘ ಸಂಸ್ಥೆಗಳು ಮತ್ತು ಕೃಷಿ ವಿವಿ ಸಿಬ್ಬಂದಿ ಪ್ರತಿಭಟನೆ ನಡೆಸಿದರು.

ಈ ಬಗ್ಗೆ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರಿಗೆ, ಮುಖ್ಯ ಕಾರ್ಯದರ್ಶಿಗಳಿಗೆ, ಸಂಬಂಧಪಟ್ಟ ಸಚಿವರಿಗೆ ಮನವಿ ಸಲ್ಲಿಸಿದರು.

ನಗರದ ಹೊರ ವಲಯದಲ್ಲಿ ಜಿಲ್ಲಾಡಳಿತ ಭವನ ನಿರ್ಮಾಣ ಮಾಡುವುದರಿಂದ ನಗರವು ತೀವ್ರಗತಿಯಲ್ಲಿ ಬೆಳೆಯಲು ಪೂರಕವಾಗುತ್ತದೆ ಎಂದು ಹೇಳಿದರು.

ಬಿಜೆಪಿ ಸರ್ಕಾರವು ಅಧಿಕಾರಕ್ಕೆ ಬಂದ ಬಳಿಕ ರಾಯಚೂರು ಕೃಷಿ ವಿವಿ ಸ್ಥಾಪನೆ ಮಾಡಿದೆ. ಕೃಷಿ ವಿವಿ ಈ ಭಾಗದ ಆಶಾಕಿರಣವಾಗಿದೆ. ಕೃಷಿ ಅಭಿವೃದ್ಧಿಗೆ ಅನೇಕ ಹೊಸ ಯೋಜನೆಗಳನ್ನು ರೂಪಿಸಿಕೊಂಡು ಕಾರ್ಯಪ್ರವೃತ್ತವಾಗಿದೆ. ಇಂಥ ಪರಿಸ್ಥಿತಿಯಲ್ಲಿ ಕೃಷಿ ವಿವಿಗೆ ಸಂಬಂಧಪಟ್ಟ ರಾಯಚೂರು- ಲಿಂಗಸುಗೂರು ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂಬರ್ 114ರ ಭೂಮಿಯನ್ನು ನೀಡಬೇಕು ಎಂಬ ಒತ್ತಾಯ ಮೂರು ವರ್ಷಗಳಿಂದ ಮುಂದುವರಿದಿದೆ.

ಈ ಹಿಂದೆ ಡಿ.ವಿ ಸದಾನಂದಗೌಡ ಅವರು ಮುಖ್ಯಮಂತ್ರಿಯಾಗಿದ್ದಾಗ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಾಲಚಂದ್ರ ಜಾರಕಿಹೊಳಿ ಅವರ ಗಮನಕ್ಕೆ ಸಮಸ್ಯೆಯನ್ನು ತಂದಾಗ ಈ ಭೂಮಿಯಲ್ಲಿ ಜಿಲ್ಲಾಡಳಿತ ಭವನ ಪ್ರಸ್ತಾವನೆ ಕೈ ಬಿಟ್ಟಿದ್ದರು. ಈಗ ಮತ್ತೆ ಆ ಪ್ರಸ್ತಾವನೆಯನ್ನು ಕೆಲ ಹಿತಾಸಕ್ತಿಗಳು ಮುಖ್ಯಮಂತ್ರಿ ಮುಂದಿಟ್ಟು  ಕೃಷಿ ವಿವಿಗೆ ಒತ್ತಡ ಹೇರುವ ಪ್ರಯತ್ನ ಮಾಡುತ್ತಿವೆ. ಹೀಗಾಗಿ ಇಂಥ ಪ್ರಸ್ತಾವನೆಗಳನ್ನು ನಿರಾಕರಿಸಬೇಕು ಎಂದು ಆಗ್ರಹಿಸಿದರು.

ಕೃಷಿ ವಿವಿ ಶಿಕ್ಷಕರ ಸಂಘ, ಶಿಕ್ಷಕೇತರರ ಸಂಘ, ಕೃಷಿ ಕಾರ್ಮಿಕರ ಸಂಘ, ಕೃಷಿ ಸಮಾಜ, ಅಕ್ಕಿ ಗಿರಣಿ ಮಾಲೀಕರ ಸಂಘ, ಸ್ವಾತಂತ್ರ್ಯ ಯೋಧರ ಸಂಘ, ಕೃಷಿ ವಿವಿ ವಿದ್ಯಾರ್ಥಿ ಸಂಘ, ಕೃಷಿ ವಿವಿ ಕನ್ನಡ ಸಂಘ ಎಸ್‌ಸಿಎಸ್‌ಟಿ ನೌಕರರ ಸಂಘ, ಅಲ್ಪಸಂಖ್ಯಾತರ ಘಟಕ ಸೇರಿದಂತೆ ಹಲವು ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು  ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT