ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಪು ಹಾಸಿನ ಹಾದಿಯಲ್ಲಿ ಮಿಂಚಿದ ನೀರೆಯರು

Last Updated 9 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಗೆಳತಿ ಮನೆಯಲ್ಲಿ ಸಂಜೆ ಬರ್ತ್‌ಡೇ ಪಾರ್ಟಿ ಅಥವಾ ಕಚೇರಿಯಲ್ಲಿ ಗೆಟ್‌ ಟುಗೆದರ್‌. ಆ ದಿನ ಮಾಮೂಲಿ ಸೀರೆ ಉಡಲು ಯಾಕೋ ಬೇಜಾರು. ಅಮ್ಮ ಉಡುಗೊರೆಯಾಗಿ ಕೊಟ್ಟ ರೇಷ್ಮೆ ಸೀರೆ ಭಾರ! ಅದೂ ಅಲ್ಲದೇ ಸಂಜೆಯ ಪಾರ್ಟಿಗೆ ಮಣಭಾರದ ಸೀರೆ ಉಟ್ಟುಕೊಂಡು ಹೋದರೆ ಉಳಿದವರು ಹೇಗೆ ನೋಡುತ್ತಾರೋ ಎಂಬ ಅಂಜಿಕೆ ನೀರೆಯರನ್ನು ಕಾಡುತ್ತಿರುತ್ತದೆ. ಇಂಥದ್ದಕ್ಕೆ ತಲೆಬಿಸಿ ಮಾಡಿಕೊಳ್ಳಬೇಡಿ,  ‘ಸಖಿ’ ಮಳಿಗೆ ಈಗ ‘ಪೇಜ್‌–3’ ಹೊಸ ಸೀರೆ ಸಂಗ್ರಹವನ್ನು ಹೊರತಂದಿದೆ.

ವಿಭಿನ್ನ ರಂಗಿನ, ವಿನ್ಯಾಸದ ಈ ಸೀರೆಗಳನ್ನು ಅನಾವರಣ ಮಾಡಿದ್ದು ಜಯನಗರದಲ್ಲಿರುವ ತನ್ನ ಮಳಿಗೆಯಲ್ಲಿ. ಇಬ್ಬರು ರೂಪದರ್ಶಿಗಳ ಜತೆಗೆ ಸಖಿಯ ಗ್ರಾಹಕರಾದ ಒಂದಿಷ್ಟು ಹೆಂಗಳೆಯರು ರೆಡ್‌ ಕಾರ್ಪೆಟ್‌ ಮೇಲೆ ಬೆಕ್ಕಿನ ನಡಿಗೆ ನಡೆದು ಮಿಂಚಿದರು.

ರ್‍ಯಾಂಪ್‌ ಮೇಲೆ ನಡೆಯಲು ಸಜ್ಜಾಗಿ ನಿಂತಿದ್ದ ಹೆಂಗಳೆಯರು ಪಕ್ಕದಲ್ಲಿಯೇ ಇದ್ದ ಕನ್ನಡಿಯಲ್ಲಿ ತಮ್ಮ ಮುಖ ನೋಡಿಕೊಳ್ಳುತ್ತಿದ್ದರು, ಜತೆಗೆ ತಾವು ಉಟ್ಟ ಸೀರೆ ಸರಿಯಾಗಿದೆಯೇ ಎಂದು ಪದೇಪದೇ ನೋಡಿಕೊಳ್ಳುತ್ತಿದ್ದರು. ಕಟ್‌ ವರ್ಕ್‌ ಇರುವ ಸೀರೆ, ಎರಡು ಮೂರು ಬಣ್ಣದ ಮಿಶ್ರಣದ ಶಿಫಾನ್‌ ಸೀರೆ, ರೆಡಿ ಟು ವೇರ್‌ ಸೀರೆಗಳು ಅಲ್ಲಿ ಹೆಚ್ಚಾಗಿದ್ದವು. ಇದರ ಜತೆಗೆ ನವೀನ ವಿನ್ಯಾಸದ ನೆಟೆಡ್‌ ರವಿಕೆಗಳು ಅಲ್ಲಿ ತಮ್ಮ ಬೆರಗನ್ನು ತೋರಿಸುತ್ತಿದ್ದವು.

ಶೋ ಶುರುವಾಗುತ್ತಿದ್ದಂತೆ ರೂಪದರ್ಶಿಯೊಬ್ಬಳು ನಿಧಾನವಾಗಿ ಸೊಂಟ ಬಳುಕಿಸುತ್ತಾ ಬಂದಳು. ತೆಳು ಗುಲಾಬಿ ಬಣ್ಣದ ಸೀರೆಗೆ ಕೆನೆಬಣ್ಣದ ಅಂಚಿರುವ ಸೀರೆ, ಕೆನೆಬಣ್ಣದ ರವಿಕೆಯಲ್ಲಿ ಆ ಬೆಡಗಿ ನಾಜೂಕಾಗಿ ಹೆಜ್ಜೆ ಇಟ್ಟಳು. ಅವಳಿಗಿಂತ ಅವಳ ಸೀರೆಯ ಬಗ್ಗೆ ಅಲ್ಲಿದ್ದವರ ಪಿಸುಮಾತು ಸದ್ದುಮಾಡುತ್ತಿತ್ತು.

ರೂಪದರ್ಶಿಯ ನಂತರ ಅಲ್ಲಿ ಸಖಿಯ ಗ್ರಾಹಕರಾದ ಒಂದಿಷ್ಟು ಹೆಂಗಳೆಯರು ವೇದಿಕೆ ಮೇಲೆ ಹೆಜ್ಜೆ ಹಾಕಿದರು. ಮಾಡೆಲ್‌ಗಳಷ್ಟು ಪಳಗಿದಂತೆ ಹೆಜ್ಜೆ ಹಾಕದಿದ್ದರೂ ತಾವೇನೂ ಕಡಿಮೆ ಇಲ್ಲವೆಂಬಂತೆ ಬಿಂದಾಸ್‌ ಆಗಿ ನಡೆದರು. ಗುಲಾಬಿ, ತೆಳು ಹಸಿರು, ಹಳದಿ ಬಣ್ಣದ ಮಿಶ್ರಣವಿರುವ ಶಿಫಾನ್‌ ಸೀರೆ ಉಟ್ಟ ನೀರೆ ಒಂದು ಕಡೆಯಾದರೆ, ಮತ್ತೊಂದೆಡೆ ಟಿಶ್ಯೂ ಸೀರೆಯ ನೆರಿಗೆಯನ್ನು ಸರಿಮಾಡಿಕೊಳ್ಳುತ್ತಾ ಮತ್ತೊಬ್ಬ ಬೆಡಗಿ ಕ್ಯಾಮೆರಾ ಕಣ್ಣಿಗೆ ಪೋಸು ನೀಡುತ್ತಿದ್ದರು.

ಮತ್ತೆ ಇನ್ನೊಬ್ಬ ರೂಪದರ್ಶಿಯ ಸರದಿ. ಗಾಢ ಗುಲಾಬಿ ಬಣ್ಣದ ಸೀರೆ ಉಟ್ಟು, ಉದ್ದನೆ ಜಡೆ ಹೆಣೆದುಕೊಂಡ ನೀಳಕಾಯದ ರೂಪದರ್ಶಿಯೊಬ್ಬಳು ತುಸು ನಗುತ್ತಾ, ಮದುಮಗಳಂತೆ ನಾಚುತ್ತಾ ಬಂದಳು. ತೋಳಿಲ್ಲದ ರವಿಕೆಯಲ್ಲಿ ಬಂದ ಆ ಬೆಡಗಿಯನ್ನು ಸೆರೆಹಿಡಿಯುವಲ್ಲಿ ಕ್ಯಾಮೆರಾ ಬ್ಯುಸಿಯಾಗಿತ್ತು.

ಇವರೆಲ್ಲರ ಮಧ್ಯೆ ಈ ಮಳಿಗೆಯ ರೂವಾರಿಗಳಾದ ತಾಯಿ ಚಂದ್ರಾ ಮತ್ತು ಮಗಳು ನೀತಾ ರಾಜೇಂದ್ರನ್‌ ಕೂಡ ವೇದಿಕೆಯ ಮೇಲೆ ಬಂದರು. ತಾಯಿ–ಮಗಳು ಉಟ್ಟ ಸೀರೆ ಕೂಡ ಅಲ್ಲಿ ಆಕರ್ಷಣೀಯವಾಗಿತ್ತು. ತಮ್ಮ ‘ಪೇಜ್‌–3’ ಸಂಗ್ರಹದ ಬಗ್ಗೆಯೂ ಮಾತು ಹಂಚಿಕೊಂಡರು ಚಂದ್ರಾ.

‘ನನ್ನ ಮತ್ತು ಮಗಳ ಮನಸ್ಸಿನಲ್ಲಿ ಹೊಳೆದ ಯೋಚನೆಯೇ ಈ ಹೊಸ ವಿನ್ಯಾಸಕ್ಕೆ ಸ್ಫೂರ್ತಿ. ಇಂದು ಕೆಲಸದ ಒತ್ತಡದ ಮಧ್ಯೆ ಸಮಯ ಸಿಗುವುದು ಕಡಿಮೆ. ಪಾರ್ಟಿಗೆ, ಮದುವೆಗೆ ಹೋಗಬೇಕು ಎಂಬ ಗಡಿಬಿಡಿಯಲ್ಲಿ ಇರುವವರಿಗಾಗಿ ನೂತನ ವಿನ್ಯಾಸದ, ಹಗುರವಾದ ರೆಡಿ ಟು ವೇರ್‌ ಸೀರೆಗಳ ಸಂಗ್ರಹ ನಮ್ಮಲ್ಲಿದೆ. ಪಾರ್ಟಿಗೆ ಹೋಗಬೇಕಾದಾಗ ಭಾರವಾದ ಸೀರೆ ಹಾಕಿಕೊಂಡು ಹೋಗುವುದಕ್ಕೆ ಆಗುವುದಿಲ್ಲ. ಇದನ್ನೆಲ್ಲ ಗಮನಿಸಿ ನಾವು ಈ ಬಾರಿ ಪೇಜ್‌–3 ಸಂಗ್ರಹ ಹೊರತಂದಿದ್ದೇವೆ. ಈ ಸೀರೆಗಳ ಬಣ್ಣದ ಆಯ್ಕೆ ನನ್ನದಾದರೆ, ಹೊಸ ವಿನ್ಯಾಸ ಮಗಳ ಸಲಹೆ’ ಎನ್ನುತ್ತಾರೆ ಚಂದ್ರಾ. ಮಾಹಿತಿಗೆ: www.sakhifashions.com ಭೇಟಿ ನೀಡಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT