ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿಯಲ್ಲೇ ಖುಷಿ ಕಾಣುವ ಸ್ವಾಮೀಜಿ

Last Updated 23 ಜನವರಿ 2012, 19:30 IST
ಅಕ್ಷರ ಗಾತ್ರ

ಕೇವಲ ಧಾರ್ಮಿಕ ಕಾರ್ಯಕ್ರಮಗಳಿಗೆ ಮೀಸಲಾದ ಮಠಾಧಿಪತಿಗಳೇ ಹೆಚ್ಚಿರುವ ಇಂದಿನ ದಿನಗಳಲ್ಲಿ ಅಧ್ಯಾತ್ಮದೊಂದಿಗೆ ಕೃಷಿ ಕಾರ್ಯ ರೂಢಿಸಿಕೊಂಡ, ಅತ್ಯಂತ ವಿರಳ ಸ್ವಾಮೀಜಿಯೊಬ್ಬರು ಇಲ್ಲಿದ್ದಾರೆ. `ಅನ್ನ ದೇವರಿಗಿಂತ ಅನ್ಯ ದೇವರಿಲ್ಲ~ ಎನ್ನುವುದೇ ಇವರ ಪ್ರತಿಪಾದನೆ. ನೇಗಿಲು, ಕೃಷಿ ಪರಿಕರಗಳನ್ನು ಕೈಯಲ್ಲಿ ಹಿಡಿದವ ಧನ್ಯ ಎನ್ನುವುದನ್ನು ತೋರಿಸಿಕೊಡುತ್ತಿದ್ದಾರೆ.

ಗುಲ್ಬರ್ಗದಿಂದ ಬೀದರ್ ಕಡೆ 18 ಕಿ.ಮೀ. ಕ್ರಮಿಸಿದರೆ ಬಬಲಾದ ಕ್ರಾಸ್ ಸಿಗುತ್ತದೆ. ಅಲ್ಲಿಂದ 8 ಕಿಲೋಮೀಟರ್ ಒಳಗಡೆ ಇರುವುದೇ ಬಬಲಾದ ಗ್ರಾಮ. ಅದನ್ನು ಪ್ರವೇಶಿಸುತ್ತಿದ್ದಂತೆಯೇ ಮಠದ ಆವರಣ ಕಣ್ಣಿಗೆ ಬೀಳುತ್ತದೆ. ಅಲ್ಲಿಂದ ಅನತಿ ದೂರ ಸಾಗಿದರೆ ಸಾಕು, ಹೊಲದಲ್ಲಿ ಕೆಲಸ ಮಾಡುತ್ತಿರುವ ಸ್ವಾಮೀಜಿಯೊಬ್ಬರು ಕಂಡು ಬರುತ್ತಾರೆ. ಅವರೇ ಗುಲ್ಬರ್ಗ ತಾಲ್ಲೂಕಿನ ಮುತ್ಯಾನ ಬಬಲಾದ ಗ್ರಾಮದ ಶ್ರೀ ಗುರು ಚನ್ನಬಸವೇಶ್ವರ ಮಠದ ಪೀಠಾಧಿಪತಿ ಗುರುಪಾದಲಿಂಗ ಸ್ವಾಮೀಜಿ.

ಮಠದ ಅಧೀನದಲ್ಲಿ ಒಟ್ಟು 71 ಎಕರೆ ಜಮೀನಿದೆ. ಅದರಲ್ಲಿ 5 ಎಕರೆ ಅರಿಶಿಣ, 4 ಎಕರೆ ದ್ರಾಕ್ಷಿ, 3 ಎಕರೆ ಕಬ್ಬು, 3 ಎಕರೆ ತೊಗರಿ, 2 ಎಕರೆ ಪಪ್ಪಾಯಿ, 2 ಎಕರೆ ತೆಂಗು, 2 ಎಕರೆ ಬಾಳೆಗಳ ಜೊತೆ ಮಿಶ್ರ ಬೆಳೆಗಳನ್ನೂ ಹಾಕಿದ್ದಾರೆ. ಅದೇ ರೀತಿ ಆಳಂದ ತಾಲ್ಲೂಕಿನ ಯಳಸಂಗಿಯ ಶಾಖಾ ಮಠಕ್ಕೆ ಸೇರಿದ 70 ಎಕರೆಯ್ಲ್ಲಲಿ ಕಬ್ಬು, ತೊಗರಿ ಬೆಳೆಯುತ್ತಿದ್ದಾರೆ.

ಎರೆಹುಳು ಗೊಬ್ಬರ
ಹೊಲದಲ್ಲಿನ ಕಸ, ಕಡ್ಡಿ ಉಪಯೋಗಿಸಿ ಅದನ್ನು ಸದ್ಬಳಕೆ ಮಾಡುವ ಉದ್ದೇಶದಿಂದ ಎರೆಹುಳು ಘಟಕ ನಿರ್ಮಿಸಿದ್ದಾರೆ. ಇಲ್ಲಿ 18 ಅಡಿ ಉದ್ದ 3 ಅಡಿ ಅಗಲ, 2 ಅಡಿ ಆಳದ ಎರೆಹುಳು ತೊಟ್ಟಿಗಳಿವೆ. ಇದರಲ್ಲಿ ಕೃಷಿ ತ್ಯಾಜ್ಯಗಳನ್ನೆಲ್ಲ ಹಾಕುತ್ತಾರೆ. ಒಂದು ಪದರು ಕೃಷಿ ತ್ಯಾಜ್ಯ, ಇನ್ನೊಂದು ಪದರು ದೇಸಿ ಜಾನುವಾರುಗಳ ಸೆಗಣಿ ಸೇರಿಸುತ್ತಾರೆ. ಹೀಗೆ ಪದರು, ಪದರು ಹಾಕಿ ತೊಟ್ಟಿಯನ್ನು ತುಂಬುತ್ತಾರೆ. ನಂತರ ಅದರ ಮೇಲೆ ಎರೆಹುಳು ಬಿಡಲಾಗುತ್ತದೆ. ಅಗತ್ಯಕ್ಕೆ ತಕ್ಕಂತೆ ಹನಿ ನೀರಾವರಿ ಮೂಲಕ ತೊಟ್ಟಿಯೊಳಗೆ ನೀರು ಹರಿಸಲಾಗುತ್ತದೆ. ಕೇವಲ ಎರಡೂವರೆ ತಿಂಗಳಲ್ಲೇ ಎರೆಹುಳು ಗೊಬ್ಬರ ತಯಾರಾಗುತ್ತದೆ.

ಜೈವಿಕ ಜೀರ್ಣ ಘಟಕ
ಬೆಳೆಗಳ ರೋಗ ನಿಯಂತ್ರಣಕ್ಕೆ ದೊಡ್ಡ ಗಾತ್ರದ ಜೈವಿಕ ಜೀರ್ಣ ಘಟಕ ನಿರ್ಮಿಸಿದ್ದಾರೆ. ಗೋಮೂತ್ರ, ಸೆಗಣಿ ಹಾಗೂ ವಿವಿಧ ಗಿಡಗಳ ಸೊಪ್ಪು ಬಳಸಿ ಪೋಷಕಾಂಶ, ಔಷಧಿಗಳಾಗಿ ಪಂಚಗವ್ಯ, ಸಸ್ಯ ಜನ್ಯ ಕೀಟನಾಶಕ, ಜೀವಾಮೃತ ಘಟಕಗಳನ್ನು ಆರಂಭಿಸಿದ್ದಾರೆ.

ಎರೆಹುಳುಗಳನ್ನು ತೊಳೆದ ನೀರು ಬೆಳೆಗೆ ಪೂರೈಸಲು `ಎರೆಜಲ~ ಕೂಡ ಮಾಡಿದ್ದಾರೆ. ಈ ಎಲ್ಲ ಔಷಧಿಗಳನ್ನು ಹನಿ ನೀರಾವರಿ, ಹರಿಗಾಲುವೆ ಮೂಲಕ ಪೂರೈಸುತ್ತಾರೆ. ಹೀಗೆ ತಮ್ಮ ಕಾರ್ಯಕ್ಷೇತ್ರದಲ್ಲಿನ ಲಭ್ಯತೆ ಆಧರಿಸಿ ಕೃಷಿ ವೆಚ್ಚ ಗಣನೀಯ ಕಡಿಮೆ ಮಾಡಿ ಅಧಿಕ ಲಾಭ ಪಡೆದುಕೊಂಡಿದ್ದಾರೆ. 

ಮನೂಕಾ ಉತ್ಪಾದನೆ
ನೇರವಾಗಿ ದ್ರಾಕ್ಷಿಯನ್ನು ಮಾರುಕಟ್ಟೆಗೆ ಕಳಿಸುವ ಬದಲು ಮನೂಕಾ (ಒಣದ್ರಾಕ್ಷಿ) ಮಾಡುತ್ತಾರೆ. ಅದಕ್ಕಾಗಿಯೇ 150 ಅಡಿ ಉದ್ದ 25 ಅಡಿ ಅಗಲದಲ್ಲಿ ಮನೂಕಾ ಘಟಕ ಸ್ಥಾಪಿಸಿದ್ದಾರೆ. ಅದರಲ್ಲಿ ಸುಮಾರು ಒಂದು ಅಡಿಗೆ ಒಂದರಂತೆ ವೈರ್ ಮೂಲಕ 12 ಅಟ್ಟಣಿಗೆ ನಿರ್ಮಿಸಿದ್ದಾರೆ. ದ್ರಾಕ್ಷಿ ಹಣ್ಣಾಗಿ ಕಿತ್ತ ನಂತರ ಟ್ರೇಯೊಂದರಲ್ಲಿ ಇಟ್ಟು ಸುಮಾರು 15 ದಿನ ಒಣಗಿಸುತ್ತಾರೆ. ಮನೂಕಾ ಸಿದ್ಧವಾದ ನಂತರ ಸಮೀಪದ ವಿಜಾಪುರ ಮತ್ತು ಮಹಾರಾಷ್ಟ್ರಕ್ಕೆ ಒಯ್ದು ಮಾರಾಟ ಮಾಡುತ್ತಾರೆ. ಇದರಿಂದ ಅಧಿಕ ಆದಾಯ ಪಡೆದುಕೊಳ್ಳುತ್ತಿದ್ದಾರೆ.

ಸಮೃದ್ಧ ತೊಗರಿ
ವರುಣನ ಅವಕೃಪೆಯಿಂದಾಗಿ ಈ ಬಾರಿ ಜಿಲ್ಲೆಯಾದ್ಯಂತ ತೊಗರಿ ಬೆಳೆ ಕೈ ಕೊಟ್ಟಿದೆ. ಆದರೆ ಇವರ ಹೊಲದಲ್ಲಿ `ಪಂಚಗಂಗಾ~ ಎಂಬ ಹೊಸ ತಳಿಯ ತೊಗರಿ ಮಾತ್ರ ಹೂ- ಕಾಯಿಗಳಿಂದ ತುಂಬಿ ಬಾಗಿ ನಿಂತಿದೆ.

ಇದೇ ಜಮೀನಿನ್ಲ್ಲಲಿ ಈ ಮುಂಚೆ ಕಲ್ಲಂಗಡಿ ಬೆಳೆದು 2 ಲಕ್ಷ ರೂಪಾಯಿ ಆದಾಯ ಪಡೆದಿದ್ದರು. ತೊಗರಿ ಬೀಜಕ್ಕಾಗಿ (ಮೂರು ಪೊಟ್ಟಣ) 3 ಸಾವಿರ ರೂಪಾಯಿ, ಕಳೆ, ಔಷಧಿಗಾಗಿ ಒಟ್ಟು 1 ಲಕ್ಷ ರೂಪಾಯಿ ಖರ್ಚು ಮಾಡ್ದ್ದಿದು ಕೇವಲ ಆರು ತಿಂಗಳಲ್ಲೇ 2 ಲಕ್ಷ ರೂಪಾಯಿ ಆದಾಯ ಬರುತ್ತದೆ ಎಂಬುದು ಅವರ ಲೆಕ್ಕಾಚಾರ.

ಈ ಮೊದಲು ಆಶಾ ತಳಿಯ ತೊಗರಿ ಬೆಳೆಯುವ ಮೂಲಕ ಎಕರೆಗೆ 16 ಕ್ವಿಂಟಲ್ ಇಳುವರಿ ಪಡೆದು ರೈತ ಸಮುದಾಯದಲ್ಲಿ ಆಶ್ಚರ್ಯ ಮೂಡಿಸಿದ್ದರು. ಇದಕ್ಕಿಂತ ಮೊದಲು ಕೂಡ ತೆಂಗಿನ ತೋಟದಲ್ಲಿ ಮಾರುತಿ ತಳಿಯ ತೊಗರಿ ಬೆಳೆದು 10 ಕ್ವಿಂಟಲ್ ಇಳುವರಿ ಪಡೆದಿದ್ದರು.

ಹೊಸ ತಂತ್ರಜ್ಞಾನ ಬಳಸಿಕೊಂಡು ಅದರಲ್ಲಿಯೇ ಅಧಿಕ ಇಳುವರಿ ಪಡೆಯಬೇಕೆಂಬ ಉದ್ದೇಶದಿಂದ ಹಲವಾರು ನೂತನ ಪ್ರಯೋಗಗಳಲ್ಲಿ ತೊಡಗಿರುವ ಗುರುಪಾದಲಿಂಗ ಸ್ವಾಮೀಜಿ ಕೃಷಿಯಲ್ಲೇ ಖುಷಿ ಕಾಣುತ್ತಿದ್ದಾರೆ.

ಇವರ ಈ ಕಾಯಕ ನೋಡಬೇಕೆಂಬ ಹಂಬಲವುಳ್ಳವರು ಮೊಬೈಲ್ ಸಂಖ್ಯೆ 94801 61783 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT