ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣನ್ ಕುಟ್ಟಿ ಕಣ್ಮರೆ

Last Updated 26 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಮಾತಿನ ನಡುವೆ ನನ್ನ ಸಂಬಂಧಿಕರೊಬ್ಬರು ತೀರಿಕೊಂಡಿದ್ದನ್ನೂ, ಅವರಿಗೆ 68 ವರ್ಷ ವಯಸ್ಸಾಗಿತ್ತೆಂಬುದನ್ನೂ ಡಿ.ಆರ್.ಬಾಲು ಅವರಿಗೆ ತಿಳಿಸಿದೆ.

ಡಿ.ಆರ್.ಬಾಲು ನನಗಿಂತಲೂ ಸುಮಾರು 25 ವರ್ಷ ದೊಡ್ಡವರು. ಆದರೆ ನನ್ನ ಅತ್ಯುತ್ತಮ ಗೆಳೆಯರಲ್ಲಿ ಒಬ್ಬರಾಗಿದ್ದರು. ನಾನು ಸಲಿಗೆಯಿಂದ `ಬಾಲು~ ಎಂದೇ ಅವರನ್ನು ಕರೆಯುತ್ತಿದ್ದೆ.

ಸುಮಾರು ಹತ್ತು ವರ್ಷಗಳ ಕೆಳಗೆ ಒಮ್ಮೆ ನನ್ನ ಮೊದಲ ಕಥಾಸಂಕಲನವನ್ನು ಓದಿ ಮೆಚ್ಚುಗೆ ವ್ಯಕ್ತಪಡಿಸಲು ಅವರು ಫೋನ್ ಮಾಡಿದಾಗ, ಅವರು ಮಾತನಾಡುವುದಕ್ಕೆ ಮುಂಚೆ `ಕೃಷ್ಣನ್ ಕುಟ್ಟಿ~ ಕತೆ ಬರೆದೋರು ನೀವೇ ಅಲ್ವಾ? ನನಗೆ ಆ ಕತೆ ತುಂಬಾ ಇಷ್ಟ~ ಎಂದು ಹೇಳಿದ್ದಕ್ಕೆ ತುಂಬಾ ಖುಷಿ ಪಟ್ಟಿದ್ದರು.

1994ರಲ್ಲಿ ವಾರಪತ್ರಿಕೆಯೊಂದರಲ್ಲಿ ಪ್ರಕಟವಾದ ಕತೆಯೊಂದನ್ನು ನೆನಪಿಟ್ಟುಕೊಂಡು ಹೇಳಿದ ನನ್ನನ್ನು ತಕ್ಷಣವೇ ತಮ್ಮ ಗೆಳೆಯನನ್ನಾಗಿ ಮಾಡಿಕೊಂಡರು. ಅವರ ಫೋನ್ ನಂಬರನ್ನು ನಾನು `ಕೃಷ್ಣನ್ ಕುಟ್ಟಿ~ ಎಂದೇ ಹೆಸರಿಸಿ ಶೇಖರಣೆ ಮಾಡಿಕೊಂಡಿದ್ದೆ.
ಬಾಲು ಹೆಚ್ಚು ಬರೆದವರಲ್ಲ.

ಒಂದು ಕಿರು ಕಾದಂಬರಿ, ಮೂರು ಕಥಾಸಂಕಲನಗಳು ಪ್ರಕಟವಾಗಿವೆ. ಜೊತೆಗೆ ಹಲವು ಲಲಿತ ಪ್ರಬಂಧಗಳನ್ನು ಬರೆದಿದ್ದಾರೆ. ಆದರೆ ಹಲವು ಒಳ್ಳೆಯ ಕಥೆಗಳು ಅವರ ಲೇಖನಿಯಿಂದ ಮೂಡಿ ಬಂದಿವೆ.

ನಮ್ಮ ಶಿಕ್ಷಣ ವ್ಯವಸ್ಥೆಯನ್ನೇ ಗೇಲಿ ಮಾಡುವಂತಹ `ಕೃಷ್ಣನ್ ಕುಟ್ಟಿ~ ಕತೆ ನನಗೆ ಅತ್ಯಂತ ಇಷ್ಟವಾದದ್ದು. `ಅಪರಕರ್ಮ~, `ಪೋಸ್ಟ್ ಮಾರ್ಟಂ~, `ಫ್ಯೂಜ್~ ಮುಂತಾದ ವಿಭಿನ್ನ ವಸ್ತುವಿನ ಕತೆಗಳು ಸಹೃದಯ ಓದುಗರಿಗೆ ನೆನಪಿರಬಹುದು.

ಅತ್ಯಂತ ಸರಳವಾದ ಭಾಷೆಯಲ್ಲಿ, ಪ್ರಾಮಾಣಿಕವಾಗಿ, ಅಬ್ಬರವಿಲ್ಲದೆ ಕಥೆ ಬರೆಯುತ್ತಿದ್ದರು. ಬಹಳಷ್ಟು ಯುವ ಕತೆಗಾರರನ್ನು ಗುರುತಿಸಿದ ಚಿ.ಶ್ರೀನಿವಾಸ ರಾಜು ಮಾಸ್ತರರು ಇವರನ್ನೂ ಗುರುತಿಸಿ ತಮ್ಮ ಕ್ರೈಸ್ಟ್ ಕಾಲೇಜಿನಿಂದ ಅವರ ಮೊದಲ ಕಥಾಸಂಕಲನ `ಪೋಸ್ಟ್‌ಮಾರ್ಟಂ~ ಅನ್ನು ಪ್ರಕಟಿಸಿದ್ದರು.

ಬಾಲು ಇಂಗ್ಲೀಷ್ ಭಾಷೆಯಿಂದಲೂ ಕೆಲವು ಒಳ್ಳೆಯ ಕಥೆಗಳನ್ನು ಕನ್ನಡಕ್ಕೆ ಸೊಗಸಾಗಿ ರೂಪಾಂತರಿಸಿದ್ದಾರೆ. ಕೇವಲ ನಾಲ್ಕನೇ ತರಗತಿಯವರೆಗೆ ಮಾತ್ರ ಕನ್ನಡದಲ್ಲಿ ಓದಿ, ಅನಂತರ ಬೇರೆ ರಾಜ್ಯಗಳಲ್ಲಿ ಓದಿ, ಅಲ್ಲಿಯೇ ಬದುಕನ್ನು ಸವೆಸಿದ ಬಾಲು ಕನ್ನಡದಲ್ಲಿ ಇಷ್ಟೊಂದು ಪ್ರೀತಿಯಿಂದ ಕತೆಗಳನ್ನು ಬರೆದದ್ದೇ ನನಗೆ ಅಚ್ಚರಿ.

ಕೊಚ್ಚಿನ್ನಿನ ರೀಜನಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಭೌತಶಾಸ್ತ್ರ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, ನಿವೃತ್ತಿಯ ನಂತರ ಬೆಂಗಳೂರಿಗೆ ಬಂದು ನೆಲೆಸಿದ್ದರು.ಬಾಲು ಸಾಕಷ್ಟು ಕನ್ನಡ ಸಾಹಿತ್ಯವನ್ನು ಓದಿಕೊಂಡಿದ್ದರು.

ನನ್ನ ಮನೆಗೆ ಬಂದಾಗ ಕಣ್ಣಿಗೆ ಬಿದ್ದ ಪುಸ್ತಕದ ಮೇಲೆ ಮಾತನಾಡಿ, ಅದರ ವಿಶಿಷ್ಟತೆಯನ್ನು ಹೇಳಿಬಿಡುತ್ತಿದ್ದರು. ಒಮ್ಮೆ ನನ್ನ ಮೇಜಿನ ಮೇಲಿದ್ದ ಲಕ್ಷ್ಮಣ ಕೊಡಸೆಯವರ ಮಿನಿ ಕಾದಂಬರಿಯೊಂದನ್ನು ನೋಡಿದ್ದೇ, `ಇದರಲ್ಲಿ ಒಂದು ಹೆಣ್ಣಿನ ಪಾತ್ರ ಬರುತ್ತೆ ನೋಡಿ, ಕ್ಷಣ ಚಿತ್ತ ಕ್ಷಣ ಪಿತ್ಥ ಅನ್ನೋ ತರಹದ್ದು.

ಕನ್ನಡಕ್ಕೆ ಅದು ಹೊಸ ಪಾತ್ರ ಅಲ್ವಾ?~ ಎಂದು ನನ್ನ ಮನಸ್ಸಿನ ಮಾತನ್ನು ಹೇಳಿ ಚಕಿತಗೊಳಿಸಿದ್ದರು. ಬರೀ ಶ್ರೇಷ್ಠ ಕೃತಿಗಳೊಂದೇ ಅಲ್ಲ, ಅವರು ಜನಪ್ರಿಯ ಕಾದಂಬರಿಗಳನ್ನೂ ಅಷ್ಟೇ ಆಸಕ್ತಿಯಿಂದ ಓದಿ, ಅದರಲ್ಲಿನ ಒಳ್ಳೆಯ ಅಂಶಗಳನ್ನು ಹೆಕ್ಕಿ ನನಗೆ ತಿಳಿಸುತ್ತಿದ್ದರು.

ಅವರ ಇಂಗ್ಲೀಷ್ ಓದಿನ ಹರವೂ, ವಿದ್ವತ್ತೂ ಚೆನ್ನಾಗಿತ್ತು. ತಮ್ಮ ಕತೆಗಳನ್ನು ಸುಲಭವಾಗಿ ಇಂಗ್ಲೀಷಿಗೆ ತರ್ಜುಮೆ ಮಾಡಿಕೊಂಡಿದ್ದರು.ನಮ್ಮಿಬ್ಬರಲ್ಲಿದ್ದ ಮತ್ತೊಂದು ಸಮಾನ ಆಸಕ್ತಿಯೆಂದರೆ ಸಿನಿಮಾ. ಬಾಲು ಎಲ್ಲಾ ಒಳ್ಳೆಯ ಸಿನಿಮಾಗಳನ್ನು ನೋಡಿ ಬಿಟ್ಟಿರುತ್ತಿದ್ದರು.
 
ತಮಿಳು, ಮಲೆಯಾಳಂ, ತೆಲುಗು ಭಾಷೆಗಳು ಅವರಿಗೆ ಚೆನ್ನಾಗಿ ಬರುತ್ತಿತ್ತು. ಹಾಲಿವುಡ್, ಬಾಲಿವುಡ್ ಮತ್ತು ಅಂತರರಾಷ್ಟ್ರೀಯ ಸಿನಿಮಾಗಳನ್ನು ನೋಡುತ್ತಿದ್ದರು. ಒಮ್ಮೆ ನನ್ನ ಮನೆಗೆ ಬಂದರೆ ಸಾಕು, ನಾನು ನೋಡಬೇಕಾದ ಹೊಸ ಸಿನಿಮಾಗಳ ಪಟ್ಟಿಯನ್ನೇ ಕೊಟ್ಟು ಹೋಗುತ್ತಿದ್ದರು.

ಮೊನ್ನೆ ಮನೆಗೆ ಬಂದಾಗ, `7 ಆಮ್ ಅರಿವು~ ತಮಿಳು ಸಿನಿಮಾ ನೋಡಿ, ಚೆನ್ನಾಗಿದೆ~ ಎಂದು ಹೇಳಿದ್ದೆ. ಎರಡೇ ದಿನಕ್ಕೆ ನನಗೆ ಫೋನಾಯಿಸಿ- `ನೋಡಿದೆ, ಆದರೆ ಯಾಕೋ ನಂಗೆ ಅಷ್ಟೊಂದು ಇಷ್ಟ ಆಗಲಿಲ್ಲ~ ಅಂತ ಸಂಕೋಚದಿಂದಲೇ ಹೇಳಿದ್ದರು.

ನಮ್ಮ ಮನೆಗೆ ಬಂದು ನನ್ನೊಡನೆ ಗಂಟೆಗಟ್ಟಲೆ ಹರಟುವದಕ್ಕೆ ಅವರಿಗೆ ಅತ್ಯಂತ ಉತ್ಸಾಹ. ಸಂಕೋಚ ಸ್ವಭಾವದ ಬಾಲು ಪ್ರಾಮಾಣಿಕವಾಗಿ ಮಾತನಾಡುತ್ತಿದ್ದರು.
 
ಒಮ್ಮೆ ಇದ್ದಕ್ಕಿದ್ದಂತೆ `ನನಗೆ ಈಗಲೂ ಸೈಕಲ್ ಹೊಡೆಯೋಕೆ ಬರಲ್ಲ ಕಣ್ರಿ. ನಿವೃತ್ತಿ ಆದ ಮೇಲೆ ಕಾರು ಡ್ರೈವ್ ಮಾಡೋದು ಕಲಿತುಕೊಂಡೆ~ ಎಂದು ಹೇಳಿ ನಕ್ಕುಬಿಟ್ಟಿದ್ದರು.

ತಮ್ಮ ಹೊಸ ಕಥಾಸಂಕಲನವನ್ನು ನನ್ನ `ಛಂದ ಪುಸ್ತಕ~ದಿಂದ ಪ್ರಕಟಿಸುವ ಆಸೆ ಅವರಿಗಿತ್ತು. ಆದರೆ ನಾನು ಸಂಕೋಚದಿಂದ ಅದು ನನ್ನ ಛಂದದ ನಿಯಮಗಳಿಗೆ ಹೊಂದುವುದಿಲ್ಲ ಎಂದು ಹೇಳಿದ್ದೆ.

ಮತ್ತೆಂದೂ ಅದರ ಬಗ್ಗೆ ಮಾತನಾಡದ ಬಾಲು, ಆ ಕಾರಣಕ್ಕಾಗಿ ಗೆಳೆತನದಲ್ಲಿ ಎಳ್ಳಷ್ಟೂ ಕಹಿಯನ್ನು ತೋರಿಸಲಿಲ್ಲ. ಮುಂದೆ ಆ ಪುಸ್ತಕ ಬೇರೊಬ್ಬ ಪ್ರಕಾಶಕರಿಂದ ಮುದ್ರಣಗೊಂಡಾಗ ತಮ್ಮ ಮುನ್ನುಡಿಯಲ್ಲಿ ಕೃತಜ್ಞತೆಯಿಂದ ನನ್ನ ಗೆಳೆತನವನ್ನು ನೆನೆದಿದ್ದರು.

ಎರಡು ವಾರದ ಕೆಳಗೆ ಮನೆಗೆ ಬಂದಾಗ ತುಂಬಾ ಸುಸ್ತಾದವರಂತೆ ಕಂಡಿದ್ದರು. ವಿದ್ಯಾರಣ್ಯಪುರದಿಂದ ನನ್ನ ಬನ್ನೇರುಘಟ್ಟದ ಮನೆಗೆ ಬಸ್ಸಿನಲ್ಲಿ ಬಂದಿದ್ದರು.
 
ಮಧ್ಯಾಹ್ನದ ಸಮಯವಾದ್ದರಿಂದ ನಾನು ಅವರಿಗೆ ಬಲವಂತ ಮಾಡಿ ಚಪಾತಿ, ಪಲ್ಯ ತಿನ್ನಿಸಿದ್ದೆ. `ನಿಮಗೆ ರಾತ್ರಿಗೆ ಮತ್ತೆ ಅಡಿಗೆ ಮಾಡ್ಕೋಬೇಕಾಗುತ್ತೆ~ ಎಂದು ಸಂಕೋಚಪಡುತ್ತಲೇ ಉಂಡಿದ್ದರು.

ಬಸ್ ನಿಲ್ದಾಣದಲ್ಲಿ ಅವರನ್ನು ಬಿಡಲು ನಾನು ಜೊತೆಗೆ ಹೋಗಿದ್ದೆ. ಮಾರ್ಗ ಮಧ್ಯದಲ್ಲಿ ನನ್ನ ಸಂಬಂಧಿಕರೊಬ್ಬರು ತೀರಿಕೊಂಡಿದ್ದನ್ನೂ, ಅವರಿಗೆ ಬರೀ 68 ವರ್ಷ ವಯಸ್ಸಾಗಿತ್ತೆಂಬುದನ್ನೂ ಸಹಜವಾಗಿ ತಿಳಿಸಿದೆ.
 
ಅವರು ತಕ್ಷಣ ನಿಂತು ಬಿಟ್ಟು, `ನಂಗೂ ಈಗ 68 ವರ್ಷ ಕಣ್ರಿ. ಹೆದರಿಕೆಯಾಗುತ್ತೆ~ ಎಂದಿದ್ದರು. ನಾನು ಅವರ ಕೈಯನ್ನು ಒತ್ತಿ, `ನೀವು ನೂರು ವರ್ಷ ಬಾಳ್ತೀರಿ ನೋಡಿ~ ಎಂದು ಧೈರ್ಯ ತುಂಬಿದ್ದೆ.

ಬರಹಕ್ಕಿಂತಾ ಬದುಕು ಮುಖ್ಯವೆಂದು ಖಚಿತವಾಗಿ ನಂಬಿರುವ ನನ್ನಂತಹವನಿಗೆ ಬಾಲು ತರಹದ ಪ್ರಾಮಾಣಿಕ ಗೆಳೆಯರ ಸ್ನೇಹ ಅತ್ಯಂತ ಸಂತೋಷವನ್ನು ಕೊಡುತ್ತದೆ.

ಆದ್ದರಿಂದಲೇ ಈಗ `ಕೃಷ್ಣನ್ ಕುಟ್ಟಿ~ಯ ಹೆಸರನ್ನು ನನ್ನ ಮೊಬೈಲ್ ಮತ್ತು ಇ-ಮೇಲ್ ಕಾಂಟಾಕ್ಟ್ ಪಟ್ಟಿಯಿಂದ ತೆಗೆದು ಹಾಕುವಾಗ ದುಃಖವಾಗುತ್ತಿದೆ.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT