ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿಗೆ ನೀರು ಬಳಕೆ: ದುರಾಸೆ ಬೇಡ

Last Updated 19 ಫೆಬ್ರುವರಿ 2011, 9:10 IST
ಅಕ್ಷರ ಗಾತ್ರ

ಬೆಳಗಾವಿ: ಕೃಷಿ ಕ್ಷೇತ್ರದಲ್ಲಿ ಹೆಚ್ಚು ನೀರು ಬಳಸುವುದರಿಂದ ಉತ್ತಮ ಬೆಳೆ ತೆಗೆಯಬಹುದು ಎಂಬ ಹುಚ್ಚು ಕಲ್ಪನೆ ಅನೇಕ ರೈತರಲ್ಲಿದ್ದು, ಕೃಷಿ ಭೂಮಿ ಜವಳು ಪ್ರದೇಶವಾಗಿ ಮಾರ್ಪಡುತ್ತಿದೆ ಎಂದು ರಾಜ್ಯ ಜಲಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಿ. ಸತ್ಯಮೂರ್ತಿ ಶುಕ್ರವಾರ ಇಲ್ಲಿ ಹೇಳಿದರು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಇಂಧನ ಹಾಗೂ ಪರಿಸರ ಉತ್ಸವ, ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ನೀರು ಬಳಕೆಯಲ್ಲೂ ಸಮತೋಲನ ಇರಬೇಕು. ಎಲ್ಲವೂ ಅತಿಯಾದರೆ ಸಮಸ್ಯೆಗಳು ತನ್ನಿಂತಾನಾಗಿಯೇ ಹುಟ್ಟಿಕೊಳ್ಳುತ್ತವೆ. ರೈತರು ಭೂಮಿಯಲ್ಲಿ ಅತಿಯಾಗಿ ನೀರು ನಿಲ್ಲಿಸಿದ ಕಾರಣಕ್ಕೆ ಪ್ರಸ್ತುತ ಜವಳು ಭೂಮಿಯನ್ನು ಪರಿವರ್ತಿಸುವ ಯೋಜನೆ ಹಮ್ಮಿಕೊಳ್ಳಬೇಕಾದ ಅನಿವಾರ್ಯತೆ ಉಂಟಾಗಿದೆ ಎಂದು ತಿಳಿಸಿದರು.

ಈ ಹಿಂದೆ ನೀರಿರುವ ಪ್ರದೇಶದಲ್ಲಿ ಜನವಸತಿ ಕಂಡು ಬರುತ್ತಿತ್ತು. ಆದರೆ ಈಗಿನ ಪದ್ಧತಿಯಲ್ಲಿ ನಾವಿರುವ ಕಡೆಗೇ ನೀರನ್ನು ಹರಿಸುವ ಹರಸಾಹಸ ನಡೆಯುತ್ತಿದೆ. ಈ ಪರಿಸರವನ್ನೇ ಬದಲಾಯಿಸುವ ಪ್ರಯತ್ನ ನಡೆಯುತ್ತಿದೆ. ಹೋದಲ್ಲೆಲ್ಲ ಕಾಂಕ್ರೀಟ್ ಸಾಮ್ರಾಜ್ಯವನ್ನೇ ನಿರ್ಮಿಸುತ್ತಿದ್ದೇವೆ. ಕುಡಿಯುವ ನೀರು ಕಲುಷಿತಗೊಳ್ಳುತ್ತಿದೆ. ಜತೆಗೆ ಜನರ ಮನಸ್ಸೂ ಕಲುಷಿತಗೊಳ್ಳುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಮುಖ್ಯವಾಗಿ ನೀರು ನಿರ್ವಹಣೆ ಕುರಿತು ಸಮರ್ಪಕ ಯೋಜನೆ ಜಾರಿಗೆ ಬರಬೇಕು. ಹೊಸ ಯೋಜನೆಗಳನ್ನು ರೂಪಿಸುವ ಜತೆಗೆ ಜಾರಿಯಲ್ಲಿರುವ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು. ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎನ್.ಲಕ್ಷ್ಮಣ ರಾವ್ ಪೇಶ್ವೆ ಅವರು ಸಾರ್ವಜನಿಕ ಸಂಪರ್ಕ ಸಂದರ್ಭದಲ್ಲಿ ಪರಿಸರದ ಕುರಿತೂ ಚಿಂತಿಸಲಾಗುತ್ತಿದೆ. ಅಭಿವೃದ್ಧಿ ಸಂದರ್ಭದಲ್ಲೂ ಸಾಧಕ, ಬಾಧಕಗಳನ್ನು ಗಮನಿಸಲಾಗುತ್ತದೆ. ಪರಿಸರ ಹಾಗೂ ಅಭಿವೃದ್ಧಿ ಪೂರಕವಾಗಿ ನಡೆಯಬೇಕು ಎಂದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಯೋಜನಾ ಆಯೋಗದ ಉಪಾಧ್ಯಕ್ಷ ರಾಮಚಂದ್ರ ಗೌಡ, ವಿಟಿಯು ಕುಲಪತಿ ಡಾ. ಎಚ್.ಮಹೇಶಪ್ಪ, ಡಾ.ಎಸ್.ಎ.ಕೋರಿ, ಸಿ. ಜಗನ್ನಾಥ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT