ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿಗೆ ಒತ್ತು, ಉದ್ಯಮಕ್ಕೆ ನಿರಾಸೆ

Last Updated 28 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ತಡೆಯುವ ಹಾಗೂ ಜನಸಾಮಾನ್ಯರ ಜೀವನ ಮಟ್ಟವನ್ನು ಸುಧಾರಿಸುವ ಕಸರತ್ತನ್ನು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಮಾಡಿದ್ದಾರೆ. ಏರುತ್ತಿರುವ ಬೆಲೆ ಏರಿಕೆಯನ್ನು ತಡೆಯುವುದು ದೊಡ್ಡ ಸವಾಲಾಗಿತ್ತು. ಅದನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ಕೃಷಿಗೆ ಹೆಚ್ಚಿನ ಒತ್ತು ನೀಡಲಾಗಿದೆ.

ಜನ ಸಾಮಾನ್ಯರಿಗೆ ಹೊರೆಯಾಗದ ಉತ್ತಮ ಬಜೆಟ್ ನೀಡುವುದರ ಜೊತೆಗೆ ಹಣದುಬ್ಬರ ತಡೆಯುವ ಪ್ರಯತ್ನ ನಡೆಸಿದ್ದಾರೆ. ಆಹಾರ ಭದ್ರತಾ ಕಾಯ್ದೆ ಜಾರಿ ಬಗ್ಗೆ ಪ್ರಸ್ತಾಪಿಸಿದ್ದಾರೆ. ಕೃಷಿ ಕ್ಷೇತ್ರ ಬೆಳವಣಿಗೆ ಆದರೆ ಹಣದುಬ್ಬರವನ್ನು ತಡೆಯಬಹುದು ಎಂಬುದನ್ನು ಪ್ರಣವ್ ಅರ್ಥ ಮಾಡಿಕೊಂಡಂತೆ ಕಾಣುತ್ತದೆ.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಜಾರಿಗೆ ಬಂದ ನಂತರ ಗ್ರಾಮೀಣ ಭಾಗದಲ್ಲಿ ಅರೆ ಹೊಟ್ಟೆ ತಿನ್ನುತ್ತಿದ್ದವರು, ಹೊಟ್ಟೆ ತುಂಬಾ ತಿನ್ನಲು ಶುರು ಮಾಡಿದ್ದಾರೆ. ಇದರಿಂದಾಗಿ ಆಹಾರ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗಿದೆ. ಆಹಾರ ಧಾನ್ಯಗಳ ಉತ್ಪಾದನೆ 244 ದಶಲಕ್ಷ ಟನ್‌ಗೆ ಏರಿದೆ, ಆದರೆ ಬೇಡಿಕೆ ಸಹ ಹೆಚ್ಚಾಗಿದೆ. ಹೀಗಾಗಿ ಬೆಲೆ ಏರಿಕೆ ಉಂಟಾಗಿದೆ.

ಒಟ್ಟು ದೇಶಿಯ ಉತ್ಪನ್ನಕ್ಕೆ ಕೃಷಿಯ ಕೊಡುಗೆ ಸದ್ಯ ಶೇ 18ರಷ್ಟಿದೆ. ಇದನ್ನು ಜಾಸ್ತಿ ಮಾಡಬೇಕು ಎಂಬ ದೃಷ್ಟಿಯಿಂದ 2005ರ ಕೃಷಿ ನೀತಿಯಲ್ಲಿ ಡಾ.ಎಂ.ಎಸ್.ಸ್ವಾಮಿನಾಥನ್ ಅವರು ಎರಡನೇ ಹಸಿರು ಕ್ರಾಂತಿಯ ಅಗತ್ಯವಿದೆ ಎಂದು ಹೇಳಿದ್ದರು. ಉತ್ಪಾದಕತೆಯನ್ನು ಜಾಸ್ತಿ ಮಾಡುವತ್ತ ಗಮನಹರಿಸಬೇಕು ಎಂದು ಸಲಹೆ ಮಾಡಿದ್ದರು. ಈ ಸಲದ ಬಜೆಟ್‌ನಲ್ಲಿ ಅದಕ್ಕೆ ಒತ್ತು ನೀಡಲಾಗಿದೆ.

ಮಣ್ಣಿನ ಆರೋಗ್ಯ ಕಾಪಾಡುವುದು, ಜೈವಿಕ ರಸಗೊಬ್ಬರಗಳ ಬಳಕೆ, ಹಸಿರು ಗೊಬ್ಬರ ಬಳಕೆ, ಉಗ್ರಾಣ, ಶೀತಲೀಕರಣ, ಮಾರುಕಟ್ಟೆ, 15 ಹೆಚ್ಚುವರಿ ಆಹಾರ ಪಾರ್ಕ್‌ಗಳ ನಿರ್ಮಾಣ, ಕಡಿಮೆ ಬಡ್ಡಿದರದಲ್ಲಿ ರೈತರಿಗೆ ಸಾಲ ಸೇರಿದಂತೆ ಕೃಷಿಕರಿಗೆ ಅನುಕೂಲವಾಗುವ ಹಲವು ಅಂಶಗಳತ್ತ ಹೆಚ್ಚಿನ ಆದ್ಯತೆ ನೀಡಿರುವುದು ಒಳ್ಳೆಯ ಬೆಳವಣಿಗೆ.

ಶೇ 59ರಷ್ಟಿರುವ ಕೃಷಿಕರ ಜೀವನಮಟ್ಟ ಸುಧಾರಿಸಬೇಕು. ಎಲ್ಲ ವಲಯಗಳ ಬೆಳವಣಿಗೆಯಾಗಬೇಕೆಂದು 11ನೇ ಪಂಚವಾರ್ಷಿಕ ಯೋಜನೆಯಲ್ಲಿ ಹೇಳಲಾಗಿತ್ತು. ಈಗ ಅದನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ.

ಅದೇ ರೀತಿ ಗ್ರಾಮೀಣಾಭಿವೃದ್ದಿಗೆ ಒತ್ತು ನೀಡಿದ್ದಾರೆ. ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ ಈ ಬಾರಿ ಹೆಚ್ಚಿನ ಹಣ ನೀಡಲಾಗಿದೆ. ಶಿಕ್ಷಣ, ಆರೋಗ್ಯಕ್ಕೆ ಹೆಚ್ಚಿನ ಹಣ ನೀಡಲಾಗಿದ್ದು, ಇದರಿಂದ  ಬಡವರ ಮಕ್ಕಳಿಗೆ ಅನುಕೂಲವಾಗಲಿದೆ.

ಆದರೆ ಕೈಗಾರಿಕೆ, ನಗರಾಭಿವೃದ್ಧಿಯತ್ತ ಹೆಚ್ಚು ಗಮನಕೊಟ್ಟಿಲ್ಲ. ಕೈಗಾರಿಕೋದ್ಯಮಿಗಳ ನಿರೀಕ್ಷೆ ಹುಸಿಯಾಗಿದೆ. ಸದ್ಯ ಕೈಗಾರಿಕಾ ಬೆಳವಣಿಗೆ ದರ ಶೇ 8ರಷ್ಟು ಇದ್ದು, ಇದನ್ನು ಜಾಸ್ತಿ ಮಾಡಲು ಒತ್ತು ನೀಡಬೇಕಿತ್ತು. ಶೇ 18.5ರ ಕನಿಷ್ಠ ಪರ್ಯಾಯ ತೆರಿಗೆ, ಶೇ 33.5ರ ಕಾರ್ಪೋರೆಟ್ ತೆರಿಗೆ ಬಗ್ಗೆ ಚಕಾರ ಎತ್ತಿಲ್ಲ.

ಸರಕು ಮತ್ತು ಸೇವಾ ತೆರಿಗೆ ಜಾರಿ ಸಂಬಂಧ ಸಂವಿಧಾನಕ್ಕೆ ತಿದ್ದುಪಡಿ ತರುವುದಾಗಿ ಹೇಳಿದ್ದಾರೆ. ಆದರೆ ಈ ತೆರಿಗೆ ಜಾರಿಗೆ ಇನ್ನೂ ಒಂದು ವರ್ಷ ಬೇಕಾಗಬಹುದು. ತೆರಿಗೆ ವ್ಯವಸ್ಥೆಯನ್ನು ಸುಧಾರಿಸುವ ನೇರ ತೆರಿಗೆ ಕೋಡ್ ಸಹ 2012ಕ್ಕೆ ಜಾರಿಯಾಗಬಹುದು. ಇವೆರಡೂ ಈ ವರ್ಷವೇ ಜಾರಿಗೆ ಬಂದಿದ್ದರೆ ಗ್ರಾಹಕರ ಮೇಲೆ 3-4 ಹಂತಗಳಲ್ಲಿ ಬೀಳುವ ತೆರಿಗೆಯನ್ನುತಪ್ಪಿಸಬಹುದಾಗಿತ್ತು. ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅನುಕೂಲವಾಗುತ್ತಿತ್ತು.

ಸದ್ಯ ಬೆಳವಣಿಗೆ ದರ ಶೇ 8.6ರಷ್ಟು ಇದ್ದು, ಇದನ್ನು ಶೇ 9ಕ್ಕೆ ಏರಿಸುವುದಾಗಿ ಹೇಳಿದ್ದಾರೆ. ಇದು ದೊಡ್ಡ ವಿಷಯವಲ್ಲ, ಆದರೆ ಯಾವ ವಲಯದ ಬೆಳವಣಿಗೆ ಆಗುತ್ತದೆಂಬುದು ಮುಖ್ಯ. ಕೃಷಿ ಬೆಳವಣಿಗೆ ಶೇ 5.4ರಷ್ಟು ಇದ್ದು, ಶೇ 6ಕ್ಕೆ ತೆಗೆದುಕೊಂಡು ಹೋದರೆ ಅನುಕೂಲವಾಗಲಿದೆ.

ಮಹಿಳೆಯರಿಗೆ ಆದಾಯ ತೆರಿಗೆ ಪಾವತಿ ಮಿತಿಯನ್ನು ಜಾಸ್ತಿ ಮಾಡಬಹುದಿತ್ತು. ಅಲ್ಲದೆ ಶೇ 20, 30ರಷ್ಟು ತೆರಿಗೆ ಪಾವತಿಸುವ ವರ್ಗಕ್ಕೆ ಉಳಿತಾಯಕ್ಕೆ ಅವಕಾಶ ಮಾಡಿಕೊಟ್ಟಿಲ್ಲ. ಇನ್ನು ಬಡವರಿಗೆ ನೇರವಾಗಿ ಸಬ್ಸಿಡಿ ತಲುಪುವಂತೆ ಮಾಡಲು ಕ್ರಮಕೈಗೊಂಡಿರುವುದು ಸ್ವಾಗತಾರ್ಹ. ಆಹಾರ, ರಸಗೊಬ್ಬರ, ಸೀಮೆಎಣ್ಣೆ ಇತ್ಯಾದಿಗಳಿಗೆ ನೀಡುವ ಸಬ್ಸಿಡಿ ಮಧ್ಯವರ್ತಿಗಳ ಪಾಲಾಗುತ್ತಿತ್ತು. ಇದನ್ನು ತಪ್ಪಿಸಲು ಸರ್ಕಾರ ಮುಂದಾಗಿದೆ. ಒಟ್ಟಾರೆ ಬಜೆಟ್ ಬಗ್ಗೆ ಹೇಳುವುದಾದರೆ ಅರ್ಥಶಾಸ್ತ್ರಜ್ಞರಿಗೆ ಮಾತನಾಡಲು ಸರಕು ಸಿಗುತ್ತಿಲ್ಲ.

-ಡಾ. ಅಬ್ದುಲ್ ಅಜೀಜ್
ಆರ್ಥಿಕ ತಜ್ಞರು, ರಾಜ್ಯ ಯೋಜನಾ ಮಂಡಳಿಯ ಮಾಜಿ ಸದಸ್ಯರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT