ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಂಎಫ್ ಕಿತ್ತಾಟಕ್ಕೆ ಕೊನೆ ಎಲ್ಲಿ?

Last Updated 14 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ರಾಜ್ಯದಲ್ಲಿ ಹೈನುಗಾರಿಕೆಗೆ ಹೊಸ ಆಯಾಮ ನೀಡಿದ ಕರ್ನಾಟಕ ಹಾಲು ಮಹಾಮಂಡಲದ (ಕೆಎಂಎಫ್) ಆಡಳಿತ ಹಳಿ ತಪ್ಪಿದೆ. ಗುಜರಾತ್‌ನ ಅಮುಲ್ ಬಿಟ್ಟರೆ ಭಾರತದಲ್ಲಿ ಅತಿ ದೊಡ್ಡ ಹಾಲು ಉತ್ಪಾದಕ ಸಹಕಾರ ಸಂಸ್ಥೆ ಎಂಬ ಹಿರಿಮೆಗೆ ಒಳಗಾದ ಕೆಎಂಎಫ್‌ನಲ್ಲಿ ಇತ್ತೀಚೆಗೆ ನಡೆದಿರುವ ಬೆಳವಣಿಗೆಗಳು ಆತಂಕ ಮೂಡಿಸಿವೆ; ವ್ಯಕ್ತಿ ಪ್ರತಿಷ್ಠೆಯು ಸಂಸ್ಥೆಯ ಹಿತ ಬಲಿ ಪಡೆಯುತ್ತಿದೆ ಎಂಬ ಅನುಮಾನಗಳನ್ನು ದಟ್ಟಗೊಳಿಸಿದೆ.
 
22 ಲಕ್ಷ ಸದಸ್ಯರನ್ನು ಹೊಂದಿರುವ ಕೆಎಂಎಫ್, ಪ್ರತಿದಿನ 52 ಲಕ್ಷ ಲೀಟರ್ ಹಾಲು ಸಂಗ್ರಹಿಸುತ್ತಿದೆ. ಇಂತಹ ಬೃಹತ್ ಜಾಲ ಹೊಂದಿರುವ ಸಂಸ್ಥೆ ಈಗ ವೃತ್ತಿರಾಜಕಾರಣಿಗಳ ಐಲಾಟಕ್ಕೆ ಸಿಲುಕಿ ನಲುಗತೊಡಗಿದೆ. ಈ ಸಂಸ್ಥೆಯನ್ನು ಕೆಲವರು ತಮ್ಮ ಪಾಳೆಯಪಟ್ಟು ಎಂದು ಭಾವಿಸಿರುವುದೇ ಇದಕ್ಕೆಲ್ಲ ಪ್ರಮುಖ ಕಾರಣ. ಬಹಳ ವರ್ಷಗಳ ಕಾಲ ಎಚ್.ಡಿ. ರೇವಣ್ಣ ಅವರ ಹಿಡಿತದಲ್ಲಿದ್ದ ಕೆಎಂಎಫ್ ಮೇಲೆ ಬಳ್ಳಾರಿ ಗಣಿಧಣಿಗಳ ಕಣ್ಣುಬಿತ್ತು.

ಆಡಳಿತಾರೂಢ ಬಿಜೆಪಿ ಬೆಂಬಲದೊಂದಿಗೆ ಜಿ. ಸೋಮಶೇಖರ ರೆಡ್ಡಿ ಅಧ್ಯಕ್ಷ ಗಾದಿ ಏರಿದರು. ವಿಪರ್ಯಾಸದ ಸಂಗತಿ ಎಂದರೆ ಇದಕ್ಕೆ ಆಸಕ್ತಿ, ಅಭಿವೃದ್ಧಿಯ ಕನಸು ಕಾರಣ ಆಗಿರಲಿಲ್ಲ. ರಾಜಕೀಯ ಹಗೆ ಸಾಧನೆಗೆ ಕೆಎಂಎಫ್, ದಾಳವಾಗಿ ಪರಿಣಮಿಸಿತು. ಮೂಲ ಉದ್ದೇಶವೇ ಹೀಗೆ ವಕ್ರವಾಗಿದ್ದ ಮೇಲೆ ಅಂತಹವರ ಅಧೀನದಲ್ಲಿ ಆಡಳಿತ ನೆಟ್ಟಗಿರಲು ಹೇಗೆ ಸಾಧ್ಯ? ಅದೇ ಆಗಿದೆ.

ರಫ್ತು ನಿಷೇಧದಿಂದ 13 ಸಾವಿರ ಟನ್‌ನಷ್ಟು ಹಾಲಿನ ಪುಡಿ ಮಾರಾಟವಾಗದೆ ಗೋದಾಮುಗಳಲ್ಲಿ ಬಿದ್ದಿದೆ. ಬೆಣ್ಣೆಯೂ ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹಗೊಂಡಿದೆ. ಇದರಿಂದ ಕಷ್ಟಕ್ಕೆ ಸಿಲುಕಿರುವ ಕೆಎಂಎಫ್‌ಗೆ ಹಾಲು ಪೂರೈಸಿದ ರೈತರಿಗೆ ಕಾಲಕಾಲಕ್ಕೆ ಹಣ ಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ. ಕಷ್ಟ ಪರಿಹಾರಕ್ಕೆ ಮಾರ್ಗೋಪಾಯ ಶೋಧಿಸಬೇಕಿದ್ದ ಅಧ್ಯಕ್ಷರು, ಜಾಮೀನುಗಾಗಿ ಲಂಚ ಪ್ರಕರಣದಲ್ಲಿ ಜೈಲು ಸೇರಿದರು.

ಅವರು ಜೈಲಿನಲ್ಲಿದ್ದಾಗಲೇ ಇತ್ತ ಹತ್ತಿ ಬೀಜ ಖರೀದಿ ಅವ್ಯವಹಾರ ಪ್ರಕರಣ ಬಯಲಾಯಿತು. ಈ ಹಿನ್ನೆಲೆಯಲ್ಲಿ ಆಡಳಿತ ಮಂಡಳಿಯು, ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಡಾ.ಎಂ.ಎನ್. ವೆಂಕಟರಾಮು ಅವರನ್ನು ಬೇರೆಡೆ ವರ್ಗಾಯಿಸಿ ಅವರ ಜಾಗಕ್ಕೆ ಎ.ಎಸ್.ಪ್ರೇಮನಾಥ್ ಅವರನ್ನು ನೇಮಿಸಿತು. ಜೈಲಿನಿಂದ ಬಿಡುಗಡೆಯಾದ ಸೋಮಶೇಖರ ರೆಡ್ಡಿ ಅವರು ಪ್ರೇಮನಾಥ್‌ಗೆ ಕೊಕ್ ಕೊಟ್ಟು ಲಕ್ಷ್ಮಣ ರೆಡ್ಡಿ ಎಂಬುವವರನ್ನು ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಿಸಿದ್ದಾರೆ. ಅಲ್ಲದೇ ಕಳಂಕ ಹೊತ್ತ ಕೆಲವರು ಪುನಃ ಆಯಕಟ್ಟಿನ ಜಾಗಗಳಿಗೆ ನೇಮಕಗೊಂಡಿದ್ದಾರೆ. ಈ ಕಿತ್ತಾಟ ಸಂಸ್ಥೆಯ ಆಡಳಿತದ ಮೇಲೆ ಮತ್ತಷ್ಟು ದುಷ್ಪರಿಣಾಮ ಬೀರುವುದರ ಜತೆಗೆ ಕೆಎಂಎಫ್ ವರ್ಚಸ್ಸಿಗೂ ಭಂಗ ತಂದಿದೆ.

ಆಡಳಿತ ಮಂಡಳಿಯ ನಿರ್ಣಯಗಳನ್ನು ಏಕಪಕ್ಷೀಯವಾಗಿ ರದ್ದುಗೊಳಿಸುವ ಮೂಲಕ ರೆಡ್ಡಿ ಉದ್ಧಟತನ ತೋರಿದ್ದಾರೆ. ನ್ಯಾಯಾಧೀಶರಿಗೆ ಲಂಚ ನೀಡಿದ ಆರೋಪದಡಿ ಜೈಲಿಗೆ ಹೋಗಿಬಂದಿರುವ ರೆಡ್ಡಿ ಅವರು ನೈತಿಕತೆ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿತ್ತು. ಅದನ್ನು ಬಿಟ್ಟು ಪಾಳೆಗಾರಿಕೆ ಪ್ರವೃತ್ತಿ ಮೆರೆದಿರುವುದು ದುರದೃಷ್ಟಕರ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT