ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣಾ, ಉಪನದಿಗಳಲ್ಲಿ ಪ್ರವಾಹ

Last Updated 2 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಚಿಕ್ಕೋಡಿ: ತಾಲ್ಲೂಕಿನಲ್ಲಿ ಮಳೆಯ ಕಣ್ಣಾಮುಚ್ಚಾಲೆ ಮುಂದುವರಿದಿದ್ದರೂ, ನೆರೆಯ ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ತಾಲ್ಲೂಕಿನಲ್ಲಿ ಕೃಷ್ಣಾ ಮತ್ತು ಉಪನದಿಗಳಾದ ದೂಧಗಂಗಾ, ವೇದಗಂಗಾ ನದಿಗಳಲ್ಲಿ ಬುಧವಾರದಿಂದ ನೀರಿನ ಮಟ್ಟ ಹೆಚ್ಚಿದೆ. ಕೆಳಮಟ್ಟದ ಐದು ಸೇತುವೆಗಳು ಜಲಾವೃತಗೊಂಡು ಮತ್ತೆ ವಾಹನ ಸಂಚಾರ ಸ್ಥಗಿತಗೊಂಡಿದೆ.

ತಾಲ್ಲೂಕಿನ ಕಲ್ಲೋಳ- ಯಡೂರ, ಮಲಿಕವಾಡ-ದತ್ತವಾಡ, ಸದಲಗಾ-ಬೋರಗಾಂವ, ಅಕ್ಕೋಳ-ಸಿದ್ನಾಳ ಮತ್ತು ಜತ್ರಾಟ-ಭೀವಶಿ ಸೇತುವೆಗಳು ಜಲಾವೃತಗೊಂಡಿವೆ. ಕಳೆದ ತಿಂಗಳ 27 ರಂದು ಕೂಡ ಕೆಳಮಟ್ಟದ ಸೇತುವೆಗಳು ಮುಳುಗಡೆಯಾಗಿ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಕೃಷ್ಣಾ ಮತ್ತು ಉಪನದಿಗಳ ಉಗಮಸ್ಥಾನವಾದ ಮಹಾರಾಷ್ಟ್ರದ ಮಹಾಬಳೇಶ್ವರ ಸೇರಿದಂತೆ ಘಟ್ಟ ಪ್ರದೇಶಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ರಾಜಾಪೂರ ಬ್ಯಾರೇಜ್‌ನಿಂದ 85,729 ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಹರಿದು ಬರುತ್ತಿದೆ.

ಕೃಷ್ಣಾ ನದಿಯಲ್ಲಿ ನೀರು ಕ್ಷಣಕ್ಷಣವೂ ಏರುತ್ತಿದ್ದು ಮಾಂಜರಿ, ಯಡೂರ ಪರಿಸರದಲ್ಲಿ ನದಿ ತೀರದಲ್ಲಿರುವ ಇಟ್ಟಿಗೆ ಬಟ್ಟಿಗಳಿಗೆ ನೀರು ನುಗ್ಗಿದೆ. ನದಿದಡದಲ್ಲಿ ಅಳವಡಿಸಲಾಗಿರುವ ನೀರಾವರಿ ಪಂಪಸೆಟ್‌ಗಳನ್ನು ಸ್ಥಳಾಂತರಿಸುವ ಕಾರ್ಯದಲ್ಲಿ ಕೃಷಿಕರು ಮಗ್ನರಾಗಿದ್ದಾರೆ.

ಮಳೆ ವಿವರ
ಗುರುವಾರ ಬೆಳಿಗ್ಗೆ 8.30ಕ್ಕೆ ಅಂತ್ಯಗೊಂಡ 24 ಗಂಟೆ ಅವಧಿಯಲ್ಲಿ ಚಿಕ್ಕೋಡಿ-2.7 ಮಿ.ಮೀ, ನಿಪ್ಪಾಣಿ-3.7 ಮಿ.ಮೀ, ಸೌಂದಲಗಾ- 2.3ಮಿ.ಮೀ ಮಾತ್ರ ಮಳೆಯಾಗಿದೆ.  ಮಹಾರಾಷ್ಟ್ರದ ಕೊಯ್ನಾ- 90 ಮಿ.ಮೀ, ನವಜಾ- 56 ಮಿ.ಮೀ, ಮಹಾಬಳೇಶ್ವರ-227 ಮಿ.ಮೀ, ವಾರಣಾ-32 ಮಿ.ಮೀ ಮಳೆ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT