ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಪು ನೀರು ಹೀಗಿರಲಿ ಮೀನು

Last Updated 16 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ದಕ್ಷಿಣ ಒಳನಾಡು ಪ್ರದೇಶದ ಹಲವಾರು ಕೆರೆಗಳಲ್ಲಿ ರೋಹು, ಮೃಗಾಲ ಗೆಂಡೆ, ಕಾಟ್ಲಾ ಮೀನುಗಳ ಕೃಷಿ ಸಹಜ. ಆದರೆ ಇವುಗಳು ಹೆಚ್ಚಿನ ಸಮಯದಲ್ಲಿ ಸರಿಯಾಗಿ ಬೆಳೆಯುವುದಿಲ್ಲ, ಪೀಚಾಗಿರುತ್ತವೆ ಎಂಬ ಚಿಂತೆ ಬಹುತೇಕ ಕೃಷಿಕರದ್ದು. ಬಿತ್ತನೆ ಮಾಡಿರುವ ಮೀನುಗಳಲ್ಲಿ ದೋಷ ಇರಬಹುದು ಎಂದು ಅಂದುಕೊಂಡಿದ್ದರೆ ಅದು ಸಂಪೂರ್ಣ ಸರಿಯಲ್ಲ. ಏಕೆಂದರೆ ಮೀನು ಸಾಕುವ ಕೆರೆಗಳ ನೀರು ಕೂಡ ಅಷ್ಟೇ ಮುಖ್ಯವಾಗುತ್ತದೆ.

ಬೆಂಗಳೂರು, ಬಳ್ಳಾರಿ, ಕೋಲಾರ ಮತ್ತು ತುಮಕೂರು ಜಿಲ್ಲೆಗಳ ಬಹುತೇಕ ಭಾಗಗಳಲ್ಲಿನ ಕೆರೆಗಳು ಸದಾ ಕೆಂಪಾಗಿರುತ್ತವೆ. ಹಲವೆಡೆಯ ನೀರು ಹಾಲು ಮಿಶ್ರಿತ ಚಹಾದ ತರಹ ಕಾಣುತ್ತವೆ. ಹಾಲು ಹೇಗೆ ತಿಳಿಯಾಗುವುದಿಲ್ಲವೋ, ಅದೇ ತರಹ ಈ ನೀರು ಸಹ ತಿಳಿಯಾಗುವುದಿಲ್ಲ. ಹಳ್ಳಿ ಜನಗಳು ಇದನ್ನು ಕೆಂಪು ನೀರೆಂದು ಕರೆಯುತ್ತಾರೆ. ಕಬ್ಬಿಣದ ಅಂಶದಿಂದ ನೀರು ಕೆಂಪಾಗಿ ಕಾಣಿಸುತ್ತದೆ.
ಈ ಕೆರೆಗಳ ಗುಣ ಎಂದರೆ ಇವು ಆಳ ಇರುವುದಿಲ್ಲ. ಸ್ವಲ್ಪ ಗಾಳಿ ಬೀಸಿದರೂ, ಕೆರೆಯ ಕೆಳ ಮತ್ತು ಮೇಲಿನ ನೀರು ಪೂರ್ಣ ಮಿಶ್ರಣವಾಗಿ, ನೀರು ಬೇಗ ರಾಡಿಯಾಗುತ್ತದೆ. ಹೆಚ್ಚಿನ ಕೆರೆಗಳು ಬೇಸಿಗೆಯಲ್ಲಿ ಪೂರ್ಣ ಒಣಗುತ್ತವೆ.

ನೀರಿನಲ್ಲಿ ಪಾಚಿ ಮತ್ತು ಜಲ ಸಸ್ಯಗಳಿಗೆ ಬೇಕಾದ ಫಾಸ್ಪೇಟ್ ಪೋಷಕಾಂಶದ ಕೊರತೆಯಿರುತ್ತದೆ. ನೀರು ತಿಳಿಯಾಗಿರದ ಕಾರಣ ಸೂರ್ಯನ ಕಿರಣಗಳು ನೀರಿನ ಆಳಕ್ಕೆ ಇಳಿಯುವುದಿಲ್ಲ. ಹಾಗಾಗಿ, ಪಾಚಿ ಮತ್ತು  ಜಲ ಸಸ್ಯಗಳು ತುಂಬ ವಿರಳವಾಗಿರುತ್ತವೆ. ಕೆರೆಯ ಕೆಳಭಾಗದಲ್ಲಿ ಸಾವಯವ ಪದಾರ್ಥ ಕಡಿಮೆ ಪ್ರಮಾಣದಲ್ಲಿರುತ್ತದೆ.

ಒಟ್ಟಾರೆ ಕೆರೆ ಫಲವತ್ತಾಗಿರುವುದಿಲ್ಲ. ಇವೆಲ್ಲವುಗಳಿಂದ ಕೆಲವು ಮೀನುಗಳು ಸರಿಯಾಗಿ ಬೆಳೆಯುವುದಿಲ್ಲ.

ಮೀನು ಕೃಷಿ ಹೀಗೆ
ಈ ರೀತಿಯ ಕೆಂಪು ನೀರಿನಲ್ಲಿ ಮೀನಿನ ಕೃಷಿ ಹೇಗಿರಬೇಕು ಎಂಬ ಬಗ್ಗೆ ಇಲ್ಲಿ ಕೆಲವು ಮಾಹಿತಿ ನೀಡಲಾಗಿದೆ. ಈ ಕೆರೆಗಳಲ್ಲಿ ಕಾಟ್ಲಾ ಮತ್ತು ಸಾಮಾನ್ಯ ಗೆಂಡೆ ಮೀನುಗಳ ಬೆಳವಣಿಗೆ ಇದ್ದುದರಲ್ಲಿ ಪರವಾಗಿಲ್ಲ. ಇವು ಒಂದು ವರ್ಷದಲ್ಲಿ ಸುಮಾರು ಮುಕ್ಕಾಲು ಕೆ.ಜಿ. ವರೆಗೂ ಬೆಳೆಯುತ್ತವೆ. ಈ ಕಾರಣಗಳಿಂದ ಕಾಟ್ಲ ಮತ್ತು ಸಾಮಾನ್ಯ ಗೆಂಡೆಯ ಬೆರಳುದ್ದದ ಮೀನು ಮರಿಗಳನ್ನು (10 ಸೆ. ಮೀ.) ಸುಮಾರು 300 ರಿಂದ 500 ಸಂಖ್ಯೆಯಲ್ಲಿ ಪ್ರತಿ ವರ್ಷ ಬಿತ್ತಬೇಕು.

ಸಾಮಾನ್ಯ ಗೆಂಡೆ ಈ ಕೆರೆಗಳಲ್ಲಿ ಮೊಟ್ಟೆ ಬಿಟ್ಟರೂ, ಅಂಟು ಮೊಟ್ಟೆಗಳ ಮೇಲೆ ಹೊಂಡು ಕೂತು ಮೊಟ್ಟೆಗಳು ಒಡೆಯುವುದಿಲ್ಲ. ನೀರಿನಲ್ಲಿರುವ ಸೂಕ್ಷ್ಮ ಸಸ್ಯ ಮತ್ತು ಪಾಚಿಯು ರೋಹು ಮೀನಿನ ಆಹಾರ. ಕೆರೆಯ ಕೆಳ ಭಾಗದಲ್ಲಿರುವ ಸಾವಯವ ವಸ್ತುಗಳು ಮೃಗಾಲ ಮೀನಿನ ಹೊಟ್ಟೆ ತುಂಬಿಸುತ್ತವೆ.

ಕೆಂಪು ನೀರಿನ ಕೆರೆಗಳಲ್ಲಿ ಇಂತಹ ಆಹಾರದ ಕೊರತೆಯಿಂದ ರೋಹು ಮತ್ತು ಮೃಗಾಲ ಮೀನುಗಳು ಹೆಚ್ಚು ಬೆಳೆಯುವುದಿಲ್ಲ. ಒಂದು ವರ್ಷದಲ್ಲಿ ಸುಮಾರು 300 ಗ್ರಾಂ ಬೆಳೆಯುತ್ತವೆ. ರೋಹು ಮತ್ತು ಮೃಗಾಲ ಮರಿಗಳ ಬಿತ್ತನೆ ಶೇ. 20 ಕ್ಕಿಂತ ಕಡಿಮೆ.

ವಿದೇಶಿ ಬೆಳ್ಳಿಗೆಂಡೆ ಮೀನು ಸಹ ಸಾಧಾರಣವಾಗಿ ಬೆಳೆಯುತ್ತೆ. ಆದರೆ ಈ ಮೀನು ಕಾಟ್ಲಾ ಮೀನಿನ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಜೊತೆಗೆ, ಈ ಮೀನಿಗೆ ಬೇಡಿಕೆಯೂ ಕಮ್ಮಿ. ಹಾಗಾಗಿ ಈ ಮೀನನ್ನು ಬಿತ್ತುವುದು ಬೇಡ. ಬೇಸಿಗೆಯಲ್ಲಿ ಒಣಗುವ ಕೆರೆಗಳನ್ನು ಮೀನು ಮರಿ ಬೆಳೆಸಲು (ಫ್ರೈ ಹಂತದಿಂದ ಫಿಂಗರ್ಲಿಂಗ್ ಹಂತಕ್ಕೆ) ಬಳಸಬೇಕು. ವರ್ಷಾವಧಿ ನೀರಿರುವ ಕೆರೆಗಳಲ್ಲಿ ದಪ್ಪ ಮೀನು ಬೆಳಸಲು ಬಳಸಬೇಕು. ಕೆಂಪು ನೀರು ಕೆರೆಗಳಲ್ಲಿ ಮೀನಿನ ವಾರ್ಷಿಕ ಇಳುವರಿ ಪ್ರತಿ ಹೆಕ್ಟೇರಿಗೆ ಸುಮಾರು 50 ರಿಂದ 75 ಕೆ.ಜಿ. ಬರುತ್ತೆ. ಕೆರೆಗೆ ಗೊಬ್ಬರ ಹಾಕಿದರೆ ಮೀನು ವೇಗವಾಗಿ  ಬೆಳೆಯುತ್ತವೆ. ಆದರೆ, ಕೆರೆ ಸಾರ್ವಜನಿಕ ಸ್ವತ್ತಾದ್ದರಿಂದ ಇದಕ್ಕೆ ಒಪ್ಪಿಗೆ ಕಷ್ಟ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT