ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಆರ್.ಪುರ ಸಂತೆಯಲ್ಲಿ ಕೊಕ್ಕೊಕ್ಕೋ...

Last Updated 12 ಡಿಸೆಂಬರ್ 2012, 19:50 IST
ಅಕ್ಷರ ಗಾತ್ರ

ಕೋಳಿ ಕೂಗುವ ಸಮಯ. ಕಾಲುಗಳನ್ನು ಕಟ್ಟಿದ್ದ ಬಣ್ಣ ಬಣ್ಣದ ನಾಟಿ ಕೋಳಿಗಳನ್ನು ಹಿಡಿದುಕೊಂಡು ಹತ್ತಾರು ಮಂದಿ ರಸ್ತೆ ಬದಿಯಲ್ಲಿ ಗ್ರಾಹಕರಿಗಾಗಿ ಕಾಯುತ್ತಿದ್ದರು. ಅಷ್ಟರಲ್ಲಾಗಲೇ ಜನಜಂಗುಳಿ. ನೋಡನೋಡುತ್ತಲೇ ಗ್ರಾಹಕರು ಸಾಲುಗಟ್ಟಿದರು. `ಹತ್ತು, ಇಪ್ಪತ್ತು, ಮೂವತ್ತು ರೂಪಾಯಿ ಕಡಿಮೆ ಮಾಡಿಕೊಳ್ಳಿ' ಎಂದು ಚೌಕಾಸಿಗೆ ಇಳಿಯತೊಡಗಿದರು. ಕೊನೆಗೆ ಗಿಟ್ಟಿದ ಬೆಲೆಗೆ ಕೊಂಡುಕೊಂಡೇ ಹೊರಡುತ್ತಿದ್ದರು. ಕೋಳಿ ಕೊಂಡವರಿಗೆ ಮಸಾಲೆಯೂ ಬೇಕಲ್ಲ; ಅದೂ ಅಲ್ಲೇ ಸಿಕ್ಕಿತು.

ಕೃಷ್ಣರಾಜಪುರದಲ್ಲಿ (ಕೆ.ಆರ್.ಪುರ) ಪ್ರತಿ ಮಂಗಳವಾರ ನಡೆಯುವ ಸಂತೆಯಲ್ಲಿ ಪದೇಪದೇ ಕಾಣುವ ಮುಖಗಳಿರುತ್ತವೆ. ಮಾಲ್‌ಗಳಿರುವ ಮಹಾನಗರದಲ್ಲಿಯೂ ಸಂತೆಯೊಳಗಿನ ಹಳ್ಳಿಯಂಥ ವಾತಾವರಣ ಮುದನೀಡುತ್ತದೆ. ಸಣ್ಣ ಕೈಗಾರಿಕೆ, ಗಾರ್ಮೆಂಟ್ಸ್‌ಗಳಿಗೆ ಬೆಳಿಗ್ಗೆ ಕೆಲಸಕ್ಕೆ ಹೋಗುವ ಮಹಿಳೆಯರು ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ಹಿಂತಿರುಗುವಾಗ ಈ ಸಂತೆಯೊಳಗೊಂದು ಸುತ್ತು ಹಾಕುತ್ತಾರೆ. ವಾರಕ್ಕಾಗುವಷ್ಟು ತರಕಾರಿ ಕೊಳ್ಳುತ್ತಾರೆ. ಇಂಥವರಿಗೆಂದೇ ಸಂತೆಯಲ್ಲಿ ತೂಕದ ಬದಲು ಗುಡ್ಡೆಹಾಕಿ ತರಕಾರಿ ಮಾರುವ ಅನೇಕ ವ್ಯಾಪಾರಿಗಳಿದ್ದಾರೆ.

ನೂರಾರು ವರ್ಷಗಳ ಇತಿಹಾಸವಿರುವ ಕೆ.ಆರ್.ಪುರ ಸಂತೆಯಲ್ಲಿ ದಿನಬಳಕೆ ಸಾಮಗ್ರಿಗಳಿಂದ ಹಿಡಿದು ಬಗೆಬಗೆ ತರಕಾರಿ, ಹಣ್ಣು, ತೆಂಗಿನಕಾಯಿ ಸಿಗುತ್ತವೆ. ಒಣ ಮೀನು, ಮಾಂಸ ಹಾಗೂ ನಾಟಿ ಕೋಳಿಗಳ ಖರೀದಿಗೆ ಇದು ಜನಪ್ರಿಯ ಸ್ಥಳ. ವಾರದ ಸಂತೆಯನ್ನೇ ಕಾಯುವ ಇಲ್ಲಿನ ಕೆಲವು ಮಂದಿ ಆ ದಿನ ಹಳ್ಳಿಗಳಿಂದ ವ್ಯಾಪಾರಿಗಳು ತರುವ ಕೋಳಿಗಾಗಿಯೇ ಕಾಯುತ್ತಾರೆಂಬುದು ವಿಶೇಷ.

`ಇಪ್ಪತ್ತು ವರ್ಷಗಳಿಂದ ಈ ಸಂತೆಯಲ್ಲಿ ವ್ಯಾಪಾರಿಯಾಗಿದ್ದೇನೆ. ನಾಟಿ ಕೋಳಿ ಹಾಗೂ ಗಿರಿರಾಜ ಕೋಳಿಗಳನ್ನು ಮಾರಾಟ ಮಾಡುತ್ತೇನೆ. ಗುಂಟೂರು, ಇಂಡಿಗನಾಳ್ ಹಾಗೂ ಮಾಲೂರುಗಳಿಂದ ಕೋಳಿಗಳನ್ನು ತರುತ್ತೇವೆ. ದಿನಕ್ಕೆ ಇಪ್ಪತ್ತು ಕೋಳಿಗಳು ಖರ್ಚಾಗುತ್ತವೆ. ಹತ್ತು ವರ್ಷಗಳ ಹಿಂದೆ ಒಂದು ಕೆ.ಜಿ. ಕೋಳಿಗೆ 30 ರೂಪಾಯಿ ಬೆಲೆ ಇತ್ತು. ಈಗ ಇನ್ನೂರು ರೂಪಾಯಿಯಾಗಿದೆ. ಆದರೂ ಜನರು ನಾಟಿ ಕೋಳಿಯನ್ನೇ ಇಷ್ಟಪಡುತ್ತಾರೆ' ಎಂದು ಗ್ರಾಹಕರತ್ತ ಮುಖ ಮಾಡುತ್ತಾರೆ ವ್ಯಾಪಾರಿ ಅಫ್ರೋಜ್.

`ಒಂದು ಕೆ.ಜಿಯಿಂದ ಮೂರು ಕೆ.ಜಿ. ತೂಗುವ ಕೋಳಿಗಳನ್ನು ತರುತ್ತೇವೆ. ನಾಲ್ಕೈದು ಸಾವಿರ ರೂಪಾಯಿ ವ್ಯಾಪಾರವಾಗುತ್ತದೆ. ಚೌಕಾಸಿ ಮಾಡುವವರೇ ಹೆಚ್ಚು' ಎಂಬುದು ವೆಂಕಟಪ್ಪನವರ ಅಸಮಾಧಾನ.

ಹತ್ತು ವರ್ಷಗಳಿಂದ ತೆಂಗಿನಕಾಯಿ ವ್ಯಾಪಾರ ಮಾಡುತ್ತಿರುವ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಭೂತಯ್ಯ ಅವರದು ಮತ್ತೊಂದು ಕಥೆ. ತಿಪಟೂರು ಸೇರಿದಂತೆ ತುಮಕೂರು ಜಿಲ್ಲೆಯ ವಿವಿಧ ಊರುಗಳಿಂದ ತೆಂಗಿನಕಾಯಿ ತರುತ್ತಾರೆ. ಐದರಿಂದ ಆರು ಸಾವಿರ ಕಾಯಿ ತರುವ ಇವರು ಹಬ್ಬಹರಿದಿನಗಳಲ್ಲಿ ಅಷ್ಟನ್ನೂ ಮಾರುತ್ತಾರೆ. ಉಳಿದ ದಿನಗಳಲ್ಲಿ ದಿನಕ್ಕೆ ಎರಡರಿಂದ ಮೂರು ಸಾವಿರ ವ್ಯಾಪಾರ ಮಾಡುತ್ತಾರೆ. ಹಣದ ಜೊತೆಗೆ ಕೆಲವು ಸ್ನೇಹಿತರನ್ನೂ ದಕ್ಕಿಸಿಕೊಟ್ಟಿದೆ ಈ ಸಂತೆ. `ರಾಮಮೂರ್ತಿ ನಗರ, ಗರುಡಾಚಾರ್‌ಪಾಳ್ಯ, ಆವಲಹಳ್ಳಿ ಯಿಂದ ಗ್ರಾಹಕರು ಬರುತ್ತಾರೆ. ಹತ್ತು ವರ್ಷಗಳಿಂದ ವ್ಯಾಪಾರ ಮಾಡುವ ಕೃಷ್ಣಯ್ಯನಪಾಳ್ಯದ ನಾಗರಾಜು ಆಪ್ತ ಸ್ನೇಹಿತರು. ವ್ಯಾಪಾರದ ಜೊತೆಗೆ ನಮ್ಮ ನಡುವೆ ಸ್ನೇಹದ ಕೊಂಡಿಯೂ ಬೆಸೆದುಕೊಂಡಿತು' ಎಂದು ಹೇಳುತ್ತಾರೆ ವ್ಯಾಪಾರಿ ಭೂತಯ್ಯ.

ವರ್ತೂರು, ಕೋಲಾರ, ನರಸಾಪುರ, ವಿಜಯಪುರ ಸೇರಿದಂತೆ ಸುತ್ತಮುತ್ತಲಿನ ಐವತ್ತಕ್ಕೂ ಹೆಚ್ಚು ಹಳ್ಳಿಗಳಿಂದ ರೈತರೇ ತರಕಾರಿಗಳನ್ನು ತಂದು ವ್ಯಾಪಾರಿಗಳಿಗೆ ಮಾರುತ್ತಾರೆ. ಇನ್ನು ಕೆಲವು ರೈತರು ತಾವೇ ವ್ಯಾಪಾರ ಮಾಡುವುದು ಉಂಟು. ಸೊಪ್ಪು, ಕೋಸು, ಆಲೂಗಡ್ಡೆ, ಬೀನ್ಸ್, ಮೆಣಸಿನಕಾಯಿ ಸೇರಿದಂತೆ ಬಹುತೇಕ ಎಲ್ಲಾ ಬಗೆಯ ತರಕಾರಿಗಳನ್ನು ಇಲ್ಲಿಗೆ ತಂದು ಮಾರುತ್ತಾರೆ.

ಸಂತೆಯೊಳಗೊಂದು ಹೋಟೆಲ್
ಸಂತೆಗೆ ಬರುವ ವ್ಯಾಪಾರಿಗಳು ಹಾಗೂ ರೈತರಿಗಾಗಿ 1985ರಿಂದ ಹೋಟೆಲ್ ನಡೆಸುತ್ತಿರುವ ವೆಂಕಟರಮಣಪ್ಪ ಅವರು ಈಗಲೂ ಎರಡು ರೂಪಾಯಿಗೆ ಒಂದು ಇಡ್ಲಿ ಮಾರುತ್ತಾರೆ.

`ಇಪ್ಪತ್ತು ವರ್ಷಗಳ ಹಿಂದೆ ರೂಪಾಯಿಗೆ ಐದು ಇಡ್ಲಿ ಮಾರುತ್ತಿದ್ದೆವು. ಇಲ್ಲಿಗೆ ಬರುವ ಬಹುತೇಕರು ಹಳ್ಳಿಗರು, ವ್ಯಾಪಾರಿಗಳು. ಆದ್ದರಿಂದ ಕಡಿಮೆ ಬೆಲೆಗೆ ರುಚಿಯಾದ ತಿಂಡಿ ಮಾರಬೇಕು. ಈಗಲೂ ಕಡಿಮೆ ಬೆಲೆಯೇ ಇದೆ. ಎಲ್ಲಾ ವಸ್ತುಗಳ ಬೆಲೆ ಹೆಚ್ಚಳವಾಗಿರುವುದರಿಂದ ಎರಡು ರೂಪಾಯಿಗೆ ಒಂದು ಇಡ್ಲಿ ಮಾರುತ್ತಿದ್ದೇವೆ. ಬೇರೆ ಹೋಟೆಲ್‌ಗಳಿಗೆ ಹೋಲಿಸಿದರೆ ಇದು ದುಬಾರಿಯೇನಲ್ಲ ಎಂದು ಹೇಳುತ್ತಾರೆ ಅವರು.

`ಕೋಲಾರ ಜಿಲ್ಲೆ ಸೇರಿದಂತೆ ಆಂಧ್ರದ ಚಿತ್ತೂರು, ಪುಂಗನೂರಿನಿಂದ ಲಾರಿಗಟ್ಟಲೆ ತರಕಾರಿ ಬರುತ್ತದೆ. ಈಗ ಅವರೆಕಾಯಿ ಋತು. ಹಾಗಾಗಿ ಹೆಚ್ಚಾಗಿ ಅವರೆಕಾಯಿ ಬರುತ್ತಿದೆ. ಕಳೆದ ವರ್ಷ ಕೆ.ಜಿಗೆ 10ರಿಂದ 20 ರೂಪಾಯಿ ಇದ್ದ ಅವರೆಕಾಯಿ, ಈ ಬಾರಿ 40 ರೂಪಾಯಿ ಆಗಿದೆ. ಬೆಳೆಯುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. `ನಾವು ಇಪ್ಪತ್ತು ಸಾವಿರ ಬಂಡವಾಳ ಹಾಕುತ್ತೇವೆ. ಹೋಟೆಲ್, ಕ್ಯಾಂಟೀನ್‌ಗಳಿಗೆ ಸಾಲ ಕೊಡುತ್ತೇವೆ. ಅವರು ತಿಂಗಳ ನಂತರ ಒಮ್ಮೆ ಪಾವತಿಸುತ್ತಾರೆ. ಮಳೆ ಬಂದರೆ ವ್ಯಾಪಾರ ಕಡಿಮೆಯಾಗುತ್ತದೆ. ಕೈಗೆ ಐನೂರು, ಸಾವಿರ ರೂಪಾಯಿ ಲಾಭವೂ ಸಿಗೋದಿಲ್ಲ' ಎಂದು ಬೇಸರ ವ್ಯಕ್ತಪಡಿಸುತ್ತಾರೆ ವ್ಯಾಪಾರಿ ಮುನಿಯಮ್ಮ.

ಬೆಳಿಗ್ಗೆ 4ರಿಂದ ರಾತ್ರಿ 8ರವರೆಗೆ ನಡೆಯುವ ಕೆ.ಆರ್.ಪುರ ಸಂತೆಯಲ್ಲಿ ಲಕ್ಷಾಂತರ ರೂಪಾಯಿ ವಹಿವಾಟು ನಡೆಯುತ್ತದೆ. ಬೆಳಿಗ್ಗೆಯಿಂದ ಸೂರ್ಯ ಕಂತುವವರೆಗೆ ಒಂದೇ ಲಯದಲ್ಲಿ ವ್ಯಾಪಾರ ನಡೆಯುವುದನ್ನು ಕಣ್ತುಂಬಿಕೊಳ್ಳುವುದು ನಗರಿಗೆ ಒಂದು ಭಿನ್ನ ಅನುಭವವೇ ಆದೀತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT