ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣೆ ಒಡಲಲ್ಲಿ ಕಾವೇರಿ ಧ್ಯಾನ

Last Updated 6 ಡಿಸೆಂಬರ್ 2012, 19:34 IST
ಅಕ್ಷರ ಗಾತ್ರ

ಸುವರ್ಣ  ವಿಧಾನಸೌಧ (ಬೆಳಗಾವಿ): ಕೋರಂ ಗಂಟೆ ನಿರೀಕ್ಷೆಯಲ್ಲಿ ಗುರುವಾರ ಬೆಳಿಗ್ಗೆ 10.30ರ ಸುಮಾರಿಗೆ ವಿಧಾನಸಭೆ ಮೊಗಸಾಲೆ ಸೇರಿದ ಶಾಸಕರಿಗೆ ಮಧ್ಯಾಹ್ನ ಎರಡಾದರೂ ಗಂಟೆಯ ರಿಂಗಣ ಕೇಳಿಸಲಿಲ್ಲ. ಹರಟಿದರು. ಅಡ್ಡಾಡಿದರು. ಬೇಸರ ಎನಿಸಿದಾಗ ಕಾಫಿ ಹೀರಿದರು. ಮಂಡಕ್ಕಿ, ಬೋಂಡ, ವಡಾ-ಪಾವ್ ರುಚಿ ನೋಡಿದರು. ಇಷ್ಟಾದರೂ ವಿಧಾನಸಭೆ ಸೇರಲೇ ಇಲ್ಲ!

`ಏನ್ರಪಾ, ಒಳ್ಳೆ ಹೌಸ್ ಅರೆಸ್ಟ್ ಆಯಿತಲ್ಲ' ಎಂದು ಒಂದಿಬ್ಬರು ತಮ್ಮ ತಮ್ಮಲ್ಲೇ ಗೊಣಗಿದರು. ಕಾವೇರಿ ನೀರಿನ ವಿಚಾರದಲ್ಲಿ ನಿರ್ಧಾರ ಕೈಗೊಳ್ಳುವ ಕಷ್ಟದ ಕುರಿತು ಕಾವೇರಿ ಜಲಾನಯನ ಪ್ರದೇಶದ ಕೆಲವು ಶಾಸಕರು ಅನಿಸಿಕೆ ಹಂಚಿಕೊಂಡರು. ಶಾಶ್ವತ ಪರಿಹಾರಕ್ಕೆ ಕರ್ನಾಟಕ ಮತ್ತು ತಮಿಳುನಾಡು ರೈತರಿಂದಲೇ ಒತ್ತಡ ಬರದ ಹೊರತು ವಿವಾದ ಬಗೆಹರಿಯದು. ಬೀಸೊ ದೊಣ್ಣೆಯಿಂದ ಪಾರಾಗುವ ಪ್ರಯತ್ನಗಳಿಂದ ಕ್ಷಣಿಕ ಸುಖ, ಅಷ್ಟೇ' ಎಂದು ಅಭಿಪ್ರಾಯಪಟ್ಟರು.

ಕೃಷ್ಣೆಯ ಒಡಲಲ್ಲಿ ಕಾವೇರಿಯ ಸಂಕಟ ಹೀಗೆ ಸುರುಳಿಯಾಗಿ ಬಿಚ್ಚಿಕೊಂಡಿತು. ತಮಿಳುನಾಡಿಗೆ ನೀರು ಬಿಡುವಂತೆ ಸುಪ್ರೀಂಕೋರ್ಟ್ ಆದೇಶಿಸಿರುವ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ನಿರ್ಧಾರ ಕುರಿತು ಚರ್ಚಿಸಲು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಸರ್ವಪಕ್ಷಗಳ ಸಭಾನಾಯಕರ ಸಭೆ ನಡೆಸಿದರು. ಚರ್ಚೆ, ದೀರ್ಘ ಅವಧಿಗೆ ಎಳೆಯಿತು. ಸದನ ಸೇರುವುದು ನಾಲ್ಕು ತಾಸು ತಡವಾಯಿತು.

`ಕೋರ್ಟ್ ಆದೇಶ ಉಲ್ಲಂಘಿಸುವಂತಿಲ್ಲ. ಆದರೆ, ಅದನ್ನು ಬಹಿರಂಗವಾಗಿ ಹೇಳಲಾಗದು. ಜನರಿಗೆ ಮನವರಿಕೆ ಮಾಡಿಸುವುದು ಕಷ್ಟ' ಎಂದು ಮೈಸೂರು ಭಾಗದ ಶಾಸಕರೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದರು.

ಕೋರಂ ಗಂಟೆ ಮೊಳಗುತ್ತಲೇ, `ನಡಿಯಿರಣ್ಣ, ಹೇಳಿಕೆ ದಾಖಲಿಸೋಣ. ಇಲ್ಲದಿದ್ರೆ ಎಂತಹ ಶಾಸಕರನ್ನು ಆರಿಸಿದ್ದೀರಿ. ಸದನದಲ್ಲಿ ಬಾಯಿ ಬಿಡೋದೆ ಇಲ್ಲ' ಎಂದು ಅರಳಿಕಟ್ಟೆ ಮೇಲೆ ಕುಳಿತು ಚಾಟಿ ಬೀಸುತ್ತಾರೆ ಎಂದು ಮತ್ತೊಬ್ಬ ಸದಸ್ಯರು ತಮ್ಮ ಭಾಗದ ಶಾಸಕ ಮಿತ್ರರನ್ನು ಎಚ್ಚರಿಸಿದರು.
ಚುನಾವಣೆ ಸಮೀಪಿಸಿರುವುದರಿಂದ ಕಾವೇರಿ ಅಂತಹ ಭಾವನಾತ್ಮಕ ವಿಷಯ ಮತದಾರರ ಮೇಲೆ ಬೀರಲಿರುವ ಪ್ರಭಾವ ಜನಪ್ರತಿನಿಧಿಗಳನ್ನು ಈ ಮಟ್ಟಿಗೆ ಎಚ್ಚರಗೊಳಿಸಿದೆ. ಆದರೆ, ಉತ್ತರ ಕರ್ನಾಟಕ ಭಾಗದ ಕೆಲವು ಶಾಸಕರು, `ಹಾವೇರಿ-ಕಾವೇರಿ ಬಿಟ್ಟರೆ ಬೇರೆ ವಿಷಯಗಳೇ ಚರ್ಚೆಗೆ ಬರುತ್ತಿಲ್ಲ' ಎಂದು ಹುಸಿ ಮುನಿಸು ತೋರಿದರು.   

ಸದನ ಸೇರುತ್ತಲೇ ಕಾವೇರಿ ಕುರಿತು ಸ್ಪಷ್ಟವಾದ ಹೇಳಿಕೆ ನೀಡಬೇಕು ಎಂದು ಒತ್ತಾಯಿಸಿ ಪ್ರತಿಪಕ್ಷಗಳ ಸದಸ್ಯರು ಸಭಾಧ್ಯಕ್ಷರ ಪೀಠದ ಎದುರು ಜಮಾಯಿಸಿದರು. ಮುಖ್ಯಮಂತ್ರಿಯವರು ಮೇಲ್ಮನೆಯ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದಾರೆ. ಹತ್ತು ನಿಮಿಷದಲ್ಲಿ ವಿಧಾನಸಭೆಗೆ ಬಂದು ಹೇಳಿಕೆ ನೀಡುತ್ತಾರೆ ಎಂದು ಸರ್ಕಾರದ ಮುಖ್ಯ ಸಚೇತಕ ಸಿದ್ದು ಸವದಿ ಹೇಳಿದರೂ ಧರಣಿನಿರತ ಪ್ರತಿಪಕ್ಷ ಸದಸ್ಯರು ಅಲ್ಲಿಂದ ಕದಲಲಿಲ್ಲ. ಸದನವನ್ನು ಸ್ಪೀಕರ್ 10 ನಿಮಿಷ ಮಟ್ಟಿಗೆ ಮುಂದೂಡಿದರು. ಅರ್ಧ ತಾಸಿನ ಬಳಿಕ ಸೇರಿದ ಮೇಲೂ ಕಾವೇರಿ ವಿಷಯವೇ ಕಲಾಪವನ್ನು ಆವರಿಸಿತು.

ಹೀಗಾಗಿ ವಿಧಾನಸಭೆಯ ಇಡೀ ದಿನದ ಕಲಾಪ, ಕಾವೇರಿ ಹೆಸರಿನಲ್ಲಿ `ಕೃಷ್ಣಾರ್ಪಣ' ಆಯಿತು. ಪರಿಷತ್‌ನಲ್ಲೂ ಕಾವೇರಿ ವಿಷಯವೇ ಪ್ರತಿಧ್ವನಿಸಿತು. ಈ ಕಾರಣಕ್ಕೇ ಸದನವನ್ನು ಎರಡು ಸಲ ಮುಂದೂಡಲಾಯಿತು. ಇದರ ನಡುವೆಯೂ ಪ್ರಶ್ನೋತ್ತರ ಕಲಾಪ ನಡೆಯಿತು ಎಂಬುದು ಸಮಾಧಾನದ ಸಂಗತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT