ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣಾ ಮೇಲ್ದಂಡೆ: ವಿರೋಧದ ಮಧ್ಯ ಡಿಪಿಆರ್‌ಗೆ ಒಪ್ಪಿಗೆ?

Last Updated 3 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಹಣಕಾಸು ಇಲಾಖೆ, ಕಾನೂನು ಇಲಾಖೆ ಮತ್ತು ಮುಖ್ಯಮಂತ್ರಿಯವರ ವಿರೋಧದ ನಡುವೆಯೇ ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಯೋಜನೆಯ ವಿಸ್ತೃತ ಯೋಜನಾ ವರದಿಯನ್ನು (ಡಿಪಿಆರ್) ಮಂಗಳವಾರ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ, ಒಪ್ಪಿಗೆ ಪಡೆಯಲಾಗಿದೆ ಎನ್ನಲಾಗಿದೆ.

ಯೋಜನೆಯ ಡಿಪಿಆರ್‌ಗೆ ಒಪ್ಪಿಗೆ ನೀಡುವ ವಿಷಯ ಪ್ರಸ್ತಾಪವಾಗುತ್ತಿದ್ದಂತೆ ಹಣಕಾಸು ಮತ್ತು ಕಾನೂನು ಇಲಾಖೆಗಳ ಕಡೆಯಿಂದ ವಿರೋಧ ವ್ಯಕ್ತವಾಗಿದೆ. ಸದ್ಯ ರೂಪಿಸಿರುವ ಡಿಪಿಆರ್‌ನಲ್ಲಿ ಯೋಜನೆಗೆ ಅಗತ್ಯವಿರುವ ಹಣವನ್ನು ಯಾವ ಮೂಲದಿಂದ ಸಂಗ್ರಹಿಸಲಾಗುತ್ತದೆ ಎಂಬ ಸ್ಪಷ್ಟತೆ ಇಲ್ಲದಿರುವ ಬಗ್ಗೆ ಹಣಕಾಸು ಇಲಾಖೆ ಆಕ್ಷೇಪ ಎತ್ತಿದೆ.
 
ಯೋಜನೆಯಿಂದ ನಿರಾಶ್ರಿತರಾಗುವ ಜನರಿಗೆ ಪರಿಹಾರ ಮತ್ತು ಪುನರ್ವಸತಿ ಒದಗಿಸುವ ಬಗ್ಗೆಯೂ ಖಚಿತತೆ ಇಲ್ಲದಿರುವುದಕ್ಕೆ ಇಲಾಖೆ ಅಸಮಾಧಾನ ಹೊರಹಾಕಿದೆ ಎಂದು ಮೂಲಗಳಿಂದ ಗೊತ್ತಾಗಿದೆ.

ಇದಾದ ಬೆನ್ನಲ್ಲೇ ಕಾನೂನು ಇಲಾಖೆಯೂ ಆಕ್ಷೇಪ ಎತ್ತಿದ್ದು, ಕೃಷ್ಣಾ ಜಲ ವಿವಾದ ನ್ಯಾಯಮಂಡಳಿಯ ಮುಂದಿದೆ. ಆಲಮಟ್ಟಿ ಅಣೆಕಟ್ಟೆಯನ್ನು ಎತ್ತರಿಸುವ ವಿಷಯವೂ ಸೇರಿದಂತೆ ಹಲವು ಅಂಶಗಳು ಇತ್ಯರ್ಥಕ್ಕೆ ಬಾಕಿ ಇವೆ. ಇಂತಹ ಸಂದರ್ಭದಲ್ಲಿ ನ್ಯಾಯಮಂಡಳಿಯ ಒಪ್ಪಿಗೆ ಇಲ್ಲದೇ ಡಿಪಿಆರ್ ಸಿದ್ಧಪಡಿಸಿ, ಸಚಿವ ಸಂಪುಟದ ಮುಂದಿಡುವುದು ಸಮಂಜಸವಲ್ಲ ಎಂಬ ವಾದ ಮಂಡಿಸಿತು ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ, ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಹಣಕಾಸು ಮತ್ತು ಕಾನೂನು ಇಲಾಖೆಗಳ ಅಭಿಪ್ರಾಯವನ್ನು ಬೆಂಬಲಿಸಿದರು. ಆದರೆ, ಡಿಪಿಆರ್‌ಗೆ ಒಪ್ಪಿಗೆ ನೀಡಲೇಬೇಕು ಎಂದು ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಹಠ ಹಿಡಿದರು.
 
ಸಣ್ಣ ನೀರಾವರಿ ಸಚಿವ ಗೋವಿಂದ ಕಾರಜೋಳ ಅವರೂ ಬೊಮ್ಮಾಯಿ ಅವರ ಬೆಂಬಲಕ್ಕೆ ನಿಂತರು. ಇಷ್ಟೆಲ್ಲ ನಡೆಯುವಾಗ ಉಳಿದ ಸಚಿವರು ಮೌನಕ್ಕೆ ಶರಣಾಗಿದ್ದರು. ಅಂತಿಮವಾಗಿ ಸಚಿವ ಸಂಪುಟ ಸಭೆ ಡಿಪಿಆರ್‌ಗೆ ಒಪ್ಪಿಗೆ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT