ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿಗೆ ಯಂತ್ರದ ಕೈಗಳು

ಬಾದಾಮಿ ನಾಡಿನಿಂದ, ಸರಣಿ– 4
Last Updated 21 ಜುಲೈ 2014, 19:30 IST
ಅಕ್ಷರ ಗಾತ್ರ

ಬಾದಾಮಿ ಮರಗಳ ಸಾಲಿನಲ್ಲಿ ಯುದ್ಧ ಟ್ಯಾಂಕರ್‌ನಂತೆ ಚಲಿಸುತ್ತ ಬಂದ ಯಂತ್ರವೊಂದು ಬಾದಾಮಿ ಮರದ ಬಳಿ ನಿಂತಿತು. ಯಂತ್ರದ ಮುಂಭಾಗದಲ್ಲಿ ಎರಡು ದೊಡ್ಡ ಕೈಗಳು ಎದುರಿಗಿದ್ದ ಮರದ ಬುಡವನ್ನು ತಬ್ಬಿಕೊಂಡು, ಮುಕ್ಕಾಲು ನಿಮಿಷ ಅಲುಗಾಡಿಸಿದವು. ತಕ್ಷಣ, ಮರದಿಂದ ಬಾದಾಮಿ ಕಾಯಿಗಳು ಸುರಿಯಲಾರಂಭಿಸಿದವು. ಮರದ ಬುಡ ಬಿಡಿಸಿಕೊಂಡ ಯಂತ್ರ, ಮುಂದಿನ ಮರದತ್ತ ಸಾಗಿತು. ಹೀಗೆ ಆ ಯಂತ್ರ 15 ರಿಂದ 20 ನಿಮಿಷದಲ್ಲಿ ಒಂದು ಸಾಲಿನ ಬಾದಾಮಿ ಮರಗಳಿಂದ ಕಾಯಿಗಳನ್ನು ಕೊಯ್ಲು ಮಾಡಿತು.

ಮರ ಅಲುಗಾಡಿಸುವ ಯಂತ್ರದ ಕೆಲಸ ಪೂರ್ಣಗೊಳ್ಳುತ್ತಲೇ, ಹಿಂದಿನಿಂದ ಅದೇ ಸಾಲಿನಲ್ಲಿ ಅಷ್ಟೇ ಗಾತ್ರದ ಯಂತ್ರವೊಂದು ಬಂದು ನಿಂತಿತು. ಆ ಯಂತ್ರದ ಮುಂದೆ ಮತ್ತು ಹಿಂದೆ ಎರಡು ಕೈಗಳಲ್ಲಿ ಬ್ರಷ್ ಗಳಿದ್ದವು. ಆ ಯಂತ್ರ ಒಂದು ಸಾರಿ ಬಾದಾಮಿ ಕೊಯ್ಲಾದ ಜಾಡಿನಲ್ಲಿ ಚಲಿಸುತ್ತಾ, ನೆಲದ ಮೇಲೆ ಹರಡಿಕೊಂಡಿದ್ದ ಬಾದಾಮಿ ಕಾಯಿಗಳನ್ನೆಲ್ಲ ಸಿಪ್ಪೆಸಹಿತ ನುಂಗಿ, ಹಿಂಬದಿಯಲ್ಲಿದ್ದ ಟ್ರೇಲರ್ಗೆ ತುಂಬಿಸಿಕೊಂಡು, ಬಾದಾಮಿ ತೋಟದ ಕೊನೆಯಲ್ಲಿ ನಿಂತಿದ್ದ ಲಾರಿಗೆ ತುಂಬಿಸಿತು. ಕೆಲವೇ ಗಂಟೆಗಳಲ್ಲಿ ಎರಡು ಯಂತ್ರಗಳು, ಇಬ್ಬರು ಚಾಲಕರು, ಒಂದು ಎಕರೆ ಬಾದಾಮಿ ತೋಟದ ಕೊಯ್ಲು ಪೂರ್ಣಗೊಳಿಸಿದರು.

ಕ್ಯಾಲಿಫೋರ್ನಿಯಾದ ಮಡೆಸ್ಟೋದಲ್ಲಿನ ಬಾದಾಮಿ ಮಂಡಳಿಯ ಕಚೇರಿಯಲ್ಲಿ ಪ್ರದರ್ಶಿಸಿದ ಈ ವಿಡಿಯೊ ಕ್ಲಿಪ್ಪಿಂಗ್ನಲ್ಲಿ, ಬಾದಾಮಿ ಕ್ಷೇತ್ರದಲ್ಲಿನ ಯಾಂತ್ರೀಕರಣದ ವಿಶ್ವರೂಪವೇ ತೆರೆದುಕೊಂಡಿತು. ಅಲ್ಲಿಯವರೆಗೂ, ಸಾವಿರಾರು ಎಕರೆಯಲ್ಲಿನ ಲಕ್ಷಾಂತರ ಬಾದಾಮಿ ಮರಗಳಿಂದ ಕಾಯಿಗಳನ್ನು ಹೇಗೆ ಕೊಯ್ಯುತ್ತಾರೆ? ಎಷ್ಟು ಮಂದಿ ಕಾರ್ಮಿಕರು ಬೇಕಾಗುತ್ತಾರೆ? ಎಷ್ಟು ಸಮಯ ಹಿಡಿಯುತ್ತದೆ? ಕಾರ್ಮಿಕರ ಕೂಲಿ ಎಷ್ಟಾಗಬಹುದು? ಅವರನ್ನೆಲ್ಲ ಎಲ್ಲಿಂದ ಕರೆತರುತ್ತಾರೆ? ಹೇಗೆ ಕೊಯ್ಲು ಮಾಡುತ್ತಾರೆ..? ಎಂದು ಮನಸ್ಸಿನಲ್ಲಿ ಪೋಣಿಸಿಕೊಂಡಿದ್ದ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಕ್ಕಿತು.

ಯಾಂತ್ರೀಕರಣ ಅನಿವಾರ್ಯ
ಬಾದಾಮಿ ಕೃಷಿಯಲ್ಲಿ ಕನಿಷ್ಠ 100 ಎಕರೆಯಿಂದ ಗರಿಷ್ಠ 15 ಸಾವಿರ ಎಕರೆಯ ಹಿಡುವಳಿದಾರರಿದ್ದಾರೆ. ಜನಸಂಖ್ಯೆ ಕಡಿಮೆಯಿರುವ ಈ ಕೌಂಟಿಗಳಲ್ಲಿ ನಮ್ಮ ದೇಶದಲ್ಲಿರುವಂತೆ ಇಲ್ಲೂ ಕೂಲಿ ಕಾರ್ಮಿಕರ ಕೊರತೆ ಇದೆ. ಕೂಲಿಕಾರ್ಮಿಕರ ಸಮಸ್ಯೆ ನಿವಾರಣೆ, ಸಮಯದ ಉಳಿತಾಯ, ಕೊಯ್ಲು ಮತ್ತು ಕೊಯ್ಲೋತ್ತರದಲ್ಲಿ ವೇಸ್ಟೇಜ್ ನಿಯಂತ್ರಿಸುವುದಕ್ಕಾಗಿ ಕೃಷಿಯಲ್ಲಿ ಯಾಂತ್ರೀಕರಣ ಅನಿವಾರ್ಯ ಎನ್ನುತ್ತಾರೆ ಬೆಳೆಗಾರರು.

ಕೆಲವು ವರ್ಷಗಳ ಹಿಂದೆ ಕ್ಯಾಲಿಫೋರ್ನಿಯಾ ಫಾರ್ಮ್ ಬ್ಯೂರೊ ಫೆಡರೇಷನ್ ನಡೆಸಿದ ಐದು ವರ್ಷಗಳ ಅಧ್ಯಯನದ ಪ್ರಕಾರ, ಕ್ಯಾಲಿಫೋರ್ನಿಯಾದ ಕೃಷಿ ಜಮೀನಿನಲ್ಲಿ ಕಾರ್ಮಿಕರ ಕೊರತೆ ಇರುವುದು ಉಲ್ಲೇಖವಾಗಿತ್ತು. ಇಂಥ ಕಾರಣಗಳಿಂದಲೇ ಬಾದಾಮಿ ತೋಟದಲ್ಲಿ ಯಂತ್ರ ಬಳಕೆ ಅನಿವಾರ್ಯವಾಗಿದೆ.
ಕಾರ್ಮಿಕರ ಕೊರತೆ ನೀಗಿಸಲು ಹಾಗೂ ಪರಿಣಾಮಕಾರಿ ಉತ್ಪನ್ನವನ್ನು ಗ್ರಾಹಕರಿಗೆ ನೀಡಲು ಬಾದಾಮಿ ಕೃಷಿಯ ಎಲ್ಲ ಹಂತಗಳಲ್ಲೂ ಯಂತ್ರಗಳನ್ನು ಬಳಸಲಾಗುತ್ತಿದೆ. ಈ ಯಾಂತ್ರೀಕರಣ ಕೂಲಿ ಕಾರ್ಮಿಕರ ಕೊರತೆ ಎದುರಿಸುತ್ತಿರುವ ಭಾರತದಂತಹ ಕೃಷಿ ಆಧರಿತ ರಾಷ್ಟ್ರಗಳನ್ನು ಬೆರಗಿನಿಂದ ನೋಡುವಂತೆ ಮಾಡುತ್ತದೆ.

ಅಡಿಕೆ ಕೊಯ್ಯುವ, ಸಿಪ್ಪೆ ಬಿಡಿಸುವ, ತೆಂಗಿನ ಸಿಪ್ಪೆ ಸುಲಿಯುವಂತಹ ಯಂತ್ರಗಳನ್ನು ನೋಡಿ ರುವ ನಮಗೆ ಈ ಯಂತ್ರಲೋಕ ವಿಸ್ಮಯ ಜಗತ್ತನ್ನೇ ಸೃಷ್ಟಿಸುತ್ತದೆ. ಅಂದ ಹಾಗೆ, ಯಂತ್ರಗಳನ್ನು ಬಳಸುವ ಬಾದಾಮಿ ಬೆಳೆಗಾರರು, ಕೃಷಿ ಆರಂಭದಲ್ಲೇ ಸಮತಟ್ಟಾದ ಜಾಗ ಆಯ್ಕೆ ಮಾಡಿಕೊಂಡು ತೋಟ ಮಾಡುತ್ತಾರೆ. ಮರಗಳ ನಡುವೆ ಯಂತ್ರಗಳ ಸಂಚಾರಕ್ಕೆ ಅನುಕೂಲವಾಗುವಂತೆ ಸ್ಥಳಾವಕಾಶ ಕಲ್ಪಿಸಿರುತ್ತಾರೆ. ತಗ್ಗು ದಿಬ್ಬಗಳಿಲ್ಲದೇ, ಯಾವುದೇ ಅಡೆತಡೆಗಳಿಲ್ಲದೇ ಯಂತ್ರಗಳು ಸಾಗಾಟ ನಡೆಸಲು, ಕೊಯ್ಲಾದ ಬಾದಾಮಿ ಸಂಗ್ರಹಿಸಲು ತೋಟಗಳ ಬಳಿಯೇ ಸಂಸ್ಕರಣಾ ಘಟಕಗಳನ್ನು ತೆಗೆದಿರುತ್ತಾರೆ.

ವೈವಿಧ್ಯಮಯ ಯಂತ್ರಗಳು
ಸಣ್ಣ ಹಿಡುವಳಿದಾರರು ಬಾಡಿಗೆ ಯಂತ್ರಗಳನ್ನು ಬಳಸುತ್ತಾರೆ. ಕೆಲವು ದೊಡ್ಡ ಕಂಪೆನಿಗಳು ಯಂತ್ರಗಳನ್ನೇ ಖರೀದಿಸಿಬಿಡುತ್ತವೆ. ಬಾದಾಮಿ ಕೊಯ್ಲಿಗಾಗಿ ವೈವಿಧ್ಯಮಯ ಯಂತ್ರಗಳು ಬಳಕೆಯಲ್ಲಿವೆ. ಕೊಯ್ಲು, ಕಾಯಿ ಸಂಗ್ರಹ, ಸಿಪ್ಪೆ ಬಿಡಿಸುವುದು, ಕಸ, ಕಡ್ಡಿಗಳ ಬೇರ್ಪಡಿಸುವಿಕೆ, ಕಾಯಿಗಳ ಗ್ರೇಡಿಂಗ್... ಹೀಗೆ ಎಲ್ಲಕ್ಕೂ ಪ್ರತ್ಯೇಕ ಯಂತ್ರಗಳನ್ನೇ ಬಳಸುತ್ತಾರೆ. ಹಂಗ್ಸನ್ ನಟ್‌ನಂತಹ ಕಂಪೆನಿಗಳು, ವಿವಿಧ ಕೆಲಸಗಳನ್ನು ಮಾಡುವಂತಹ ಒಂದೇ ಯಂತ್ರವನ್ನು ಬಳಕೆ ಮಾಡುತ್ತವೆ. ಇಂಥ ಯಂತ್ರಗಳು ಬಾದಾಮಿ ಕಾಯಿ ಕೊಯ್ಲು ಮಾಡಿ, ಅವುಗಳನ್ನು ನೆಲಕ್ಕೆ ಬೀಳಿಸದೇ, ಹಿಂಬದಿಯ ಟ್ರೈಲರ್ಗಳಲ್ಲಿ ಸಂಗ್ರಹಿಸಿ, ಕಸ ಬೇರ್ಪಡಿಸಿ, ಸಿಪ್ಪೆ ತೆಗೆದು, ಸಂಸ್ಕರಣಾ ಘಟಕದ ಕ್ಯಾಬಿನ್ಗಳಲ್ಲಿ ತುಂಬಿಸುತ್ತದೆ.

ಒಬ್ಬ ಚಾಲಕ ಇಷ್ಟೂ ಕೆಲಸವನ್ನು ನಿರ್ವಹಿಸುತ್ತಾನೆ. ಬಾದಾಮಿ ಕೃಷಿಯ ಆರಂಭದಲ್ಲಿ ಮಾನವ ಚಾಲಿತ ಕೊಯ್ಲು ಮತ್ತು ಸಂಸ್ಕರಣಾ ಘಟಕಗಳೇ ಚಾಲ್ತಿಯಲ್ಲಿದ್ದವು. ಅಮೆರಿಕದ ಮೆಕ್ಯಾನಿಕಲ್ ಕ್ಷೇತ್ರದಲ್ಲಿ ಆದ ಕ್ರಾಂತಿಕಾರಕ ಬದಲಾವಣೆಯಿಂದಾಗಿ ಯಾಂತ್ರೀಕರಣ ಬಾದಾಮಿ ಕ್ಷೇತ್ರಕ್ಕೂ ಪರಿಚಯವಾಯಿತು. ಯಾಂತ್ರೀಕರಣ ಪರಿಚಯಗೊಂಡ ನಂತರ ಶುಚಿಯಾದ ಬಾದಾಮಿ ಉತ್ಪನ್ನಗಳು ಹೊರ ಬರುತ್ತಿವೆ. ಮಾತ್ರವಲ್ಲ, ಬಾದಾಮಿ ಉತ್ಪಾದನೆಯಲ್ಲಿ ಏರಿಕೆಯಾಗಿದೆ. ಗುಣಮಟ್ಟ, ಪೌಷ್ಟಿಕಾಂಶದಲ್ಲಿ ಕ್ಯಾಲಿಫೋರ್ನಿಯಾ ಬಾದಾಮಿ ಜಾಗತಿಕ ಮಟ್ಟದಲ್ಲಿ ಖ್ಯಾತಿ ಪಡೆಯಲು ಕಾರಣವಾಗಿರಬಹುದು.

ಸಂಸ್ಕರಣಾ ಘಟಕಗಳಲ್ಲೂ...
ರೈತರು ಸಂಸ್ಕರಣಾ ಘಟಕಕ್ಕೆ ಕಚ್ಚಾ ಬಾದಾಮಿ ಪೂರೈಸುತ್ತಾರೆ. ಅವುಗಳನ್ನು ಆರೇಳು ಹಂತಗಳಲ್ಲಿ ಶುದ್ಧೀಕರಿಸಿ ಸಂಸ್ಕರಿಸಲಾಗುತ್ತದೆ. ಸಿಪ್ಪೆ ತೆಗೆದು, ಗ್ರೇಡಿಂಗ್ ಮಾಡುತ್ತಾರೆ. ಬಾದಾಮಿ ಕಾಯಿಗಳನ್ನು ಸಂಸ್ಕರಿಸುವ ಮುನ್ನ, ಲೋಹ ಪರಿಶೋಧಕಗಳಿಂದ ತಪಾಸಣೆ, ಎಲೆಕ್ಟ್ರಾನಿಕ್ ಉಪಕರಣಗಳಿಂದ ಶುದ್ಧತೆ ಪರಿಶೀಲನೆ, ಕೆಟ್ಟು ಹೋಗಿರುವ ಅಥವಾ ಕಹಿ ರುಚಿ ಹೊಂದಿರುವ ಬಾದಾಮಿ ಕಾಯಿಗಳನ್ನು ಪತ್ತೆ ಹಚ್ಚುವುದಕ್ಕೂ ಉಪಕರಣಗಳನ್ನು ಬಳಸುತ್ತಾರೆ.

ಯಾಂತ್ರೀಕರಣ ಎಂಬುದು ಪರಾವಲಂಬಿ ಪ್ರಕ್ರಿಯೆ. ಭಾರತದ ದೇಶಿ ಕೃಷಿ ಪದ್ಧತಿಗೆ ಅದು ಒಗ್ಗುವುದು ಕಷ್ಟ. ಆದರೆ, ಕಾರ್ಮಿಕ ಕೊರತೆ ಸೇರಿದಂತೆ, ಹಲವು ಸಮಸ್ಯೆಯಿಂದ ಕೃಷಿಯೇ ಉಳಿಯುವುದಿಲ್ಲ ಎನ್ನುವ ಹಂತದಲ್ಲಿ, ಯಾಂತ್ರೀಕರಣ ಅನಿವಾರ್ಯ­ವೇನೋ ಎನ್ನಿಸುತ್ತಿದೆ. ಅದು ಅಮೆರಿಕದಷ್ಟು ದೊಡ್ಡ ಪ್ರಮಾಣದಲ್ಲಿ ಅಗತ್ಯವಿಲ್ಲದಿದ್ದರೂ, ಮಾನವ ಚಾಲಿತ ಯಂತ್ರಗಳಾದರೂ ಆವಿಷ್ಕಾರವಾಗಬೇಕು. ‘ಪರ್ಯಾಯ ಇಂಧನ’ ಮೂಲಗಳನ್ನು ಬಳಸಿಕೊಂಡು ನಡೆಸುವಂತಹ ಯಂತ್ರಗಳು, ಅಡಿಕೆ, ತೆಂಗು, ಹುಣಸೆ, ಗೋಡಂಬಿ, ಮಾವಿನ ತೋಟಗಳಿಗೆ ಬರುವುದೇ ಆದರೆ, ಬಯಲು ಸೀಮೆಯ ರೈತರೂ, ಒಣ ಭೂಮಿಯ ಹೊಸ ಮನ್ವಂತರದತ್ತ ಹೊರಳಬಹುದಲ್ಲವೇ ?
(ಕ್ಯಾಲಿಫೋರ್ನಿಯಾ ಬಾದಾಮಿ ಮಂಡಳಿ ಆಹ್ವಾನದ ಮೇರೆಗೆ ಲೇಖಕರು ಅಲ್ಲಿಗೆ ಭೇಟಿ ನೀಡಿದ್ದರು)

ಮುಂದಿನ ವಾರ: ಪರಿಸರಸ್ನೇಹಿ ವಿಧಾನಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT