ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಆರ್.ನಗರದಲ್ಲಿ ಸರಣಿ ಪ್ರತಿಭಟನೆ

Last Updated 6 ಆಗಸ್ಟ್ 2013, 6:03 IST
ಅಕ್ಷರ ಗಾತ್ರ

ಕೆ.ಆರ್.ನಗರ: ತಾಲ್ಲೂಕಿನ ತಿಪ್ಪೂರು, ಹೊಸೂರು ಕಲ್ಲಹಳ್ಳಿ, ಸೌತನಹಳ್ಳಿ, ಕಾಮೇನಹಳ್ಳಿ, ನಾರಾಯಣಪುರ ಗ್ರಾಮದ ಕೊನೆಯ ಭಾಗದ ಜಮೀನುಗಳಿಗೆ ನಾಲೆಗಳ ಮೂಲಕ ನೀರು ಹರಿಸುವಂತೆ ಒತ್ತಾಯಿಸಿ ಪಟ್ಟಣದ ಕಾವೇರಿ ನೀರಾವರಿ ನಿಗಮದ ಕಚೇರಿಗೆ ರೈತರು ಸೋಮವಾರ ಬೀಗ ಜಡಿದು ಪ್ರತಿಭಟನೆ ಮಾಡಿದರು.

ಸಾವಿರಾರು ರೂಪಾಯಿ ಸಾಲ ಮಾಡಿಕೊಂಡು ಕಾಲುವೆ ನೀರು ನಂಬಿ ಗದ್ದೆಗಳಲ್ಲಿ ಅಗೆ ಹಾಕಲಾಗಿದೆ. ನಾಲೆಗಳ ಆಧುನೀಕರಣ ನೆಪದಲ್ಲಿ ಅಧಿಕಾರಿಗಳು ಗದ್ದೆಗಳಿಗೆ ನೀರು ಬಿಡುತ್ತಿಲ್ಲ. ಅಲ್ಲದೇ ಕೆಲವು ಕಡೆ ನಾಲೆಗಳಲ್ಲಿ ಶೇಖರಿಸಲಾದ ಮಣ್ಣು ಇನ್ನೂ ತೆಗೆದುಹಾಕಿಲ್ಲ. ಇದರಿಂದ ಈ ಭಾಗದ ನೂರಾರು ಎಕೆರೆ ಪ್ರದೇಶ ನಾಲೆ ನೀರಿನಿಂದ ವಂಚಿತವಾಗಿದೆ. ನೀರಿಲ್ಲದೇ ಅಗೆ ನೆಡಲು ಸಾಧ್ಯವಿಲ್ಲ. ಸಕಾಲದಲ್ಲಿ ಅಗೆ ನೆಡದಿದ್ದರೆ ಬತ್ತ ಮೊಳಕೆ ಒಡೆಯುದಿಲ್ಲ. ಇದರಿಂದ ಬೆಳೆಗಾಗಿ ಮಾಡಿದ ಸಾಲ ತೀರಿಸಲು ಕಷ್ಟವಾಗುತ್ತದೆ. ನದಿಗಳಲ್ಲಿ ಸಾಕಷ್ಟು ನೀರು ಇದ್ದರೂ ಸಹ ಅಧಿಕಾರಿಗಳ ಬೇಜವಾಬ್ದಾರಿಯಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ನೀರಾವರಿ ಇಲಾಖೆ ಅಧಿಕಾರಿಗಳು ಕೂಡಲೇ ಕೊನೆಯ ಭಾಗದ ಜಮೀನುಗಳಿಗೆ ನೀರು ಒದಗಿಸಬೇಕು ಎಂದು ರೈತರು ನಿಗಮ ಕಚೇರಿಗೆ ಬೀಗ ಹಾಕಿ, ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವವರಗೆ ಇಲ್ಲಿಂದ ಯಾವ ಅಧಿಕಾರಿಗಳು ಹೊರ ಹೋಗದಂತೆ ತಡೆದರು. ನಂತರ ತಹಶೀಲ್ದಾರ್ ಕಚೇರಿ ಬಳಿ ಇರುವ ಬಿಳಿಕೆರೆ ಬೇಲೂರು ಹೆದ್ದಾರಿ ತಡೆದು ಕೆಲ ಹೊತ್ತು ಪ್ರತಿಭಟನೆ ಮಾಡಿದರು.

ಕಾಮೇನಹಳ್ಳಿ ಗ್ರಾಮದ ಕೆ.ಎಂ. ಶಿವಣ್ಣ, ಕೆ.ಎನ್. ಬಸವರಾಜು, ದೇವರಾಜು, ಶೇಖರ್, ರಾಜೇಗೌಡ, ರಮೇಶ್, ಹೊಸೂರು ಕಲ್ಲಹಳ್ಳಿಯ ನಿಂಗೇಗೌಡ, ಗೋವಿಂದೇಗೌಡ, ದಕ್ಷಿಣಮೂರ್ತಿ, ಗಿರಿನಾಯಕ, ಪ್ರಕಾಶ್, ಶಿವಶಂಕರ್, ಸಾತಿ ಗ್ರಾಮದ ಶಶಿಕುಮಾರ್, ಎಸ್.ಎಂ. ಮಾಲೇಗೌಡ, ಶಂಕರೇಗೌಡ, ಪಾಪಣ್ಣ, ಸೌತನಹಳ್ಳಿ ಗ್ರಾಮದ ಕೆಂಪಣ್ಣ, ಮಲ್ಲೇಗೌಡ ಇದ್ದರು.

ಅಂತ್ಯೋದಯ, ಬಿಪಿಎಲ್ ಪಡಿತರ ಚೀಟಿ ರದ್ದು: ಪ್ರತಿಭಟನೆ
ಕೆ.ಆರ್.ನಗರ:  ತಾಲ್ಲೂಕಿನ ಲಾಳಂದೇವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವು ಅರ್ಹ ಫಲಾನುಭವಿಗಳ ಅಂತ್ಯೋದಯ ಮತ್ತು ಬಿಪಿಎಲ್ ಪಡಿತರ ಚೀಟಿ ರದ್ದಾಗಿದ್ದು, ಅದನ್ನು ಕೂಡಲೇ ಸರಿಪಡಿಸಬೇಕು ಎಂದು ಒತ್ತಾಯಿಸಿ ಲಾಲನಹಳ್ಳಿ ಗ್ರಾಮಸ್ಥರು ಸೋಮವಾರ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ಮಾಡಿದರು.

ಈ ಸಂದರ್ಭದಲ್ಲಿ ಲಾಲನಹಳ್ಳಿ ಮಹೇಶ್ ಮಾತನಾಡಿ, `ತಾಲ್ಲೂಕಿನಲ್ಲಿ ಕಳೆದ ವರ್ಷ ಮತ್ತು ಈ ಬಾರಿ ಮಳೆ ಪ್ರಮಾಣ ಇಳಿಮುಖವಾಗಿದೆ. ಬಡವರು ಸರ್ಕಾರ ಕೊಡುವ ಅಕ್ಕಿಯನ್ನೇ ನಂಬಿ ಬದುಕುತ್ತಿದ್ದಾರೆ. ಅಂತಹ ಕುಟುಂಬಗಳ ಪಡಿತರ ಚೀಟಿಯನ್ನೇ ರದ್ದು ಮಾಡಲಾಗಿದೆ. ಅಧಿಕಾರಿಗಳು ಅದನ್ನು ಕೂಡಲೇ ಸರಿಪಡಿಸಿ ಪಡಿತರ ಚೀಟಿ ಒದಗಿಸಬೇಕು' ಎಂದು ಆಗ್ರಹಿಸಿದರು. ಬಳಿಕ ತಹಶೀಲ್ದಾರ್ ಬಿ.ಎನ್. ವೀಣಾ ಅವರಿಗೆ ಮನವಿ ಸಲ್ಲಿಸಿದರು.

ಬಿ.ಎನ್.ವೀಣಾ ಮಾತನಾಡಿ `ಅಂತ್ಯೋದಯ ಅಥವಾ ಬಿಪಿಎಲ್ ಪಡಿತರ ಚೀಟಿ ಹೊಂದಿರುವವರು ಸಕಾಲದಲ್ಲಿ ದಾಖಲಾತಿ ಸಲ್ಲಿಸದೇ ಇರುವುದರಿಂದ ಕಾರ್ಡ್ ರದ್ದಾಗಿರಬಹುದು. ಹೊಸ ಪಡಿತರ ಚೀಟಿಗಾಗಿ ಮತ್ತೆ ಅರ್ಜಿ ಸಲ್ಲಿಸಿದರೆ ಅದನ್ನು ಪರಿಶೀಲಿಸಿ ಸರ್ಕಾರ ಕಾಲಕಾಲಕ್ಕೆ ಹೊರಡಿಸುವ ಆದೇಶದಂತೆ ಪಡಿತರ ಚೀಟಿ ವಿತರಿಸಲಾಗುವುದು' ಎಂದರು.

ಹಾಸ್ಟೆಲ್‌ನಲ್ಲಿ ಮೂಲಸೌಕರ್ಯ ಕೊರತೆ; ಪ್ರತಿಭಟನೆ
ಕೆ.ಆರ್.ನಗರ: ಪಟ್ಟಣದಲ್ಲಿ ಪರಿಶಿಷ್ಟ ಜನಾಂಗಕ್ಕೆ ಸೇರಿದ ಒಂದೇ ವಿದ್ಯಾರ್ಥಿ ನಿಲಯದಲ್ಲಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರನ್ನು ಉಳಿದುಕೊಳ್ಳಲು ಅವಕಾಶ ಮಾಡಿಕೊಟ್ಟರುವುದನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸದಸ್ಯರು ತಹಶೀಲ್ದಾರ್ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ಮಾಡಿದರು.

ಪಟ್ಟಣದಲ್ಲಿ ಪರಿಶಿಷ್ಟ ಜನಾಂಗಕ್ಕೆ ಸೇರಿದ ಬಾಲಕರ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯ ಇದೆ. ಸ್ಥಳಾವಕಾಶದ ಕೊರತೆಯಿಂದ ಒಂದು ವರ್ಷದ ಹಿಂದೆ ವಿದ್ಯಾರ್ಥಿನಿಯರ ಕಾಲೇಜು ಹಾಸ್ಟೆಲನ್ನು ಇಲ್ಲಿಗೆ ವರ್ಗಾಯಿಸಲಾಗಿದೆ. ಆದರೆ ಈ ಹಾಸ್ಟೆಲ್‌ನಲ್ಲಿ ಯಾವುದೇ ಮೂಲ ಸೌಕರ್ಯಗಳಿಲ್ಲ. ಶೌಚಾಲಯ, ಸ್ನಾನಗೃಹ, ಉಳಿದುಕೊಳ್ಳುವ ಕೊಠಡಿಗಳು ಸರಿಯಾಗಿಲ್ಲ ಎಂದು ಆರೋಪಿಸಿದರು.

ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಒಂದೇ ವಸತಿ ನಿಲಯವಾಗಿರುವುದರಿಂದ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ. ಅಧಿಕಾರಿಗಳು ಇತ್ತ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಜಿಲ್ಲಾ ಸಂಚಾಲಕ ರವಿ, ಅನಿಲ್, ಅಶೋಕ್, ತೇಜಶ್ವಿನಿ, ರಂಜಿತಾ, ಪಲ್ಲವಿ, ರೋಜ, ಉಷಾ, ಪ್ರೀತಿ, ಸುನಿಲ್, ಸಂಗೀತ ಮತ್ತಿತರರು ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ಮಾಡಿದರು.
ಪ್ರತಿಭಟನಾಕಾರರು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT