ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣ, ಎಚ್‌ಡಿಕೆ ವಿರುದ್ಧ ತನಿಖೆಗೆ ಅಸ್ತು

Last Updated 20 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರು ಮುಖ್ಯ ಮಂತ್ರಿಯಾಗಿದ್ದ ಅವಧಿಯಲ್ಲಿ ಅರಣ್ಯ ಪ್ರದೇಶವನ್ನು ಗಣಿಗಾರಿಕೆಗೆ ಮುಕ್ತಗೊಳಿಸಿರುವ ಆರೋಪ ಕುರಿತಾದ ತನಿಖೆಯನ್ನು ಮುಂದು ವರಿಸಲು ಲೋಕಾಯುಕ್ತ ಪೊಲೀ ಸರಿಗೆ ಹೈಕೋರ್ಟ್ ಶುಕ್ರವಾರ ಹಸಿರು ನಿಶಾನೆ ತೋರಿದೆ. 6,832 ಹೆಕ್ಟೇರ್ ಮೀಸಲು ಗಣಿ ವಲಯವನ್ನು ಕಾನೂನುಬಾಹಿರ ವಾಗಿ ಖಾಸಗಿ ಗಣಿಗಾರಿಕೆಗೆ ಮುಕ್ತ ಗೊಳಿಸಿದ ಆರೋಪ ಇದಾಗಿದೆ.
 

2002ರ ಡಿ.16ರಂದು ಸಚಿವ ಸಂಪುಟದಲ್ಲಿ ತೆಗೆದುಕೊಂಡ ನಿರ್ಧಾರದಂತೆ ಈ ಪ್ರಕ್ರಿಯೆ ನಡೆಸಲಾಗಿದೆ ಎನ್ನುವುದು ಆರೋಪ.

ಅದೇ ರೀತಿ, ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ `ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್~ಗೆ ಸುಮಾರು 550 ಎಕರೆ ಜಮೀನನ್ನು ಗಣಿಗಾರಿಕೆ ನಡೆಸಲು ನಿಯಮಬಾಹಿರವಾಗಿ ಅನುಮತಿ ನೀಡಿರುವ ಆರೋಪ ಕುರಿತಾಗಿಯೂ ತನಿಖೆ ಮುಂದುವರಿಸುವಂತೆ ನ್ಯಾಯಮೂರ್ತಿ ಎನ್.ಆನಂದ ಅವರು ಆದೇಶಿಸಿದ್ದಾರೆ.

ತನಿಖೆ ಇಲ್ಲ: ಅಕ್ರಮ ಗಣಿಗಾರಿಕೆ•ಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಮಿನರಲ್ಸ್ ಲಿಮಿಟೆಡ್ (ಎಂಎಂಎಲ್) ಮೂಲಕ ಕೆಲ ಖಾಸಗಿ ಕಂಪೆನಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂಬ ಆರೋಪದ ಮೇಲೆ ಕೃಷ್ಣ ಅವರ ವಿರುದ್ಧ ಪೊಲೀಸರು ನಡೆಸುತ್ತಿರುವ ತನಿಖೆಯನ್ನು ರದ್ದು ಮಾಡಿ ನ್ಯಾಯಮೂರ್ತಿಗಳು ಆದೇಶಿಸಿದ್ದಾರೆ.

ಅದೇ ರೀತಿ, ಕುಮಾರಸ್ವಾಮಿ ಅವರು ಗಣಿ ಉದ್ಯಮಿಗಳಿಂದ 150 ಕೋಟಿ ರೂಪಾಯಿ ಲಂಚ ಪಡೆದಿದ್ದರು ಎಂಬ ಆರೋಪ ಕುರಿತಾಗಿ ನಡೆಯುತ್ತಿರುವ ತನಿಖೆ ಮತ್ತು ಜಂತಕಲ್ ಗಣಿ ಕಂಪೆನಿಗೆ ಕಾನೂನುಬಾಹಿರವಾಗಿ ಗಣಿ ಗುತ್ತಿಗೆ ನವೀಕರಣಕ್ಕೆ ಶಿಫಾರಸು ಮಾಡಿರುವ ಆರೋಪದ ತನಿಖೆಯನ್ನೂ ರದ್ದು ಮಾಡಿ ಆದೇಶಿಸಲಾಗಿದೆ.

ಮುಖ್ಯಮಂತ್ರಿಗಳಾಗಿದ್ದ ವೇಳೆ ಅಕ್ರಮ ಗಣಿಗಾರಿಕೆಗೆ ಸಹಕಾರ ನೀಡಿದ ಆರೋಪದ ಮೇಲೆ ತಮ್ಮ ವಿರುದ್ಧ ದಾಖಲಾದ ದೂರು ಹಾಗೂ ಆ ದೂರಿನ ಅನ್ವಯ ದಾಖಲಾದ ಎಫ್‌ಐಆರ್ ರದ್ದತಿಗೆ ಕೋರಿ ಇವರಿಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಭಾಗಶಃ ಮಾನ್ಯ ಮಾಡಿದ ನ್ಯಾಯಮೂರ್ತಿಗಳು ಈ ಆದೇಶ ಹೊರಡಿಸಿದ್ದಾರೆ.

ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಅವರು ದಾಖಲು ಮಾಡಿದ್ದ ಖಾಸಗಿ ದೂರಿನ ಆಧಾರದ ಮೇಲೆ ಲೋಕಾಯುಕ್ತ ವಿಶೇಷ ಕೋರ್ಟ್ ತನಿಖೆಗೆ ಆದೇಶಿಸಿತ್ತು.

ಮಾನ್ಯವಾಗದ ವಾದ: `ಸಾರ್ವಜನಿಕ ಕ್ಷೇತ್ರದಲ್ಲಿ ಇರುವ ವ್ಯಕ್ತಿಗಳ ವಿರುದ್ಧ ಗಂಭೀರ ಆರೋಪ ಮಾಡಿದಾಗ, ಆ ಆರೋಪಗಳ ಆಧಾರದ ಮೇಲೆ ಪ್ರಥಮ ಮಾಹಿತಿ ವರದಿ ದಾಖಲಾದ ಸಂದರ್ಭದಲ್ಲಿ ಪ್ರಾಥಮಿಕ ತನಿಖೆಯನ್ನು ಉನ್ನತ ಮಟ್ಟದ ಅಧಿಕಾರಿಗಳು ನಡೆಸಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ. ಆದರೆ ಈ ಪ್ರಕರಣದಲ್ಲಿ ಆ ರೀತಿ ಆಗಿಲ್ಲ. ಆದುದರಿಂದ ತನಿಖೆ ರದ್ದು ಮಾಡಬೇಕು~ ಎನ್ನುವುದು ಅರ್ಜಿದಾರರ ಪ್ರಮುಖ ವಾದವಾಗಿತ್ತು.
ಇದಕ್ಕೆ ತೀರ್ಪಿನಲ್ಲಿ ಉತ್ತರಿಸಿರುವ ನ್ಯಾಯಮೂರ್ತಿಗಳು, `ಈ ಪ್ರಕರಣದಲ್ಲಿ ಲೋಕಾಯುಕ್ತ ವರದಿಯನ್ನು ಆಧರಿಸಿ ದೂರು ದಾಖಲಾಗಿರುವ ಹಿನ್ನೆಲೆಯಲ್ಲಿ ಪ್ರಾಥಮಿಕ ತನಿಖೆ ಅಗತ್ಯ ಇಲ್ಲ~ ಎಂದು ತಿಳಿಸಿದ್ದಾರೆ.

ಆದರೆ ಕೆಲವು ಆರೋಪಗಳಿಗೆ ಸಂಬಂಧಿಸಿದಂತೆ ತನಿಖೆ ರದ್ದುಗೊಳಿಸಿರುವ ನ್ಯಾಯಮೂರ್ತಿಗಳು, ಈ ಆರೋಪಗಳು ಎಫ್‌ಐಆರ್ ದಾಖಲು ಮಾಡಿ ತನಿಖೆ ನಡೆಸುವಷ್ಟು ಗಂಭೀರವೆಂದು ಎನಿಸುತ್ತಿಲ್ಲ ಎಂದು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.

ಕೃಷ್ಣ ಪ್ರತಿಕ್ರಿಯೆ: `ಹೈಕೋರ್ಟ್ ನೀಡಿರುವ ಆದೇಶದ ಪ್ರತಿಯನ್ನು ನಾನು ಇನ್ನೂ ಓದಿಲ್ಲ. ತೀರ್ಪಿನ ಅಂಶಗಳನ್ನು ಸಂಪೂರ್ಣವಾಗಿ ಪರಿಶೀಲಿಸಿದ ನಂತರ ನನ್ನ ವಕೀಲರ ಜೊತೆ ಮಾತುಕತೆ ನಡೆಸಿ ಮುಂದಿನ ಹೆಜ್ಜೆ ಏನೆಂಬುದನ್ನು ನಿರ್ಧರಿಸುವೆ~ ಎಂದು ಕೃಷ್ಣ ಪ್ರಕ್ರಿಯೆ ನಿಡಿದ್ದಾರೆ.

ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, `ತೀರ್ಪಿನ ಪೂರ್ಣ ಪ್ರತಿಯನ್ನು ಅಧ್ಯಯನ ಮಾಡದೆ ನಾನು ಯಾವುದೇ ಪ್ರತಿಕ್ರಿಯೆ ನೀಡಲಾರೆ~ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT