ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಪೇಗೌಡರ ಜಯಂತ್ಯುತ್ಸವ

Last Updated 20 ಜೂನ್ 2011, 18:55 IST
ಅಕ್ಷರ ಗಾತ್ರ

ಬೆಂಗಳೂರು: `ಬೆಂಗಳೂರು ನಿರ್ಮಾತೃ ಕೆಂಪೇಗೌಡರ 500ನೇ ಜಯಂತ್ಯುತ್ಸವವನ್ನು ಸರ್ಕಾರ ವಿಜೃಂಭಣೆಯಿಂದ ನಡೆಸಲು ತೀರ್ಮಾನಿಸಿದ್ದು, ಶೀಘ್ರದಲ್ಲೇ ದಿನಾಂಕ ಘೋಷಿಸುವುದಾಗಿ~ ಸಚಿವ ಆರ್.ಅಶೋಕ ತಿಳಿಸಿದರು.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಚಂದ್ರಾ ಬಡಾವಣೆಯ 17ನೇ ಘಟಕದಲ್ಲಿ ಸೋಮವಾರ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 500ನೇ  ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

`ಕೆಂಪೇಗೌಡರ ಜಯಂತಿಯನ್ನು ಸರ್ಕಾರದ ವತಿಯಿಂದ ಈ ಬಾರಿ ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ. ನಾಡಹಬ್ಬ ದಸರಾ ಮಾದರಿ ಕೆಂಪೇಗೌಡ ಜಯಂತಿ ಆಚರಿಸಲಾಗುವುದು~ ಎಂದು ತಿಳಿಸಿದರು.

`ಕೆಂಪೇಗೌಡ ಕೇವಲ ಸಮುದಾಯದ ಏಳಿಗೆಗೆ ಶ್ರಮಿಸಿದ ವ್ಯಕ್ತಿಯಲ್ಲ. ಇಡೀ ಸಮಾಜದ  ಅಭಿವೃದ್ಧಿಗೆ ಶ್ರಮಿಸಿದ ವ್ಯಕ್ತಿ. ಅಂದಿನ ಕಾಲದಲ್ಲೇ ಬೆಂಗಳೂರು ನಿರ್ಮಾಣಕ್ಕೆ ಪಣತೊಟ್ಟಿ ನಿಂತ ಪುಣ್ಯ ಪುರುಷನ ಕೊಡುಗೆ ಅಪಾರ~ ಎಂದು ಶ್ಲಾಘಿಸಿದರು.

`ನಾಡಕಟ್ಟುವ ಕೆಲಸಕ್ಕೆ ಮಾತ್ರ ಸೀಮಿತವಾಗದ ಅವರು, ರೈತರ ಬಗ್ಗೆ ಅತೀವ ಕಾಳಜಿ ಹೊಂದಿದ್ದರು. ರೈತರ ಏಳಿಗೆಗಾಗಿ ಅಂದಿನ ಕಾಲದಲ್ಲೇ ಮಾರುಕಟ್ಟೆಗಳು, ಕೆರೆಗಳ ನಿರ್ಮಾಣ ಕಾರ್ಯ ಮಾಡಿದ್ದರು. ಎಲ್ಲಾ ಪ್ರಭುಗಳಂತೆ ರಾಜ್ಯ ವಿಸ್ತರಣೆಯಲ್ಲಿ ತೊಡಗದೆ, ರಾಜ್ಯದ ಬೆಳವಣಿಗೆಗೆ ಹೆಚ್ಚಿನ ಕಾಳಜಿ ವಹಿಸಿದ್ದರು~ ಎಂದು ನುಡಿದರು.

`ಕೆಂಪೇಗೌಡರು ನಗರದಲ್ಲಿ ನಿರ್ಮಿಸಿದ ಕೆರೆಗಳು ಅವನತಿಯ ಅಂಚಿನಲ್ಲಿದ್ದವು. ಸರ್ಕಾರ ಸುಮಾರು 120 ಕ್ಕೂ ಅಧಿಕ ಕೆರೆಗಳನ್ನು ಅಭಿವೃದ್ಧಿ ಮಾಡಲು ಚಾಲನೆ ನೀಡಿದೆ. 50 ಕ್ಕೂ ಹೆಚ್ಚು ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ~ ಎಂದರು.

ಮುಖ್ಯಮಂತ್ರಿಗಳ ಬಳಿ ಚರ್ಚೆ:  ಧರ್ಮಸ್ಥಳದಲ್ಲಿ ಪ್ರಮಾಣ ಮಾಡುವುದಾಗಿ ಹೇಳಿರುವ ಮುಖ್ಯಮಂತ್ರಿಗಳ ಕ್ರಮ ಸರಿಯಾಗಿದೆ. ಅಭಿವೃದ್ಧಿ ಸಹಿಸದ ಜೆಡಿಎಸ್ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಪಕ್ಷವನ್ನು ತೇಜೋವಧೆ ಮಾಡಲು ಪ್ರಯತ್ನಿಸುತ್ತಿದೆ. ಈ ಎಲ್ಲಾ ಸಮಸ್ಯೆಗಳಿಗೆ ತೆರೆ ಎಳೆಯಲು ಮುಖ್ಯಮಂತ್ರಿಗಳು ಸರಿಯಾದ ನಿರ್ಧಾರವನ್ನೇ ತೆಗೆದುಕೊಂಡಿದ್ದಾರೆ. ಧರ್ಮಸ್ಥಳಕ್ಕೆ ಹೋಗುವ ಕುರಿತು ಅವರೊಂದಿಗೆ ಚರ್ಚಿಸುತ್ತೇನೆ~ ಎಂದು ಹೇಳಿದರು. 

ಮುಖ್ಯಮಂತ್ರಿಗಳ ಈ ಹೇಳಿಕೆಯಿಂದ  ರಾಜಕೀಯ ವಲಯದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿದೆ. ಇದರಿಂದ ಭಿನ್ನಮತೀಯರ ನಿಯೋಗವೊಂದು ಪಕ್ಷದ ವರಿಷ್ಠರನ್ನು ಭೇಟಿ ಮಾಡಲು ದೆಹಲಿಗೆ ತೆರಳಲಿದೆ ಎಂಬುದು ಸುಳ್ಳು. ಪಕ್ಷದಲ್ಲಿ ಅಂತಹ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲ. ಇದೆಲ್ಲಾ ಗಾಳಿ ಸುದ್ದಿ ಎಂದರು.

ಆದಿಚುಂಚನಗಿರಿ ವಿಜಯನಗರ ಶಾಖಾ ಮಠದ ಸೌಮ್ಯನಾಥ ಸ್ವಾಮೀಜಿ, ವಿಜಯನಗರ ಕ್ಷೇತ್ರದ ಶಾಸಕ ಎಂ. ಕೃಷ್ಣಪ್ಪ, ದಕ್ಷಿಣ ಕ್ಷೇತ್ರದ ಶಾಸಕ ಎಂ. ಕೃಷ್ಣಪ್ಪ, ಕೆಂಪೇಗೌಡ ಅಭಿವೃದ್ಧಿ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಎಚ್.ಎಂ.ಕೃಷ್ಣಮೂರ್ತಿ, ಬಿಎಂಟಿಸಿ ತಾಂತ್ರಿಕ ವಿಭಾಗದ ನಿರ್ದೇಶಕ ಎಸ್.ಕೆ.ಪರಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT