ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ವ್ಯಾಸಂಗ ಸ್ಪರ್ಧಾತ್ಮಕ ಪರೀಕ್ಷೆ

Last Updated 15 ಜನವರಿ 2012, 19:30 IST
ಅಕ್ಷರ ಗಾತ್ರ

ಕೃಷಿಯಲ್ಲಿ ಸ್ವಾವಲಂಬನೆ ಸಾಧಿಸಲು ಕೇಂದ್ರ ಹಾಗೂ ರಾಜ್ಯ  ಸರ್ಕಾರಗಳ ಅಡಿಯಲ್ಲಿ ಅನೇಕ  ಕಾರ್ಯಕ್ರಮಗಳನ್ನು ನಿರಂತರವಾಗಿ ಅಭಿವೃದ್ಧಿ ಪಡಿಸುತ್ತ ಬರಲಾಗುತ್ತಿದೆ. ಅದರಂತೆಯೇ ಕರ್ನಾಟಕ ರಾಜ್ಯದಲ್ಲಿ ಮೂರು ಕೃಷಿ ವಿಶ್ವವಿದ್ಯಾಲಯಗಳು ಹಾಗೂ ತಲಾ ಒಂದು ತೋಟಗಾರಿಕೆ ಮತ್ತು ಪಶು ಸಂಗೋಪನಾ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಗಿದೆ.

ಈ ವಿಶ್ವವಿದ್ಯಾಲಯಗಳಲ್ಲಿ ನೀಡುತ್ತಿರುವ ಕೃಷಿ, ತೋಟಗಾರಿಕೆ, ಅರಣ್ಯ, ಪಶುವೈದ್ಯಕೀಯ ಹಾಗೂ ಇತರೆ ಪದವಿಗಳಿಗೆ ಸೇರಲು ಇತ್ತೀಚಿನ ವರ್ಷಗಳಲ್ಲಿ ಬೇಡಿಕೆ ಹೆಚ್ಚಾಗಿದ್ದು ದಾಖಲಾತಿ ಪಡೆಯಲು ವಿದ್ಯಾರ್ಥಿಗಳು ಹರ ಸಾಹಸ ಪಡುತ್ತಿದ್ದಾರೆ.
 
ರಾಜ್ಯದ ಐದು ವಿಶ್ವವಿದ್ಯಾಲಯಗಳಿಂದ ಕೇವಲ ಮೂರು ಸಾವಿರ ವಿದ್ಯಾರ್ಥಿಗಳಿಗೆ ಮಾತ್ರ ಕೃಷಿ ಮತ್ತು ಕೃಷಿಗೆ ಸಂಬಂಧಪಟ್ಟ ಪದವಿಗಳಿಗೆ ಪ್ರವೇಶ ಪಡೆಯಲು ಅವಕಾಶವಿರುತ್ತದೆ.
 
ಇತ್ತೀಚಿನ ವರ್ಷಗಳಲ್ಲಿ ಬ್ಯಾಂಕ್‌ಗಳು, ಬಹುರಾಷ್ಟ್ರೀಯ ಕಂಪೆನಿಗಳು, ಸರ್ಕಾರಿ ಇಲಾಖೆಗಳಾದ ಕೃಷಿ, ತೋಟಗಾರಿಕೆ, ಪಶು ಸಂಗೋಪನೆ ಮತ್ತು ಆರಣ್ಯ ಇಲಾಖೆಗಳಲ್ಲಿ ಕೃಷಿ ಪದವೀಧರರಿಗೆ ಉದ್ಯೋಗ ಅವಕಾಶ ಹೆಚ್ಚಿದೆ.

ರಾಷ್ಟ್ರಮಟ್ಟದಲ್ಲಿ ಭಾರತೀಯ ಆನುಸಂಧಾನ ಪರಿಷತ್ತು (ಐ.ಸಿ.ಎ.ಆರ್) ದೇಶದ 62 ಕೃಷಿ ವಿಶ್ವವಿದ್ಯಾಲಯಗಳಲ್ಲಿ ಕೃಷಿ ಮತ್ತು ಕೃಷಿಗೆ ಸಂಬಂಧಪಟ್ಟ ತೋಟಗಾರಿಕೆ, ಅರಣ್ಯ, ಮೀನುಗಾರಿಕೆ, ಕೃಷಿ ಎಂಜಿನಿಯರಿಂಗ್ ಮತ್ತು ಗೃಹ ವಿಜ್ಞಾನ ಪದವಿಗಳಿಗೆ ಶೇಕಡ 15ರಷ್ಟು ಸ್ಥಾನಗಳನ್ನು  ಅಖಿಲ ಭಾರತ ಮಟ್ಟದಲ್ಲಿ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಯ ಮೂಲಕ ದೇಶದ ಪ್ರತಿಷ್ಠಿತ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನಕ್ಕಾಗಿ ಕಾದಿರಿಸಲಾಗಿದೆ.

ಆದರೆ, ರಾಜ್ಯದ ವಿದ್ಯಾರ್ಥಿಗಳು ಕರ್ನಾಟಕದ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಈ ಕೋಟಾ ಅಡಿಯಲ್ಲಿ ಸೀಟುಗಳನ್ನು ಆಯ್ಕೆ ಮಾಡಿಕೊಳ್ಳುವಂತಿಲ್ಲ.

ಪಿ.ಯು.ಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಷಯಗಳನ್ನು ತೆಗೆದುಕೊಂಡು ಉತ್ತಮ ಅಂಕಗಳನ್ನು ಗಳಿಸಿರುವ ರಾಜ್ಯದ ಬಹಳಷ್ಟು ವಿದ್ಯಾರ್ಥಿಗಳಿಗೆ ಈ ಕುರಿತಾದ ಮಾಹಿತಿ ಇಲ್ಲದಿರುವುದರಿಂದ ಕರ್ನಾಟಕದಿಂದ ಅಖಿಲ ಭಾರತ ಮಟ್ಟದಲ್ಲಿ ಕಾಯ್ದಿರಿಸಿದ ಶೇಕಡ 15 ಕೋಟಾಗೆ ಬಹಳಷ್ಟು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುತ್ತಿಲ್ಲ.

ಅರ್ಜಿ ಪ್ರತಿಗಳನ್ನು ಪ್ರತಿ ವರ್ಷ ಡಿಸೆಂಬರ್ ತಿಂಗಳಿನಿಂದ ಫೆಬ್ರವರಿ ತಿಂಗಳ ಮಧ್ಯಭಾಗದವರೆಗೆ ಆಯಾ ರಾಜ್ಯದ ಕೃಷಿ ವಿಶ್ವವಿದ್ಯಾನಿಲಯಗಳಲ್ಲಿ ಮಾರಾಟ ಮಾಡಲು ಭಾರತೀಯ ಆನುಸಂಧಾನ ಪರಿಷತ್ತು (ಐ.ಸಿ.ಎ.ಆರ್) ವ್ಯವಸ್ಥೆ ಮಾಡಿರುತ್ತದೆ.

ಅದರಂತೆ ಈ ವರ್ಷದ ಪ್ರವೇಶ ಪರೀಕ್ಷೆಯ ಮಾಹಿತಿ ಪುಸ್ತಕ ಮತ್ತು ಅರ್ಜಿ ನಮೂನೆಯನ್ನು ಡಿಸೆಂಬರ್ 16ರಿಂದ ಕರ್ನಾಟಕ ರಾಜ್ಯದ ಕೃಷಿ ವಿಶ್ವವಿದ್ಯಾನಿಯಗಳಲ್ಲಿಯ ಕುಲಸಚಿವರ ಕಚೇರಿಯಿಂದ ಪಡೆಯಬಹುದಾಗಿದೆ.

ಭರ್ತಿ ಮಾಡಿದ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 15. ಅರ್ಜಿಯ ಶುಲ್ಕ ಸಾಮಾನ್ಯ ವರ್ಗಕ್ಕೆ ರೂ.525 ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ರೂ.275. ಈಗಾಗಲೇ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಸಚಿವರ ಕಚೇರಿಯಿಂದ ಈ ಮಾಹಿತಿ ಪುಸ್ತಕ ಮತ್ತು ಅರ್ಜಿ ಪ್ರತಿಗಳನ್ನು ಮಾರಾಟ ಮಾಡಲಾಗುತ್ತಿದೆ.

ಇದಕ್ಕೆ ಪೂರಕವಾದ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಏಪ್ರಿಲ್ 14 ಮತ್ತು 15ರಂದು ಆಯ್ದ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗುವುದು ಎಂದು ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯ ವಿಸ್ತರಣಾ ನಿರ್ದೇಶನಾಲಯದ ಕೃಷಿ ವಾರ್ತಾ ಘಟಕದ ಪ್ರಕಟಣೆ ತಿಳಿಸಿದೆ.
 ಆಯ್ಕೆಯಾದ ಪ್ರತಿ ವಿದ್ಯಾರ್ಥಿಗಳಿಗೆ ರೂ.1000-00 ವಿದ್ಯಾರ್ಥಿವೇತನ ಸಹ ನೀಡಲಾಗುತ್ತದೆ.

ಹೆಚ್ಚಿನ ವಿವರಗಳಿಗೆ : ಕುಲಸಚಿವರು, ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು, ದೂರವಾಣಿ ಸಂಖ್ಯೆ: 0802333 0984 ಅಥವಾ ಐ.ಸಿ.ಎ.ಆರ್ ವೆಬ್ ಸೈಟ್ www.icar.org.in.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT