ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣಮೃಗಳಿಂದ ರಾಗಿ ಹೊಲ ಸ್ವಾಹ

Last Updated 11 ಫೆಬ್ರುವರಿ 2012, 9:45 IST
ಅಕ್ಷರ ಗಾತ್ರ

ಶಿರಾ: ಕೃಷ್ಣಮೃಗಗಳು ರಾತ್ರಿ ವೇಳೆ ರಾಗಿ ಹೊಲಗಳಿಗೆ ನುಗ್ಗಿ ಬೆಳೆ ನಾಶ ಮಾಡುತ್ತಿರುವುದು ಕಳೆದ ನಾಲ್ಕೈದು ದಿನಗಳಿಂದ ತಾಲ್ಲೂಕಿನ ಕಾಮಗೊಂಡನಹಳ್ಳಿಯಲ್ಲಿ ನಡೆದಿದೆ.

ಗ್ರಾಮದ ಮುದ್ದಲಿಂಗಪ್ಪ ಹಾಗೂ ಸೋಮ ಅವರಿಗೆ ಸೇರಿದ ಸುಮಾರು 4 ಎಕರೆ ರಾಗಿ ಪೈರಿನ ಮೇಲೆ ಪ್ರತಿ ರಾತ್ರಿ ಸುಮಾರು 20ರಿಂದ 30 ಕೃಷ್ಣಮೃಗಗಳಿರುವ ಹಿಂಡು ದಾಳಿ ಮಾಡಿ ಬೆಳೆ ತಿಂದು ಪರಾರಿಯಾಗುತ್ತಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಈಗಾಗಲೇ ಸುಮಾರು ಎರಡು ಎಕೆರೆಯಷ್ಟು ರಾಗಿ ಹೊಲವನ್ನು ನಾಶ ಮಾಡಿರುವ ಕೃಷ್ಣಮೃಗಗಳು ಮುಂದಿನ ದಿನಗಳಲ್ಲಿ ಅಳಿದುಳಿದ ರಾಗಿ ಹಾಗೂ ಬೇರೆ ಬೆಳೆಗಳ ಮೇಲೂ ದಾಳಿ ಮಾಡುವ ಸಾಧ್ಯತೆ ಇದೆ ಎಂದು ಸುತ್ತಲಿನ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಕೃಷ್ಣಮೃಗ ಎಂದು ವಿಶೇಷವಾಗಿ ಗುರುತಿಸುವ ಜಿಂಕೆಗಳು ತಾಲ್ಲೂಕಿನ ಗುಂಡಪ್ಪ ಚಿಕ್ಕೇನಹಳ್ಳಿ, ಹೆಂದೊರೆ ಸುತ್ತಮುತ್ತಲಿನ ಪ್ರದೇಶದಲ್ಲಿ ಅಧಿಕ ಸಂಖ್ಯೆಯಲ್ಲಿದ್ದು, ಈ ವರ್ಷ ಮಳೆ ಇಲ್ಲದೆ ಬರ ಆವರಿಸಿದ ಕಾರಣದಿಂದ ಅವುಗಳಿಗೆ ಅಡವಿಯಲ್ಲಿ ತಿನ್ನಲು ಮೇವು ಇಲ್ಲದೆ ರೈತರ ನೀರಾವರಿ ಜಮೀನಿನ ಬೆಳೆಗಳ ಮೇಲೆ ದಾಳಿ ಮಾಡುತ್ತಿರುವುದು ಸಾಮಾನ್ಯವಾಗಿದೆ.

ನಿತ್ಯ ರಾತ್ರಿ ಕಾವಲು ಕಾದರೂ ಪ್ರಯೋಜನವಾಗು ತ್ತಿಲ್ಲ ಎಂದು ಅಳಲು ವ್ಯಕ್ತಪಡಿಸುವ ರಾಗಿ ಹೊಲದ ಮಾಲೀಕ ಮುದ್ದಲಿಂಗಪ್ಪ, ನಾವು ರಾತ್ರಿ ಸುಮಾರು 12 ಗಂಟೆವರೆಗೂ ಕಾವಲು ಕಾದು ಅವು ಇನ್ನು ಬರುವುದಿಲ್ಲ ಎಂದು ನಿದ್ದೆಗೆ ಜಾರುತ್ತೇವೆ. ಆದರೆ ಅವು ಮಧ್ಯರಾತ್ರಿ 2- 3 ಗಂಟೆ ವೇಳೆಗೆ ಹಿಂಡಾಗಿ ಬಂದು ರಾಗಿ ಬೆಳೆ ಮೇದು ಹೋಗಿರುತ್ತವೆ ಎನ್ನುತ್ತಾರೆ.

ಸುಮಾರು 20ಕ್ಕೂ ಹೆಚ್ಚು ಜಿಂಕೆಗಳು ಮೇಯುತ್ತಿ ರುವುದನ್ನು ಖುದ್ದು ನೋಡಿರುವುದಾಗಿ ಹೇಳುವ ರೈತ ಸೋಮ, ಅವುಗಳನ್ನು ಹಿಡಿಯೋಣವೆಂದರೆ ಬರಿಗೈಗೆ ಸಿಗುವುದಿಲ್ಲ. ಕಲ್ಲು ಮತ್ತಿತರರ ಆಯುಧಗಳಿಂದ ಸಾಯಿಸೋಣವೆಂದರೆ ಅವುಗಳ ಮುಗ್ದ ಸೌಂದರ್ಯಕ್ಕೆ ಮನಸ್ಸೇ ಬರುವುದಿಲ್ಲ. ಬಲೆ ಹಾಕಿ ಹಿಡಿಯೋಣವೆಂದರೆ ಕಾನೂನಿನ ಭಯ ಎನ್ನುತ್ತಾರೆ.

ಇದರಿಂದ ತಾಲ್ಲೂಕು ಅರಣ್ಯ ಇಲಾಖೆ ಮೊರೆ ಹೋಗಿರುವ ರೈತರು, ಖುದ್ದು ಅರಣ್ಯಾಧಿಕಾರಿಯನ್ನೇ ಸ್ಥಳಕ್ಕೆ ಕರೆದುಕೊಂಡು ಹೋಗಿ ಪರಿಶೀಲನೆ ಮಾಡಿ ಸಿದ್ದಾರೆ. ರಾಗಿ ಹೊಲದಲ್ಲಿ ಬೆಳೆ ತಿಂದು ಅಲ್ಲಿಯೇ ಮಲ ವಿಸರ್ಜನೆ ಮಾಡಿದ್ದನ್ನು ಪರಿಶೀಲಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಅವುಗಳು ಕೃಷ್ಣಮೃಗಗಳೆಂದು ಖಚಿತಪಡಿಸಿದ್ದಾರೆ. ಅಲ್ಲದೆ ಪರಿಹಾರ ನೀಡುವ ಭರವಸೆ ನೀಡಿರುವುದಾಗಿ ರೈತರು ತಿಳಿಸಿದ್ದಾರೆ.

ತಾಲ್ಲೂಕಿನಲ್ಲಿ ಈಚೆಗೆ ಹೆಚ್ಚುತ್ತಿರುವ ಕೃಷ್ಣಮೃಗ ಹಾಗೂ ನವಿಲುಗಳನ್ನು ಯಾವುದೇ ಕಾರಣಕ್ಕೂ ಭೇಟೆಯಾಡದೇ ಸಂರಕ್ಷಿಸಬೇಕು ಎಂದು ವನ್ಯಜೀವಿಪ್ರಿಯರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT