ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣಾ ನೀರು ಬಳಕೆಗೆ ರಾಜಕೀಯ ಇಚ್ಛಾಶಕ್ತಿ ಬೇಕು

Last Updated 27 ಫೆಬ್ರುವರಿ 2011, 8:45 IST
ಅಕ್ಷರ ಗಾತ್ರ

ಡಾದೇವೇಂದ್ರಕುಮಾರ ಹಕಾರಿ ವೇದಿಕೆ (ಕುಷ್ಟಗಿ): ರಾಜಕೀಯ ಇಚ್ಛಾಶಕ್ತಿಯ ಕೊರತೆ ಹಾಗೂ ಜನಪರ ಆಂದೋಲನಗಳಿಲ್ಲದ ಕಾರಣ ಕೃಷ್ಣಾ ನೀರಿನ ಸಮರ್ಪಕ ಬಳಕೆ ಸಾಧ್ಯವಾಗದೇ ವ್ಯರ್ಥವಾಗಿ ಸಮುದ್ರ ಸೇರುತ್ತಿದೆ ಎಂದು ಮಾಜಿ ಸಂಸದ ಬಸವರಾಜ ರಾಯರೆಡ್ಡಿ ವಿಷಾದಿಸಿದರು. ಶನಿವಾರ ಇಲ್ಲಿ ನಡೆದ ಕೊಪ್ಪಳ ಜಿಲ್ಲಾ 5ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಕೃಷಿ. ಕೃಷ್ಣಾ ಯೋಜನೆ ಹಾಗೂ ಜನಪರ ಆಂದೋಲನ’ ಗೋಷ್ಠಿಯಲ್ಲಿ ಅವರು ಮಾತನಾಡಿದರು.ಈ ಭಾಗದಲ್ಲಿ ಶೇ 90 ರಷ್ಟು ಜನ ಕೃಷಿಕರಾಗಿದ್ದಾರೆ. ವ್ಯವಸಾಯಕ್ಕೆ ಹೇಳಿಮಾಡಿಸಿದ ವಾತಾವರಣ ಇದೆ. ಸಾಕಷ್ಟು ಭೂಮಿಯೂ ಇದೆ. ಆದರೆ ನೀರನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳಲಾರದೇ ರೈತರು ಸಂಕಷ್ಟದಲ್ಲಿದ್ದಾರೆ ಎಂದು ಅವರು ಹೇಳಿದರು.

ಮೂರು ರಾಜ್ಯದಲ್ಲಿ ಹರಿಯುವ ಕೃಷ್ಣಾ ನದಿ ಜಲಾಯನ ಪ್ರದೇಶ ವಿಶಾಲವಾಗಿದೆ. ಒಟ್ಟು ಹರಿವು 14 ಸಾವಿರ ಕಿ.ಮೀ. ಇದ್ದು ಕರ್ನಾಟಕದಲ್ಲಿ 5 ನೂರು ಕಿ.ಮೀ, ಆಂಧ್ರದಲ್ಲಿ 600 ಕಿ.ಮೀ ಹರಿವು ಹೊಂದಿದೆ. ಈಗಿರುವ ವ್ಯವಸಾಯಕ್ಕೆ ತಕ್ಕಂತೆ ಮೂರು ರಾಜ್ಯಗಳು ನೀರು ಬಳಸಿಕೊಂಡರೂ 2600 ಟಿಎಂಸಿ ಹೆಚ್ಚಾದ ನೀರು ಹರಿದು ಸಮುದ್ರ ಸೇರುತ್ತದೆ. ಮಹಾರಾಷ್ಟ್ರ ಹಾಗೂ ಆಂದ್ರಪ್ರದೇಶ ತಮ್ಮ ಪಾಲನ್ನು ಬಹುತೇಕ ಸರಿಯಾಗಿ ವಿನಿಯೊಗಿಸಿಕೊಂಡಿವೆ. ಆದರೆ ಕರ್ನಾಟಕ ಮಾತ್ರ ಈ ವಿಷಯದಲ್ಲಿ ತೀರಾ ಹಿಂದಿದೆ ಎಂದರು.

ಕೃಷ್ಣಾ ನದಿ ನೀರು ಬೇಕು ಎಂದು ಇದುವರೆಗೂ ಈ ಭಾಗದಲ್ಲಿ ದೊಡ್ಡಮಟ್ಟದ ಹೋರಾಟಗಳು ನಡೆದಿಲ್ಲ. ಇದೀಗ ವಿಧಾನಸಭೆಯಲ್ಲಿ ಬಜೆಟ್ ಮಂಡಿಸಿದ ಸರ್ಕಾರ ಸಾಕಷ್ಟು ಅನುದಾನ ಘೋಷಿಸಿಲ್ಲ. ವಾಸ್ತವ ಹೀಗಿರುವಾಗ ಕೊಪ್ಪಳ ಜಿಲ್ಲೆಗೆ ಅದ್ಹೇಗೆ ನೀರು ಹರಿದುಬರುತ್ತದೆ ಎಂದು ಸರ್ಕಾರದ ಕಡೆಗೆ ಬೊಟ್ಟುಮಾಡಿದರು.
ಆಂಧ್ರ ಪ್ರದೇಶದಲ್ಲಿ ನಾಗಾರ್ಜುನ ಆಣೆಕಟ್ಟೆ ಕಟ್ಟುವಾಗ ಅಲ್ಲಿ ದೊಡ್ಡ ಜನಾಂದೋಲನವೇ ನಡೆಯಿತು. ಸರ್ಕಾರಿ ನೌಕರರು ತಮ್ಮ ಒಂದು ದಿನದ ವೇತನವನ್ನು ನೀಡಿದರು. ಸರ್ಕಾರ ಸಂಪೂರ್ಣ ನೀರಾವರಿಗೆ ಬಳಕೆಯಾಗಬಹುದಾದ ಭೂಮಿಯನ್ನು ನಿರೀಕ್ಷೆಗೂ ಮೀರಿ ಬಳಸಿಕೊಂಡಿತು ಎಂದು ಅವರು ಹೇಳಿದರು.

1969 ರಲ್ಲಿ ಕೃಷ್ಣಾ ನ್ಯಾಯಮಂಡಳಿಯ ತೀರ್ಪಿನಂತೆ ಕರ್ನಾಟಕದ ಪಾಲಿನ 729 ಟಿಎಂಸಿ ನೀರು ಸಂಪೂರ್ಣ ಬಳಕೆಯಾದರೆ 60 ಲಕ್ಷ ಎಕರೆ ಬರಡು ಪ್ರದೇಶಕ್ಕೆ ನೀರಾವರಿ  ಸೌಲಭ್ಯ ವಿಸ್ತರಿಸಬಹುದಾಗಿದೆ. ಆದರೆ ಇದಕ್ಕೆಲ್ಲ ರಾಜಕೀಯ ಪಕ್ಷಗಳು ಪಕ್ಷಭೇದ ಮರೆತು ಇಚ್ಛಾಶಕ್ತಿ ಪ್ರದರ್ಶಿಸಿದರೆ ಮೂರು ವರ್ಷಗಳಲ್ಲಿ ಕೆಲಸ ಮುಗಿಸಬಹುದು ಎಂದು ಅವರು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT