ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಪು ಇರುವೆಗಳ ಕನಸನ್ನರಸುತ್ತಾ...

ಸಾಕ್ಷ್ಯಚಿತ್ರ ಪ್ರದರ್ಶನ
Last Updated 19 ಜುಲೈ 2013, 19:59 IST
ಅಕ್ಷರ ಗಾತ್ರ

`ಯುದ್ಧದ ಸ್ಥಿತಿ ಇದೆ ಮತ್ತು ಅದು ಇರಬೇಕು' ಎಂಬ ಕ್ರಾಂತಿಕಾರಿಯೊಬ್ಬ ಎಚ್ಚರಿಕೆಯ ಮಾತುಗಳಿಗೆ ಒಂದು ಶತಮಾನದ ಇತಿಹಾಸವಿದೆ. ಆ ಮಾತು ವರ್ತಮಾನದ ಭಾರತದಲ್ಲೂ ಸತ್ಯ. ಮಧ್ಯ ಭಾರತದ ಹೃದಯದಂತಿರುವ ಬಸ್ತಾರ್‌ನಲ್ಲೊಂದು ಸಶಸ್ತ್ರ ಬಂಡಾಯ ಸಣ್ಣಗೆ ಉರಿಯುತ್ತಿದೆ. ಹಾಗೆಯೇ ಪೂರ್ವಕ್ಕೆ ಪ್ರಯಾಣಿಸಿದರೆ ಅಲ್ಲಿ ಕಾಣುವುದೂ ಇದನ್ನೇ. ಅದಿರು ತುಂಬಿರುವ ಒಡಿಶಾದ ಗುಡ್ಡಗಾಡುಗಳ ಆದಿವಾಸಿಗಳು ತಮ್ಮ ನೆಲವನ್ನು ಉಳಿಸಿಕೊಳ್ಳಲು ತಮ್ಮಲ್ಲಿರುವ ಕೊಡಲಿಗಳು ಮತ್ತು ಹಾಡುಗಳೊಂದಿಗೆ ರಣರಂಗಕ್ಕಿಳಿದಿದ್ದಾರೆ. ಉತ್ತರದಲ್ಲಿ ಪಂಜಾಬಿ ರೈತರು ಭಗತ್‌ಸಿಂಗ್ ಸ್ಫೂರ್ತಿಯೊಂದಿಗೆ ಹೋರಾಟದ ಕಣದಲ್ಲಿದ್ದಾರೆ. ಆದರೆ ಈ ಹೋರಾಟಗಾರರು ನಿರೀಕ್ಷಿಸುತ್ತಿರುವ ಕ್ರಾಂತಿ ಸಾಧ್ಯವೇ? ಈ ಹೋರಾಟಗಳು ನಾಳೆಯ ಕನಸಿನ ಬದಲಿಗೆ ದುಃಸ್ವಪ್ನಗಳಾಗುತ್ತಿವೆಯೇ?

ಈ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹೊರಟವರು ಸಂಜಯ್ ಕಾಕ್. ಅವರು ಮಾವೋವಾದಿ ಹೋರಾಟಗಳು ಮತ್ತು ಅದರ ಪರಿಣಾಮವನ್ನು ಶೋಧಿಸುವ `ಕೆಂಪು ಇರುವೆಗಳ ಕನಸು' ಎಂಬ ಸಾಕ್ಷ್ಯಚಿತ್ರ ನಿರ್ಮಿಸಿದ್ದಾರೆ.  ಮಧ್ಯ ಮತ್ತು ಪೂರ್ವ ಭಾರತದ ಹಲವೆಡೆ ನೆಲೆಯಾಗಿರುವ ಸಶಸ್ತ್ರ ಬಂಡಾಯಗಳಿಗೆ ಅರ್ಧ ಶತಮಾನದ ಇತಿಹಾಸವಿದೆ. ಈ ಹೋರಾಟಗಾರರ ಹಾದಿಯಲ್ಲಿ ಬಂದೂಕು ಮತ್ತು ಬಾಂಬುಗಳು ಇರುವಂತೆಯೇ ಆದರ್ಶಗಳೂ ಇವೆ. ಗುರಿ ಮತ್ತು ಮಾರ್ಗದ ಈ ಪ್ರಶ್ನೆಯನ್ನು ಭಾರತೀಯ ಪ್ರಜಾಪ್ರಭುತ್ವ ಕಾರ್ಯನಿರ್ವಹಿಸುವ ವಿಧಾನದ ಜೊತೆಯಲ್ಲಿಯೇ ಗ್ರಹಿಸಬೇಕೆಂಬ ವಾದವೂ ಇದೆ. ಅತಿದೊಡ್ಡ ಆಂತರಿಕ ಬೆದರಿಕೆ ಎಂದರೆ ನಕ್ಸಲ್‌ವಾದ ಎಂದು ಪ್ರಧಾನಿ ಹೇಳುತ್ತಾರೆ. ಈ `ಬೆದರಿಕೆ'ಯನ್ನು ಮಟ್ಟ ಹಾಕುವುದಕ್ಕಾಗಿ ಜನರನ್ನು `ಬಂಡಾಯಗಾರ'ರಿಂದ ಸರ್ಕಾರದ ಕಡೆಗೆ ಸೆಳೆಯುವ ಪ್ರಯತ್ನಗಳೂ ಜಾರಿಯಲ್ಲಿವೆ. ಹೊರಜಗತ್ತಿಗೆ ಅಷ್ಟೇನೂ ಪರಿಚಿತವಲ್ಲದ ಈ ಜಗತ್ತನ್ನು ಅನಾವರಣಗೊಳಿಸುವ ಪ್ರಯತ್ನ ಸಂಜಯ್ ಕಾಕ್ ಅವರು ಹೊಸ ಚಿತ್ರ `ರೆಡ್ ಆ್ಯಂಟ್ಸ್ ಡ್ರೀಮ್'ನಲ್ಲಿದೆ.

ಸಂಜಯ್ ಕಾಕ್ ಅವರ ಈ ಚಿತ್ರದ ಮೂರು ಪ್ರದರ್ಶನಗಳನ್ನು ಜುಲೈ 20 ಮತ್ತು 21ರಂದು ಪೆಡಸ್ಟ್ರಿಯನ್ ಪಿಕ್ಚರ್ಸ್, ಎಎಲ್‌ಎಫ್, ವಿಕಲ್ಪ್-ಬೆಂಗಳೂರು, ಕ್ರಾಂತಿ-ಎನ್‌ಎಲ್‌ಎಸ್‌ಯುಐ ಸಂಘಟನೆಗಳು ಮತ್ತು ಮೌಂಟ್ ಕಾರ್ಮೆಲ್ ಕಾಲೇಜಿನ ಸಮೂಹ ಸಂವಹನ ವಿಭಾಗದ ಸಹಯೋಗದಲ್ಲಿ ಏರ್ಪಡಿಸಿವೆ. ಜುಲೈ 20ರಂದು ಸಂಜೆ 4.30ಕ್ಕೆ ಮೌಂಟ್ ಕಾರ್ಮೆಲ್ ಕಾಲೇಜಿನ ಸಭಾಂಗಣದಲ್ಲಿ ಮೊದಲ ಪ್ರದರ್ಶನವಿದೆ. ಎರಡನೇ ಪ್ರದರ್ಶನ ಜುಲೈ 21ರಂದು ಬೆಳಿಗ್ಗೆ 10.30ಕ್ಕೆ  ಕೋರಮಂಗಲದ ಜ್ಯೋತಿ ನಿವಾಸ್ ಕಾಲೇಜು ಬಳಿ ಇರುವ `ಆಟ-ಗಲಾಟ'ದಲ್ಲಿದೆ.

ಅದೇ ದಿನ ಮಧ್ಯಾಹ್ನ 2 ಗಂಟೆಗೆ ಕೆ.ಎಚ್. ರಸ್ತೆ ಬಸ್ ನಿಲ್ದಾಣದ ಬಳಿ ಇರುವ `ಜಾಗ'ದಲ್ಲಿ ಮತ್ತೊಂದು ಪ್ರದರ್ಶನವಿದೆ. ಹೆಚ್ಚಿನ ವಿವರಗಳಿಗೆ  ದೀಪು (ಮೊಬೈಲ್: 7353770203), ಏಕತಾ (ಮೊಬೈಲ್: 9880755875) ಅವರನ್ನು ಸಂಪರ್ಕಿಸಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT