ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿಗೆ ಸರ್ಕಾರ ಉತ್ತೇಜನ ನೀಡಲಿ

ಕೃಷಿ ಉತ್ಸವದಲ್ಲಿ ಶಾಸಕ ಬೊಮ್ಮಾಯಿ ಅಭಿಮತ
Last Updated 17 ಡಿಸೆಂಬರ್ 2013, 6:21 IST
ಅಕ್ಷರ ಗಾತ್ರ

ಶಿಗ್ಗಾವಿ: ‘ರೈತನ ಆರ್ಥಿಕ ಸ್ಥಿತಿ ಹೆಚ್ಚಿಸುವಲ್ಲಿ ಸರ್ಕಾರ ಬೆಂಬಲಿಸದಿದ್ದರೆ ಮುಂಬರುವ ದಿನಗಳಲ್ಲಿ ಕೃಷಿ ಚಟುವಟಿಕೆಗಳು ಕ್ಷೀಣಿಸಬಹುದು. ಅಲ್ಲದೆ ರೈತ ಬಿತ್ತದಿದ್ದರೆ ಜಗವೆಲ್ಲ ಬರಡಾಗುವುದು. ಹೀಗಾಗಿ ಸರ್ಕಾರ ಎಚ್ಚತ್ತುಕೊಂಡು ರೈತನ ಕೃಷಿ ಕಾರ್ಯಕ್ಕೆ ಇನ್ನಷ್ಟು ಉತ್ತೇಜನ ನೀಡಬೇಕು’  ಎಂದು  ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.

ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ, ಕೃಷಿ ಉತ್ಸವ ಸಮಿತಿ, ಭಾರತೀಯ ಕೃಷಿಕ ಸಮಾಜ, ಗುಜರಾತ್‌ ಅಂಬುಜಾ ಕಂಪೆನಿ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ, ತಾಲ್ಲೂಕು ಕೃಷಿ ಇಲಾಖೆ ಸಹಯೋಗದಲ್ಲಿ ಸೋಮವಾರ ನಡೆದ ’ಕೃಷಿ ಉತ್ಸವ’ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ಶೇ ೬೦ರಷ್ಟು  ಜನ ರೈತರು ಕೃಷಿ ಅವಲಂಬಿತರಾಗಿದ್ದಾರೆ. ಅದರಿಂದ ದೇಶದ ಒಟ್ಟು ಆದಾಯ ಹೆಚ್ಚುತ್ತಿದೆ. ಆದರೆ ಕೇಂದ್ರ ಸರ್ಕಾರ ಬಜೆಟ್ ಮಂಡನೆಯಲ್ಲಿ ರೈತರಿಗೆ ವಿಶೇಷ ಸೌಲಭ್ಯ ನೀಡುತ್ತಿಲ್ಲ. ಸಾಲ ಸೌಲಭ್ಯ  ಘೋಷನೆ ಮಾಡುತ್ತಿಲ್ಲ. ಅದರಿಂದ ಶೇ ೪೦ರಷ್ಟು ಜನ ರೈತರು ಕೃಷಿ ಚಟುವಟಿಕೆಯಿಂದ ಹಿಂದೆ ಸರಿಯುತ್ತಿದ್ದಾರೆ. ತಕ್ಷಣ ಕೇಂದ್ರ ಸರ್ಕಾರ ರೈತನಿಗೆ ಹೆಚ್ಚಿನ ಸಾಲ ಸೌಲಭ್ಯ ನೀಡುವ ಮೂಲಕ ಆತ್ಮಸ್ಥೈರ್ಯ ನೀಡಬೇಕು ಎಂದು ಆಗ್ರಹಿಸಿದರು.

ಅಮೇರಿಕಾ ದೇಶದಲ್ಲಿ ಶೇ ೬ರಷ್ಟು ಕೃಷಿಕರಿದ್ದಾರೆ. ಅವರಿಗೆ ಅಲ್ಲಿನ ಸರ್ಕಾರ ಶೇ ೬೦ರಷ್ಟು ರಿಯಾಯಿತಿ ದರದಲ್ಲಿ ಸೌಲಭ್ಯಗಳನ್ನು ನೀಡುತ್ತಿದೆ. ಆದರೆ ನಮ್ಮ ದೇಶದಲ್ಲಿ ಶೇ ೬೦ರಷ್ಟು ರೈತರು ಕೃಷಿಕರಾಗಿದ್ದಾರೆ. ಅವರಿಗೆ ಶೇ ೬ರಷ್ಟು ರಿಯಾಯಿತಿ ಸೌಲಭ್ಯ ನೀಡಲು ಸಾಧ್ಯವಾಗುತ್ತಿಲ್ಲ. ರೈತ ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ ಪಡಿಸಿಲ್ಲ. ಅದರಿಂದ ಕೃಷಿ ಚಟುವಟಿಕೆ ಕುಠಿತವಾಗುವ ಮೂಲಕ ರೈತನ ಆತ್ಮಹತ್ಯೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗಲು ಕಾರಣವಾಗಿವೆ ಎಂದು ವಿಷಾದಿಸಿದರು.

ಕಳೆದ ಬಿಜೆಪಿ ಸರ್ಕಾರದ ಆಡಳಿತ ಅವಧಿಯಲ್ಲಿ ಬಡ್ಡಿರಹಿತ ಸಾಲ ಯೋಜನೆ ದೇಶದಲ್ಲಿ ಪ್ರಥಮವಾಗಿ ಅನುಷ್ಠಾನಕ್ಕೆ ತಂದಿದೆ. ಅಲ್ಲದೆ ಸುವರ್ಣ ಭೂಮಿ ಯೋಜನೆ ಜಾರಿಗೆ ತರುವ ಮೂಲಕ ಆರ್ಥಿಕ ಪರಿಸ್ಥಿತಿ ಹೆಚ್ಚಿಸಲು ಕಾರಣವಾಗಿದೆ.  ಮಣ್ಣು-ಭೂಮಿ ನಂಬಿ ಬದುಕುತ್ತಿರುವ ರೈತನ ಬೆವರಿಗೆ ಬೆಲೆ ನೀಡುವದು ಸರ್ಕಾರದ ಹೊಣೆಯಾಗಿದೆ ಎಂದ ಅವರು ಧರ್ಮಸ್ಥಳ ಸಂಘ ರಾಜ್ಯದಲ್ಲಿ ಸಾಮಾಜಿಕ, ಆರ್ಥಿಕ ಕ್ರಾಂತಿ ಮಾಡುತ್ತಿರುವುದು ಹರ್ಷದ ಸಂಗತಿ ಎಂದರು.

ಸಂಸದ ಪ್ರಹ್ಲಾದ ಜೋಶಿ, ವಿಧಾನ ಪರಿಷತ್‌ ಸದಸ್ಯ ಸೋಮಣ್ಣ ಬೇವಿನಮರದ, ಧಮರ್ಸ್ಥಳ ಸಂಘದ ಪ್ರಾದೇಶಿಕ ನಿರ್ದೇಶಕ ಎನ್‌.ಜಯಶಂಕರ ಶರ್ಮ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸುಜಾತಾ ಕಲಕಟ್ಟಿ, ಉಪಾಧ್ಯಕ್ಷ ನಿಂಗಪ್ಪ ಹರಿಜನ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಸಿ.ಎಸ್.ಪಾಟೀಲ, ಶಶಿಧರ ಹೊನ್ನಣ್ಣನವರ, ಸರೋಜಾ ಆಡಿನ, ಜಿಲ್ಲಾ ಕೃಷಿ ಇಲಾಖೆ ನಿರ್ದೇಶಕ ಗಣೇಶ ನಾಯ್ಕ, ಎಪಿಎಂಸಿ ಅಧ್ಯಕ್ಷ ವೀರನಗೌಡ್ರ ಪಾಟೀಲ, ಸಣ್ಣಪ್ಪ ಬುಳಕ್ಕನವರ, ಜಯದೇವ ಅಗಡಿ ಮತ್ತಿತರರು ಉಪಸ್ಥಿತರಿದ್ದರು.

ಜಾನಪದ ಕಲಾವಿದರಾದ ಬಸವರಾಜ ಶಿಗ್ಗಾವಿ ತಂಡದವರು ರೈತ ಗೀತೆಗಳನ್ನು ಹಾಡಿದರು.

ಧರ್ಮಸ್ಥಳ ಸಂಘದ ತಾಲ್ಲೂಕು ಯೋಜನಾಧಿಕಾರಿ ಗಣಪತಿ ಮಾಳಂಜಿ ಸ್ವಾಗತಿಸಿದರು. ಗಂಗಮ್ಮಾ ನಿರೂಪಿಸಿದರು.  ನಾಗರಾಜ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT