ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಆರ್‌ಎಸ್ ಆಣೆಕಟ್ಟು, ಬೃಂದಾವನ :ಅ.4 ರವರೆಗೆ ಪ್ರವೇಶ ನಿರ್ಬಂಧ

Last Updated 1 ಅಕ್ಟೋಬರ್ 2012, 7:25 IST
ಅಕ್ಷರ ಗಾತ್ರ

ಮಂಡ್ಯ: ತಮಿಳುನಾಡಿಗೆ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಪ್ರತಿಭಟನೆ ಕಾವು ತೀವ್ರಗೊಂಡಿದ್ದು, ಮೈಸೂರು-ಬೆಂಗಳೂರು ರಸ್ತೆ ಸಂಚಾರವನ್ನು ಸತತ 12 ಗಂಟೆಗೂ ಹೆಚ್ಚು ಕಾಲ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು.

ತಾಲ್ಲೂಕಿನ ಇಂಡವಾಳು, ಯಲಿಯೂರು ಹಾಗೂ ಮಂಡ್ಯ ನಗರದಲ್ಲಿ ಮೈಸೂರು ಬೆಂಗಳೂರು ರಸ್ತೆ ತಡೆ ನಡೆಸಿ ಪ್ರತಿಭಟಿಸಲಾಯಿತು.  ನಗರದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ರಸ್ತೆ ತಡೆ ಮಾಡಿ, ಅಲ್ಲಿಯೇ ಅಡುಗೆ ಮಾಡಲಾಯಿತು. ಬೇಲಿ ಹಾಗೂ ಕ್ಲ್ಲಲು ಹಾಕಿ ಸಂಚಾರ ತಡೆಯಲಾಯಿತು. ರಸ್ತೆ ಮಧ್ಯದಲ್ಲಿಯೇ ಕುಳಿತು ಊಟವನ್ನು ಮಾಡಲಾಯಿತು.

ಸಮಿತಿ ಅಧ್ಯಕ್ಷ ಜಿ. ಮಾದೇಗೌಡ, ಶಾಸಕ ಎಂ.ಶ್ರೀನಿವಾಸ್, ಮಾಜಿ ಸಚಿವ ಎಂ.ಎಸ್. ಆತ್ಮಾನಂದ, ಮಾಜಿ ಶಾಸಕರಾದ ಕೆ.ಟಿ. ಶ್ರೀಕಂಠೇಗೌಡ, ಜಿ.ಬಿ. ಶಿವಕುಮಾರ್, ಮುಡಾ ಅಧ್ಯಕ್ಷ ಬಸವೇಗೌಡ, ಕೆಪಿಸಿಸಿ ಸದಸ್ಯ ಟಿ.ಎಸ್. ಸತ್ಯಾನಂದ, ದಲಿತ ಸಂಘರ್ಷ ಸಮಿತಿ ಮುಖಂಡ ಎಂ.ಬಿ. ಶ್ರೀನಿವಾಸ್, ರೈತ ಸಂಘದ ಮುಖಂಡ ಶಂಭೂನಹಳ್ಳಿ ಸುರೇಶ್, ಡಾ.ಬಿ. ಶಿವಲಿಂಗಯ್ಯ, ಮೀರಾ ಶಿವಲಿಂಗಯ್ಯ, ವಕೀಲರ ಸಂಘದ ಅಧ್ಯಕ್ಷ ಕೇಶವಮೂರ್ತಿ, ಅಂಬುಜಮ್ಮ ಮತ್ತಿತರರು ಪಾಲ್ಗೊಂಡಿದ್ದರು. ಇಂಡವಾಳು ಗ್ರಾಮದಲ್ಲಿ ಬೆಳಿಗ್ಗೆಯೇ ಬಸವರಾಜು ಅವರ ನೇತೃತ್ವದಲ್ಲಿ ಬೆಂಗಳೂರು-ಮೈಸೂರು ರಸ್ತೆಗೆ ಜಾನುವಾರು, ಬಂಡಿಯೊಂದಿಗೆ ಆಗಮಿಸಿದ ರೈತರು ಅಲ್ಲಿಯೇ ಠಿಕಾಣಿ ಹೂಡಿದರು.

ಅಡುಗೆ ಸಾಮಗ್ರಿಗಳನ್ನು ತೆಗೆದುಕೊಂಡು ರಸ್ತೆಯಲ್ಲಿಯೇ ಅಡುಗೆ ತಯಾರಿಸಲು ಆರಂಭಿಸಿದರು. ಅದನ್ನು ತಾವು ಊಟ ಮಾಡುವುದಲ್ಲದೇ, ರಸ್ತೆ ತಡೆಯಿಂದ ನಿಂತಿದ್ದ ವಾಹನಗಳಲ್ಲಿದ್ದವರಿಗೂ ಬಡಿಸಿದರು.

ಬಸ್ ಸಂಚಾರ ಸ್ಥಗಿತ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಹಾಗೂ ಖಾಸಗಿ ಬಸ್‌ಗಳು ಜಿಲ್ಲೆಯಲ್ಲಿ ಬಸ್ ಸಂಚಾರವನ್ನು ಸ್ಥಗಿತಗೊಳಿಸಿದ್ದವು. ಅಂಗಡಿ-ಮುಂಗಟ್ಟುಗಳು ಬಹುತೇಕ ಬಂದ್ ಆಗಿದ್ದವು. ರಸ್ತೆ ತಡೆ ನಡೆಸಿದ್ದರಿಂದ ಉಳಿದ ವಾಹನಗಳ ಸಂಚಾರವೂ ಇರಲಿಲ್ಲ. ಹೀಗಾಗಿ, ಅಘೋಷಿತ ಬಂದ್ ವಾತಾವರಣ ಸೃಷ್ಟಿಯಾಗಿತ್ತು. ಮಂಡ್ಯದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ವತಿಯಿಂದ ಮಂಡ್ಯದಲ್ಲಿ 15 ನಿಮಿಷಗಳ ಕಾಲ ಟಿಪ್ಪು ಎಕ್ಸ್‌ಪ್ರೆಸ್ ರೈಲು ತಡೆದು ಪ್ರತಿಭಟಿಸಿದರು. 

ವೇದಿಕೆ ರಾಜ್ಯ ಘಟಕದ ಅಧ್ಯಕ್ಷ, ರಮೇಶ್‌ಗೌಡ, ಗೀತಾ ರವೀಂದ್ರ, ಶ್ರೀಧರ್, ನಿಲೇಶಗೌಡ, ಶಂಕರ, ರಣಜಿತ್, ಯೋಗೇಶ್ ಮತ್ತಿತರರು ಪಾಲ್ಗೊಂಡಿದ್ದರು.

ಜಯ ಕರ್ನಾಟಕ: ನಗರದ ಮಹಾವೀರ ವೃತ್ತದಲ್ಲಿ ತಮಿಳುನಾಡು ಮುಖ್ಯಮಂತ್ರಿ, ಪ್ರಧಾನಮಂತ್ರಿ ಹಾಗೂ ಕರ್ನಾಟಕ ಮುಖ್ಯಮಂತ್ರಿಗಳದ್ದೂ ಸೇರಿದಂತೆ ಹಲವರ ತಿಥಿ ಆಚರಿಸಿದರು. ಜಿಲ್ಲಾ ಘಟಕದ ಅಧ್ಯಕ್ಷ ಶಂಕರೇಗೌಡ, ಚಂದ್ರು ಮತ್ತಿತರರು ಪಾಲ್ಗೊಂಡಿದ್ದರು.


ಪ್ರವೇಶ ನಿರ್ಬಂಧ: ಅ.4ರವರೆಗೆ ವಿಸ್ತರಣೆ
ಮಂಡ್ಯ:
ಕಾವೇರಿ ಚಳವಳಿ ಸಂಬಂಧ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯುಂಟಾಗುವ ಸಂಭವ ಇರುವುದರಿಂದ ಕಷ್ಣರಾಜಸಾಗರ ಅಣೆಕಟ್ಟೆ ಹಾಗೂ ಬೃಂದಾವನ ಪ್ರವೇಶಕ್ಕೆ ನೀಡಲಾಗಿದ್ದ ತಾತ್ಕಾಲಿಕ ನಿರ್ಬಂಧವನ್ನು ಅಕ್ಟೋಬರ್ 4ವರೆಗೆ ವಿಸ್ತರಿಸಿ ಜಿಲ್ಲಾಧಿಕಾರಿ ಬಿ.ಎನ್.ಕೃಷ್ಣಯ್ಯ ಆದೇಶ ಹೊರಡಿಸಿದ್ದಾರೆ.
`ಕದ್ದು ನೀರು ಬಿಡುವವರಿಂದ ಅಭಿವೃದ್ಧಿ ಸಾಧ್ಯವಿಲ್ಲ~

ಮಂಡ್ಯ: ಕದ್ದು ನೀರು ಬಿಡುವವರಿಂದ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ. ಯೋಗ್ಯತೆ ಇಲ್ಲದಿದ್ದರೆ, ಅಧಿಕಾರಕ್ಕೆ ಅಂಟಿಕೊಂಡಿರಬಾರದು ಎಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಜಿ. ಮಾದೇಗೌಡ ಆಗ್ರಹಿಸಿದ್ದಾರೆ. ತಮಿಳುನಾಡಿಗೆ ನೀರು ಬಿಟ್ಟಿರುವುದು ಸೇರಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮರ್ಯಾದಸ್ಥ ಸಂಸದರು, ಶಾಸಕರು ಜನಪ್ರತಿನಿಧಿಗಳು ತಕ್ಷಣ ರಾಜೀನಾಮೆ ನೀಡಬೇಕು.

ಕೊಡದಿದ್ದರೆ ಜನರೇ ಮುಂದಿನ ದಿನಗಳಲ್ಲಿ ವಿಚಾರಿಸಿಕೊಳ್ಳುತ್ತಾರೆ ಎಂದರು. ಅಧಿಕಾರ ಹೋದರು ನೀರು ಬಿಡುವುದಿಲ್ಲ ಎಂದವರು ನೀರು ಬಿಟ್ಟಿದ್ದಾರೆ. ಜನರಿಗೆ ವಿಶ್ವಾಸದ್ರೋಹ ಮಾಡಿದ್ದಾರೆ ಎಂದು ಟೀಕಿಸಿದ ಅವರು, ಪ್ರತಿ ಹಳ್ಳಿಯ ಪ್ರತಿ ಮನೆಗೆ ಒಬ್ಬರು ಹೋರಾಟದಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT