ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಆರ್‌ಎಸ್‌ಗೆ ರೈತರ ಮುತ್ತಿಗೆ

Last Updated 3 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಕೆಆರ್‌ಎಸ್ ಜಲಾಶಯ (ಮಂಡ್ಯ): ತಮಿಳುನಾಡಿಗೆ ನೀರು ಬಿಡುವುದನ್ನು ವಿರೋಧಿಸಿ ಕೃಷ್ಣರಾಜಸಾಗರ (ಕೆಆರ್‌ಎಸ್) ಜಲಾಶಯಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ರೈತರು ನಿಷೇಧಾಜ್ಞೆಯನ್ನೂ ಲೆಕ್ಕಿಸದೆ ಪೊಲೀಸರು ಹಾಕಿದ್ದ ತಂತಿ ಬೇಲಿ, ಬ್ಯಾರಿಕೇಡ್‌ಗಳನ್ನು ಕಿತ್ತೆಸೆದು ಮುತ್ತಿಗೆ ಹಾಕಿದರು.

ಪೊಲೀಸ್ ಸರ್ಪಗಾವಲನ್ನು ಭೇದಿಸಿ ಒಳ ನುಗ್ಗಲು ಯತ್ನಿಸಿದ ರೈತರು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರನ್ನು ಪೊಲೀಸರು ನೂಕಿದರು. ಇದರಿಂದಾಗಿ ದೂರದಲ್ಲಿ ನಿಂತಿದ್ದ ಕೆಲವರು ಅಲ್ಲಲ್ಲಿ ಕಲ್ಲು ತೂರಾಟ ನಡೆಸಿದರು.

ಪೊಲೀಸ್ ಪಡೆಯನ್ನು ಹಿಮ್ಮೆಟ್ಟಿಸಲು ಸಾಧ್ಯವಾಗದ್ದನ್ನು ಕಂಡ ಕೆಲವರು ಯುವಕರು ನದಿಗೆ ಧುಮುಕಿದರು. ಈಜುತ್ತಲೇ ಸೇತುವೆಯ ಇನ್ನೊಂದು ದಡವನ್ನು ತಲುಪಿ, ಅಲ್ಲಿಂದ ಗೇಟಿನತ್ತ ನುಗ್ಗಲು ಯತ್ನಿಸಿದರು. ಪೊಲೀಸ್ ಪಡೆ ಅವರನ್ನು ಅಲ್ಲಿಯೇ ತಡೆಯಿತು.

ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಲೇ, ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಲೇಬೇಕು ಎಂದು ಆಗ್ರಹಿಸಿ ರೈತರು, ವಿವಿಧ ಸಂಘಟನೆಗಳ ಕಾರ್ಯಕರ್ತರು ಪೊಲೀಸರನ್ನು ಹಿಮ್ಮೆಟ್ಟಿಸಿ ಮುನ್ನುಗ್ಗುವ ಯತ್ನ ಬೆಳಿಗ್ಗೆಯಿಂದ ಸಂಜೆ 4 ಗಂಟೆಯವರೆಗೂ ನಡೆಯುತ್ತಲೇ ಇತ್ತು. ಇನ್ನೂ ಕೆಲವರು ನದಿಗೆ ಇಳಿದು ಪ್ರತಿಭಟನೆ ಆರಂಭಿಸಿದರು. ನಾಲ್ವರು ಯುವಕರು ಘೋಷಣೆಗಳನ್ನು ಕೂಗುತ್ತಾ ನದಿಗೆ ಧುಮುಕಿದರು. ಮುಂದೆ ಪ್ರತಿಭಟನೆ ನಡೆಸುತ್ತಿದ್ದ ಕೆಲವರು, ಅವರನ್ನು ದಂಡೆಗೆ ಎಳೆದುಕೊಂಡರು.

ತಮಿಳುನಾಡಿಗೆ ನೀರು ಹರಿಸುವುದನ್ನು ಮಧ್ಯಾಹ್ನ 3 ಗಂಟೆಯೊಳಗೆ ನಿಲ್ಲಿಸಬೇಕು. ನಿಲ್ಲಿಸದಿದ್ದರೆ ಆ ವೇಳೆಯಿಂದ ಆಮರಣಾಂತ ಉಪವಾಸ ಆರಂಭಿಸುವುದಾಗಿ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ. ಮಾದೇಗೌಡ ಘೋಷಿಸಿದರು.

ವಿವಿಧ ವಾಹನಗಳಲ್ಲಿ ಕ್ಷಣದಿಂದ ಕ್ಷಣಕ್ಕೆ ರೈತ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ವಕೀಲರು, ವಿವಿಧ ಗ್ರಾಮಗಳ ಗ್ರಾಮಸ್ಥರು ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಪ್ರವಾಹದಂತೆ ಹರಿದು ಬರುತ್ತಲೇ ಇತ್ತು. ಪ್ರತಿಭಟನಾಕಾರರ ಸಂಖ್ಯೆ ಹೆಚ್ಚುತ್ತಲೇ ಸಾಗಿತ್ತು. ಜನಸಾಗರವನ್ನು ಕಂಡು ಪೊಲೀಸರು ಪಹರೆಯನ್ನು ಮತ್ತಷ್ಟು ಬಿಗಿಗೊಳಿಸಿದರು.

ಸಂಸದ ಎನ್. ಚಲುವರಾಯ ಸ್ವಾಮಿ, ಶಾಸಕ ರಮೇಶಬಾಬು, ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಮಾಜಿ ಶಾಸಕ ಎಲ್.ಆರ್.ಶಿವರಾಮೇಗೌಡ, ಕೆ.ಟಿ. ಶ್ರೀಕಂಠೇಗೌಡ ಮುಂತಾದವರು ಗೂಡ್ಸ್ ಆಟೊ ಏರಿ, ಶಾಂತಿ ಕಾಪಾಡುವಂತೆ ಮನವಿ ಮಾಡಿದರು.

ರೈತರ ಆಕ್ರೋಶ: `ಮುತ್ತಿಗೆ ಹಾಕೋಣ ಎಂದು ಕರೆಯಿಸಿ, ಶಾಂತಿ ಕಾಪಾಡುವಂತೆ ಹೇಳುತ್ತಿದ್ದೀರಿ. ಭಾಷಣ ಮಾಡಲು ಇಲ್ಲಿಗೆ ಬಂದಿದ್ದೀರಾ~ ಎಂದು ವಾಹನವನ್ನು ಪಕ್ಕದಲ್ಲಿಯೇ ಇದ್ದ ಕಾಲುವೆಗೆ ತಳ್ಳಲು ಆರಂಭಿಸಿದರು. ಕೂಡಲೇ ವಾಹನದಲ್ಲಿದ್ದವರೆಲ್ಲ ಕೆಳಗೆ ಇಳಿದರು. ರೈತರ ಆಕ್ರೋಶ ಕ್ಷಣದಿಂದ ಕ್ಷಣಕ್ಕೆ ಹೆಚ್ಚಾಗುತ್ತಿರುವುದನ್ನು ಕಂಡ ಕೆಲ ಜನಪ್ರತಿನಿಧಿಗಳು ಅಲ್ಲಿಂದ ಜಾಗ ಖಾಲಿ ಮಾಡಿದರು.

ಒಳ ನುಗ್ಗಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ಹಿಮ್ಮೆಟ್ಟಿಸಿದರು. ನೂಕಾಟ ಜೋರಾಗಿದ್ದರಿಂದ ಅಲ್ಲಿದ್ದ ಸಮಿತಿ ಅಧ್ಯಕ್ಷ ಜಿ. ಮಾದೇಗೌಡ ಅವರನ್ನು ಎತ್ತಿಕೊಂಡು ಹೊರಗಡೆ ಕರೆದುಕೊಂಡು ಬರಲಾಯಿತು. ಕೆಲಕಾಲ ಅಲ್ಲಿಯೇ ಕುಳಿತಿದ್ದ ಗೌಡರು, ನಂತರ ಮತ್ತೆ ಪ್ರತಿಭಟನೆ ಮುಂಚೂಣಿ ಸ್ಥಳಕ್ಕೆ ಆಗಮಿಸಿದರು.

ಅಣೆಕಟ್ಟೆಯತ್ತ ನುಗ್ಗುವ ಯತ್ನದಲ್ಲಿದ್ದವರನ್ನು ಸೇತುವೆ ಮೇಲೆ ನಿಂತು ವೀಕ್ಷಿಸುತ್ತಿದ್ದ ಮಾದರಹಳ್ಳಿ ಸೋಮು, ಹೊನ್ನನಾಯಕನಹಳ್ಳಿಯ ಮಹೇಶ್ 20 ಅಡಿ ಕೆಳಕ್ಕೆ ಬಿದ್ದು ತೀವ್ರವಾಗಿ ಗಾಯಗೊಂಡರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಮಧ್ಯಾಹ್ನ 2.30ರ ವೇಳೆಗೆ ಅಲ್ಲಿ ನೆರೆದಿದ್ದ ರೈತರು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರ ಸಹನೆಯ ಕಟ್ಟೆ ಒಡೆಯ ತೊಡಗಿತ್ತು. ಘೋಷಣೆಗಳು ಮುಗಿಲು ಮುಟ್ಟಿದ್ದವು. ಇನ್ನೊಂದೆಡೆ ಪೊಲೀಸರ ತಡೆಗೋಡೆಯನ್ನು ಮುರಿಯುವ ಯತ್ನ ನಡೆಯಿತು.

ಈ ಹಂತದಲ್ಲಿ ಪೊಲೀಸರು ಶಾಸಕ ಎಂ.ಶ್ರೀನಿವಾಸ್, ಎಂ.ಎಸ್.ಆತ್ಮಾನಂದ, ಎಂ.ಬಿ. ನಾಗನಗೌಡ ಮತ್ತಿತರರನ್ನು ಬಂಧಿಸಲು ಮುಂದಾದರು. ಯಾವುದೇ ಪ್ರತಿಭಟನೆ ವ್ಯಕ್ತಪಡಿಸದೇ ಇವರೂ ಪೊಲೀಸರ ವಾಹನ ಹತ್ತಲು ಹೋದರು. ರೊಚ್ಚಿಗೆದ್ದ ಜನರು, `ಮುತ್ತಿಗೆಗೆಂದು ನಮ್ಮನ್ನು ಕರೆಯಿಸಿ; ನೀವು ವಾಹನ ಹತ್ತುದ್ದೀರಾ~ ಎಂದು ಕಲ್ಲು ತೂರಾಟ ಆರಂಭಿಸಿದರು. ವಾಹನವನ್ನು ಅಡ್ಡಗಟ್ಟಿ ನಿಲ್ಲಿಸಿದರು.

ವಾಹನದ ಮೇಲೆ ನಿಂತು ದೃಶ್ಯಗಳನ್ನು ಸೆರೆ ಹಿಡಿಯುತ್ತಿದ್ದ ಮಾಧ್ಯಮ ಪ್ರತಿನಿಧಿಗಳು ದಡದಡನೆ ಕೆಳಗಿಳಿದರು. ಒಳಗೆ ಹತ್ತಿರುವವರನ್ನು ಕೆಳಗೆ ಇಳಿಸಬೇಕು ಎಂಬ ಒತ್ತಡ ಜಾಸ್ತಿಯಾಯಿತು. ಅವರನ್ನು ಕೆಳಗಿಳಿಸುವಾಗಲೂ ಜನರು ಕಲ್ಲು ತೂರಿದರು. ಶಾಂತಿ ಕಾಪಾಡಬೇಕು ಎಂದು ಪೊಲೀಸರು ಮನವಿ ಮಾಡಿಕೊಳ್ಳುತ್ತಲೇ ಇದ್ದರು.
ಬೆಂಗಳೂರಿನಲ್ಲಿ ಸಂಜೆ 6 ಗಂಟೆಗೆ ಮುಖ್ಯಮಂತ್ರಿಗಳು ತುರ್ತು ಸಚಿವ ಸಂಪುಟ ಸಭೆ ಕರೆದಿದ್ದಾರೆ. ಸಕರಾತ್ಮಕ ನಿರ್ಧಾರ ಕೈಗೊಳ್ಳಲಿದ್ದಾರೆ. ಪ್ರತಿಭಟನೆಯನ್ನು ಕೈಬಿಡಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದರು.

ಇದಕ್ಕೆ ಸ್ಪಂದಿಸಿದ ಜಿ.ಮಾದೇಗೌಡರು, ಸಕರಾತ್ಮಕ ನಿರ್ಧಾರ ತೆಗೆದುಕೊಳ್ಳದಿದ್ದರೆ ಅ.4 ರಂದು ಬೆಳಿಗ್ಗೆ 9 ರಿಂದ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಆಮರಣಾಂತ ಉಪವಾಸ ಆರಂಭಿಸುವುದಾಗಿ ಘೋಷಿಸಿ, ಜನರಿಗೆ ಶಾಂತಿಯುತವಾಗಿ ತೆರಳುವಂತೆ ಮನವಿ ಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT