ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣಯ್ಯ ಶೆಟ್ಟಿ, ರಾಮದಾಸ್‌ ಮನೆಗಳ ಮೇಲೆ ಐ.ಟಿ ದಾಳಿ

Last Updated 12 ಸೆಪ್ಟೆಂಬರ್ 2013, 20:15 IST
ಅಕ್ಷರ ಗಾತ್ರ

ಬೆಂಗಳೂರು: ಎರಡು ಗೃಹ ನಿರ್ಮಾಣ ಸಹಕಾರ ಸಂಘಗಳ ಜೊತೆಗಿನ ಭೂ ವ್ಯವಹಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವರಾದ ಎಸ್‌.ಎ.ರಾಮದಾಸ್‌ ಮತ್ತು ಎಸ್‌.ಎನ್‌.ಕೃಷ್ಣಯ್ಯ ಶೆಟ್ಟಿ ಅವರ ಮನೆ, ಕಚೇರಿಗಳ ಮೇಲೆ ಗುರುವಾರ ದಾಳಿ ಮಾಡಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, ಶೋಧ ನಡೆಸಿದ್ದಾರೆ.

ಬೆಂಗಳೂರಿನ ಟೆಲಿಕಾಂ ಇಲಾಖೆ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ಮತ್ತು ಸಂಪರ್ಕ ಸಚಿವಾಲಯದ ನೌಕರರ ಗೃಹ ನಿರ್ಮಾಣ ಸಹಕಾರ ಸಂಘಗಳ ಜೊತೆಗಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ. ಬೆಂಗಳೂರು ಮತ್ತು ಮೈಸೂರಿನ 20 ಸ್ಥಳಗಳಲ್ಲಿ ನಡೆದ ಶೋಧ ಕಾರ್ಯದಲ್ಲಿ ಆದಾಯ ತೆರಿಗೆ ಇಲಾಖೆಯ ಸುಮಾರು 150 ಅಧಿಕಾರಿಗಳು ಪಾಲ್ಗೊಂಡಿದ್ದರು ಎಂದು ಮೂಲಗಳು ತಿಳಿಸಿವೆ. ಬೆಳಿಗ್ಗೆ ಎಂಟು ಗಂಟೆಗೆ ಎಲ್ಲಾ ಕಡೆಗಳಲ್ಲಿ ಶೋಧ ಕಾರ್ಯ ಆರಂಭವಾಗಿತ್ತು. ಮಧ್ಯರಾತ್ರಿಯೂ ಕಾರ್ಯಾಚರಣೆ ಮುಂದುವರೆದಿತ್ತು.

ಮಾಜಿ ಸಚಿವರ ಒಡೆತನದ ರಿಯಲ್‌ ಎಸ್ಟೇಟ್‌ ಕಂಪೆನಿಗಳು ಗೃಹ ನಿರ್ಮಾಣ ಸಹಕಾರ ಸಂಘಗಳ ಜೊತೆ ಸೇರಿಕೊಂಡು ಭಾರಿ ಪ್ರಮಾಣದ ರಿಯಲ್‌ ಎಸ್ಟೇಟ್‌ ವ್ಯವಹಾರ ನಡೆಸಿರುವ ಬಗ್ಗೆ ಇಲಾಖೆ ಮಾಹಿತಿ ಕಲೆಹಾಕಿತ್ತು. ಈ ಸಂಬಂಧ ಹಲವು ಮಹತ್ವದ ದಾಖಲೆಗಳನ್ನು ಶೋಧಕಾರ್ಯದ ವೇಳೆ ವಶಪಡಿಸಿಕೊಳ್ಳಲಾಗಿದೆ ಎಂದು ಗೊತ್ತಾಗಿದೆ.

ರಾಮದಾಸ್‌ ಅವರ ಸಹೋದರ ಶ್ರೀಕಾಂತ್ ದಾಸ್‌ ಅವರು ತಮ್ಮ ಒಡೆತನದ ಎಸ್‌.ಎಸ್‌.ಇನ್‌ಫ್ರಾಸ್ಟ್ರಕ್ಚರ್‌ ಮೂಲಕ ವಸತಿ ಬಡಾವಣೆಗಳನ್ನು ನಿರ್ಮಿಸಿ ನಿವೇಶನಗಳನ್ನು ಮಾರಾಟ ಮಾಡುತ್ತಿದ್ದರು. ಕೃಷ್ಣಯ್ಯ ಶೆಟ್ಟಿ ಅವರ ಒಡೆತನದ ಬಾಲಾಜಿ ಕೃಪ ಎಂಟರ್‌ಪ್ರೈಸಸ್‌ ಕೂಡ ರಿಯಲ್‌ ಎಸ್ಟೇಟ್‌ ವ್ಯವಹಾರ ನಡೆಸುತ್ತಿದೆ. ಈ ಎರಡೂ ಕಂಪೆನಿಗಳು ಗೃಹ ನಿರ್ಮಾಣ ಸಹಕಾರ ಸಂಘಗಳ ಜೊತೆ ಸೇರಿಕೊಂಡು ವಾಣಿಜ್ಯ ಸ್ವರೂಪದ ರಿಯಲ್‌ ಎಸ್ಟೇಟ್‌ ವ್ಯವಹಾರ ನಡೆಸಿರುವ ಆರೋಪದ ಕುರಿತು ಆದಾಯ ತೆರಿಗೆ ಇಲಾಖೆ ತನಿಖೆ ನಡೆಸುತ್ತಿದೆ.

ಈ ಸಹಕಾರ ಸಂಘಗಳು ಆಯಾ ಇಲಾಖೆಯ ನೌಕರರಿಗೆ ಮೀಸಲಾಗಿವೆ. ಸಂಘದ ಸದಸ್ಯತ್ವ ಹೊಂದಿರುವವರಿಗೆ ಮಾತ್ರ ನಿವೇಶನಗಳನ್ನು ವಿತರಿಸಬಹುದು. ಆದರೆ, ಇಲಾಖೆಗಳ ನೌಕರರಲ್ಲದವರನ್ನು ಸಹ ಸದಸ್ಯರನ್ನಾಗಿ ನೋಂದಣಿ ಮಾಡಿಕೊಂಡು ನಿವೇಶನ ವಿತರಿಸಿರುವ ಆರೋಪ ಎದುರಿಸುತ್ತಿವೆ.

ಈ ಪ್ರಕರಣದಲ್ಲಿ ಶಾಮೀಲಾಗಿರುವ ಒಂದು ಸಹಕಾರ ಸಂಘದಲ್ಲಿ 1,500 ಸದಸ್ಯರಿದ್ದರೆ, 18,500 ಸಹ ಸದಸ್ಯರು ಇದ್ದಾರೆ. ಈ ಸಂಘಗಳು 2,000 ಎಕರೆಗೂ ಹೆಚ್ಚು ವಿಸ್ತೀರ್ಣದ ವಸತಿ ಬಡಾವಣೆಗಳನ್ನು ನಿರ್ಮಿಸಿ ನಿವೇಶನಗಳನ್ನು ಮಾರಾಟ ಮಾಡಿರುವ ಕುರಿತು ಇಲಾಖೆ ಮಾಹಿತಿ ಕಲೆಹಾಕಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT