ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿಭೂಮಿ ಗಣಿಗಾರಿಕೆ: ತನಿಖೆಗೆ ಆಗ್ರಹ

Last Updated 27 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಬೆಂಗಳೂರು: ಭೂ ಸುಧಾರಣಾ ಕಾಯ್ದೆಗೆ ವಿರುದ್ಧವಾಗಿ ಕೃಷಿ ಭೂಮಿಯಲ್ಲಿ ಗಣಿಗಾರಿಕೆಗೆ ಅನುಮತಿ ನೀಡಿದ್ದ ಬಳ್ಳಾರಿಯ ಹಿಂದಿನ ಜಿಲ್ಲಾಧಿಕಾರಿ ಎಸ್.ಶಿವಪ್ಪ ಮತ್ತು ಐಎಎಸ್ ಅಧಿಕಾರಿ ಎಂ.ಈ.ಶಿವಲಿಂಗಮೂರ್ತಿ ವಿರುದ್ಧ ಸಿಬಿಐ ತನಿಖೆ ನಡೆಸಬೇಕು ಎಂದು ಧಾರವಾಡದ ಸಮಾಜ ಪರಿವರ್ತನಾ ಸಮುದಾಯದ ಹಿರಿಯ ಸಲಹೆಗಾರ ಎಸ್.ಆರ್.ಹಿರೇಮಠ ಆಗ್ರಹಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2006ರಲ್ಲಿ ಇಬ್ಬರೂ ಅಧಿಕಾರಿಗಳೂ ಸಂಚು ನಡೆಸಿ ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ದೇವಗಿರಿ (ಕಮ್ಮತ್ತೂರು) ಗ್ರಾಮದ 25 ಎಕರೆ ಕೃಷಿ ಜಮೀನಿನಲ್ಲಿ ಗಣಿಗಾರಿಕೆ ನಡೆಸಲು ಕೆ.ಎನ್.ಶ್ರೀನಿವಾಸ ಎಂಬುವರಿಗೆ ಅನುಮತಿ ನೀಡಿದ್ದರು. ನಂತರ ಈ ಕುರಿತು ತನಿಖೆ ನಡೆಸಿದ್ದ ಜಿಲ್ಲಾಧಿಕಾರಿ ಇಬ್ಬರ ವಿರುದ್ಧವೂ ಕ್ರಮಕ್ಕೆ ಶಿಫಾರಸು ಮಾಡಿದ್ದರು. ಒಂದು ವರ್ಷ ಕಳೆದರೂ ರಾಜ್ಯ ಸರ್ಕಾರ ಯಾವುದೇ ಕ್ರಮ ಜರುಗಿಸಿಲ್ಲ ಎಂದು ದೂರಿದರು.

ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಮತ್ತು ತಹಶೀಲ್ದಾರ್ ಅಕ್ರಮವಾಗಿ ನಿರಾಕ್ಷೇಪಣಾ ಪತ್ರ ನೀಡಿರುವುದು ತನಿಖೆಯಲ್ಲಿ ದೃಢಪಟ್ಟಿತ್ತು. ನಂತರ ಪರಿಶೀಲನಾ ವರದಿಯಲ್ಲಿ ಸತ್ಯಾಂಶ ತಿಳಿಸಿದ್ದರೂ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕರಾಗಿದ್ದ ಶಿವಲಿಂಗಮೂರ್ತಿ ಅದನ್ನು ಮುಚ್ಚಿಟ್ಟು ಗಣಿಗಾರಿಕೆಗೆ ಪರವಾನಗಿ ನೀಡಲು ಶಿಫಾರಸು ಮಾಡಿದ್ದರು. 2011ರ ಅಕ್ಟೋಬರ್ 7ರಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ವರದಿ ನೀಡಿದ್ದ ಬಳ್ಳಾರಿ ಜಿಲ್ಲಾಧಿಕಾರಿ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿದ್ದರು. ಆದರೆ, ಹಿಂದಿನಿಂದಲೂ ಅಕ್ರಮ ಗಣಿಗಾರಿಕೆಗೆ ಕುಮ್ಮಕ್ಕು ನೀಡಿದ ಸರ್ಕಾರ ತಪ್ಪಿತಸ್ಥ ಅಧಿಕಾರಿಗಳನ್ನೂ ರಕ್ಷಿಸುತ್ತಿದೆ ಎಂದು ಆರೋಪಿಸಿದರು.

`ಗಣಿ ಗುತ್ತಿಗೆ ಪಡೆಯಲು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕುಟುಂಬದ ಸದಸ್ಯರಿಗೆ ಹಣ ನೀಡಿರುವ ಆರೋಪ ಎದುರಿಸುತ್ತಿರುವ ಆರ್.ಪ್ರವೀಣಚಂದ್ರ ಅವರ ಒಂದು ಗಣಿ ಗುತ್ತಿಗೆಯಲ್ಲಿ ಗಣಿಗಾರಿಕೆಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ಪ್ರವೀಣಚಂದ್ರ ಅವರ ತಂದೆಯ ಹೆಸರಿನಲ್ಲಿರುವ ಒಂದು ಗಣಿಯಲ್ಲಿ 13 ಲಕ್ಷ ಟನ್ ಅದಿರನ್ನು ಅಕ್ರಮವಾಗಿ ತೆಗೆದು, ಸಾಗಣೆ ಮಾಡಿರುವ ಕುರಿತ ದಾಖಲೆಗಳು ನಮಗೆ ದೊರೆತಿವೆ. ಈ ಎಲ್ಲ ಅಂಶಗಳ ಆಧಾರದಲ್ಲಿ ಗಣಿಗಾರಿಕೆಗೆ ನೀಡಿರುವ ಒಪ್ಪಿಗೆಯನ್ನು ಹಿಂದಕ್ಕೆ ಪಡೆಯುವಂತೆ ಸುಪ್ರೀಂಕೋರ್ಟ್‌ಗೆ ಮನವಿ ಮಾಡಲಾಗುವುದು' ಎಂದು ಹೇಳಿದರು.

ಶಾಸಕ ಡಿ.ಕೆ.ಶಿವಕುಮಾರ್, ಉದ್ಯಮಿ ಆರ್.ಪ್ರವೀಣ್ ಚಂದ್ರ, ಲತಾ ಮೈನಿಂಗ್ ಕಂಪೆನಿ, ಮಾತಾ ಮೈನಿಂಗ್ ಕಂಪೆನಿ, ಸೆಸಾ ಗೋವಾ ಮತ್ತಿತರರು ನಡೆಸಿರುವ ಅಕ್ರಮ ಗಣಿಗಾರಿಕೆ ಕುರಿತು ಸಿಬಿಐ ತನಿಖೆಗೆ ಆದೇಶಿಸುವಂತೆ ಕೋರಿ ಜನವರಿ ಮೊದಲ ವಾರ ಸುಪ್ರೀಂಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಲಾಗುವುದು. ಅಕ್ರಮ ಗಣಿಗಾರಿಕೆ ನಡೆಸಿರುವವರಿಂದ ನಷ್ಟ ವಸೂಲಿಗೆ ಆದೇಶಿಸುವಂತೆಯೂ ಕೋರಲಾಗುವುದು ಎಂದು ತಿಳಿಸಿದರು.

ಅಕ್ರಮ ಗಣಿಗಾರಿಕೆ ಮತ್ತು ಭೂ ಕಬಳಿಕೆ ಕುರಿತು ಮತದಾರರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆಗಾಗಿ ರಾಷ್ಟ್ರೀಯ ಸಮಿತಿ ನೇತೃತ್ವದಲ್ಲಿ ಶಿವಮೊಗ್ಗದಿಂದ ಬಳ್ಳಾರಿವರೆಗೆ ಜಾಥಾ ನಡೆಸಲಾಗುವುದು. 2013ರ ಜನವರಿ 17ರಂದು ಆರಂಭವಾಗುವ ಜಾಥಾ ಜ.25ಕ್ಕೆ ಕೊನೆಗೊಳ್ಳಲಿದೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT