ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿಯಲ್ಲಿ ಬದುಕು ಕಟ್ಟಿಕೊಳ್ಳುವ ಯುವಜನರ ಸವಾಲು

Last Updated 18 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಈಗ ಸರ್ಕಾರಿ ನೌಕರಿ ಪಡೆಯಲು ಸರ್ಟಿಫಿಕೇಟುಗಳು ಮಾತ್ರವೇ ಸಾಕಾಗುತ್ತಿಲ್ಲ. ಲಕ್ಷ ಲಕ್ಷಗಳಲ್ಲಿ ಹಣವೂ ಬೇಕು. ಈ ನಡುವೆ ನಗರ ಬೆಳೆಯುತ್ತಿದ್ದಂತೆ ಕೆಲವು ಜನ ಅನೇಕ ರೀತಿಯ ಸೇವೆಗಳನ್ನು ಒದಗಿಸುತ್ತಾ ತಂತಮ್ಮ ಬದುಕಿನ ದಾರಿಗಳನ್ನು ಕಂಡುಕೊಳ್ಳವುದನ್ನು ನೋಡುತ್ತಿದ್ದೆೀವೆ. ಹಸಿವು ಅಂತಹ ಹುಡುಕಾಟವನ್ನು, ಕ್ರಿಯಾಶೀಲತೆಯನ್ನು ಸಾಧ್ಯವಾಗಿಸುತ್ತದೆ. ಹಾಗಾಗಿ ನಗರೀಕರಣ ಮತ್ತು ಸಮಾನಾಂತರ ಬೆಳವಣಿಗೆಗಳ ಸಂದರ್ಭದೊಳಗಿಂದಲೇ ಗೌರವಯುತ ಜೀವನ ನಿರ್ವಹಣೆಯ ಸಾಧ್ಯತೆಗಳು ಏನೇನಿವೆ ಮತ್ತು ಜೀವನ ನಿರ್ವಹಣೆ ಮತ್ತು ಸಾಮಾಜಿಕ ಬಲಾವಣೆಯ ಆಶಯಗಳೆರಡನ್ನೂ ಪೂರೈಸಬಲ್ಲ ಹೊಸ ಬಗೆಯ ಉದ್ಯೋಗಗಳನ್ನು ಹುಡುಕುವ ಯುವಜನರಿಗೆ ಬೆಂಬಲ ನೀಡಬೇಕಿದೆ.

ಕೃಷಿಯಲ್ಲಿ ಜೀವನ ನಿರ್ವಹಣೆಯ ಹೊಸ ಸಾಧ್ಯತೆಗಳು ಗೋಚರಿಸಲಿವೆ. ಒಂದು ಕಡೆಗೆ ಪರಿಸರ ಮಾಲಿನ್ಯ ಮುಖ್ಯವಾಗಿ ನಗರ ವಾಸಿಗಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ರಾಸಾಯನಿಕ ಕೃಷಿಯಿಂದ ಆಹಾರ ಮಾಲಿನ್ಯವಾಗಿರುವುದು ಈಗ ಎಲ್ಲರಿಗೂ ತಿಳಿಯುತ್ತಿದೆ. ಸಾವಯವ ರೀತಿಯಲ್ಲಿ ಆಹಾರ ಪದಾರ್ಥಗಳನ್ನು ಬೆಳೆದರೆ ಅದಕ್ಕೆ ಒಳ್ಳೆಯ ಮಾರುಕಟ್ಟೆ ಇದೆ. ಜನ ಅದನ್ನು ಸ್ವಲ್ಪ ಹೆಚ್ಚಿನ ಬೆಲೆ ಕೊಟ್ಟು ಖರೀದಿಸಲೂ ತಯಾರಿದ್ದಾರೆ.

ಹಾಗಾಗಿ ಕಾಲು, ಅರ್ಧ, ಒಂದು ಎಕರೆ ಜಮೀನು ಇದ್ದವರೂ ಸಾವಯವ ವಿಧಾನದಲ್ಲಿ ಸೊಪ್ಪು ತರಕಾರಿಗಳನ್ನು ಬೆಳೆದು ಸಮೀಪದ ಪಟ್ಟಣ, ಲೇಔಟ್,  ಅಪಾರ್ಟ್‌ಮೆಂಟ್‌ಗಳಿಗೆ ಸರಬರಾಜು ಮಾಡಲು ಯತ್ನಿಸಿದರೆ ಜೀವನ ನಿರ್ವಹಣೆ ಸುಲಭ.  ನಗರದ ಶ್ರೀಮಂತರು ನಗರದ ಹೊರಗೆ ಜಮೀನು ಖರೀದಿಸಿ ತೋಟಗಳನ್ನು ಮಾಡಿದ್ದಾರೆ. ಅಂತಹವರಿಗೆ ತೋಟ ನೋಡಿಕೊಳ್ಳಲು ತರಬೇತಿ ಹೊಂದಿದ ಜನ ಸಿಗುತ್ತಿಲ್ಲ. ಸಾವಯವ ಪದಾರ್ಥಗಳನ್ನು ಮಾರುವ ಮಾರುಕಟ್ಟೆ, ಅಂಗಡಿಗಳಲ್ಲೂ ಸಾವಯವ ಕೃಷಿಯ ವಿಚಾರಗಳನ್ನು ಚೆನ್ನಾಗಿ ಅರಿತಿರುವ ಯುವಜನರ ಅಗತ್ಯವಿದೆ.

ಸರ್ಕಾರ ಯುವಜನರಿಗೆ ಯಾವುದೇ ರೀತಿಯ ಸಹಕಾರ ಕೊಡುತ್ತಿಲ್ಲ. ಯುವಜನ ಇಲಾಖೆ ಕೇವಲ ಕ್ರೀಡೆಗಷ್ಟೆ ಸೀಮಿತವಾಗಿದೆ. ಕೃಷಿಯಲ್ಲಿ ತೊಡಗಿದ ಯುವಜನತೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಅವರ ತಳಮಳ, ಗೊಂದಲಗಳಿಗೆ ಸರಿಯಾದ ರೀತಿಯಲ್ಲಿ ಇಲಾಖೆ ಸಹಕಾರ ನೀಡುತ್ತಿಲ್ಲ. ಕೃಷಿಯ ಸುತ್ತ ಹಲವಾರು ಬದುಕುಗಳಿದ್ದರೂ ಅವುಗಳನ್ನು ಯುವಜನರಿಗೆ ತಲುಪಿಸಲು ಇಲಾಖೆ ಕೆಲಸ ಮಾಡುತ್ತಿಲ್ಲ.

ಕೃಷಿ ವಿಶ್ವವಿದ್ಯಾಲಯಗಳಿಂದಲೂ ಯುವಜನರಿಗಾಗಿ ಪ್ರತೇಕ ತರಬೇತಿ ಹಾಗೂ ತಾಂತ್ರಿಕ ನೆರವು ಸಿಗುತ್ತಿಲ್ಲ. ಕೃಷಿ ವಿಶ್ವವಿದ್ಯಾಲಯಗಳು ಯುವಜನರ ಆಸೆಗಳನ್ನು ಮರೆತಿವೆ. ಗ್ರಾಮೀಣ ಭಾಗದಲ್ಲಿ ಹಲವಾರು ಯುವಜನರು ಕೃಷಿಯಲ್ಲಿ ತೊಡಗಿದ್ದರೂ, ಅವರಿಗೆ ಯುವ ಬೆಂಬಲಿತ ಕೃಷಿ ತರಬೇತಿ ಹಾಗೂ ವ್ಯಕ್ತಿತ್ವ ಶಿಬಿರಗಳನ್ನು ಮಾಡುತ್ತಿಲ್ಲ. ಕೃಷಿ ವಿಜ್ಞಾನಿಗಳು ಸಂಪೂರ್ಣವಾಗಿ ಯುವಜನರನ್ನು ಮರೆತಿದೆ. ಅವರ ಕ್ರಿಯಾಶೀಲತೆ ಹಾಗೂ ಅನುಭವಗಳನ್ನು ಗುರುತಿಸಿ ಮಾರ್ಗದರ್ಶನ ಮಾಡಬೇಕಿದೆ.

ಯುವಜನರಿಗೆ ಅವರ ಮನೆಯಲ್ಲಿಯೂ ಸರಿಯಾದ ಬೆಂಬಲ ಸಿಗುವುದಿಲ್ಲ. ಒಂದು ಪಕ್ಷ ಕೃಷಿ ಮಾಡಲು ಮನಸ್ಸು ಮಾಡಿದರೆ ಅವರಿಗೆ ಸರಿಯಾದ ಅವಕಾಶ ಕೊಡದೆ ನಗರಕ್ಕೆ ವಲಸೆ ಹೋಗುವಂತೆ ಮಾಡುತ್ತಾರೆ ಅವರ ಪೋಷಕರು. ಕೆಲ ಪೋಷಕರು ಯುವಜನರನ್ನು ತೆಗಳುತ್ತಾರೆ. ಅವರ ಅಭಿಪ್ರಾಯ ಸಂಗ್ರಹಿಸದೆ, ಬೇರೆಯವರ ಮಾನದಂಡಗಳನ್ನು ಅನುಸರಿಸುತ್ತಾರೆ. ಅವರ ಮಗ, ಮಗಳಂತೆ ನಮ್ಮ ಮಕ್ಕಳು ಅನುಸರಿಸಲಿ ಎಂದು ತಿಳಿದುಕೊಳ್ಳುತ್ತಾರೆ.

ಕೃಷಿಯಲ್ಲಿ ತೊಡಗಿರುವ ಯುವರೈತರಿಗೆ ಸಮಾಜದಲ್ಲಿ ಸರಿಯಾದ ಸ್ಥಾನಮಾನಗಳಿಲ್ಲ. ಯುವ ರೈತರನ್ನು ಪ್ರತ್ಯೇಕತೆಯಿಂದ ನೋಡುತ್ತಾರೆ. ಅವರಿಗೂ ಸಮಾಜದಲ್ಲಿಉತ್ತಮ ವೇದಿಕೆ ನಿರ್ಮಾಣ ಮಾಡಿಕೊಡಬೇಕು.

ಯುವಜನರಿಗೆ ಅನೇಕ ಗೊಂದಲಗಳು ಇರುತ್ತವೆ, ಅವುಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಅವರ ಮೇಲೆ ತಪ್ಪು ಹೊರಿಸುವುದು ಸರಿಯಲ್ಲ. ಅವರ ಬೇಕು-ಬೇಡಗಳನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಬೇಕು. ಕೃಷಿ ಕೆಲಸಗಳು ಹಿರಿಯರ ಆಡಳಿತದಲ್ಲಿ ಇರುತ್ತದೆ, ಕೃಷಿ ಆಡಳಿತವನ್ನು ಬಿಟ್ಟು ಕೊಡಲು ಹಿರಿಯರು ಒಪ್ಪುವುದಿಲ್ಲ.

ಸಂಪೂರ್ಣವಾಗಿ ಅವರಿಗೂ ಜವಾಬ್ದಾರಿಗಳನ್ನು ಕೊಡಿ. ನಡೆಸಿಕೊಂಡು ಹೋಗುವ ತಾಕತ್ತು ಅವರಲ್ಲೂ ಇದೆ. ಅವಕಾಶ ಕೊಡದಿದ್ದರೆ ಅವರ ಸಾಮರ್ಥ್ಯ ತಿಳಿಯುವುದಿಲ್ಲ.

ಯುವಜನರೊಂದಿಗೆ ಅವರ ಹಿರಿಯರನ್ನು ಸೇರಿಸಿ ಮಾತನಾಡಿಸಬೇಕು. ಇಬ್ಬರಲ್ಲಿ ಒಪ್ಪಂದ ಮಾಡಿಸಿ, ಪ್ರಾರಂಭದಲ್ಲಿ ಸ್ವಲ್ಪ ಜಮೀನನ್ನು ಯುವಕರಿಗೆ  ಕೃಷಿ ಮಾಡಲು ಅನುವು ಮಾಡಿಕೊಡಬೇಕು. ಒಪ್ಪಂದ ನಂತರ ಮತ್ತೆಮತ್ತೆ ಅವರ ಜಮೀನಿಗೆ ಭೇಟಿ ಕೊಟ್ಟು ಅವರಿಬ್ಬರ ಹತ್ತಿರ ಮಾತನಾಡಬೇಕು. ಸುಮಾರು ಒಂದರಿಂದ ಎರಡು ವರ್ಷದೊಳಗೆ ಉತ್ತಮ ಸಾಧನೆ ಯುವಜನರಿಂದ ಹೊರಬರುತ್ತದೆ. ಅವರ ಸಾಧನೆ ಸಮಾಜಕ್ಕೆ ಗೊತ್ತಾಗಿ, ಅವರ ತೋಟಕ್ಕೆ ಬರುವವರ ಸಂಖ್ಯೆ ಹೆಚ್ಚಾಗುತ್ತದೆ, ಇದರಿಂದ ಪ್ರೇರಿತರಾಗಿ ಅವರ ಮನೆಯ ಹಿರಿಯರು ನಂಬಿಕೆಯನ್ನು ಇಟ್ಟು ಪೂರ್ತಿ ಜಮೀನನ್ನು ಯುವಜನರಿಗೆ ಕೊಟ್ಟ ಉದಾಹರಣೆಗಳು ಅನೇಕ.

ಕೃಷಿಯನ್ನು ಮೂರನೆ ದರ್ಜೆ ಕಸುಬನ್ನಾಗಿ ಸಮಾಜ ನೋಡುತ್ತಿದೆ, ನಮ್ಮ ಶಿಕ್ಷಣ ಪದ್ಧತಿಗಳು, ನೀತಿಗಳು ಸಹ ಕೃಷಿಯಿಂದ ವಿಮುಖವಾಗುತ್ತ ಇವೆ. ನಮ್ಮ ರಾಜಕೀಯ ನಾಯಕರು ಯಾವತ್ತೂ `ಕೃಷಿ ಮತ್ತು ಯುವಜನ~ ಕೇಂದ್ರಿತವಾಗಿ ಯೋಚನೆ ಮಾಡಿಲ್ಲ. ಯುವಕರು ಹಠವಾದಿಗಳು, ಹೊಸತನವನ್ನು ನೋಡುವವರು, ಕ್ರಿಯಾಶೀಲರು, ಉತ್ತಮ ಸಾಮರ್ಥ್ಯವುಳ್ಳವರು.ಅವುಗಳನ್ನು ನಾವು ಗುರುತಿಸಿ ಕೃಷಿ ಸ್ವಾವಲಂಬಿ ಬದುಕು ನಡೆಸುವುದಕ್ಕೆ ಅನುಕೂಲ ಮಾಡಿಕೊಡಬೇಕು. ಕೃಷಿ ವಿಜ್ಞಾನವನ್ನು ಯುವಜನರಿಗೆ ಮುಟ್ಟಿಸುವಲ್ಲಿ ಕೃಷಿ ಇಲಾಖೆ, ಕೃಷಿ ವಿಶ್ವವಿದ್ಯಾಲಯಗಳು ವಿಫಲವಾಗಿವೆ.

ಪ್ರತ್ಯೇಕ ಯೋಜನೆಗಳನ್ನು ರೂಪಿಸಿ ಯುವಜನರನ್ನು ಕೃಷಿಯಲ್ಲಿ ಮುಂದುವರಸಿಕೊಂಡು ಹೋಗಲು ಅನುಕೂಲಗಳನ್ನು ಮಾಡಬೇಕು. ಶಿಕ್ಷಣ ಪದ್ಧತಿಯಲ್ಲಿ ಕೃಷಿ ಆಧಾರಿತ ಕೋರ್ಸುಗಳನ್ನು ರೂಪಿಸಬೇಕು, ಕೃಷಿ ಬದುಕು ಕಟ್ಟಲಿಕ್ಕೆ ಅನುಕೂಲವಾಗುವಾಗುವಂತೆ ಶಿಕ್ಷಣ ನೀತಿಯನ್ನು ಸರ್ಕಾರ ರೂಪಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT