ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿಗೆ ಒತ್ತು, ಗ್ರಾಮೀಣಾಭಿವೃದ್ಧಿ ನಿರ್ಲಕ್ಷ್ಯ

Last Updated 24 ಫೆಬ್ರುವರಿ 2011, 18:50 IST
ಅಕ್ಷರ ಗಾತ್ರ

ಕೃಷಿ, ನೀರಾವರಿಗೆ ಒತ್ತು ನೀಡಿರುವುದು ಒಳ್ಳೆಯದು. ಆದರೆ ಗ್ರಾಮೀಣಾಭಿವೃದ್ಧಿ, ಆರೋಗ್ಯ ಕ್ಷೇತ್ರವನ್ನು ನಿರ್ಲಕ್ಷಿಸಿರುವುದು, ಮೌಲ್ಯವರ್ಧಿತ ತೆರಿಗೆಯನ್ನು ಜಾಸ್ತಿ ಮಾಡಿರುವುದು ಸರಿಯಲ್ಲ. ಇದರಿಂದ ಬೆಲೆ ಏರಿಕೆ ಮತ್ತಷ್ಟು ಜಾಸ್ತಿಯಾಗಿ ಜನರ ಜೀವನ ಸಂಕಷ್ಟಕ್ಕೆ ಸಿಲುಕಲಿದೆ.

ಶೇ 67ರಷ್ಟು ಜನ ಹಳ್ಳಿಗಳಲ್ಲಿ ವಾಸ ಮಾಡುವ ಗ್ರಾಮೀಣ ಪ್ರದೇಶಗಳಿಗೆ ಶೇ 4ರಷ್ಟು ಹಣ ನೀಡಿ, ಶೇ 33ರಷ್ಟು ಜನ ವಾಸ ಮಾಡುವ ನಗರಾಭಿವೃದ್ಧಿಗೆ ಶೇ 9ರಷ್ಟು ಹಣ ನೀಡಿರುವುದು ಸರಿಯಲ್ಲ. ಇದರಿಂದ ಅಭಿವೃದ್ಧಿಯಲ್ಲಿ ಏರುಪೇರು ಆಗಲಿದೆ. ಶಿಕ್ಷಣಕ್ಕೆ ಶೇ 7ರಷ್ಟು ಹಣ ನೀಡಿರುವುದು ಒಳ್ಳೆಯದು. ಆದರೆ ಆರೋಗ್ಯಕ್ಕೆ ಶೇ 3ರಷ್ಟು ಹಣ ನೀಡುವ ಮೂಲಕ ನಿರ್ಲಕ್ಷ್ಯ ಮಾಡಲಾಗಿದೆ.
ಕಾಯಿಲೆಗಳು ಜಾಸ್ತಿಯಾಗಿ ಜನ ಆಸ್ಪತ್ರೆಗಳಿಗೆ ಹೋಗುವ ಪ್ರಮಾಣ ಹೆಚ್ಚಾಗಿದೆ. ಹೀಗಿರುವಾಗ ಕಡಿಮೆ ಹಣ ನೀಡಿರುವುದು ತಪ್ಪು. ಮಾನವ ಸೂಚ್ಯಂಕವನ್ನು ತಲಾ ಆದಾಯ, ಶಿಕ್ಷಣ ಮತ್ತು ಆರೋಗ್ಯ (ಆಯಸ್ಸು) ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಈ ಮೂರು ಅಂಶಗಳಲ್ಲಿ ಏರಿಕೆ ಆಗದೆ ಇದ್ದರೆ ಅಭಿವೃದ್ಧಿ ಸಾಧಿಸುವುದು ಕಷ್ಟಕರ. ಮೌಲ್ಯವರ್ಧಿತ ತೆರಿಗೆ ಪ್ರಮಾಣವನ್ನು ಶೇ 13.5ರಿಂದ 14ಕ್ಕೆ ಏರಿಸಿರುವುದು ಬೆಲೆ ಏರಿಕೆಗೆ ನಾಂದಿಯಾಗಲಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ಮುಂಚೆ ಒಂದು ಲಕ್ಷ ಕೋಟಿ ರೂಪಾಯಿಗೆ ಬಜೆಟ್ ಗಾತ್ರವನ್ನು ತೆಗೆದುಕೊಂಡು ಹೋಗುವುದಾಗಿ ಹೇಳಿದ್ದರು. ಆದರೆ ಈಗ 85 ಸಾವಿರ ಕೋಟಿ ರೂಪಾಯಿಗೆ ಅಷ್ಟೇ ಏರಿಸಲು ಸಾಧ್ಯವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಬಜೆಟ್ ಗಾತ್ರ 15 ಸಾವಿರ ಕೋಟಿ ರೂಪಾಯಿ ಜಾಸ್ತಿಯಾಗಿದೆ. ಇಷ್ಟೊಂದು ಹಣವನ್ನು ಎಲ್ಲಿಂದ ತರುತ್ತಾರೆ ಎಂಬುದು ಈಗಿರುವ ಪ್ರಶ್ನೆ.

‘ಕಳೆದ ವರ್ಷ ಯೋಜನಾ ಗಾತ್ರ 31 ಸಾವಿರ ಕೋಟಿ ರೂಪಾಯಿ ಇತ್ತು. ಈ ವರ್ಷ 33 ಸಾವಿರ ಕೋಟಿ ರೂಪಾಯಿ ಆಗಬಹುದು. ಅಂದರೆ ಶೇ 6ರಷ್ಟು ಹೆಚ್ಚಾಗಬಹುದು. ಇದು ತುಂಬಾ ಕಡಿಮೆ. ಬಜೆಟ್‌ನ ಒಟ್ಟಾರೆ ಗಾತ್ರ ನೋಡಿದರೆ ಈ ಪ್ರಮಾಣ ಇನ್ನೂ ಹೆಚ್ಚಾಗಬೇಕಿತ್ತು.’

ಕೃಷಿಗೆ ಪ್ರತ್ಯೇಕ ಬಜೆಟ್ ಮಂಡಿಸಿರುವುದು ಒಳ್ಳೆಯದು. ಕಳೆದ ವರ್ಷ ಕೃಷಿಗೆ ಶೇ 7ರಷ್ಟು ಹಣ ನೀಡಿದ್ದರೆ, ಈ ವರ್ಷ ಶೇ 10ರಷ್ಟು ನೀಡಲಾಗಿದೆ. ಅಲ್ಲದೆ ನೀರಾವರಿಗೆ ಶೇ 18ರಷ್ಟು, ಗ್ರಾಮೀಣಾಭಿವೃದ್ಧಿಗೆ ಶೇ 4ರಷ್ಟು ಸೇರಿ ಒಟ್ಟಾರೆ ಶೇ 32ರಷ್ಟು ಹಣ ನೀಡಲಾಗಿದೆ. ಕಳೆದ ಬಾರಿ ಈ ಮೂರು ಕ್ಷೇತ್ರಗಳಿಗೆ ಶೇ 26ರಷ್ಟು ಮಾತ್ರ ಹಣ ನೀಡಲಾಗಿತ್ತು. ಪ್ರತ್ಯೇಕ ಬಜೆಟ್ ಮಂಡನೆಯಿಂದಾಗಿ ಕೃಷಿಗೆ ನೀಡಿರುವ ಹಣವನ್ನು ಬೇರೆ ಇಲಾಖೆಗಳಿಗೆ ಹಸ್ತಾಂತರ ಮಾಡಲು ಬರುವುದಿಲ್ಲ. ಇದು ಒಳ್ಳೆಯ ಬೆಳವಣಿಗೆ.

2006ರ ಕೃಷಿ ನೀತಿಯನ್ನು ಅನುಷ್ಠಾನಗೊಳಿಸುವತ್ತ ಹೆಜ್ಜೆ ಇಡಲಾಗಿದೆ. ಸುವರ್ಣ ಭೂಮಿ ಯೋಜನೆ, ಶೇ 1ರ ಬಡ್ಡಿದರದಲ್ಲಿ ಸಾಲ, ಸಬ್ಸಿಡಿ ಹೆಚ್ಚಳ, ವಿದ್ಯುತ್ ಕ್ಷೇತ್ರಕ್ಕೆ ಆದ್ಯತೆ  ಇದೆಲ್ಲ ಒಳ್ಳೆಯದು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT