ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಶಿಕ್ಷಣದತ್ತ ಯುವಜನತೆ ಒಲವು: ಅಯ್ಯಪ್ಪನ್

Last Updated 3 ಡಿಸೆಂಬರ್ 2012, 9:55 IST
ಅಕ್ಷರ ಗಾತ್ರ

ಮೈಸೂರು: ಪ್ರಸ್ತುತ ದಿನಗಳಲ್ಲಿ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕ್ಷೇತ್ರಗಳಂತೆಯೇ ಕೃಷಿ ವಿಜ್ಞಾನ ಕ್ಷೇತ್ರವೂ ಆಕರ್ಷಣೀಯವಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಯುವ ಜನರು ಈ ರಂಗಕ್ಕೆ ಬರುತ್ತಿದ್ದಾರೆ ಎಂದು ನವದೆಹಲಿಯ ಭಾರತೀಯ ಕೃಷಿ ಸಂಶೋಧನ ಕೇಂದ್ರ (ಐಸಿಎಆರ್) ಮುಖ್ಯ ನಿರ್ದೇಶಕ ಡಾ. ಎಸ್. ಅಯ್ಯಪ್ಪನ್ ಹೇಳಿದರು.

ಜೆಎಸ್‌ಎಸ್ ವಿಜ್ಞಾನ, ವಾಣಿಜ್ಯ ಮತ್ತು ಕಲಾ ಕಾಲೇಜಿನಲ್ಲಿ ಭಾನುವಾರ ವಿಶ್ವವಿದ್ಯಾಲಯಗಳ ವಿಶ್ರಾಂತ ಕುಲಪತಿಗಳ ವೇದಿಕೆ, ಬೆಂಗಳೂರು, ಧಾರವಾಡ, ರಾಯ ಚೂರು ಕೃಷಿ ವಿವಿ ಮತ್ತು ಬಾಗಲಕೋಟೆ ತೋಟಗಾರಿಕೆ ವಿಜ್ಞಾನ ಕಾಲೇಜು, ಬೀದರ್‌ನ ಕರ್ನಾಟಕ ಪಶುವಿಜ್ಞಾನ ಮತ್ತು ಮತ್ಸ್ಯವಿಜ್ಞಾನ ವಿವಿ ಮತ್ತು ಮೈಸೂರಿನ ಕರ್ನಾಟಕ ಮುಖ್ಯ ವಿವಿ ಆಶ್ರಯದಲ್ಲಿ ಆಯೋಜಿಸಲಾಗಿರುವ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿದ ಅವರು ಮಾತನಾಡಿದರು.

`ಕೃಷಿ ಮತ್ತು ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಯ ತಂತ್ರಜ್ಞಾನವು ಭಾರತದಲ್ಲಿ ಬೆಳೆಯುತ್ತಿದೆ. ಆಹಾರ, ಕೃಷಿ ವಿಜ್ಞಾನಿಗಳು ಇದನ್ನು ಇನ್ನಷ್ಟು ಸಬಲಗೊಳಿಸಲು ಅಪಾರ ಶ್ರಮಪಡುತ್ತಿದ್ದಾರೆ. ಇದರಿಂದಾಗಿ ಉದ್ಯೋಗಾವಕಾಶಗಳು ಹೆಚ್ಚಾಗುತ್ತಿವೆ. ಕೃಷಿ, ಪಶುಸಂಗೋಪನೆ, ಕ್ಷೀರ ಉತ್ಪಾದನೆ, ಸಾಗರ ಮತ್ತು ಒಳನಾಡು ಮತ್ಸ್ಯೋದ್ಯಮಗಳಲ್ಲಿ ಹೊಸ ವಿಧಾನಗಳು ಬಂದಿದ್ದು ಉತ್ಪಾದನೆ ಹೆಚ್ಚಾಗುತ್ತಿದೆ.

ಈ ಕ್ಷೇತ್ರಗಳಲ್ಲಿ ಕೌಶಲ್ಯಪೂರ್ಣ ಅಭ್ಯರ್ಥಿಗಳ ಬೇಡಿಕೆಯೂ ಹೆಚ್ಚಾಗುತ್ತಿದೆ. ಆದ್ದರಿಂದ ಕೃಷಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಸಿಗುತ್ತಿದ್ದು, ಕೃಷಿ ವಿಜ್ಞಾನ ಪದವೀಧರರಿಗೂ ವಧು ನೀಡಲು ಪಾಲಕರು ಮುಂದೆ ಬರುತ್ತಿದ್ದಾರೆ' ಎಂದು ಹಾಸ್ಯಭರಿತವಾಗಿ ಹೇಳಿದರು.

`ಮುಂದಿನ ದಿನಗಳಲ್ಲಿ ಆಹಾರ ಉತ್ಪಾದನೆಯನ್ನು ಹೆಚ್ಚಿಸಲು ಡಿಜಿಟಲ್, ನ್ಯಾನೋ ಮತ್ತು ಜೈವಿಕ ತಂತ್ರಜ್ಞಾನಗಳ ಯೋಗದಾನ ದೊಡ್ಡದಾಗಲಿದೆ. ಆದ್ದರಿಂದ ಈ ಕ್ಷೇತ್ರಗಳ ಅಭಿವೃದ್ಧಿಗೆ ಮಹತ್ವದ  ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ' ಎಂದರು.

`ಬಿತ್ತನೆ ಬೀಜಗಳ ಉತ್ಪಾದನೆಯಲ್ಲಿ ಹೊಸ ಹೊಸ ವಿಧಾನಗಳು ಬಂದಿವೆ. ಕೃಷಿ ಎಂಬುದು ಈಗ ಬಿತ್ತುವುದು ಮತ್ತು ಬೆಳೆಯುವುದು ಎಂಬುದಕ್ಕೆ ಮಾತ್ರ ಸೀಮಿತವಲ್ಲ. ಹೊಸ ತಳಿ, ಬೀಜ, ಸಂಕರಣೆ, ಶೇಖರಣೆ, ಬಳಕೆ, ಮೌಲ್ಯವರ್ಧನೆ ಮತ್ತು ಮಾರುಕಟ್ಟೆಯಲ್ಲಿ ಚಲಾವಣೆ ಗಳಂತಹ ಕೆಲಸಗಳೂ ಈಗ ಸೇರಿಕೊಂಡಿವೆ. ಇದರಿಂದ ಯುವಜನರಿಗೆ ಹೆಚ್ಚಿನ ಅವಕಾಶಗಳು ಇಲ್ಲಿವೆ' ಎಂದು ಪುನರುಚ್ಚರಿಸಿದರು.

`ಮತ್ಸ್ಯೋದ್ಯಮದಲ್ಲಿ ಉಪಗ್ರಹ ಆಧಾರಿತ ತಂತ್ರಜ್ಞಾನದ ಬಳಕೆಯಿಂದ ಉತ್ಪಾದನೆಯ ಪ್ರಮಾಣ ಹೆಚ್ಚುತ್ತಿದೆ. ಛತ್ತೀಸಗಢ ರಾಜ್ಯದಲ್ಲಿ ಪಂಜರ ಮೀನುಗಾರಿಕೆ ಹೆಚ್ಚುತ್ತಿದೆ. ಅಲ್ಲಿಯ ಯುವಜನರು ನದಿ ಮತ್ತು ಸಮುದ್ರಗಳಲ್ಲಿ ಕಬ್ಬಿಣದ ಪಂಜರಗಳನ್ನು ಇಡುತ್ತಾರೆ. ರಾತ್ರಿಯಿಡಿ ಕಾವಲು ಕಾಯ್ದು, ಬೆಳಿಗ್ಗೆ ಅದರಲ್ಲಿ ಶೇಖರವಾಗುವ ಮೀನುಗಳನ್ನು ಸಂಗ್ರಹಿಸಿ ಮಾರುಕಟ್ಟೆಗೆ ಕಳಿಸುತ್ತಿದ್ದಾರೆ. ಇದು ಲಾಭದಾಯಕ ವಿಧಾನವಾಗುತ್ತದೆ' ಎಂದರು.

ವಿಚಾರ ಸಂಕಿರಣದ ಕುರಿತು ಜೆಎಸ್‌ಎಸ್ ಮಹಾವಿದ್ಯಾ ಪೀಠದ ಗ್ರಾಮೀಣ ನಿರ್ದೇಶಕ ಡಾ. ಎಂ. ಮಹಾದೇವಪ್ಪ ಮಾತನಾಡಿದರು.

ಎಸಿಎಆರ್ ಉಪ ಮುಖ್ಯ ನಿರ್ದೇಶಕ ಡಾ. ಸ್ವಪನ್‌ಕುಮಾರ್ ದತ್ತಾ, ಬೆಂಗಳೂರಿನ ಎಫ್‌ವಿಸಿಕೆ ಅಧ್ಯಕ್ಷ ಪ್ರೊ. ಎನ್.ಆರ್. ಶೆಟ್ಟಿ, ಜೆಎಸ್‌ಎಸ್ ಕಾಲೇಜು ಪ್ರಾಚಾರ್ಯ ಪ್ರೊ. ಬಿ.ವಿ. ಸಾಂಬಶಿವಯ್ಯ ಮತ್ತಿತರರು ಹಾಜರಿದ್ದರು. ಎಫ್‌ವಿಸಿಕೆ ಕಾರ್ಯದರ್ಶಿ ಡಾ. ಪಿ.ಜಿ. ಚೆಂಗಪ್ಪ ವಂದಿಸಿದರು. ರಸಾಯನಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಡಾ. ಆರ್. ಸುಹಾಸ್ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT