ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಆರ್‌ಎಸ್ ಭರ್ತಿಗೆ 9 ಅಡಿ ಬಾಕಿ

Last Updated 19 ಜುಲೈ 2013, 19:34 IST
ಅಕ್ಷರ ಗಾತ್ರ

ಮಂಡ್ಯ: ಜಿಲ್ಲೆಯ ಕೆಆರ್‌ಎಸ್ (ಕೃಷ್ಣರಾಜಸಾಗರ) ಜಲಾಶಯವು ಭರ್ತಿಯಾಗುವತ್ತ ಸಾಗಿರುವುದು ರೈತರಿಗೆ ಹರ್ಷ ತಂದಿದ್ದರೂ, ಜಲಾಶಯದಿಂದ ನಾಲೆಗಳಿಗೆ ಹರಿಸಿದ ನೀರು ತಮ್ಮ ಹೊಲಗಳಿಗೆ ತಲುಪಲು ವಿಳಂಬವಾಗುತ್ತಿದೆ ಎನ್ನುವ ಆತಂಕ ಕೊನೆಭಾಗದ ರೈತರನ್ನು ಕಾಡುತ್ತಿದೆ.

ಜಲಾಶಯದ ಗರಿಷ್ಠ ಮಟ್ಟ 124.80 ಅಡಿಗಳಷ್ಟಿದ್ದು, ಶುಕ್ರವಾರ ಬೆಳಿಗ್ಗೆ ಹೊತ್ತಿಗೆ 115 ಅಡಿಗೆ ತಲುಪಿದೆ. ಜಲಾಶಯ ಭರ್ತಿಗೆ ಇನ್ನೂ ಒಂಬತ್ತು ಅಡಿ ನೀರು ಬರಬೇಕಿದ್ದು, ಕೊಡಗಿನಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಭರ್ತಿಯಾಗುವ ಎಲ್ಲ ಲಕ್ಷಣಗಳೂ ಇವೆ.

ಜಲಾಶಯದ ಒಳಹರಿವು 19,330 ಕ್ಯೂಸೆಕ್‌ಗಳಿದ್ದರೆ, ಹೊರ ಹರಿವು ನದಿ ಹಾಗೂ ನಾಲೆಗಳಿಗೆ ಸೇರಿ 3,803 ಕ್ಯೂಸೆಕ್ ಇದೆ. ಇದೇ ಪ್ರಮಾಣದಲ್ಲಿ ಒಳಹರಿವು ಇದ್ದರೆ, ಇನ್ನು ಹತ್ತು ದಿನಗಳಲ್ಲಿ ಜಲಾಶಯವು ಭರ್ತಿಯಾಗಲಿದೆ.

2006-07ನೇ ಸಾಲಿನಲ್ಲಿ ಜುಲೈ 19ರ ವೇಳೆಗೆ ಜಲಾಶಯ ಭರ್ತಿಯಾಗಿದ್ದು ಬಿಟ್ಟರೆ, ಉಳಿದ ಹತ್ತು ವರ್ಷಗಳಲ್ಲಿ 76 ಅಡಿಗಳಿಂದ 110 ಅಡಿಗಳವರೆಗೆ ಮಾತ್ರ ನೀರು ಸಂಗ್ರಹವಾಗಿತ್ತು ಎನ್ನುತ್ತಾರೆ ನೀರಾವರಿ ಇಲಾಖೆಯ ಅಧಿಕಾರಿಗಳು.

ಕಾವೇರಿ ಕೊಳ್ಳಕ್ಕೆ ಸೇರಿರುವ ಎರಡು ಜಲಾಶಯಗಳು ಭರ್ತಿಯಾಗಿದ್ದರೆ, ಇನ್ನೆರಡು ಜಲಾಶಯಗಳು ಭರ್ತಿಯಾಗಬೇಕಿವೆ. 8 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಹಾರಂಗಿ ಜಲಾಶಯ, 19 ಟಿಎಂಸಿ ಅಡಿ ಸಾಮರ್ಥ್ಯದ ಕಬಿನಿ ಜಲಾಶಯಗಳು ಭರ್ತಿಯಾಗಿವೆ. 37 ಟಿಎಂಸಿ ಅಡಿ ಸಾಮರ್ಥ್ಯದ ಹೇಮಾವತಿಯಲ್ಲಿ 26 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.

ಹೋದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಕೆಆರ್‌ಎಸ್ ಜಲಾಶಯದಲ್ಲಿ 37 ಅಡಿಗಳಷ್ಟು ಹೆಚ್ಚು ನೀರು ಸಂಗ್ರಹವಾಗಿದೆ.  ಹತ್ತು ದಿನಗಳಿಂದ ಹಾರಂಗಿ ಜಲಾಶಯದಿಂದಲೂ ಕೆಆರ್‌ಎಸ್‌ಗೆ ನೀರು ಹರಿದು ಬರುತ್ತಿರುವುದರಿಂದ ನೀರಿನ ಸಂಗ್ರಹ ಪ್ರಮಾಣದಲ್ಲಿ ಏರಿಕೆಯಾಗಿದೆ.

ಬಾರದ ನೀರು: ಜಲಾಶಯದ ಎಲ್ಲ ನಾಲೆಗಳಿಗೂ ಹತ್ತು ದಿನಗಳ ಹಿಂದೆಯೇ ನೀರು ಬಿಡಲಾಗಿದೆ. ಆದರೆ, ನಾಲೆಯ ಕೊನೆಯ ಭಾಗಗಳಾದ ಬನ್ನೂರು, ಮದ್ದೂರಿನ ಕೆಲ ಭಾಗಗಳಿಗೆ ನೀರು ತಲುಪಿಲ್ಲ. ಹೋದ ವರ್ಷ ಮದ್ದೂರು ಭಾಗಕ್ಕೆ ಕೊನೆಯವರೆಗೂ ಸರಿಯಾಗಿ ನೀರು ತಲುಪಲ್ಲೇ ಇಲ್ಲ. ಇದು ರೈತರಲ್ಲಿ ಆತಂಕ ಮೂಡಿಸಿದೆ.

ಹೊರೆ ಇಳಿಸಿದ ಕಬಿನಿ
ತಮಿಳುನಾಡಿಗೆ ಬಿಡಬೇಕಾಗಿದ್ದ ನೀರಿನ ಪ್ರಮಾಣದ ಹೊರೆಯನ್ನು ಏಕಾಂಗಿಯಾಗಿ ಹೊತ್ತಿರುವ ಕಬಿನಿ ಜಲಾಶಯವು, ಕೆಆರ್‌ಎಸ್ ಜಲಾಶಯದ ಮೇಲಿನ ಒತ್ತಡ ಕಡಿಮೆಗೊಳಿಸಿದೆ.

ಜೂನ್ ತಿಂಗಳಲ್ಲಿ ಬಿಡಬೇಕಾಗಿದ್ದ 10 ಟಿಎಂಸಿ ಅಡಿ ನೀರನ್ನು ಬಿಡುಗಡೆ ಮಾಡಲಾಗಿದೆ. ಜುಲೈ ತಿಂಗಳಿನ 34 ಟಿಎಂಸಿ ಅಡಿ ನೀರಿನಲ್ಲಿ ಈಗಾಗಲೇ 27 ಟಿಎಂಸಿ ಅಡಿಯಷ್ಟು ನೀರನ್ನು ಬಿಡಲಾಗಿದೆ. ಉಳಿದಿರುವ ಹತ್ತು ದಿನಗಳಲ್ಲಿ ಉಳಿದ ನೀರೂ ಹರಿದುಹೋಗಲಿದೆ.

ಸವಾಲು: ಆಗಸ್ಟ್ ತಿಂಗಳಿನಲ್ಲಿ ತಮಿಳುನಾಡಿಗೆ ಬಿಡುಗಡೆ ಮಾಡಬೇಕಿರುವ 50 ಟಿಎಂಸಿ ಅಡಿ ನೀರಿನ ಪ್ರಮಾಣ ರಾಜ್ಯದ ಮುಂದಿರುವ ದೊಡ್ಡ ಸವಾಲಾಗಿದೆ.

ಕೊಡಗು ಹಾಗೂ ಕೇರಳದಲ್ಲಿ ಎರಡು ತಿಂಗಳ ಕಾಲ ಸುರಿದಿರುವ ಮಳೆಯ ಪ್ರಮಾಣವೇ ಮುಂದುವರಿದರೆ, ತಮಿಳುನಾಡಿಗೆ ನೀರು ಬಿಡುವುದು ದೊಡ್ಡ ಸವಾಲಾಗುವುದಿಲ್ಲ. ಮಳೆ ಕೈಕೊಟ್ಟರೆ, ನೆರವಿಗಾಗಿ ಮುಂದಿನ ದಿನಗಳಲ್ಲಿ ರಾಜ್ಯವು ಮತ್ತೆ ಕಾವೇರಿ ನಿರ್ವಹಣಾ ಸಮಿತಿಯ ಮೊರೆ ಹೋಗಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT