ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣಾ ಪ್ರವಾಹ: ಸಂಚಾರ ಸ್ಥಗಿತ, ಸಾವಿರಾರು ಎಕರೆ ಬೆಳೆ ಜಲಾವೃತ

Last Updated 5 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ದೇವದುರ್ಗ: ನಾರಾಯಣಪುರ ಆಣೆಕಟ್ಟೆಯಿಂದ ಕಳೆದ ಮೂರು ದಿನಗಳಿಂದ ಬಿಡಲಾಗುತ್ತಿರುವ ಹೆಚ್ಚುವರಿ ನೀರಿನಿಂದಾಗಿ ತಾಲ್ಲೂಕಿನ ಹೂವಿನಹೆಡ್ಗಿ ಗ್ರಾಮದ ಮುಂಭಾಗ ಕೃಷ್ಣಾ ನದಿಗೆ ಅಡ್ಡಲಾಗಿ ರಾಯಚೂರು -ಗುಲ್ಬರ್ಗ ರಾಜ್ಯ ಹೆದ್ದಾರಿಗೆ ನಿರ್ಮಿಸಲಾದ ಸೇತುವೆ ಸೋಮವಾರ ಬೆಳಗಿನ ಜಾವ ಮುಳುಗಡೆಯಾಗಿದೆ.

ಭಾನುವಾರ ಸಂಜೆ ಸೇತುವೆ ಮುಳುಗಡೆಗೆ ಒಂದು ಅಡಿ ಮಾತ್ರ ಬಾಕಿ ಇತ್ತು ಭಾನುವಾರ ರಾತ್ರಿ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದ ಪರಿಣಾಮ ಮುಖ್ಯ ರಸ್ತೆ ಸಂಪರ್ಕ ಕಡಿತಗೊಂಡಿದೆ.ಈಗಾಗಲೇ ಆಣೆಕಟ್ಟೆಯಿಂದ ಸುಮಾರು 2.90 ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ.

ತಾಲ್ಲೂಕಿನ ಬಾಗೂರು, ಅಂಜಳ, ಅಂಜೆಸೂಗೂರು, ಗೋಪಾಳಪುರ, ವಗಡಂಬಳಿ, ಹೂವಿನಹೆಡ್ಗಿ, ಜೋಳದಹೆಡ್ಗಿ, ದೊಂಡಂಬಳಿ, ಪರ್ತಪುರ, ಮ್ಯಾದರಗೋಳ, ಕುರ್ಕಿಹಳ್ಳಿ, ಯಾಟಗಲ್, ಗಾಗಲ್ ಮತ್ತು ಗೂಗಲ್ ಗ್ರಾಮಗಳ ನದಿ ದಂಡೆಯ ರೈತರ ಸಾವಿರಾರು ಎಕರೆ ಪ್ರದೇಶದಲ್ಲಿನ ವಿವಿಧ ಬೆಳೆಗಳು ಜಲಾವೃತಗೊಂಡಿವೆ.

ಸಂಪರ್ಕ ಕಡಿತ: ಕೃಷ್ಣಾ ನದಿ ಉಕ್ಕಿ ಹರಿಯುತ್ತಿರುವ ಪರಿಣಾಮ ನದಿ ಪಕ್ಕದ ಜೋಳದಹಡ್ಗಿ-ದೊಂಡಂಬಳಿ ಗ್ರಾಮಗಳ ಮುಖ್ಯ ರಸ್ತೆ ಸಂಪರ್ಕ ಸೋಮವಾರದಿಂದ ಕಡಿತಗೊಂಡಿದೆ.ಸೋಮವಾರ ಸೇತುವೆ ಮುಳುಗಡೆಯಾದ ಕಾರಣ ರಾಯಚೂರು (ದೇವದುರ್ಗ ಮಾರ್ಗ) ಗುಲ್ಬರ್ಗ, ಯಾದಗಿರಿ, ಮಹಾರಾಷ್ಟ್ರ ಮತ್ತು ಇತರ ಜಿಲ್ಲೆಗಳಿಗೆ ಪ್ರಮುಖವಾದ ಸಂಪರ್ಕ ಕಡಿತಗೊಂಡಿದೆ. ಇದರಿಂದ ಪ್ರಯಾಣಿಕರು ದೇವದುರ್ಗ, ಜಾಲಹಳ್ಳಿ, ತಿಂಥಿಣಿ ಬ್ರಿಜ್, ಸುರಪುರ ಮಾರ್ಗವಾಗಿ, ಸುಮಾರು 70ಕಿಮೀ ದೂರ ನದಿ ಇಳಿಮುಖವಾಗುವರೆಗೂ ಸುತ್ತುವರೆದು ಪ್ರಯಾಣಿಸಬೇಕಾದ ಅನಿವಾರ್ಯತೆ ಬಂದಿದೆ.

ಮಹಾರಾಷ್ಟ್ರದಲ್ಲಿ ತಗ್ಗಿದ  ಅಬ್ಬರ
ಬೆಳಗಾವಿ
: ನೆರೆಯ ಮಹಾರಾಷ್ಟ್ರದಲ್ಲಿ ಮಳೆಯ ಅಬ್ಬರ ಸ್ವಲ್ಪ ತಗ್ಗಿದೆ. ಆದರೆ ಕೃಷ್ಣಾ ನದಿ ನೀರಿನ ಹರಿವಿನಲ್ಲಿ ಇಳಿಕೆಯಾಗಿಲ್ಲ.ಮಹಾರಾಷ್ಟ್ರದ ರಾಜಾಪುರ ಬ್ಯಾರೇಜಿನಿಂದ 2.28 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಜಿಲ್ಲೆಯ 16 ಸೇತುವೆಗಳು ನೀರಿನಲ್ಲಿ ಮುಳುಗಿವೆ. ಇದು ಈ ಮಳೆಗಾಲದಲ್ಲಿ ಹರಿದು ಬರುತ್ತಿರುವ ಅತಿ ಹೆಚ್ಚಿನ ಪ್ರಮಾಣವಾಗಿದೆ.

ಮಾರ್ಕಂಡೇಯ ಹಾಗೂ ಘಟಪ್ರಭಾ ನದಿ ನೀರಿನ ಹರಿವಿನಲ್ಲಿ ಹೆಚ್ಚಿನ ಬದಲಾವಣೆ ಇಲ್ಲ. ಗೋಕಾಕ ಪಟ್ಟಣ ಹಾಗೂ 3 ಗ್ರಾಮಗಳಿಗೆ ನುಗ್ಗಿದ್ದ ನೀರು ಕ್ರಮೇಣ ಇಳಿಕೆಯಾಗುತ್ತಿದೆ. ಇಲ್ಲಿಯವರೆಗೆ ಗೋಕಾಕ ತಾಲ್ಲೂಕಿನಲ್ಲಿ 51 ಕುಟುಂಬಗಳ 226 ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಆಲಮಟ್ಟಿ: ಪ್ರವಾಹ ಇಳಿಮುಖ
ವಿಜಾಪುರ:  ಭಾನುವಾರ ಮಧ್ಯಾಹ್ನದ ನಂತರ ಮಹಾರಾಷ್ಟ್ರದ ಕೃಷ್ಣಾ ಕಣಿವೆ ಪ್ರದೇಶದಲ್ಲಿ ಮಳೆ ಕಡಿಮೆಯಾಗಿದೆ. ಹೀಗಾಗಿ ಆಲಮಟ್ಟಿಯಿಂದ ಸದ್ಯ ಯಾವುದೇ ಪ್ರವಾಹಭೀತಿ ಇಲ್ಲ.
ಆಲಮಟ್ಟಿ ಜಲಾಶಯದಿಂದ ಹೊರ ಬಿಡುತ್ತಿರುವ ನೀರಿನ ಪ್ರಮಾಣದಲ್ಲಿ ಇಳಿಮುಖವಾಗಿದ್ದು, ಜಲಾಶಯ ಮುಂಭಾಗದಲ್ಲಿ ಉಂಟಾಗಿದ್ದ ಪ್ರವಾಹ ಭೀತಿ ದೂರವಾಗಿದೆ.

ಭಾನುವಾರ ರಾತ್ರಿ 2.75 ಲಕ್ಷ ಕ್ಯೂಸೆಕ್ ಇದ್ದ ಆಲಮಟ್ಟಿ ಜಲಾಶಯದ ಹೊರ ಹರಿವನ್ನು ಸೋಮವಾರ  ಸಂಜೆಯ ಹೊತ್ತಿಗೆ 1.43 ಲಕ್ಷ  ಕ್ಯೂಸೆಕ್‌ಗೆ ಇಳಿಸಲಾಯಿತು.

ಕಂಪ್ಲಿ: ವಾಹನ ಸಂಚಾರ ಆರಂಭ
ಕಂಪ್ಲಿ:  ಇಲ್ಲಿನ ಕೋಟೆ ಬಳಿ ತುಂಗಭದ್ರಾ ಸೇತುವೆ ಮೇಲೆ ಕಳೆದ ಎರಡು ದಿನಗಳಿಂದ ಪ್ರವಾಹದ ನೀರು  ಹರಿದಿದ್ದರಿಂದ ಸ್ಥಗಿತಗೊಂಡಿದ್ದ ವಾಹನ ಸಂಚಾರ ಸೋಮವಾರ ಮುಂಜಾನೆ ಆರಂಭಗೊಂಡಿತು. ಸೋಮವಾರದಿಂದ ನದಿ ನೀರಿನ ಆರ್ಭಟ ಇಳಿಮುಖವಾಗಿದ್ದು, ಸದ್ಯ ಜಲಾಶಯದಿಂದ 80 ಸಾವಿರ ಕ್ಯೂಸೆಕ್ ನೀರು ನದಿಗೆ ಹರಿದು ಬರುತ್ತಿದೆ.

ಸೇತುವೆ ಕೆಳ ಭಾಗದಲ್ಲಿ ನೀರು ಹರಿಯುತ್ತಿರುವುದರಿಂದ ಸೇತುವೆ ವಾಹನ ಸಂಚಾರಕ್ಕೆ ಮುಕ್ತವಾಗಿದ್ದು, ಉತ್ತರ ಕರ್ನಾಟಕ ಮತ್ತು ಆಂಧ್ರಪ್ರದೇಶಕ್ಕೆ ಬಸ್‌ಗಳ ಸಂಚಾರ ಪುನರಾರಂಭವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT