ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ವಿವಿ:ಬೆಳೆ-ಬೆಲೆ ಮುನ್ಸೂಚನೆ

Last Updated 19 ಜೂನ್ 2011, 10:25 IST
ಅಕ್ಷರ ಗಾತ್ರ

ರಾಯಚೂರು: ಹೋದ ವರ್ಷ ಪಡೆದ ಕೃಷಿ ಹುಟ್ಟುವಳಿಗಳ  ಆಧಾರದ ಮೇಲೆ ಅನೇಕ ರೈತರು ಈ ವರ್ಷದ ಮುಂಗಾರು ಹಂಗಾಮಿನಲ್ಲಿ ಕೆಲವು ಬೆಳೆಗಳನ್ನು ಬೆಳೆಯಲು ಯೋಚಿಸಿದ್ದಾರೆ. ಉದಾಹರಣೆಗೆ ಹೋದ ವರ್ಷದ ಹೆಚ್ಚಿನ ಬೆಲೆ(6,000- ಪ್ರತಿ ಕ್ವಿಂಟಲ್‌ಗೆ) ಪಡೆದ ಆಧಾರದ ಮೇಲೆ ಈ ಸಲವೂ ಹೆಚ್ಚಿನ ರೈತರು ಬಿಟಿ ಹತ್ತಿ ಬೆಳೆಯಲು ಬೀಜಕ್ಕೆ ಮುಗಿ ಬಿದ್ದಿರುವುದು ಕಂಡು ಬಂದಿದೆ.

ಈ ಸಂದಿಗ್ಧ ಹಿನ್ನೆಲೆಯಲ್ಲಿ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕೃಷಿ ಅರ್ಥಶಾಸ್ತ್ರ ವಿಭಾಗವು ರೈತರಿಗೆ `ಬೆಳೆ ಮತ್ತು ಬೆಲೆ~ ವಿಷಯದಲ್ಲಿ ರೈತರಿಗೆ ಮಾರ್ಗದರ್ಶನ ಮಾಡಲು ಮುಂದಾಗಿದೆ.

ಈಶಾನ್ಯ ಕರ್ನಾಟಕ ಭಾಗದ ಪ್ರಮುಖ ಬೆಳೆಗಳ ಬೆಲೆ ಮಾಹಿತಿ ಬಗ್ಗೆ ಅಧ್ಯಯನವನ್ನು ಈ ವಿಭಾಗ ಮಾಡಿದ್ದು,  ಮುಂದಿನ ಹಂಗಾಮಿನಲ್ಲಿ ಬತ್ತ(ಸೋನಾಮಸೂರಿ), ತೊಗರಿ, ಶೇಂಗಾ, ಸೂರ್ಯಕಾಂತಿ ಹಾಗೂ ಬಿ.ಟಿ ಹತ್ತಿಯ ಬೆಲೆಗಳ ಅಂದಾಜು ಮಾಡಿ ಮುನ್ಸೂಚನೆ ಕೊಟ್ಟಿದೆ ಎಂದು ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ವಿ ಪಾಟೀಲ್ ತಿಳಿಸಿದ್ದಾರೆ.

ಬೆಲೆಗಳ ಮುನ್ಸೂಚನೆ ಆಧಾರದ ಮೇಲೆ ರೈತರು ಯಾವ ಬೆಳೆ ಎಷ್ಟೇಷ್ಟು ಕ್ಷೇತ್ರದಲ್ಲಿ ಬೆಳೆಯಬೇಕೆಂದು ನಿರ್ಧರಿಸಬೇಕು ಎಂಬುದನ್ನು ತಿಳಿಸಿದೆ. ಅದೇ ರೀತಿ ಕೃಷಿ ಸಂಬಂಧಿತ ಅಧಿಕಾರಿಗಳು, ವಿಸ್ತರಣಾ ಸಿಬ್ಬಂದಿಗಳು, ವಿಜ್ಞಾನಿಗಳು, ಮಾರಾಟಗಾರರು ಸಹ ಈ ಮೂನ್ಸೂಚನೆ ಬೆಲೆಗಳ ಆಧಾರದ ಮೇಲೆ ರೈತರಿಗೆ ಸಲಹೆ ಸೂಚನ ನೀಡಲು ಕೋರಿದ್ದಾರೆ.

ಕೃಷಿ ವಿವಿ ಕೃಷಿ ಅರ್ಥಶಾಸ್ತ್ರದ ವರದಿ: ಈ ವಿಭಾಗದ ಮುಖ್ಯಸ್ಥರಾದ ಎಲ್.ಬಿ ಹೂಗಾರ  ಈ ಬಗ್ಗೆ ವಿವರ ವರದಿ ನೀಡಿದ್ದಾರೆ. ಅವರ ಪ್ರಕಾರ, ಈ ಭಾಗದ ಪ್ರಮುಖ ಬೆಳೆಗಳಾದ ಭತ್ತ, ತೊಗರಿ, ಶಂಗಾ, ಸೂರ್ಯಕಾಂತಿ ಮತ್ತು ಹತ್ತಿ ಹುಟ್ಟುವಳಿಗಳ ಬೆಲೆಗಳನ್ನು ಆಯಾ ಪ್ರಮುಖ ಮಾರುಕಟ್ಟೆಗಳಿಂದ ಕಳೆದ 20 ವರ್ಷಗಳ ಮಾಹಿತಿ ಸಂಗ್ರಹಿಸಿ ಅವುಗಳನ್ನು ಸಂಖ್ಯಾಶಾಸ್ತ್ರ ಮತ್ತು ಅರ್ಥಶಾಸ್ತ್ರದನುಗುಣವಾಗಿ ಅವಲೋಕಿಸಲಾಗಿದೆ. ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕೃಷಿಗೆ ಸಂಬಂಧಿಸಿದ ಆರ್ಥಿಕ ಅಂಶಗಳ ಆಗು ಹೋಗುಗಳನ್ನ ಪರಿಗಣಿಸಲಾಗಿದೆ. ಪ್ರಗತಿಪರ ರೈತರ ಮತ್ತು ವ್ಯಾಪಾರಿಗಳ ಅನುಭವ, ವಾಯಿದೆ ಮಾರುಕಟ್ಟೆಯ ಭವಿಷ್ಯತ್ತಿನ ಬೆಲೆಗಳನ್ನೂ ಗಣನೆಗೆ ತೆಗೆದುಕೊಳ್ಳಲಾಗಿದೆ. ಹವಾಮಾನದ ವೈಫರಿತ್ಯವನ್ನು ಆಧರಿಸಿ 2011-12ರ ಮುಂಗಾರು ಹಂಗಾಮಿನಲ್ಲಿ ಸಂಭವನೀಯ ಮಾರುಕಟ್ಟೆ ಬೆಲೆಗಳನ್ನು ಅಂದಾಜಿಸಿ ರೈತರ ಮತ್ತು ಕೃಷಿ ಸಂಬಂಧಿತ ಇತರ ವ್ಯಕ್ತಿ ಮತ್ತು ಸಂಸ್ಥೆಗಳ ಸೂಕ್ತ ಅನುಕೂಲಕ್ಕೆ ಈ ಪ್ರಯತ್ನ ಮಾಡಲಾಗಿದೆ. ವಿಶೇಷವಾಗಿ ಈ ವರ್ಷ ಮುಂಗಾರು ಉತ್ತಮವಾಗಿದೆ ಎಂದು ಹವಾಮಾನ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ ಎಂದು ಹೇಳಿದ್ದಾರೆ.

ತೊಗರಿ:   2011-12ನೇ ಹಂಗಾಮಿನಲ್ಲಿ ತೊಗರಿ ಬೆಲೆಯು ಕನಿಷ್ಠ 3,000ದಿಂದ 3,600ರವರೆಗೆ ತಲುಪಬಹುದು ಎಂದು ಅಂದಾಜಿಸಲಾಗಿದೆ. ಅಲ್ಲದೇ ಈಗಾಗಲೇ ಕೇಂದ್ರ ಸರ್ಕಾರ ಪ್ರತಿ ಕ್ವಿಂಟಲ್‌ಗಎ 3,200 ಕನಿಷ್ಠ ಬೆಂಬಲ ಬೆಲೆ ಘೋಷಿಸಿದೆ.

 ಖಾಸಗಿ ಸಂಸ್ಥೆಗಳ ಖರೀದಿ, ಸರ್ಕಾರದ ನೀತಿ, ಹಣದುಬ್ಬರ, ವಿನಿಮಯ ದರ, ಮಾರಾಟದೊತ್ತಡ ಹಾಗೂ ಬ್ಯಾಂಕಿನ ಬಡ್ಡಿಯ ದರ ಪರಿಷ್ಕರಣೆ ಅಂಶಗಳು ಬಹಳಷ್ಟು ಮಟ್ಟಿಗೆ ಬರುವ ವರ್ಷದಲ್ಲಿ ತೊಗರಿ ಬೆಲೆ ನಿರ್ಧರಿಸುತ್ತವೆ.

ಬತ್ತ: ದೇಶಿಯ ಉತ್ಪಾದನೆಯಲ್ಲಿ ಸುಧಾರಣೆ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಸರ್ಕಾರದ ಅಕ್ಕಿ ದಾಸ್ತಾನಿನಿಂದ ದೇಶಿಯ ಮಾರುಕಟ್ಟೆಯಲ್ಲಿ ಬತ್ತದ ಬೆಲೆ ಕುಸಿದಿದೆ. ಆದಾಗ್ಯೂ 2010-11ರ ಮುಂಗಾರು ಹಂಗಾಮಿನಲ್ಲಿ ಸೋನಾಮಸೂರಿ ಬತ್ತದ ಬೆಲೆಯು ಜೂನ್‌ನಿಂದ ಸ್ಥಿರವಾಗಿ ಸುಮಾರು 1200ದಿಂದ 1,500ರವರೆಗೆ ಪ್ರತಿ ಕ್ವಿಂಟಲ್‌ಗೆ ಇರುವ ಅಂದಾಜಿದೆ.

2011-12ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆಯುವ ಸೋನಾಮಸೂರಿ ಬತ್ತದ ಬೆಲೆಗಳು ಗಂಗಾವತಿ, ಸಿಂಧನೂರು, ಮತ್ತು ರಾಯಚೂರು ಮಾರುಕಟ್ಟೆಯಲ್ಲಿ ಕೊಯ್ಲು ನಂತರ ಡಿಸೆಂಬರ್‌ನಲ್ಲಿ ಸುಮಾರು ಪ್ರತಿ ಕ್ವಿಂಟಲ್‌ಗೆ 1,230ರಿಂದ 1,375 ಇರುವುದೆಂದು ಮುನ್ಸೂಚನೆ ಮಾಡಲಾಗಿದೆ.
ಶೇಂಗಾ: ಶೇಂಗಾ ಬೆಳೆಯನ್ನು ನೀರಾವರಿ ಪ್ರದೇಶದಲ್ಲಿ ಹಿಂಗಾರಿ/ಬೇಸಿಗೆ ಹಂಗಾಮಿನಲ್ಲಿ ಹೆಚ್ಚಾಗಿ ಈ ಭಾಗದಲ್ಲ ಬೆಳೆಯಲಾಗುತ್ತಿದೆ. ಮಾರ್ಚ್‌ನಿಂದ ಜೂನ್‌ವರೆಗೆ ಮಾರುಕಟ್ಟೆಗೆ ಹೆಚ್ಚಿನ ಆವಕವಾಗುವುದು.

ರಾಯಚೂರು ಮಾರುಕಟ್ಟೆಯಲ್ಲಿ 2011-12ನೇ ಸಾಲಿನ ಹಂಗಾಮಿನ  ಹಿಂಗಾರಿ/ಬೇಸಿಗೆ ಶೇಂಗಾ ಉತ್ಪನ್ನದ ಬೆಲೆಯು ಕೊಯ್ಲು ನಂತರ ಮಾರ್ಚ್-ಮೇ 2012ರಲ್ಲಿ ಪ್ರತಿ ಕ್ವಿಂಟಾಲ್‌ಗೆ 3,500ದಿಂದ 3,800ರವರೆಗೆ ಇರುವುದೆಂದು ಅಂದಾಜಿಸಲಾಗಿದೆ. ಕೇಂದ್ರ ಸರ್ಕಾರವು 2011-12ನೇ ಸಾಲಿಗೆ ಪ್ರತಿ ಕ್ವಿಂಟಲ್‌ಗೆ 2,700 ಕನಿಷ್ಠ ಬೆಂಬಲ ಬೆಲೆ ಘೋಷಣೆ ಮಾಡಿದೆ. ರೈತರು ಬೆಳೆದ ಶೇಂಗಾ ಕಾಯಿಯನ್ನು ಒಣಗಿಸಿ, ಶುದ್ಧ ಮಾಡಿ ಮಾರಾಟ ಮಾಡುವುದರಿಂದ 100ರಿಂದ 250 ರೂ ಹೆಚ್ಚಿನ ಬೆಲೆ ಪಡೆಯಬಹುದಾಗಿದೆ.

ಸೂರ್ಯಕಾಂತಿ: 2011-12ರಲ್ಲಿ ಕೇಂದ್ರ ಸರ್ಕಾರವು ಸೂರ್ಯಕಾಂತಿಯ ಬೆಂಬಲ ಬೆಲೆಯನ್ನು 2,350ರಿಂದ 2,800ಕ್ಕೆ ಹೆಚ್ಚಿಸಲಾಗಿದೆ. ಸೂರ್ಯಕಾಂತಿ ಕ್ಷೇತ್ರ ಹಾಗೂ ಉತ್ಪಾದನೆಯಲ್ಲಿ ಗಣನೀಯ ಹೆಚ್ಚಳವಾಗುವ ನಿರೀಕ್ಷೆ ಇದೆ. ಆದರೆ, ಬರುವ 2011-12ರ ಹಂಗಾಮಿನಲ್ಲಿ ಮಾರುಕಟ್ಟೆಯಲಿ ಸೂರ್ಯಕಾಂತಿಯ ಬೆಲೆಯು 2,800ದಿಂದ 3,000 ರೂಪಾಯಿವರೆಗೆ ಇರುವುದೆಂದು ಅಂದಾಜು ಮಾಡಲಾಗಿದೆ.

ಹತ್ತಿ: 2010-11ರ ಹಂಗಾಮಿನಲ್ಲಿ ಬಿ.ಟಿ ಹತ್ತಿಯ ಬೆಲೆಯು(4,000ದಿಂದ 4,500) ಕಳೆದ ಏಳು ತಿಂಗಳಿಂದ ಹೆಚ್ಚಿನ ಮಟ್ಟದಲ್ಲಿದೆ. ಏಪ್ರಿಲ್ ನಂತರ ಇಳಿಮುಖವಾಗಿ ಸ್ಥಿರವಾಗಿದೆ. ಬೆಲೆ ಹೆಚ್ಚಳ ಕಾರಣದಿಂದ 2011-12ರಲ್ಲಿ ಶೇ 8ರಷ್ಟು ಕ್ಷೇತ್ರ(36.3 ದಶಲಕ್ಷ ಹೆಕ್ಟೇರ್) ಹೆಚ್ಚಾಗುವುದೆಂದು ನಿರೀಕ್ಷಿಸಲಾಗಿದೆ. ಸುಮಾರು 27.3 ದಶಲಕ್ಷ ಟನ್(ಶೇ 9) ಉತ್ಪಾದನೆ ನಿರೀಕ್ಷಿಸಲಾಗಿದೆ.

ದೇಶದಲ್ಲ ಹತ್ತಿಯ ಪರಿಸ್ಥಿತಿಯೂ ಅಂತರರಾಷ್ಟ್ರೀಯ ಪರಿಸ್ಥಿತಿಗೆ ಪೂರಕವಾಗಿದೆ. ಆದ್ದರಿಂದ 2011-12ನೇ ಹಂಗಾಮಿನಲ್ಲಿ ಬೆಳೆಯುವ ನೀರಾವರಿ ಪ್ರದೇಶದ ಬಿ.ಟಿ ಹತ್ತಿಯ ಬೆಲೆಯು ಪ್ರತಿ ಕ್ವಿಂಟಲ್‌ಗೆ ಸುಮಾರು 3,500ದಿಂದ 4,200 ಆಗಬಹುದು ಎಂದು ಅಂದಾಜಿಸಲಾಗಿದೆ.

 ಈಗಾಗಲೇ ಕೇಂದ್ರ ಸರ್ಕಾರವು ಉದ್ದ ಎಳೆಯ ಹತ್ತಿಯ ಕನಿಷ್ಠ ಬೆಂಬಲ ಬೆಲೆಯನ್ನು 3,300 ರೂ ಘೋಷಣೆ ಮಾಡಿದೆ.     

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT