ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಭಾವಿಯಲ್ಲಿ ತಾಲ್ಲೂಕು ಸಾಹಿತ್ಯ ಸಮ್ಮೇಳನ

Last Updated 8 ಅಕ್ಟೋಬರ್ 2012, 9:50 IST
ಅಕ್ಷರ ಗಾತ್ರ

ಕೆಂಭಾವಿ: ಬರುವ ಡಿಸೆಂಬರ್‌ನಲ್ಲಿ ಪಟ್ಟಣದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಇಲ್ಲಿಯ ಕನ್ನಡ ಸಾಹಿತ್ಯ ಪರಿಷತ್ ಬಳಗದವರು ಮುಂದೆ ಬಂದಿದ್ದು, ಇಲ್ಲಿಯೇ ಸಾಹಿತ್ಯ ಸಮ್ಮೇಳನ ನಡೆಸಲಾಗುವುದು ಎಂದು ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಶಾಂತಪ್ಪ ಬೂದಿಹಾಳ ಘೋಷಿಸಿದರು.

ಪಟ್ಟಣದ ರೇವಣಸಿದ್ಧೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಕನ್ನಡ ಸಾಹಿತ್ಯ ಪರಿಷತ್ ಕೆಂಭಾವಿ ವಲಯ ಘಟಕದ ಸಾಹಿತ್ಯ ಚಟುವಟಿಕೆಯ ಹಾಗೂ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕೆಂಭಾವಿಯಲ್ಲಿ ಕನ್ನಡ ಸಾಹಿತ್ಯ ಚಟುವಟಿಕೆಗಳು ಹಿಂದಿನಿಂದಲೂ ನಡೆದು ಬಂದಿವೆ. ಅನೇಕ ದಾಸರು, ಶರಣರ ಬೀಡು ಇದಾಗಿದ್ದು, ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ವಲಯ ಕಸಾಪ ಘಟಕದ ಪದಾಧಿಕಾರಿಗಳು ಉತ್ಸಾಹದಿಂದ ಕನ್ನಡ ಪರ ಸಾಹಿತ್ಯಿಕ ಚಟುವಟಿಕೆ ನಡೆಸುತ್ತಿದ್ದಾರೆ.
 
ಐತಿಹಾಸಿಕ ಹಿನ್ನೆಲೆಯುಳ್ಳ ಈ ಭೂಮಿಯಲ್ಲಿ ಕೆಂಭಾವಿಯ ಭೋಗಣ್ಣನ ಕುರಿತು ಇನ್ನೂ ಅನೇಖ ಸಂಶೋಧನಾತ್ಮಕ ಗೋಷ್ಠಿಗಳು ನಡೆಯಬೇಕು. ಆ ಮೂಲಕ ಭೋಗಣ್ಣನ ಇತಿಹಾಸ ನಾಡಿಗೆ ತೋರಿಸಬೇಕಾಗಿದೆ.

ದೇವರ ದಾಸಿಮಯ್ಯ, ಸುರಪುರದ ಆನಂದ ದಾಸರು, ರಘುಪತಿ ವಿಠಲ ಇನ್ನೂ ಅನೇಕ ದಾಸರ, ಶರಣರ ಬಗ್ಗೆ ಸಂಶೋಧನೆಗಳನ್ನು ಈ ಸಮ್ಮೇಳನದ ಮೂಲಕ ನಡೆಸಲಾಗುವುದು. ಆ ದಿಸೆಯಿಂದ ಇಲ್ಲಿಯೇ ಸಮ್ಮೇಳನ ನಡೆಸಲಾಗುವುದು ಎಂದು ಹೇಳಿದರು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ಮಾತನಾಡಿ, ಕನ್ನಡಿಗರಾದ ಪ್ರತಿಯೊಬ್ಬರು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗಬೇಕು. ಹೋಬಳಿ ಘಟಕಗಳಿಗೂ ಕೂಡಾ ತಾಲ್ಲೂಕು ಘಟಕಗಳಿಗೆ ಇದ್ದಂತೆ ಸ್ವಾಯತ್ತತೆ ಒದಗಿಸಲು ರಾಜ್ಯ ಮಟ್ಟದಲ್ಲಿ ಪ್ರಕ್ರಿಯೆ ನಡೆಸಿ ನಿಯಮಾವಳಿ ತಿದ್ದುಪಡಿ ಮಾಡಲಾಗುವುದು ಎಂದು ತಿಳಿಸಿದರು.

ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಪಂಚಾಯಿತಿ ಸದಸ್ಯ ಸಿದ್ಧನಗೌಡ ಪೊಲೀಸ್‌ಪಾಟೀಲ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ಚಟುವಟಿಕೆಗಳಿಗೆ ಸಂಪೂರ್ಣ ಸಹಕಾರ ನೀಡಲಾಗುವುದು. ತಾಲ್ಲೂಕು ಸಾಹಿತ್ಯ ಸಮ್ಮೇಳನವನ್ನು ಮಾದರಿಯಾಗಿ ನಡೆಸುವುದಾಗಿ ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಸಾಪ ಕೆಂಭಾವಿ ವಲಯ ಘಟಕದ ಅಧ್ಯಕ್ಷ ನಿಂಗನಗೌಡ ದೇಸಾಯಿ, ಪತ್ರಿಕೆಗಳು ಕನ್ನಡ ಪರ ಚಟುವಟಿಕೆಗಳಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು. ಜ್ಞಾನಪೀಠ ಪ್ರಶಸ್ತಿಗೆ ಭಾಜನರಾದ ಚಂದ್ರಶೇಖರ ಕಂಬಾರರಿಗೆ ಬೆಳಗಾವಿಯಲ್ಲಿ ನಡೆಯುವ ವಿಧಾನಸಭೆ ಅಧಿವೇಶನದಲ್ಲಿಯೇ ಪೌರ ಸನ್ಮಾನ ಮಾಡಬೇಕು ಎಂದು ಹೇಳಿದರು.

ನಿವೃತ್ತ ಪ್ರಾಧ್ಯಾಪಕ ಮಲ್ಲಿಕಾರ್ಜುನ ಗಣಾಚಾರಿ, ಸಾಹಿತ್ಯದ ಸಾರ್ಥಕತೆ, ಖ್ಯಾತ ಮಕ್ಕಳ ಸಾಹಿತಿ ಚಂದ್ರಕಾಂತ ಕರದಳ್ಳಿ, ಕನ್ನಡ ಸಾಹಿತ್ಯ ಪರಿಷತ್ ನಡೆದು ಬಂದ ದಾರಿ ಮತ್ತು ಡಾ. ಬಿ.ಜಿ .ಅಸ್ಕಿ, ಶರಣರ ಕಾಯಕ ತತ್ವದ ಬಗ್ಗೆ ಉಪನ್ಯಾಸ ನೀಡಿದರು.

ಅತಿಥಿಗಳಾಗಿ ತಾಲ್ಲೂಕು ಪಂಚಾಯಿತಿ ಸದಸ್ಯೆ ಅನ್ನಪೂರ್ಣ ಮಾಲಿಪಾಟೀಲ, ಗ್ರಾಮ ಪಂಚಾಯಿತಿ ಅಧ್ಯಕ್ಷ ಗಿರೆಪ್ಪ ಮ್ಯೋಗೇರಿ, ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವರಾವ ಕುಲಕರ್ಣಿ, ಎಸ್.ಎಸ್. ಸೋಮಾಪುರ, ಮಲ್ಲಣ್ಣ ಮೇಟಿ, ಡಿವೈನ್ ಪಾರ್ಕಿನ ಶಿವಯೋಗೆಪ್ಪ ಕಾಕಾ ಆಗಮಿಸಿದ್ದರು. ಚನ್ನಬಸವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಚನ್ನಯ್ಯ ಚಿಕ್ಕಮಠ ನೇತೃತ್ವ ವಹಿಸಿದ್ದರು.

ಗೌರವಾಧ್ಯಕ್ಷ ಲಿಂಗನಗೌಡ ಮಾಲಿಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ವೆಂಕನಗೌಡ ಪಾಟೀಲ ಸ್ವಾಗತಿಸಿದರು. ಶಿವನಗೌಡ ಪಾಟೀಲ ನಿರೂಪಿಸಿದರು. ಸುಮಿತ್ರಪ್ಪ ಅಂಗಡಿ ವಂದಿಸಿದರು.
ಬಸವರಾಜ್ ಬಂಟನೂರ ಹಾಗೂ ಯಮುನೇಶ ಯಾಳಗಿ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT