ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿಗೆ ಆದ್ಯತೆ- ಯಾವ ಪುರುಷಾರ್ಥ: ಸಿದ್ದು

Last Updated 28 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು:  ‘85 ಸಾವಿರ ಕೋಟಿ ರೂಪಾಯಿ ಬಜೆಟ್‌ನಲ್ಲಿ ಕೃಷಿಗೆ ನೀಡಿರುವುದು ಕೇವಲ ಮೂರು ಸಾವಿರ ಕೋಟಿ ರೂಪಾಯಿ. ಆದರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೇಶದಲ್ಲಿಯೇ ಪ್ರಥಮ ಬಾರಿಗೆ ಕೃಷಿಗೆ ಪ್ರತ್ಯೇಕ ಬಜೆಟ್ ಮಂಡಿಸಿದ್ದೇನೆ ಎಂದು ಎಲ್ಲೆಡೆ ಡಂಗುರ ಸಾರುತ್ತಿದ್ದಾರೆ. ಇದರಲ್ಲಿ ಯಾವ ಪುರುಷಾರ್ಥವಿದೆ’ ಎಂದು ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡರು.

2011-12ನೇ ಸಾಲಿನ ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಸೋಮವಾರ ಸದನದಲ್ಲಿ ಮಾತನಾಡಿದ ಅವರು, ಹಿಂದೆ 70 ಸಾವಿರ ಕೋಟಿ ರೂ ಬಜೆಟ್ ಇದ್ದಾಗ ಕೃಷಿಗೆ 1800 ಕೋಟಿ ರೂ ನೀಡಲಾಗಿತ್ತು. ಈಗ ಬಜೆಟ್ ಗಾತ್ರ ಜಾಸ್ತಿಯಾಗಿರುವುದರಿಂದ ಕೃಷಿಗೆ ಸ್ವಲ್ಪ ಹೆಚ್ಚಿಗೆ ಹಣ ಸಿಕ್ಕಿದ್ದು, ರೈತರ ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು.

2008-09ರಲ್ಲಿ ಕೃಷಿಗೆ ನೀಡಿದ್ದ 2100 ಕೋಟಿ ರೂ ಪೈಕಿ 829 ಕೋಟಿ ರೂ ಮಾತ್ರ ಖರ್ಚಾಗಿದೆ ಎಂದು ಮಹಾಲೇಖಪಾಲರ ವರದಿ ಬಹಿರಂಗಪಡಿಸಿದೆ. ಇನ್ನು ಪಶುಸಂಗೋಪನೆ ಇಲಾಖೆಯಲ್ಲಿ 159 ಕೋಟಿ, ಸಮಾಜ ಕಲ್ಯಾಣ ಇಲಾಖೆಯಲ್ಲಿ 210 ಕೋಟಿ, ವಸತಿ ಇಲಾಖೆಯಲ್ಲಿ 140 ಕೋಟಿ, ಶಿಕ್ಷಣ ಇಲಾಖೆಯಲ್ಲಿ 476 ಕೋಟಿ, ನಗರಾಭಿವೃದ್ಧಿ ಇಲಾಖೆಯಲ್ಲಿ 2126 ಕೋಟಿ, ಲೋಕೋಪಯೋಗಿ ಇಲಾಖೆಯಲ್ಲಿ 1372 ಕೋಟಿ, ಜಲಸಂಪನ್ಮೂಲ ಇಲಾಖೆಯಲ್ಲಿ 1509 ಕೋಟಿ, ಇಂಧನ ಇಲಾಖೆಯಲ್ಲಿ 485 ಕೋಟಿ ರೂ ಖರ್ಚಾಗಿಲ್ಲ. ಇದು ಸಾಧನೆಯೇ ಎಂದು ಕೇಳಿದರು.

2008-09ರ ಬಜೆಟ್‌ನ ಒಟ್ಟು ಗಾತ್ರ 54 ಸಾವಿರ ಕೋಟಿ ರೂ. ಆದರೆ ಇದರಲ್ಲಿ 13,660 ಕೋಟಿ ರೂ ಖರ್ಚಾಗಿಲ್ಲ. ಅದೇ ರೀತಿ 2009-10ರಲ್ಲಿ 12 ಸಾವಿರ ಕೋಟಿ ರೂ ಖರ್ಚಾಗಿಲ್ಲ. ಬಜೆಟ್ ಗಾತ್ರದ ಶೇ 25ರಷ್ಟು ಹಣ ಖರ್ಚಾಗುತ್ತಿಲ್ಲ. ವಸ್ತುಸ್ಥಿತಿ ಹೀಗಿರುವಾಗ ಬಜೆಟ್ ಗಾತ್ರವನ್ನು ಹೆಚ್ಚಿಸಿದ್ದೇವೆ ಎಂದು ಹೇಳುವುದರಲ್ಲಿ ಅರ್ಥವಿಲ್ಲ ಎಂದರು.

ನಿಗದಿತ ಅವಧಿಯಲ್ಲಿ ಹಣ ಬಿಡುಗಡೆಯಾಗದೆ ಇರುವುದು ಹಾಗೂ ಸಂಪನ್ಮೂಲಗಳ ಸಂಗ್ರಹಣೆಯಲ್ಲಿ ಹಿನ್ನಡೆ ಆಗಿರುವುದರಿಂದ ಗುರಿ ಮುಟ್ಟಲು ಆಗಿಲ್ಲ. ಈ ವರ್ಷದ ಒಟ್ಟು ಯೋಜನಾಗಾತ್ರ 31 ಸಾವಿರ ಕೋಟಿ ರೂ ಆಗಿತ್ತು. ಆದರೆ 16,130 ಕೋಟಿ ರೂ ಮಾತ್ರ ಖರ್ಚು ಮಾಡಲು ಸಾಧ್ಯವಾಗಿದೆ. 10 ತಿಂಗಳಲ್ಲಿ ಶೇ 51ರಷ್ಟು ವೆಚ್ಚವಾಗಿದ್ದು, ಶೇ 49ರಷ್ಟು ಹಣವನ್ನು ಎರಡು ತಿಂಗಳಲ್ಲಿ ಖರ್ಚು ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು.

‘ಕೃಷಿಗೆ ಪ್ರತ್ಯೇಕ ಬಜೆಟ್ ಮಂಡಿಸಿರುವುದು ಇತಿಹಾಸವಲ್ಲ, ಯುದ್ಧಕ್ಕೆ ಹೊರಟವರಂತೆ ಹಣೆಗೆ ವೀರತಿಲಕವನ್ನು ಇಟ್ಟುಕೊಂಡು ಬಾಜಾ ಭಜಂತ್ರಿಯೊಂದಿಗೆ ಬಜೆಟ್ ಪ್ರತಿಗಳ ಸೂಟ್‌ಕೇಸ್‌ನೊಂದಿಗೆ ಯಡಿಯೂರಪ್ಪ ವಿಧಾನಸೌಧಕ್ಕೆ ಪಾದಯಾತ್ರೆ ಮಾಡಿದ್ದು ಇತಿಹಾಸ’ ಎಂದು ವ್ಯಂಗ್ಯವಾಡಿದರು.

‘ಕೇಂದ್ರ ಬಜೆಟ್‌ಗೂ ಮುನ್ನ ಯಡಿಯೂರಪ್ಪ ಬಜೆಟ್ ಮಂಡಿಸಿರುವುದು ನೋಡಿದರೆ ಮಧ್ಯಂತರ ಚುನಾವಣೆ ನಡೆಯಬಹುದು ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಯಡಿಯೂರಪ್ಪ ಪಕ್ಷ ಮತ್ತು ಸರ್ಕಾರದಲ್ಲಿ ಸಂಕಷ್ಟ ಎದುರಿಸುತ್ತಿದ್ದಾರೆ. ಹೀಗಾಗಿ ಬೇಗ ಚುನಾವಣೆ ನಡೆಯಬಹುದು ಅನಿಸುತ್ತಿದೆ. ಅವರು ಚುನಾವಣೆ ನಡೆಯುವುದಿಲ್ಲ ಎನ್ನುತ್ತಿದ್ದಾರೆ. ಈ ರೀತಿ ಅನೇಕ ಬಾರಿ ಹೇಳಿದರೆ ಚುನಾವಣೆ ನಡೆಯುತ್ತದೆ ಎಂದು ಅರ್ಥೈಸಿಕೊಳ್ಳಬೇಕಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT